ಮಕ್ಕಳನ್ನು ಹೆದರಿಸಲು ಹೇಳುವ ಈ ಮಾತು ನಿಜವೇ? ಪ್ರತಿದಿನ ಟೀ ಕುಡಿಯುವ ಜನರ ಚರ್ಮ ಕಪ್ಪಾಗುತ್ತಾ?

Published : Nov 23, 2026, 08:52 PM IST
Tea Daily

ಸಾರಾಂಶ

ಟೀ: ಪ್ರತಿದಿನ ಟೀ ಕುಡಿದ ನಂತರವೇ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ಹೀಗೆ ದಿನಾ ಟೀ ಕುಡಿಯುವವರ ಚರ್ಮ ಕಪ್ಪಾಗುತ್ತೆ ಅನ್ನೋ ನಂಬಿಕೆ ಇದೆ. ಇದು ನಿಜವೇ? ಟೀ ಕುಡಿಯೋದ್ರಿಂದ ಚರ್ಮದ ಮೇಲೆ ಪರಿಣಾಮ ಬೀರಲಿದೆಯೇ? ಇದರ ಹಿಂದಿನ ಸತ್ಯ ಸಂಗತಿ ಏನು?

ಟೀ ಕುಡಿದರೆ ಚರ್ಮ ಕಪ್ಪಾಗುತ್ತಾ?

ಟೀ ಕುಡಿದರೆ ಚರ್ಮದ ಬಣ್ಣ ಕುಂದುತ್ತದೆ, ಕಪ್ಪಗಾಗುತ್ತಾರೆ ಅನ್ನೋ ಮಾತು ಅನೇಕ ಮನೆಗಳಲ್ಲಿ ಆಗಾಗ ಕೇಳಿಬರುತ್ತಿರುತ್ತದೆ. ಮಕ್ಕಳು ಟೀ ಕುಡಿಯುವುದನ್ನು ರೂಢಿಸಿಕೊಳ್ಳದಿರಲಿ ಎಂದು ಹಿರಿಯರು ತಮಾಷೆಯಾಗಿ ಹೇಳಿದ ಮಾತೇ ಹೊರತು ಇದರಲ್ಲಿ ಯಾವುದೇ ವೈಜ್ಞಾನಿಕ ಸತ್ಯವಿಲ್ಲ. ಮನುಷ್ಯನ ಮೈಬಣ್ಣ ಸಂಪೂರ್ಣವಾಗಿ ಜೀನ್ಸ್ ಮತ್ತು ದೇಹದಲ್ಲಿ ಉತ್ಪತ್ತಿಯಾಗುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಮಾತ್ರ ಅವಲಂಬಿಸಿರುತ್ತದೆ. ನಾವು ಕುಡಿಯುವ ಟೀ ನಮ್ಮ ಚರ್ಮದ ಬಣ್ಣವನ್ನು ಸ್ವಲ್ಪವೂ ಬದಲಾಯಿಸುವುದಿಲ್ಲ. ಅಸಲಿಗೆ ಟೀಯಲ್ಲಿರುವ ಪಾಲಿಫಿನಾಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಚರ್ಮದ ಬಣ್ಣ ಬದಲಾಗಲು ಸೂರ್ಯನ ಕಿರಣಗಳ ತೀವ್ರತೆ, ಹಾರ್ಮೋನ್ ಬದಲಾವಣೆಗಳು, ವಯಸ್ಸಾಗುವುದು ಇತ್ಯಾದಿಗಳು ಕಾರಣವಾಗುತ್ತವೆ ವಿನಃ ಟೀ ಕುಡಿಯುವುದು ಖಂಡಿತಾ ಕಾರಣವಲ್ಲ.

ಎಷ್ಟು ಬಾರಿ ಟೀ ಕುಡಿಯಬಹುದು?

ಮಿತವಾಗಿ ಟೀ ಕುಡಿಯುವುದರಿಂದ ಕೆಲವು ಪ್ರಯೋಜನಗಳಿದ್ದರೂ, ದಿನಕ್ಕೆ ನಾಲ್ಕು ಕಪ್‌ಗಳಿಗಿಂತ ಹೆಚ್ಚು ಕುಡಿದರೆ ಮಾತ್ರ ತೊಂದರೆಗಳು ತಪ್ಪಿದ್ದಲ್ಲ. ಟೀಯಲ್ಲಿರುವ ಕೆಫಿನ್ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಡಿಹೈಡ್ರೇಶನ್ ಉಂಟಾಗಿ ಚರ್ಮ ಒಣಗುತ್ತದೆ, ಮುಖದಲ್ಲಿರುವ ನೈಸರ್ಗಿಕ ಕಾಂತಿ ಕಡಿಮೆಯಾಗಿ ನಿರ್ಜೀವವಾಗಿ ಕಾಣುತ್ತದೆ. ಇದರ ಜೊತೆಗೆ ಅತಿಯಾಗಿ ಸಕ್ಕರೆ ಬಳಸುವುದರಿಂದ ಮೊಡವೆಗಳು ಹೆಚ್ಚಾಗುವುದು ಮತ್ತು ಮುಖದ ಮೇಲೆ ಬೇಗನೆ ಸುಕ್ಕುಗಳು ಮೂಡುವಂತಹ ಸಮಸ್ಯೆಗಳು ಎದುರಾಗುತ್ತವೆ. ತಡರಾತ್ರಿ ಟೀ ಕುಡಿಯುವ ಅಭ್ಯಾಸವಿದ್ದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ಸಾಕಷ್ಟು ನಿದ್ದೆ ಇಲ್ಲದಿರುವುದರಿಂದ ಕಣ್ಣಿನ ಕೆಳಗೆ ಕಪ್ಪು ವೃತ್ತಗಳು ಉಂಟಾಗಿ ಮುಖ ದಣಿದಂತೆ ಕಾಣುತ್ತದೆ.

ಟೀ ಬದಲಾಗಿ ಏನು ಕುಡಿಯಬಹುದು?

ದಿನಕ್ಕೆ ಒಂದು ಅಥವಾ ಎರಡು ಕಪ್ ಟೀ ಕುಡಿಯುವುದು ಯಾವಾಗಲೂ ಸುರಕ್ಷಿತ ವಿಧಾನ. ಅದಕ್ಕೂ ಮೀರಿ ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಟೀ ಹೆಚ್ಚು ಕುಡಿಯುವ ಬದಲು, ದೈನಂದಿನ ಆಹಾರದಲ್ಲಿ ನೀರು, ಹಣ್ಣಿನ ರಸ, ಎಳನೀರನ್ನು ಸೇರಿಸಿಕೊಂಡರೆ ಚರ್ಮಕ್ಕೆ ಬೇಕಾದ ತೇವಾಂಶ ಸಿಗುತ್ತದೆ. ದೇಹವು ಒಳಗಿನಿಂದ ತಾಜಾವಾಗಿರುವಾಗ ಮುಖದ ಮೇಲೆ ಹೊಳಪು ಕಾಣಿಸುತ್ತದೆ. ಹಾಗಾಗಿ ಟೀ ಕುಡಿದರೆ ಕಪ್ಪಾಗುತ್ತಾರೆ ಎಂಬ ತಪ್ಪು ಕಲ್ಪನೆಗಳನ್ನು ಬದಿಗಿಡಿ. ಉತ್ತಮ ಆಹಾರ ಪದ್ಧತಿ, ದಿನಕ್ಕೆ ಸಾಕಷ್ಟು ನಿದ್ದೆ, ಸಾಕಷ್ಟು ನೀರು ಕುಡಿಯುವ ಮೂಲಕ ಚರ್ಮವನ್ನು ಯಾವಾಗಲೂ ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿ ಕಾಪಾಡಿಕೊಳ್ಳಬಹುದು.

ಮಾಲಾಶ್ರೀಯಲ್ಲಿ 'ಅದೊಂದು ಸೀಕ್ರೆಟ್' ಇತ್ತು, ಅದ್ರಿಂದ್ಲೇ ಟಾಪ್ ಸ್ಟಾರ್ ಆದ್ರು! ಯಾರೂ ಹೇಳದ ರಹಸ್ಯ ಹೇಳಿದ ವಾಣಿಶ್ರೀ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬ್ಯಾಡ್ ಲಿಪಿಡ್ ಕಡಿಮೆ ಮಾಡಿ ನಿಮ್ಮ ಜೀವ ಕಾಪಾಡುವ ಈ ಆಹಾರಗಳು ಎಲ್ಲಿ ಕಂಡರೂ ಬಿಡದೇ ತಿನ್ನಿ!
skin care : ಚಳಿಗಾಲ ಬರ್ತಿದ್ದಂತೆ ಪಾದ ಬಿರುಕು ಬಿಟ್ಟು ರಕ್ತ ಬರ್ತಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ