Health Tips : ಪಾದ ನೇತಾಡ್ತಿರುವ ಈ ಭಂಗಿ ಹಿತವೆನ್ನಿಸಿದ್ರೂ ಅಪಾಯ

By Suvarna NewsFirst Published May 24, 2023, 2:34 PM IST
Highlights

ನಾವು ಹೇಗೆ ಕುಳಿತುಕೊಳ್ತೇವೆ ಎಂಬುದು ನಮ್ಮ ಆರೋಗ್ಯಕ್ಕೆ ಕಾರಣವಾಗುತ್ತದೆ. ಹೆಂಗ್ ಹೆಂಗೋ ಕುಳಿತ್ರೆ ಕಂಡ ಕಂಡಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪಾದ ಭೂಮಿಗೆ ಟಚ್ ಆಗದೆ ಮೇಲೆ ನೇತಾಡ್ತಿದ್ದರೆ ನಿಮಗೆ ಆರಾಮ ಎನ್ನಿಸಬಹುದು. ಆದ್ರೆ ಅನಾರೋಗ್ಯ ಬೆನ್ನುಹತ್ತುತ್ತೆ.  
 

ಒಂದೇ ಕಡೆ ಕುಳಿತು ದೀರ್ಘಕಾಲ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಚೇರಿಯಲ್ಲಾದ್ರೆ ಸೂಕ್ತವಾದ ಟೇಬಲ್ ಹಾಗೂ ಕುರ್ಚಿ ವ್ಯವಸ್ಥೆಯಿರುತ್ತದೆ. ಮನೆಯಲ್ಲಿ ಅಥವಾ ಹೋದ ಸ್ಥಳದಲ್ಲಿ ಇದನ್ನು ಹೊಂದಿಸಿಕೊಳ್ಳುವುದು ಕಷ್ಟ. ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಮನೆಯಲ್ಲಿರುವ ಜನರು ಬೆಡ್ ಮೇಲೆ, ಸೋಫಾ ಮೇಲೆ ಹೀಗೆ ಎಲ್ಲೆಂದರಲ್ಲಿ ಕುಳಿತು, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡ್ತಾರೆ. ಇನ್ನು ಕೆಲವರು ದೀರ್ಘಕಾಲ ಕುಳಿತೇ ಇರ್ತಾರೆ. ಕುಳಿತುಕೊಳ್ಳುವುದು ಆರೋಗ್ಯವನ್ನು ಹದಗೆಡಿಸುತ್ತದೆ. ಅದ್ರಲ್ಲೂ ನಾವು ಕುಳಿತುಕೊಳ್ಳುವ ಭಂಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಟ್ಟ ಭಂಗಿ, ಗರ್ಭಕಂಠದ ನೋವಿನಿಂದ ಹಿಡಿದು ಭುಜದ ನೋವು, ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತರುತ್ತದೆ. 

ಕುಳಿತು ಕೆಲಸ ಮಾಡುವ ವ್ಯಕ್ತಿಯ ಪಾದ (Foot) ಗಳು ನೆಲಕ್ಕೆ ಟಚ್ ಆಗಿರಬೇಕು. ಇಲ್ಲವೇ ಯಾವುದಾದ್ರೂ ವಸ್ತುವನ್ನು ಟಚ್ ಮಾಡಿರಬೇಕು. ನೀವು ಕಾಲನ್ನು ನೆಲಕ್ಕೆ ಊರದೆ ಹಾಗೆಯೇ ನೇತಾಡಿಸಿಕೊಂಡು ಕೆಲಸ ಮಾಡ್ತಿದ್ದರೆ ಇಂದೇ ಅಭ್ಯಾಸ ಬಿಡಿ. ಇದು ನಿಮ್ಮ ಆರೋಗ್ಯ (Health) ದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾವಿಂದು ಕಾಲನ್ನು ನೇತುಹಾಕಿಕೊಂಡು ದೀರ್ಘಕಾಲ ಕುಳಿತ್ರೆ ಯಾವೆಲ್ಲ ರೋಗ (Disease) ನಿಮ್ಮನ್ನು ಕಾಡುತ್ತದೆ ಎಂದು ಹೇಳ್ತೇವೆ.

Health Tips: ಕುಳಿತು ಕೆಲಸ ಮಾಡೋರು ಆಹಾರ ಸೇವಿಸಿದ್ಮೇಲೆ ಈ ಕೆಲಸ ಮಾಡೋದನ್ನು ಮರಿಬೇಡಿ

ಪಾದಗಳನ್ನು ತೂಗಾಡಿಸಿಕೊಂಡು ಕುಳಿತ್ರೆ ಆಗುವ ಅಡ್ಡ ಪರಿಣಾಮ : 
• ಗಂಟೆಗಟ್ಟಲೆ ಕಾಲುಗಳನ್ನು ನೆಲಕ್ಕೆ ಸ್ಪರ್ಶಿಸದೆ ನೀವು ಕುಳಿತುಕೊಂಡ್ರೆ ಪಾದಗಳು ಊದಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ನಿಮ್ಮ ಪಾದಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ತುಂಬಾ ಸಮಯದವರೆಗೆ ರಕ್ತ ಸಂಚಾರ ಆಗದೆ ಹೋದಾಗ ಪಾದ ಊದಿಕೊಳ್ಳುತ್ತದೆ. ಜೊತೆಗೆ ರಕ್ತದೊತ್ತಡದ ಸಮಸ್ಯೆ ಕಾಡಬಹುದು.
• ಗಂಟೆಗಟ್ಟಲೆ ಕಾಲುಗಳನ್ನು ಜೋತು ಬೀಳಿಸಿಕೊಂಡು ನೀವು ಕುಳಿತುಕೊಂಡ್ರೆ ಬೆನ್ನುಮೂಳೆಯ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಊತ ಉಂಟಾಗುತ್ತದೆ. ಇದು ಅಸಮರ್ಪಕ ಭಂಗಿಯಾಗಿದ್ದು, ಇದ್ರಿಂದ ಭುಜದ ಮೂಳೆ ನೋವು ಕಾಣಿಸಿಕೊಳ್ಳುತ್ತದೆ. 

Healthy Sitting : ದಿನದಲ್ಲಿ15 ನಿಮಿಷ ನೆಲದ ಮೇಲ್ ಕುಳಿತರೆ ಆಗೋ ಲಾಭ ಒಂದೆರಡಲ್ಲ!

ನಿಮ್ಮ ಎಲುಬಿನಲ್ಲಿ ಊತವನ್ನುಂಟು ಮಾಡುವ ಸಂಭವ ಹೆಚ್ಚಿರುತ್ತದೆ. ನೀವು ದೀರ್ಘಕಾಲ ಇದೇ ಭಂಗಿಯಲ್ಲಿ ಕುಳಿತ್ರೆ ನಂತ್ರ ನಡೆದಾಡುವುದು ಕಷ್ಟವಾಗಬಹುದು. ಮೂಳೆಗಳು ಮತ್ತು ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಈ ಕಾರಣದಿಂದಾಗಿ ನಿಮ್ಮ ಮೊಣಕಾಲುಗಳಲ್ಲಿ ನೋವು, ಸ್ನಾಯು ಸೆಳೆತ ಮತ್ತು ಮೂಳೆಗಳಲ್ಲಿ ಊತ ಬರುತ್ತದೆ. 

ಇದ್ರಿಂದ ಕಾಡುವ ಸಮಸ್ಯೆಗೆ ಪರಿಹಾರ ಏನು? : ಕುಳಿತು ಕೆಲಸ ಮಾಡುವುದು ಅನಿವಾರ್ಯ ಎನ್ನುವವರು ಕುಳಿತುಕೊಳ್ಳುವ ಭಂಗಿ ಹಾಗೂ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೀರ್ಘಕಾಲ ಪಾದ ಜೋತು ಬೀಳದಂತೆ ನೋಡಿಕೊಳ್ಳಿ. ಆದಷ್ಟು ಸೂಕ್ತವಾದ ಜಾಗದಲ್ಲಿ ಕುಳಿತುಕೊಳ್ಳಿ. ಪಾದಗಳನ್ನು ನೆಲಕ್ಕೆ ಊರಿ ಕುಳಿತುಕೊಳ್ಳುವ ಪ್ರಯತ್ನ ಮಾಡಿ. ಹಾಗೆಯೇ ಪ್ರತಿ 30 ನಿಮಿಷಗಳಿಗೊಮ್ಮೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಅಲ್ಲಿಯೇ ಸಣ್ಣದೊಂದು ವಾಕ್ ಮಾಡಿ. ಇದು ನಿಮ್ಮ ಸ್ನಾಯುಗಳನ್ನು ಸಕ್ರಿಯವಾಗಿರಿಸುತ್ತದೆ. ಪಾದಗಳಿಗೆ ವಿಶ್ರಾಂತಿ ಸಿಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗುತ್ತದೆ.  

ಕುಳಿತುಕೊಳ್ಳುವ ಭಂಗಿ ತಪ್ಪಾಗಿ, ಪಾದಗಳಲ್ಲಿ ಊತ ಕಾಣಿಸಿಕೊಂಡಿದ್ದರೆ ಬೆಚ್ಚಗಿನ ನೀರಿಗೆ ಒಂದು ಚಮಚ ಕಲ್ಲು ಉಪ್ಪು ಮತ್ತು ಒಂದು ಚಮಚ ಹರಳೆಣ್ಣೆಯನ್ನು ಸೇರಿಸಿ. ಪಾದಗಳನ್ನು ಈ ನೀರಿನಲ್ಲಿ ಸ್ವಲ್ಪ ಸಮಯ ಇಟ್ಟುಕೊಳ್ಳಿ. ಇದು ನಿಮ್ಮ ಪಾದದ ಊತವನ್ನು ಕಡಿಮೆ ಮಾಡುತ್ತದೆ. ನೀವು ಆಪಲ್ ಸೈಡರ್ ವಿನೆಗರ್ ಕೂಡ ಬಳಸಬಹುದು. ಬಕೆಟ್‌ನಲ್ಲಿ ಬಿಸಿನೀರನ್ನು ಹಾಕಿ, ಅದಕ್ಕೆ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ನೀರಿನಲ್ಲಿ ನಿಮ್ಮ ಪಾದಗಳನ್ನು ಮುಳುಗಿಸಿ. ಇದು ಕೂಡ ಊತವನ್ನು ಕಡಿಮೆ ಮಾಡುತ್ತದೆ. 

click me!