ಮೈಸೂರು, ಕಲಬುರಗಿ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಕೊರೋನಾ ಅಲರ್ಟ್‌

Published : Mar 21, 2023, 11:17 AM IST
ಮೈಸೂರು, ಕಲಬುರಗಿ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಕೊರೋನಾ ಅಲರ್ಟ್‌

ಸಾರಾಂಶ

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಮೈಸೂರು, ಕಲಬುರಗಿ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಕೊರೋನಾ ಅಲರ್ಟ್‌ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.

ರಾಜ್ಯದಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಕೊರೋನಾ ನಿಯಂತ್ರಿಸಲು ಪರೀಕ್ಷೆ, ಪತ್ತೆ, ನಿಗಾ, ಚಿಕಿತ್ಸೆ ಹಾಗೂ ಲಸಿಕೆಗೆ ಒತ್ತು ಕೊಡಲು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಕಳೆದ 5 ತಿಂಗಳಿಂದ ಕೊರೋನಾ ಸ್ಥಿತಿ ನಿಯಂತ್ರಣದಲ್ಲಿತ್ತು. ಆದರೆ, ಮಾ.8ರಿಂದ ಕಳೆದ ಎರಡು ವಾರದ ಅವಧಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಸರಾಸರಿ ಪಾಸಿಟಿವಿಟಿ ದರವು ಶೇ.2.77 ಕ್ಕೆ ಹೆಚ್ಚಾಗಿದೆ. ಆದರೆ ದೇಶದ ಸರಾಸರಿ ಪಾಸಿಟಿವಿಟಿ ದರ ಶೇ.0.61 ಮಾತ್ರ ಇದೆ. ಹೀಗಾಗಿ ಮುಖ್ಯವಾಗಿ ಕೊರೋನಾ ಹೆಚ್ಚಾಗುತ್ತಿರುವ ನಾಲ್ಕು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ಹೇಳಿದ್ದಾರೆ.

114 ದಿನದ ಬಳಿಕ ಭಾರತದಲ್ಲಿ 500ರ ಗಡಿ ದಾಟಿದ ಕೋವಿಡ್ ಪ್ರಕರಣ, ಮತ್ತೆ ಅಲರ್ಟ್!

ತೆಗೆದುಕೊಳ್ಳಬೇಕಾದ ಕ್ರಮಗಳೇನು ?:
ನಿಗದಿತ ಗುರಿಯಂತೆ ಕೊರೋನಾ ಪರೀಕ್ಷೆಗಳನ್ನು (Test) ನಡೆಸಬೇಕು. ಹೊಸದಾಗಿ ಹಾಗೂ ಕ್ಲಸ್ಟರ್‌ ಮಾದರಿಯಲ್ಲಿ ವರದಿಯಾಗುವ ಸೋಂಕು ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು. ಕೊರೋನಾ ಸೋಂಕು (Virus) ಹರಡುವುದನ್ನು ತಡೆಗಟ್ಟಲು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಎಚ್ಚರವಹಿಸಬೇಕು. ಐಎಲ್‌ಐ (ವಿಷಮ ಶೀತ ಜ್ವರ) ಹಾಗೂ ಸಾರಿ (ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳನ್ನು ಪತ್ತೆಹಚ್ಚಬೇಕು.

ಅಂತರಾಷ್ಟ್ರೀಯ ಪ್ರಯಾಣಿಕರು (Passengers), ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್‌ ಪ್ರಕರಣಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಬೇಕು. ಅರ್ಹರಿಗೆ ಮುಂಜಾಗ್ರತಾ ಡೋಸ್‌ ಲಸಿಕೆ (Vaccine) ಹೆಚ್ಚಿಸಬೇಕು. ಜನಸಂದಣಿ ಇರುವ ಪ್ರದೇಶದಲ್ಲಿ ಕೊರೋನಾ ಮುನ್ನೆಚ್ಚರಿಕೆ ಪಾಲನೆ ಖಚಿತಪಡಿಸಿಕೊಳ್ಳಬೇಕು ಎಂದು ಟಿ.ಕೆ. ಅನಿಲ್‌ಕುಮಾರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಸೋಂಕು ಹೆಚ್ಚಳ, ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ 6 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದು, ಸೋಂಕು ಹರಡುವಿಕೆ ತಡೆಯಲು ಸೂಚಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದಾರೆ.

ಮಕ್ಕಳು, ವೃದ್ಧರಿಗೆ H3N2 ಸೋಂಕಿನ ಆತಂಕ: ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯಗೊಳಿಸಿದ ಸಚಿವ ಸುಧಾಕರ್‌

ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯದ (Health ministry) ನೀಡಿರುವ ಸೂಚನೆಗಳನ್ನು (Guidelines) ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.  ಸೋಂಕು ಪರೀಕ್ಷೆ, ಚಿಕಿತ್ಸೆ, ಮೇಲ್ವಿಚಾರಣೆ ಹಾಗೂ ಲಸಿಕೆ (Vaccine) ನೀಡಿಕೆಯನ್ನು ಹೆಚ್ಚಿಸಿ, ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ. ಅಲ್ಲದೇ, ಪ್ರಕರಣಗಳ ದಿಢೀರ್‌ ಏರಿಕೆ ಈವರೆಗಿನ ಎಲ್ಲ ಹೋರಾಟವನ್ನು ವಿಫ‌ಲಗೊಳಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆಯೂ ನಿರ್ದೇಶಿಸಿದೆ. 4 ತಿಂಗಳ ಬಳಿಕ ಗುರುವಾರ ಒಂದೇ ದಿನದಲ್ಲಿ 700 ಅಧಿಕ ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ