
ಹೊಸ ವರ್ಷ ಬಂದೇಬಿಟ್ಟಿತು, ಇನ್ನೇ ನಾಲ್ಕು ದಿನಗಳಲ್ಲಿ ಜನವರಿ ಒಂದಕ್ಕೆ ಕಾಲಿಡಲಿದ್ದೇವೆ. ಅದಕ್ಕೂ ಒಂದು ದಿನ ಮೊದಲ ರಾತ್ರಿ ಹನ್ನೆರಡು ಗಂಟೆಯವರೆಗೂ ಸಾಕಷ್ಟು ಕುಣಿದು ಕುಪ್ಪಳಿಸುವುದು ಇದ್ದೇ ಇದೆ. ಆದ್ರೆ ಹೊಸ ವರ್ಷದ ಆಸುಪಾಸಿನ ದಿನಗಳಲ್ಲಿ, ಅಥವಾ ನಿಖರವಾಗಿ ಹೇಳೋದಾದ್ರೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ನಡುವೆ, ಅತ್ಯಧಿಕ ಸಂಖ್ಯೆಯಲ್ಲಿ ಹಾರ್ಟ್ ಅಟ್ಯಾಕ್‌ಗಳು, ಹಾರ್ಟ್ ಫೈಲ್ಯೂರ್‌ಗಳು ಆಗ್ತವಂತೆ. ಹೀಗಾಗಿ ಹುಷಾರಾಗಿರೋದು ಅಗತ್ಯ ಅಂತ ವೈದ್ಯರು ಹೇಳ್ತಿದಾರೆ. ಏನಿದರ ಕಾರಣ?
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಚಳಿಗಾಲದ ರಜಾದಿನಗಳು ಮಾರಣಾಂತಿಕವಾಗಬಹುದು. ವರ್ಷದ ಯಾವುದೇ ಸಮಯಕ್ಕಿಂತ ಡಿಸೆಂಬರ್ ಕೊನೆಯ ವಾರದಲ್ಲಿ ಹೆಚ್ಚು ಜನರು ಹೃದಯಾಘಾತದಿಂದ ಸಾಯುತ್ತಾರೆ. ಯಾವುದೇ ಇತರ ದಿನಗಳಿಗಿಂತ ಹೆಚ್ಚು ಹೃದಯ ಸಂಬಂಧಿ ಸಾವುಗಳು ಡಿಸೆಂಬರ್ 25, ಡಿಸೆಂಬರ್ 26 ಮತ್ತು ಜನವರಿ 1ರಂದು ಅಮೆರಿಕದಲ್ಲಿ ಸಂಭವಿಸುತ್ತವಂತೆ. ಈಗ ಅಮೆರಿಕದ ಮತ್ತು ಭಾರತದ ನಗರಗಳ ಲೈಫ್‌ಸ್ಟೈಲ್‌ನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹೀಗಾಗಿ ಅದು ಇಲ್ಲಿಗೂ ಅಪ್ಲೈ ಆಗುತ್ತೆ ಅನ್ನಬಹುದು.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿರುವ, ಭಾರತೀಯ ಮೂಲದ ವೈದ್ಯ ಡಾ. ಅಮೇಯಾ ಕುಲಕರ್ಣಿ ಹೇಳೋದು ಕೇಳಿ- ರಜಾದಿನದಲ್ಲಿ ಸಂಭವಿಸೋ ಹೃದಯಾಘಾತಗಳು ಮಾರಕ. ಇದಕ್ಕೆ ಒಂದು ಕಾರಣ ಕಡಿಮೆ ತಾಪಮಾನ. ಎರಡನೇ ಕಾರಣ ಮನೆಯಲ್ಲಿ ವ್ಯಾಯಾಮವಿಲ್ಲದ ಜಡವಾಗಿ ಇರೋದು. ಮೂರನೇ ಕಾರಣ ಹೆಚ್ಚಿನ ಕೊಬ್ಬಿನಂಶದ ಆಹಾರ (ಜಂಕ್‌ಫುಡ್) ಸೇವಿಸೋದು ಹಾಗೂ ಸಕ್ಕರೆ ಅಂಶ ಇರೋ ಪಾನೀಯ ಸೇವಿಸೋದು. ಮತ್ತೆ ಮದ್ಯಪಾನ. ಇವೆಲ್ಲವೂ ಸೇರಿ ಹೃದಯಾಘಾತಕ್ಕೆ ಒಳ್ಳೆಯ ನಾಂದಿ ಹಾಡುತ್ತವೆ.
ಹಲವರು ರಜಾದಿನಗಳಲ್ಲಿ ಒತ್ತಡ ಅನುಭವಿಸುತ್ತಾರೆ. ನಾಳೆ ಆಫೀಸಿಗೆ ಹೋಗಬೇಕು, ಎಷ್ಟೊಂದು ಕೆಲಸ ಬಾಕಿ ಇದೆ, ಈ ಕೆಲಸ ಆಗ್ಲೇಬೇಕಿತ್ತು ಆದರೆ ಆಗಿಲ್ಲ. ಅಯ್ಯೋ ರಜಾ ಮುಗೀತು- ಇಂಥ ಭಾವನೆಗಳು ಒಂದರ ಮೇಲೊಂದು ಹೃದಯಕ್ಕೆ ಒತ್ತಡ ಹಾಕುತ್ತಿರುತ್ತವೆ.
ಹೀಗಾಗಿ ರಜಾದಿನಗಳಲ್ಲಿ ಎದೆಯಲ್ಲಿ ನೋವು, ತಲೆತಿರುಗುವಿಕೆ, ದವಡೆ, ಕುತ್ತಿಗೆ ಅಥವಾ ಬೆನ್ನು ನೋವು, ತೋಳು ಅಥವಾ ಭುಜದಲ್ಲಿ ಅಸ್ವಸ್ಥತೆ ಅಥವಾ ನೋವು ಮತ್ತು ಉಸಿರಾಟದ ತೊಂದರೆ ಮುಂತಾದ ಎಚ್ಚರಿಕೆಯ ಚಿಹ್ನೆಗಳಿಗೆ ಗಮನ ಕೊಡಿ ಎಂದು ಕುಲಕರ್ಣಿ ಹೇಳುತ್ತಾರೆ. ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ನಿಮ್ಮ ದೇಹಕ್ಕೆ ಗಮನ ಕೊಡುವುದು. ವರ್ಷದ ಉಳಿದ ದಿನಗಳಲ್ಲಿ ತೆಗೆದುಕೊಳ್ಳುವ ಎಚ್ಚರವನ್ನು ಈಗ ಸ್ವಲ್ಪ ಹೆಚ್ಚೇ ತೆಗೆದುಕೊಳ್ಳಬೇಕು.
ಜೊತೆಗೆ ರಜಾದಿನಗಳು ನಿಮ್ಮಲ್ಲಿ ಎಕ್ಸೈಟ್‌ಮೆಂಟ್ ಕೂಡ ಉಂಟುಮಾಡಿರುವ ಚಾನ್ಸ್ ಇದೆ. ಅಂದರೆ ಆನಂದದಾಯಕ ಆಟ, ಅಡ್ವೆಂಚರ್, ಹೈಕಿಂಗ್ ಇತ್ಯಾದಿಗಳಲ್ಲಿ ನೀವು ತೊಡಗಿದ್ದಿರಬಹುದು. ಅಡ್ರಿನಾಲಿನ್ ರಶ್ ಕೂಡ ಆಗಿರುವ ಸಾಧ್ಯತೆ ಇದೆ. ಅದು ಕೂಡ ಹೃದಯದ ದಣಿವಿಗೆ ಕೊಡುಗೆ ಕೊಡುತ್ತದೆ ಅಂತಾರೆ ಡಾಕ್ಟರ್ ಕುಲಕರ್ಣಿ. ಜೊತೆಗೆ ಕ್ರಿಸ್‌ಮಸ್ ಅಂತ ಪ್ಲಮ್ ಕೇಕ್ ಮತ್ತಿತರ ಸಿಹಿತಿಂಡಿಗಳನ್ನೂ ಜೋರಾಗಿ ಬಾರಿಸಿರುವ ಸಾಧ್ಯತೆ ಹೆಚ್ಚು.
ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರು ತಮ್ಮ ಆರೋಗ್ಯದ ರೀಡಿಂಗ್ ಗಮನಿಸುತ್ತಿರಬೇಕು. ಮತ್ತು ಅತಿಯಾಗಿ ಜಂಕ್, ಮದ್ಯ ಸೇವಿಸಬಾರದು. ಬಹು ಮುಖ್ಯವಾಗಿ ನಿಮ್ಮ ಒತ್ತಡದ ಮಟ್ಟದ ಬಗ್ಗೆ ನಿಗಾ ಇಡಿ. "ಹೆಚ್ಚಿದ ಒತ್ತಡವು ನಿಮ್ಮ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ರಜಾದಿನಗಳಲ್ಲಿ ಒತ್ತಡದ ಪರಿಸ್ಥಿತಿಯನ್ನು ಸಮೀಪಿಸುತ್ತಿದ್ದರೆ, ಆ ಕ್ಷಣಗಳಲ್ಲಿ ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ" ಎಂದು ಡಾಕ್ಟರ್ ನುಡಿಯುತ್ತಾರೆ.
ಶವಸಂಭೋಗ ಅತ್ಯಾಚಾರ ಅಲ್ವಂತೆ, ಹಾಗಾದ್ರೆ ಮತ್ತೇನು?
ಆರೋಗ್ಯಕರ ತೂಕವನ್ನು ಕಾಪಾಡಿಕೊಕೊಳ್ಳುವುದು, ನಿಮ್ಮ ರಕ್ತದೊತ್ತಡವನ್ನು ಸುರಕ್ಷಿತ ಮಟ್ಟದಲ್ಲಿ ಇಟ್ಟುಕೊಳ್ಳುವುದು, ಆಹಾರಕ್ರಮವನ್ನು ಗಮನಿಸುವುದು ನೀವು ವರ್ಷವಿಡೀ ಕಾಪಾಡಿಕೊಳ್ಳಬೇಕಾದ ತತ್ವಗಳಾಗಿವೆ. ಹೊಸ ವರ್ಷಕ್ಕೆ ಹೊಸ ಜೀವನಶೈಲಿಯ ಶುರು ಮಾಡುವ ರೆಸೊಲ್ಯೂಶನ್ ಮಾಡಿದರೆ, ಅಂದರೆ ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡ್ತೀನಿ ಎಂದು ನಿರ್ಣಯ ಮಾಡಿದರೆ, ಒಂದೇ ಸಲ ತೀವ್ರವಾಗಿ ಅದನ್ನು ಶುರು ಮಾಡಿಬಿಡಬೇಡಿ. ಇವನ್ನು ಇದ್ದಕ್ಕಿದ್ದಂತೆ ಮಾಡುವ ಬದಲು ನಿಧಾನವಾಗಿ ಶುರುಮಾಡಬೇಕು. "ಹೃದಯಾಘಾತದ ಹಂತಗಳು ಒಂದೊಂದೇ ಇಟ್ಟಿಗೆ ಇಟ್ಟಿಗೆಯಾಗಿ ಕಟ್ಟಡ ಕಟ್ಟುತ್ತವೆ.
ಸಾಮಾನ್ಯ ಹೃದಯಾಘಾತದ ಎಚ್ಚರಿಕೆ ಚಿಹ್ನೆಗಳು:
ಎದೆಯಲ್ಲಿ ನೋವು ಅಥವಾ ಅಸ್ವಸ್ಥತೆ
ತಲೆತಿರುಗುವಿಕೆ, ವಾಕರಿಕೆ ಅಥವಾ ವಾಂತಿ
ದವಡೆ, ಕುತ್ತಿಗೆ ಅಥವಾ ಬೆನ್ನು ನೋವು
ತೋಳು ಅಥವಾ ಭುಜದಲ್ಲಿ ಅಸ್ವಸ್ಥತೆ ಅಥವಾ ನೋವು
ಉಸಿರಾಟದ ತೊಂದರೆ
ಚಳಿಗಾಲದ ಚಹಾ ಪ್ರಿಯರಿಗೆ ಎಚ್ಚರಿಕೆ: ಪದೇ ಪದೇ ಕುದಿಸಿದರೆ ಆಪತ್ತು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.