ಮಗುವಿಗೆ ಪದೇ ಪದೆ ನೆಗಡಿ ಕಾಡುತ್ತಾ? Allergy ಇರಬಹುದು!

By Suvarna NewsFirst Published Mar 29, 2022, 12:38 PM IST
Highlights

ಪದೇ ಪದೇ ಮಕ್ಕಳಲ್ಲಿ ನೆಗಡಿ ಕಾಣಿಸಿಕೊಳ್ಳುತ್ತಾ? ದೇಹದ ಭಾಗಗಳು ಊದುತ್ತಾ? ಹಾಗಿದ್ರೆ ಎಚ್ಚರವಾಗಿರಿ. ಎದೆ ಹಾಲಿನ ನಂತ್ರ ಮಕ್ಕಳು ತಿನ್ನುವ ಆಹಾರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. 
 

ಮಕ್ಕಳ (Children) ಆರೋಗ್ಯ (Health) ಬಹಳ ಸೂಕ್ಷ್ಮವಾಗಿರುತ್ತದೆ. ಯಾವುದೇ ಕೆಟ್ಟ ಆಹಾರ (Food) ಸೇವನೆ ಮಾಡಿದ್ರೂ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಮಗುವಿಗೆ ತಾಯಿಯ ಹಾಲು (Milk) ಬಹಳ ಮುಖ್ಯ. ಇದು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 6 ತಿಂಗಳಿಂದ 3 ವರ್ಷದ ಮಗುವಿಗೆ ಅಲರ್ಜಿ ಕಾಣಿಸಿಕೊಳ್ಳುವುದು ಸಾಮಾನ್ಯ. ಶಿಶುಗಳು ತಾಯಿಯ ಹಾಲನ್ನು ಹೊರತುಪಡಿಸಿ ಬೇರೆ ಆಹಾರವನ್ನು ತಿನ್ನಲು ಪ್ರಾರಂಭಿಸಿದ ತಕ್ಷಣ ಈ ಸಮಸ್ಯೆ ಹೆಚ್ಚಾಗುತ್ತದೆ. ಆದಾಗ್ಯೂ, ಈ ಸಮಸ್ಯೆ ಮಗುವಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅನೇಕ ಮಕ್ಕಳಿಗೆ ಅಲರ್ಜಿಗಳು ವಂಶವಾಹಿಯೂ ಆಗಿರುತ್ತವೆ. 

ಯಾವ ವಯಸ್ಸಿನ ಮಕ್ಕಳಿಗೆ ಹೆಚ್ಚು ಕಾಡುತ್ತೆ ಅಲರ್ಜಿ ? :  ನವಜಾತ ಶಿಶುವಿಗೆ ಎದೆ ಹಾಲು ನೀಡುವುದು ಕಡ್ಡಾಯ. ಆದ್ರೆ ಆರು ತಿಂಗಳ ನಂತ್ರ ಶಿಶುವಿನ ಬೆಳವಣಿಗೆ ಶುರುವಾಗುತ್ತದೆ. ಮಗು ಬೆಳೆದಂತೆ ವೈದ್ಯರು ಅವರಿಗೆ ಕೆಲವು ಘನ ಪದಾರ್ಥಗಳನ್ನು ನೀಡಲು ಶಿಫಾರಸು ಮಾಡುತ್ತಾರೆ. ಎದೆ ಹಾಲಿನಿಂದ ಘನ ಆಹಾರ ಸೇವನೆ ಶುರು ಮಾಡ್ತಿದ್ದಂತೆ ಮಕ್ಕಳಲ್ಲಿ ಮಕ್ಕಳಲ್ಲಿ ಅಲರ್ಜಿಯಂತಹ ಸಮಸ್ಯೆ ಕಾಡಲು ಶುರುವಾಗುತ್ತದೆ. ತಜ್ಞರ ಪ್ರಕಾರ, ಆರು ತಿಂಗಳ ನಂತ್ರ ಶುರುವಾಗುವ ಅಲರ್ಜಿ ಸಮಸ್ಯೆ ಮೂರು ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಎಚ್ಚರಿಕೆ ವಹಿಸಬೇಕು.  

ಆಹಾರದಿಂದಾಗುವ ಅಲರ್ಜಿ ಲಕ್ಷಣಗಳು

ಸೋರುವ ಮೂಗು ಅಥವಾ ಸೀನು : ಚಿಕ್ಕ ವಯಸ್ಸಿನಲ್ಲಿ ಶೀತದಿಂದಾಗಿ ಮಗುವಿನ ಮೂಗು ಸೋರುತ್ತದೆ. ಪೋಷಕರೂ ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಮಗುವಿನ ಮೂಗು ಶೀತದಿಂದ ಮಾತ್ರ ಸೋರಬೇಕು ಎಂಬ ಅನಿವಾರ್ಯತೆಯಿಲ್ಲ. ಆಹಾರದ ಅಲರ್ಜಿಯ ಕಾರಣದಿಂದ ಕೂಡ ಮಕ್ಕಳಲ್ಲಿ ಮೂಗು ಸೋರುವಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮಕ್ಕಳು ಕಿರಿಕಿರಿ ಅನುಭವಿಸುತ್ತಾರೆ. ಮೂಗು ಸೋರುತ್ತಿದ್ದರೆ ಇದಕ್ಕೆ ಕಾರಣವೇನು ಎಂಬುದನ್ನು ಪರೀಕ್ಷಿಸಿ,ಚಿಕಿತ್ಸೆ ನೀಡಿ. 

ಉಗುರುಗಳು ದುರ್ಬಲಗೊಳ್ಳಲು ಇವೆ ಕಾರಣ... ಎಚ್ಚರ ಇರಲಿ ಸದಾ

ಕಣ್ಣುಗಳ ಸುತ್ತ ಊತ : ಕೆಲವೊಮ್ಮೆ ಮಕ್ಕಳ ಕಣ್ಣಿನ ಬಳಿ ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅನಾಫಿಲ್ಯಾಕ್ಸಿಸ್ ಕಾರಣವಾಗಿರಬಹುದು. ಇದು ಅಲರ್ಜಿ ಕಾರಣದಿಂದ ಉಂಟಾಗುತ್ತದೆ. ಮಕ್ಕಳ ಕಣ್ಣುಗಳಲ್ಲಿ ಊತದ ಜೊತೆಗೆ ಅವರ ತುಟಿಗಳಲ್ಲಿಯೂ ಊತ ಕಾಣಿಸಿಕೊಳ್ಳಬಹುದು. ನಿಮ್ಮ ಮಕ್ಕಳ ಕಣ್ಣು, ಮೂಗಿನಲ್ಲೂ ಊತ ಕಾಣಿಸಿಕೊಂಡರೆ ಮಗುವನ್ನು ತಕ್ಷಣ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಪರೀಕ್ಷಿಸಿ.

ದದ್ದು : ಇದು ಒಂದು ರೀತಿಯ ಅಲರ್ಜಿಯಾಗಿದೆ. ಕೆಟ್ಟ ಆಹಾರ ಪದ್ಧತಿಯಿಂದ ಸಮಸ್ಯೆ ಶುರುವಾಗುತ್ತದೆ. ಮಕ್ಕಳ ಕೈಗಳ ಮೇಲೆ ಕೆಂಪು ಕಲೆಗಳು ಉಂಟಾಗುತ್ತವೆ. ಇದು ಮಕ್ಕಳ ಕೈ, ಮುಖ, ತೋಳುಗಳು ಮತ್ತು ಕುತ್ತಿಗೆಯ ಯಾವುದೇ ಮೂಲೆಯಲ್ಲಿ ಕಾಣಿಸಿಕೊಳ್ಳಬಹುದು. ಮಕ್ಕಳಿಗೆ ಉರಿ, ನೋವು ಮುಂತಾದ ಸಮಸ್ಯೆ ಕಾಡುತ್ತದೆ. ಇದನ್ನು ಪಿತ್ತವೆಂದೂ ಕರೆಯಲಾಗುತ್ತದೆ. 

ತುಪ್ಪದ ಜೊತೆ ಜೇನುತುಪ್ಪ? ತಪ್ಪು ತಪ್ಪು !

ವಾಂತಿ : ಶಿಶುಗಳು ಆಹಾರ ಸೇವನೆ ಶುರು ಮಾಡಿದಾಗ ಅಲರ್ಜಿ ಸಾಮಾನ್ಯ.  ಕೆಲವೊಮ್ಮೆ ನೆಲಕ್ಕೆ ಬಿದ್ದ ಆಹಾರ ಸೇವನೆ ಮಾಡುವುದ್ರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಅತಿಯಾದ ಹುಳಿ ಪದಾರ್ಥ ಸೇವನೆ ಮಾಡಿದ್ರೆ ಮಕ್ಕಳಿಗೆ ವಾಂತಿಯಾಗುತ್ತದೆ. ಮಗುವಿಗೆ ಪದೇ ಪದೇ ವಾಂತಿಯಾಗ್ತಿದ್ದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗಿ.  

ನಾಲಿಗೆ ಮತ್ತು ತುಟಿಗಳ ಊತ : ಅಲರ್ಜಿಗಳು ಮಕ್ಕಳ ನಾಲಿಗೆ ಮತ್ತು ತುಟಿಗಳ ಊತವನ್ನು ಉಂಟುಮಾಡುತ್ತವೆ. ಹಿಸ್ಟಮಿನ್ ಎಂಬ ರಾಸಾಯನಿಕದ ಹೆಚ್ಚಳದಿಂದಾಗಿ, ಮಕ್ಕಳ ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಇದು ಮಕ್ಕಳ ನಾಲಿಗೆಯಲ್ಲಿ ಉರಿಯನ್ನು ಹೆಚ್ಚು ಮಾಡುತ್ತದೆ.

ಕೆಮ್ಮು : ಮಗುವಿನ ಕೆಮ್ಮಿಗೆ ಆಹಾರ ಅಲರ್ಜಿಗಳು ಸಹ ಒಂದು ಕಾರಣವಾಗಿರಬಹುದು. ತಪ್ಪು ಆಹಾರ ಪದ್ಧತಿಯಿಂದ ಮಕ್ಕಳಿಗೆ ಗಂಟಲು ನೋವು ಮತ್ತು ಕೆಮ್ಮು ಬರಬಹುದು.  

click me!