ಬ್ಯಾಗ್ ಹೆಗಲಿಗೆ ಹಾಕಿ, ಸ್ನೇಹಿತರ ಕೈ ಹಿಡಿದು ಶಾಲೆಗೆ ಹೋಗುವ ಮಕ್ಕಳನ್ನು ನೋಡುವುದೇ ಚಂದ. ನಿದ್ರೆ ಮೂಡಿನಲ್ಲಿ, ಮನೆಯಲ್ಲೇ ಕುಳಿತು ಆನ್ಲೈನ್ ಕ್ಲಾಸ್ ಕೇಳುವ ಮಕ್ಕಳು ಅನೇಕ ಸಮಸ್ಯೆ ಎದುರಿಸುತ್ತಾರೆ. ಮಕ್ಕಳಲ್ಲಿ ಮಾನಸಿಕ, ದೈಹಿಕ ರೋಗಗಳು ಜಾಸ್ತಿಯಾಗ್ತಿವೆ.
ಕೊರೊನಾ (Corona) ಜನರ ಜೀವನ ಶೈಲಿ (Lifestyle) ಯ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಜನರು ಸ್ವಲ್ಪ ಮಟ್ಟಿಗೆ ಮನೆಯಿಂದ ಹೊರಗೆ ಬರಲು ಶುರು ಮಾಡಿದ್ದಾರೆ. ಕಚೇರಿಗಳು ನಿಧಾನವಾಗಿ ತೆರೆಯುತ್ತಿವೆ. ಶಾಲೆಗಳು ಪುನರಾರಂಭಗೊಂಡಿವೆ. ಆದ್ರೆ ಕೊರೊನಾ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮನೆಯಲ್ಲಿದ್ದರು. ಕೆಲ ಶಾಲೆ (School) ಗಳಲ್ಲಿ ಈಗ್ಲೂ ಆನ್ಲೈನ್ (Online )ಪಾಠ ಮುಂದುವರೆದಿದೆ. ಕೆಲ ಪಾಲಕರು ಸುರಕ್ಷತೆ ಹೆಸರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇನ್ನೂ ಕೆಲ ಪಾಲಕರು ಆನ್ಲೈನ್ ಕ್ಲಾಸುಗಳಿಗೆ ಒಗ್ಗಿಕೊಂಡಿದ್ದಾರೆ. ಮತ್ತೆ ಹಳೆ ಜೀವನ ಶೈಲಿಗೆ ಮರಳುವುದು ಅವರಿಗೆ ಕಷ್ಟವಾಗ್ತಿದೆ. ಆದ್ರೆ ಈ ಎಲ್ಲ ಕಾರಣಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಆನ್ಲೈನ್ ಕ್ಲಾಸ್ ಗಳು ಮಕ್ಕಳ ಕಣ್ಣುಗಳ ಮೇಲೆ ಮಾತ್ರವಲ್ಲ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯವನ್ನು ಹಾಳು ಮಾಡ್ತಿದೆ. ಇಂದು ಆನ್ಲೈನ್ ಕ್ಲಾಸ್ ನಿಂದ ಮಕ್ಕಳು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಯಾವುದು ಎಂಬುದನ್ನು ಹೇಳ್ತೇವೆ.
ಆನ್ಲೈನ್ ಕ್ಲಾಸ್ ನಿಂದ ಮಕ್ಕಳಿಗಾಗ್ತಿದೆ ಈ ಸಮಸ್ಯೆ : ಆನ್‌ಲೈನ್ ತರಗತಿಗಳು ಮಕ್ಕಳಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡಿವೆ. ಅದ್ರಲ್ಲಿ ಕತ್ತು ಹಾಗೂ ಬೆನ್ನು ನೋವು ಮಹತ್ವದ್ದಾಗಿದೆ. ತಪ್ಪಾದ ಭಂಗಿಯಲ್ಲಿ ಕುಳಿತುಕೊಂಡು ಮಕ್ಕಳು ಪಾಠ ಕೇಳುವ ಕಾರಣ ಅವರಲ್ಲಿ ಕುತ್ತಿಗೆ ಮತ್ತು ಬೆನ್ನುನೋವು ಹೆಚ್ಚಾಗ್ತಿದೆ. ಕತ್ತು ಹಾಗೂ ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆಗೆ ಬರ್ತಿರುವ ಮಕ್ಕಳ ಪೈಕಿ ಶೇಕಡಾ 50ರಷ್ಟು ಮಕ್ಕಳು ಆನ್ಲೈನ್ ಕ್ಲಾಸ್ ನಿಂದ ಈ ಸಮಸ್ಯೆ ಎದುರಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.
HOLI 2022: ಬಣ್ಣದ ಜೊತೆ ಆಟ ಗರ್ಭಿಣಿಯರಿಗೆ ಎಷ್ಟು ಸೇಫ್?
ಹೆಚ್ಚಾಗ್ತಿದೆ ಗೊಂದಲ : ಶಾಲೆಗೆ ಹೋಗುವುದು,ಬರುವುದು ಇಲ್ಲ. ಮನೆಯಲ್ಲಿ ಒಂದೇ ಜಾಗದಲ್ಲಿ ಕುಳಿತು ಮಕ್ಕಳು ತರಗತಿ ಕೇಳ್ತಿದ್ದಾರೆ. ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ತಾರೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವ ಕಾರಣ ಇದು ಮಕ್ಕಳ ಮನಸಿನ ಮೇಲೆ ಪ್ರಭಾವ ಬೀರುತ್ತಿದೆ. ಅನೇಕ ಮಕ್ಕಳ ತೂಕ ಹೆಚ್ಚಾಗಿದೆ. ಮಕ್ಕಳಲ್ಲಿ ಶಕ್ತಿ ಕಡಿಮೆಯಾಗಿದೆ. ಆತಂಕ ಹೆಚ್ಚಾಗ್ತಿದ್ದು, ಮಕ್ಕಳು ಬೇಗ ಗೊಂದಲಕ್ಕೊಳಗಾಗ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಬಿಸಿಲಿನಿಂದ ದೂರ : ಮಕ್ಕಳು ಮನೆಯಲ್ಲಿಯೇ ಇರುವ ಕಾರಣ ಅವರ ಮೈಗೆ ಬಿಸಿಲು ಬೀಳ್ತಿಲ್ಲ. ವಿಟಮಿನ್ ಡಿ ಕೊರತೆ ಕೂಡ ಮಕ್ಕಳ ಅಸ್ವಸ್ಥತೆ,ನೋವಿಕೆ ಕಾರಣವಾಗ್ತಿದೆ ಎನ್ನುತ್ತಾರೆ ತಜ್ಞರು.
ಮಕ್ಕಳ ಆರೋಗ್ಯ ರಕ್ಷಣೆ : ಆನ್ಲೈನ್ ನಲ್ಲಿಯೇ ನಿಮ್ಮ ಮಕ್ಕಳ ತರಗತಿಗಳು ನಡೆಯುತ್ತಿದ್ದರೆ ಪಾಲಕರು ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಮಕ್ಕಳಿಗೆ ಅವಶ್ಯವಾಗಿ ಕ್ಯಾಲ್ಸಿಯಂ ಭರಿತ ಆಹಾರ ನೀಡಬೇಕು. ದಿನದಲ್ಲಿ ಸ್ವಲ್ಪ ಸಮಯ ದೇಹವನ್ನು ಬಿಸಿಲಿಗೆ ಒಡ್ಡುವಂತೆ ಸಲಹೆ ನೀಡಬೇಕು. ಅಲ್ಲದೆ ಅರ್ಧಗಂಟೆಗೊಮ್ಮೆ ಮಕ್ಕಳಿಗೆ ವಿರಾಮ ನೀಡಬೇಕು. ಪ್ರತಿದಿನ ಒಳಾಂಗಣ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು. ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿಸಬೇಕು. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವಂತೆ ಸೂಚನೆ ನೀಡಬೇಕು. ಸೂಕ್ತ ಕುರ್ಚಿ ವ್ಯವಸ್ಥೆ ಮಾಡುವುದು ಸೂಕ್ತ.
Peanut Oil Health Benefits: ಹೃದಯದ ಆರೋಗ್ಯಕ್ಕಿದು ಅತ್ಯುತ್ತಮ
ಶಿಕ್ಷಕರು ಈ ವಿಷ್ಯ ತಿಳಿದಿರಿ : ಆನ್ಲೈನ್ ತರಗತಿ ನಡೆಸುವ ಶಿಕ್ಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಕ್ಲಾಸಿನಲ್ಲಿ ಮಧ್ಯೆ ಮಧ್ಯೆ ಮಕ್ಕಳಿಗೆ ಸಣ್ಣ ಪುಟ್ಟ ವ್ಯಾಯಾಮ,ಚಟುವಟಿಕೆ ಮಾಡಿಸಬೇಕು.
ನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ : ಸಾಮಾನ್ಯವಾಗಿ ಮಕ್ಕಳ ನೋವನ್ನು ಪಾಲಕರು ನಿರ್ಲಕ್ಷ್ಯ ಮಾಡ್ತಾರೆ. ನಾಳೆ ಹೋಗುತ್ತೆ ಬಿಡು ಎನ್ನುತ್ತಾರೆ. ಆದ್ರೆ ಈ ನಿರ್ಲಕ್ಷ್ಯ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಕ್ಕಳಿಗೆ ಪದೇ ಪದೇ ಬೆನ್ನು,ಕತ್ತಿನಲ್ಲಿ ನೋವು ಬಂದ್ರೆ ಆಸ್ಪತ್ರೆಗೆ ಭೇಟಿ ನೀಡುವುದು ಒಳ್ಳೆಯದು.