ಡೆಂಘೀ ಟೆಸ್ಟಿಂಗ್ - ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ

By Ravi Janekal  |  First Published Jul 2, 2024, 9:17 PM IST

ಡೆಂಘೀ ಟೆಸ್ಟಿಂಗ್ - ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು. ಜೊತೆಗೆ ಡೆಂಘೀ ಪ್ರಕರಣಗಳ ಕುರಿತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.


ಬೆಂಗಳೂರು (ಜು.2): ಡೆಂಘೀ ಪ್ರಕರಣಗಳ ಟೆಸ್ಟಿಂಗ್ ಗೆ ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಡೆಂಘೀ ನಿಯಂತ್ರಣ ಕುರಿತು ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬುಧವಾರವೇ ದರ ನಿಗದಿ ಕುರಿತು ಸುತ್ತೋಲೆ ಹೊರಡಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದರು. 

ಅಲ್ಲದೇ ಖಾಸಗಿ ಆಸ್ಪತ್ರೆಗಳು ಕಡ್ಡಾಯವಗಿ ಡೆಂಘೀ ಪಾಸಿಟಿವ್ ಪ್ರಕರಣ(Dengue positive case)ಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಳೆದ ಸಾಲಿಗೆ ಹೊಲಿಸಿದರೆ ಈ ಬಾರಿ ಡೆಂಘೀ ಪ್ರಕರಣಗಳ ಟೆಸ್ಟಿಂಗ್(Dengue test) ನಲ್ಲಿ ಶೇ 42 ರಷ್ಟು ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಮುಂಚಿತವಾಗಿ ಡೆಂಘೀ ಪಾಸಿಟಿವ್ ಪ್ರಕರಣಗಳನ್ನ ಪತ್ತೆ ಹಚ್ಚಿದಾಗ ಮಾತ್ರ ಸಾವುಗಳನ್ನ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೆಚ್ಚು ನಿಗಾ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್(Dinesh gundurao) ಸಭೆಯಲ್ಲಿ ಸೂಚನೆ ನೀಡಿದರು. 

Latest Videos

ಸಾರ್ವಜನಿಕ ಸ್ಥಳದಲ್ಲಿ ನೂತನವಾಗಿ 254 ನಮ್ಮ ಕ್ಲಿನಿಕ್; ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ಸೂಚನೆ

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವರು, ರಾಜ್ಯದಲ್ಲಿ ಒಟ್ಟು ಜನವರಿ ತಿಂಗಳಿನಿಂದ ಜೂನ್ ಅಂತ್ಯದ ವರೆಗೆ  6187 ಡೆಂಘೀ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನರು ಸಾವಿಗೀಡಾಗಿದ್ದಾರೆ. ಡೆಂಘೀ ಮರಣ ಪ್ರಮಾಣ ಶೇ 0.09 ರಷ್ಟಿದೆ. ಸಾವುಗಳನ್ನ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. 

ಬೆಂಗಳೂರಿನ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಿ

ಡೆಂಘೀ ನಿಯಂತ್ರಣ ವಿಚಾರದಲ್ಲಿ ಈಡಿಸ್ ಸೊಳ್ಳೆ ಹಾಗೂ ಲಾರ್ವಾ ಬಗ್ಗೆ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ವಿಶೇಷವಾಗಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ ಡೆಂಘೀ ಬಗ್ಗೆ ಜನರಿಗೆ ತಿಳಿಹೇಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಫಿಸರ್ ಗಳು ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಡೆಂಘೀ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ವಿಜ್ಞಾನ ಶಿಕ್ಷಕರಿಗೆ ಡೆಂಘೀ ಹಾಗೂ ಲಾರ್ವಾ ನಾಶದ ಬಗ್ಗೆ ತರಬೇತಿ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿಗಳು ಸ್ಕೂಲ್ ಗಳಿಗೆ ಭೇಟಿ ನೀಡಿ ಶಿಕ್ಷಕರು ಡೆಂಘೀ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. 

ಪ್ರತಿ ಶುಕ್ರವಾರ ಡೆಂಘೀ ನಿಯಂತ್ರಣ ಅಭಿಯಾನ. ಬಿಬಿಎಂಪಿ(BBMP) ಹಾಗೂ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರತಿ ಶುಕ್ರವಾರ ಫೀಲ್ಡ್ ನಲ್ಲಿರಬೇಕು. ಲಾರ್ವಾ ನಾಶದ ಕುರಿತು ತೆಗೆದುಕೊಳ್ಳುತ್ತಿರುವ ಕ್ರಮಗಳ ಮೇಲ್ವಿಚಾರಣೆ ನಡೆಸುವಂತೆ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು. ವಿಶೇಷವಾಗಿ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳ ಜೊತೆ ಬಿಬಿಎಂಪಿ ಆಯುಕ್ತರಿಗೆ ಸಭೆ ನಡೆಸಲು ಸೂಚಿಸಲಾಗಿದ್ದು, ನಿರ್ಮಾಣ ಕಾಮಗಾರಿಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಲಾರ್ವಾಗಳನ್ನ ನಾಶಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಲಾಯಿತು. 

ಪಾನಿಪೂರಿಯಲ್ಲಿ 5 ರೀತಿಯ ರಾಸಾಯನಿಕ ವಸ್ತುಗಳಿವೆ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಡೆಂಘೀ ಯಿಂದ ಸಾವುಗಳ ಕುರಿತು ಮಾಧ್ಯಮಗಳು ಇಲಾಖೆಯ ಖಚಿತ ಮಾಹಿತಿಯನ್ನ ಪ್ರಕಟಿಸುವಂತೆ ಮನವಿ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವದಂತಿಗಳಿಗೆ ಕಿವಿಗೊಟ್ಟು ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಕರೆ ನೀಡಿದರು. ಡೆಂಘೀ ಹತೋಟಿಗೆ ಸಾರ್ವಜನಿಕರು ಹೆಚ್ಚು ಕೈಜೊಡಿಸುವಂತೆ ಇದೇ ವೇಳೆ ಮನವಿ ಮಾಡಿದರು.

click me!