
ದಿನಾ ವಾಕಿಂಗ್ ಮಾಡುವುದು ಅತ್ಯುತ್ತಮ ವ್ಯಾಯಾಮ. ದಿನಕ್ಕೆ 10,000 ಹೆಜ್ಜೆ ನಡೆಯಬಹುದು ಅಥವಾ 30 ನಿಮಿಷ ಜಪಾನೀಸ್ ವಾಕಿಂಗ್ ಮಾಡಬಹುದು. ಇವೆರಡರಲ್ಲಿ ಎರಡನೆಯದೇ ಬೆಸ್ಟ್ ಅಂತಾರೆ ವೈದ್ಯರು. ಅದ್ಯಾಕೆ ಹಾಗಂತಾರೆ? ನೋಡೋಣ ಬನ್ನಿ.
ಪ್ರಪಂಚದಾದ್ಯಂತ ಲಕ್ಷಾಂತರ ಜನ ಇಷ್ಟಪಡುವ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳಲ್ಲಿ ವಾಕಿಂಗ್ ಒಂದು. ಇದಕ್ಕೆ ಯಾವುದೇ ಜಿಮ್ ಸಾಧನಗಳ ಅಗತ್ಯವಿಲ್ಲ. ಎಲ್ಲಿಯೂ ಮಾಡಬಹುದು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಎಷ್ಟು ಸಮಯ ನಡೆಯಬೇಕು, ಎಷ್ಟು ಹೆಜ್ಜೆಗಳು, ಅವಧಿ ಎಷ್ಟು ಅಥವಾ ಎಷ್ಟು ವೇಗ ಕಾಯ್ದುಕೊಳ್ಳಬೇಕು? ಈ ಬಗ್ಗೆ ಯಾವಾಗಲೂ ಸಂದೇಹ ಇರುತ್ತೆ. ಬೆಸ್ಟ್ ಅಂದ್ರೆ ಒಂದು ದಿನಕ್ಕೆ 10,000 ಹೆಜ್ಜೆಗಳು. ಈ ನಡುವೆ, ಜಪಾನೀಸ್ ವಾಕಿಂಗ್ ಟೆಕ್ನಿಕ್ ಸದ್ದು ಮಾಡುತ್ತಿದೆ. ದಿನಕ್ಕೆ 10,000 ಹೆಜ್ಜೆ ನಡೆಯುವುದು ಅಥವಾ 30 ನಿಮಿಷಗಳ ಜಪಾನೀಸ್ ವಾಕಿಂಗ್‌ನಲ್ಲಿ ಯಾವುದು ಉತ್ತಮ? ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ವಿವಿಯ ತಜ್ಞರು ಏನು ಹೇಳ್ತಾರೆ ನೋಡೋಣ.
ಮೊದಲು ದಿನಕ್ಕೆ 10,000 ಹೆಜ್ಜೆ ನಡೆಯೋದರಿಂದ ಏನಾಗುತ್ತೆ ನೋಡೋಣ. ಇದು ಸರಿಸುಮಾರು ಐದು ಮೈಲು. ಬಹಳ ಹಿಂದಿನಿಂದಲೂ ಇದು ಫಿಟ್‌ನೆಸ್ ಮಾನದಂಡ. ದಿನಕ್ಕೆ 10,000 ಹೆಜ್ಜೆಗಳ ನಡಿಗೆ ತೂಕ ನಿರ್ವಹಣೆ, ಹೃದಯ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸಹಾಯಕ. ಈ ಗುರಿ ಸಾಧಿಸುವುದರಿಂದ ಹೃದ್ರೋಗ, ಮಧುಮೇಹ ಮತ್ತು ಖಿನ್ನತೆಯ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದನ್ನು ಫಿಟ್‌ನೆಸ್ ವಾಚ್ ಮೂಲಕ ಸುಲಭವಾಗಿ ಟ್ರ್ಯಾಕ್ ಮಾಡಬಹುದು. 2022ರಲ್ಲಿ ಲಂಡನ್‌ನಲ್ಲಿ 78,430 ಮಂದಿಯನ್ನು ಇದರ ಅಧ್ಯಯನಕ್ಕೆ ಒಳಪಡಿಸಲಾಯಿತು. ಮನಸಸು ಹಾಗೂ ದೇಹ ಗಣನೀಯವಾಗಿ ಚುರುಕಾಗಿರುವುದು ಗೊತ್ತಾಯಿತು.
ಜಪಾನೀಸ್ ವಾಕಿಂಗ್ ತಂತ್ರ ಎಂದರೇನು?
ಇದನ್ನು ಜಪಾನೀಸ್ ಇಂಟರ್ವಲ್ ವಾಕಿಂಗ್ (IWT) ಎಂದೂ ಕರೆಯುತ್ತಾರೆ. ಇದು ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾದ ಒಂದು ವಾಕಿಂಗ್ ತಂತ್ರ. ಇದು ಮಧ್ಯೆ ಅಂತರ ನೀಡಿ ಬೇರೆ ಬೇರೆ ವೇಗಗಳಲ್ಲಿ ವಾಕ್ ಮಾಡುವುದು. ಪ್ರತಿದಿನ 30 ನಿಮಿಷ ಕಾಲ ನಡೆಯಲಾಗುತ್ತದೆ. ಮೂರು ನಿಮಿಷಗಳ ನಿಧಾನ ನಡಿಗೆ, ನಂತರದ ಮೂರು ನಿಮಿಷ ಚುರುಕಾದ ನಡಿಗೆ. ಹೀಗೆ ಪರ್ಯಾಯ ನಡಿಗೆಯ ರೀತಿಯಿದು.
ಯಾವುದು ಉತ್ತಮ?
ತಜ್ಞರು ಜಪಾನೀಸ್ ವಾಕಿಂಗ್ ತಂತ್ರವನ್ನು ಬೆಂಬಲಿಸುತ್ತಾರೆ. “ಜಪಾನಿಯರು ಸಾಂಪ್ರದಾಯಿಕ 10,000 ಹೆಜ್ಜೆಗಿಂತ ಹೆಚ್ಚಿನ ಪ್ರಯೋಜನ ಹೊಂದಿರುವ ವಾಕಿಂಗ್ ತಂತ್ರ ಕಂಡುಹಿಡಿದಿದ್ದಾರೆ. ಪ್ರತಿದಿನ 30 ನಿಮಿಷ ಕಾಲ ಇದನ್ನು ಮಾಡಿ. ಫಲಿತಾಂಶ ಪ್ರಭಾವಶಾಲಿಯಾಗಿರುತ್ತದೆ.”
ದಿನಕ್ಕೆ 10,000 ಹೆಜ್ಜೆಗಳಿಗೆ ಹೋಲಿಸಿದರೆ, IWT ರಕ್ತದೊತ್ತಡವನ್ನು ಸುಧಾರಿಸುತ್ತದೆ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಯ ಗುಣಮಟ್ಟವನ್ನು ನೀಡುತ್ತದೆ ಎಂದು ಅವರು ಹೇಳುತ್ತಾ ರೆ. ಈ ವಿಧಾನ ಹೃದಯರಕ್ತನಾಳದ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವಂತೆ.
"ಮೊದಲು 3-5 ನಿಮಿಷಗಳ ಕಾಲ ಆರಾಮದಾಯಕ ವೇಗದಲ್ಲಿ ನಡೆಯಿರಿ. ನಂತರ ಪರ್ಯಾಯವಾಗಿ ನಿಧಾನ ಮತ್ತು ಚುರುಕಾದ ನಡಿಗೆಯನ್ನು ಮಾಡಿ. 3-5 ನಿಮಿಷಗಳ ಕೂಲ್ ಡೌನ್‌ನೊಂದಿಗೆ ಮುಗಿಸಿ. ಇದು ಕಡಿಮೆ ಸಮಯ ಬಳಸುವ ಮತ್ತು ಬಹಳ ಪರಿಣಾಮಕಾರಿ ವಿಧಾನ" ಎಂದು ವೈದ್ಯರು ಸೂಚಿಸುತ್ತಾರೆ.
ಇದರ ಜೊತೆಗೆ ನಿಮ್ಮ ದೇಹದ ಮಾತು ಕೇಳುವುದು ಆರೋಗ್ಯಕ್ಕೆ ಅತ್ಯಂತ ಮುಖ್ಯ. ಆದ್ದರಿಂದ ಪ್ರತಿದಿನ ಕೆಲವು ವ್ಯಾಯಾಮಗಳನ್ನು ಮಾಡುವುದನ್ನು ರೂಢಿಸಿಕೊಳ್ಳಿ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸಹ ಬಹಳ ಮುಖ್ಯ. ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಮತೋಲಿತ ಆಹಾರ ಸೇವಿಸುವುದು ನಿರ್ಣಾಯಕ. ಇದು ನಿಮ್ಮ ಫಿಟ್‌ನೆಸ್ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ. ನೀವು ಯಾವುದನ್ನು ಆರಿಸಿಕೊಂಡರೂ, ಚಲನೆ ಮುಖ್ಯ. ಆದ್ದರಿಂದ ಒಂದಲ್ಲ ಒಂದು ವಾಕಿಂಗ್ ಮಾಡಿ.
ಫ್ರಿಡ್ಜ್‌ನಲ್ಲಿರುವ ಈ ಐದು ವಸ್ತುಗಳು ನಿಮ್ಮನ್ನು ದಪ್ಪಗಾಗಿಸುತ್ತಿವೆ!
ನಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ದಿನಚರಿಗೆ ವಾಕಿಂಗ್ ಸೇರಿಸುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿಗೆ ಪ್ರಯೋಜನ. ಉದಾಹರಣೆಗೆ, ಊಟದ ನಂತರ ಒಂದು ಸಣ್ಣ ನಡಿಗೆ (10–15 ನಿಮಿಷಗಳು) ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಬ್ಲೋಟಿಂಗ್ ತಡೆಯುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.