ಬೆಂಗಳೂರಿನಲ್ಲಿ ಬ್ರೈನ್ ಟ್ಯೂಮರ್‌ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ! ವೈದ್ಯರಿಂದ ಬಹಿರಂಗ

Published : Jun 09, 2025, 05:32 PM IST
What are the main causes of brain tumor in adults and children

ಸಾರಾಂಶ

ಬೆಂಗಳೂರಿನಲ್ಲಿ ಮೆದುಳಿನ ಗೆಡ್ಡೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇದು ಹೆಚ್ಚಿದ ಜಾಗೃತಿ ಮತ್ತು ಸುಧಾರಿತ ತಂತ್ರಜ್ಞಾನದಿಂದಾಗಿ. ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಾಧ್ಯ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮೆದುಳಿನ ಗೆಡ್ಡೆಗಳ (brain tumors) ಪ್ರಕರಣಗಳಲ್ಲಿ ಶೇ.30ರಷ್ಟು ಏರಿಕೆಯಾಗಿದೆ. ಈ ಸಂಖ್ಯೆ ಆರಂಭದಲ್ಲಿ ಕಳವಳಕಾರಿ ಎನಿಸಬಹುದಾದರೂ, ಭಯ ಬೇಡ ಇದು ನವತಂತ್ರಜ್ಞಾನ ಮತ್ತು ಜನಜಾಗೃತಿಯ ಫಲಿತಾಂಶವಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಅರ್ಧ ವರ್ಷದಲ್ಲೇ 40 ಪ್ರಕರಣ ಬೆಳಕಿಗೆ

ಸಕ್ರಾ ವರ್ಲ್ಡ್ ಆಸ್ಪತ್ರೆಯ ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಅರ್ಜುನ್ ಶ್ರೀವತ್ಸ ಅವರು ಹೇಳುವಂತೆ "ಇಂದು ಸಾಮಾನ್ಯ ಜನರಲ್ಲಿ ಮೆದುಳಿನ ಗೆಡ್ಡೆಗಳ ಲಕ್ಷಣಗಳ ಬಗ್ಗೆ ಹೆಚ್ಚು ಅರಿವು ಇದೆ. ಜನರು ಆರಂಭಿಕ ತಲೆನೋವು, ದೃಷ್ಟಿ ಮಬ್ಬಾಗುವುಸು ಅಥವಾ ದೇಹದ ಭಾಗಗಳಲ್ಲಿ ಬಲಹೀನತೆ ಕಂಡುಬಂದಾಗಲೇ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಜೊತೆಗೆ, ಇಮೇಜಿಂಗ್ ತಂತ್ರಜ್ಞಾನ, ವಿಶೇಷವಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು, ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇದು ಮೊದಲಿನಲ್ಲಿದ್ದ ಹಳೆಯ ತಾಂತ್ರಿಕ ಕುಂದುಕೊಳತೆಯನ್ನು ನೀಗಿಸಿದ್ದು, ಮೊದಲ ಹಂತದಲ್ಲಿಯೇ ಗೆಡ್ಡೆಗಳ ಪತ್ತೆಗೆ ನೆರವಾಗುತ್ತಿದೆ." "ಕಳೆದ ವರ್ಷ ನಾವು 50ಕ್ಕೂ ಹೆಚ್ಚು ಮೆದುಳಿನ ಗೆಡ್ಡೆ ಪ್ರಕರಣಗಳನ್ನು ನೋಡಿದ್ದೇವೆ. ಈ ವರ್ಷ ಈಗಾಗಲೇ 40 ಪ್ರಕರಣಗಳು ದಾಖಲಾಗಿವೆ, ಮತ್ತು ನಾವು ಇನ್ನೂ ವರ್ಷದ ಅರ್ಧ ಭಾಗದಲ್ಲಿಯೇ ಇದ್ದೇವೆ" ಎಂದು ಡಾ. ಶ್ರೀವತ್ಸ ಹೇಳಿದ್ದಾರೆ.

ಪ್ರಕರಣಗಳ ಹಿಂದಿನ ಸತ್ಯವೇನು?

ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ ಅವರು ಈ ಪ್ರಮಾಣದ ಹೆಚ್ಚಳವನ್ನು ಕೇವಲ ಒಂದು ಕಾರಣಕ್ಕೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಹಲವು ಕಾರಣವಿದೆ. "ಈಗ ಜನರು ಆರೋಗ್ಯ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದಿರುವುದರಿಂದ, ಅಲ್ಪ ಲಕ್ಷಣಗಳು ಅಂದ್ರೆ, ತಲೆನೋವು, ವೀಕ್‌ನೆಸ್‌ ಮತ್ತು ಕಣ್ಣು ಮಂಜಾಗುವ ಸೂಚನೆಗಳು ಕಾಣಿಸಿಕೊಂಡಾಗಲೇ ವೈದ್ಯಕೀಯ ನೆರವು ಹುಡುಕುತ್ತಿದ್ದಾರೆ. ಜೊತೆಗೆ, ತಂತ್ರಜ್ಞಾನ ಮತ್ತು ಡಯಗ್ನಾಸ್‌ ವಿಧಾನಗಳಿಂದ ಕೂಡ ಪತ್ತೆ ಮಾಡಬಹುದು. ಆದರೆ, ಮಾಲಿನ್ಯ, ಆಹಾರದಲ್ಲಿ ರಾಸಾಯನಿಕಗಳು, ಬೊಜ್ಜು, ಹಾಗೂ ವಿಕಿರಣದಂತಹ ಪರಿಸರ ಹಾಗೂ ಜೀವನಶೈಲಿಯ ಬದಲಾವಣೆ ಕೂಡ ನಿಜಕ್ಕೂ ಈ ಪ್ರಕರಣಗಳಿಗೊಂದು ಕಾರಣವಾಗಿರಬಹುದು."

ಮಕ್ಕಳಲ್ಲಿಯೂ ಹೆಚ್ಚುತ್ತಿರುವ ಮೆದುಳಿನ ಗೆಡ್ಡೆ ಪ್ರಕರಣಗಳು

ನಾರಾಯಣ ಹೆಲ್ತ್ ಸಿಟಿಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಕೋಮಲ್ ಪ್ರಸಾದ್ ಸಿ ಅವರು, "ಮಕ್ಕಳಲ್ಲಿಯೂ ಮೆದುಳಿನ ಗೆಡ್ಡೆಗಳು ಅಪರೂಪವಲ್ಲ. ವಿಶೇಷವಾಗಿ ಸೆರೆಬೆಲ್ಲಮ್ ಭಾಗದಲ್ಲಿ ಕಂಡುಬರುವ ಮೆಡುಲ್ಲೊಬ್ಲಾಸ್ಟೋಮಾ ರೋಗವು ಸಾಮಾನ್ಯವಾಗಿದೆ. ಆದರೆ ಮಕ್ಕಳ ಸಮಸ್ಯೆಯೆಂದರೆ, ಅವರು ತಮ್ಮ ಅನುಭವಗಳನ್ನು ಸರಿಯಾಗಿ ವಿವರಿಸಲು ಆಗದೆ ಹೋಗುತ್ತಾರೆ. ಆದ್ದರಿಂದ, ತಕ್ಷಣವೇ ನರವೈಜ್ಞಾನಿಕ ತಜ್ಞರನ್ನು ಭೇಟಿ ಮಾಡುವುದು ಅನಿವಾರ್ಯ ಎಂದರು. ಜೊತೆಗೆ ಆರಂಭಿಕ ಹಂತದಲ್ಲಿಯೇ ಪತ್ತೆಯಾಗುವ ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ಲೇಸರ್ ಮತ್ತು ಮರುಜೋಡಣೆಯ ಚಿಕಿತ್ಸೆಯಂತಹ ಆಯ್ದ ಕ್ರಮಗಳೊಂದಿಗೆ ಉತ್ತಮ ಪರಿಣಾಮ ದೊರೆಯುತ್ತದೆ. ಈ ಮೂಲಕ ಮಕ್ಕಳು ಪುನಃ ಆರೋಗ್ಯಕರ ಜೀವನಕ್ಕೆ ಮರಳಿ ಬರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ

ಕುಟುಂಬಕ್ಕೂ ಅಗತ್ಯ

ಮೆದುಳಿನ ಗೆಡ್ಡೆಯ ಪ್ರಭಾವ ಕೇವಲ ರೋಗಿಯ ದೇಹದ ಮಟ್ಟಿಗೇ ಸೀಮಿತವಿಲ್ಲ. ಅದು ಅವರ ಕುಟುಂಬದ ಭಾವನಾತ್ಮಕ ಸ್ಥಿತಿ, ಆರ್ಥಿಕ ಸಾಮರ್ಥ್ಯ ಮತ್ತು ದಿನನಿತ್ಯದ ಚಟುವಟಿಕೆಗಳನ್ನೂ ಬದಲಾಯಿಸುತ್ತದೆ. ಆದರೆ, ಸೂಕ್ತವಾದ ಮತ್ತು ಸಮಯೋಚಿತ ಆರೈಕೆ ದೊರೆತರೆ, ಈ ರೋಗಿಗಳಿಗೆ ಜೀವನವನ್ನು ಪುನಃ ಹಿಡಿದುಕೊಳ್ಳಲು ಅವಕಾಶ ಸಿಗುತ್ತದೆ. ಅವರು ಮತ್ತೆ ಕೆಲಸ, ಅಧ್ಯಯನ ಮತ್ತು ಸಾಮಾಜಿಕ ಜೀವನಕ್ಕೆ ಸೇರಿ ಅರ್ಥಪೂರ್ಣವಾಗಿ ಬದುಕಬಹುದು.

ಬೆಂಗಳೂರಿನಲ್ಲಿ ಮೆದುಳಿನ ಗೆಡ್ಡೆ ಪ್ರಕರಣಗಳ ಏರಿಕೆ ಪ್ರಗತಿಯ ಚಿಹ್ನೆಯೆಂದು ಪರಿಗಣಿಸಬಹುದು. ತಾಂತ್ರಿಕ ಉತ್ತೇಜನೆ, ಜನಜಾಗೃತಿ ಮತ್ತು ಉತ್ತಮ ಆರೋಗ್ಯ ಸೌಲಭ್ಯಗಳೊಂದಿಗೆ, ಈ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಪ್ರತಿಯೊಬ್ಬರಿಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ