Covid Cases: ಕೋವಿಡ್‌ ಚಿಕಿತ್ಸೆಗೆ ಆ್ಯಂಟಿ ಬಯೋಟಿಕ್ಸ್‌ ಬಳಕೆ ಬೇಡ, ಕೇಂದ್ರ ಸರ್ಕಾರ

By Kannadaprabha NewsFirst Published Mar 21, 2023, 8:04 AM IST
Highlights

ಕೋವಿಡ್‌ ಚಿಕಿತ್ಸೆಗೆ ಆ್ಯಂಟಿ ಬಯೋಟಿಕ್ಸ್‌ ಬಳಕೆ ಬೇಡ ಎಂದು ಕೇಂದ್ರ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕೊರೋನಾ ಹೆಚ್ಚಳ ಬೆನ್ನಲ್ಲೇ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಇದರಲ್ಲಿ ಈ ಕುರಿತಾದ ಮಾಹಿತಿಯನ್ನು ನೀಡಲಾಗಿದೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೋವಿಡ್‌ ಪ್ರಕರಣಗಳಲ್ಲಿ ಆ್ಯಂಟಿ ಬಯೋಟಿಕ್‌ಗಳನ್ನು ವೈದ್ಯರು ಬಳಸಬಾರದು ಎಂದು ಸೂಚನೆ ನೀಡಿದೆ. ಕೋವಿಡ್‌ ಮೊದಲೆರಡು ಅಲೆಯ ಚಿಕಿತ್ಸೆ ವೇಳೆ ವ್ಯಾಪಕವಾಗಿ ಆ್ಯಂಟಿ ಬಯೋಟಿಕ್‌ಗಳನ್ನು ಬಳಸಿದ್ದ ಹಿನ್ನೆಲೆಯಲ್ಲಿ ಈ ನಿರ್ದೇಶನ ಅತ್ಯಂತ ಮಹತ್ವದ್ದಾಗಿದೆ.

ಲೊಪಿನಾವಿರ್‌-ರಿಟೊನಾವಿರ್‌, ಹೈಡ್ರಾಕ್ಸಿಕ್ಲೋರೋಕ್ವಿನ್‌, ಐವರ್‌ಮೆಕ್ಟಿನ್‌, ಮೊಲ್ನುಪಿರಾವಿರ್‌, ಫವಿಪಿರಾವಿರ್‌, ಅಜಿತ್ರೋಮೈಸಿನ್‌, ಡಾಕ್ಸಿಸೈಕ್ಲಿನ್‌ನಂತಹ ಆ್ಯಂಟಿ ಯೋಟಿಕ್‌ಗಳನ್ನು ವಯಸ್ಕ ಕೋವಿಡ್‌ ರೋಗಿಗಳ ಚಿಕಿತ್ಸೆಗೆ (Treatment) ಬಳಸಬಾರದು ಎಂದು ಹೇಳಿದೆ. ಬ್ಯಾಕ್ಟಿರಿಯಾ ಸೋಂಕಿನ ಕುರಿತು ಚಿಕಿತ್ಸೆ ವೇಳೆ ಸಂದೇಹ ಬಂದರೆ ಮಾತ್ರ ಆ್ಯಂಟಿ ಬಯೋಟಿಕ್‌ಗಳನ್ನು ಕೊಡಬಹುದು. ಇಂತಹ ಸಂದರ್ಭದಲ್ಲಿ ಕೋವಿಡ್‌ ಜತೆ ಇನ್ನಿತರೆ ಸೋಂಕು ತಗಲುವಿಕೆಯನ್ನು ಪರಿಗಣಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ದೇಶಕ್ಕೆ ವೈರಸ್‌ಗಳ ಆಘಾತ: H3N2 ವೈರಸ್‌ ಜೊತೆಗೆ ಕೋವಿಡ್‌-19, ಹಂದಿಜ್ವರವೂ ಹೆಚ್ಚಳ

ವೈದ್ಯರು ಪ್ಲಾಸ್ಮಾ ಥೆರಪಿಯನ್ನೂ ಬಳಕೆ ಮಾಡಬಾರದು. ಆದರೆ ಮಧ್ಯಮ ಅಂಥವಾ ಗಂಭೀರ ಪ್ರಮಾಣದಲ್ಲಿ ಸೋಂಕು ಹರಡುತ್ತಿದ್ದರೆ ರೆಮ್‌ಡೆಸಿವಿರ್‌ ಅನ್ನು ಐದು ದಿನಗಳ ಕಾಲ ನೀಡಬಹುದು. ಆದರೆ ಸೋಂಕು ಆರಂಭವಾದ 10 ದಿನದೊಳಗೆ ಇದನ್ನು ಆರಂಭಿಸಬೇಕು. ಹೆಚ್ಚುವರಿಯಾಗಿ ಆಮ್ಲಜನಕ (Oxygen) ನೀಡಬೇಕಾದ ಹಾಗೂ ಸೋಂಕು ಹಬ್ಬುವ ಸಾಧ್ಯತೆ ಇರುವವರಿಗೆ ಮಾತ್ರ ನೀಡಬೇಕು. ಐಎಂವಿ ಅಥವಾ ಎಕ್ಮೋ ಚಿಕಿತ್ಸೆಯಲ್ಲಿರುವವರಿಗೆ ನೀಡಬಾರದು ಎಂದು ಹೇಳಿದೆ.

ಐದು ದಿನಕ್ಕಿಂತ ಹೆಚ್ಚಿನ ಅವಧಿಗೆ ರೆಮ್‌ಡೆಸಿವಿರ್‌ ನೀಡಿದರೆ ಅದರಿಂದ ಪ್ರಯೋಜನವಾಗುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಹಾಗೆಯೇ ಅದನ್ನು ಆಕ್ಸಿಜನ್‌ ವ್ಯವಸ್ಥೆಯಲ್ಲಿಲ್ಲದವರು ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಬಾರದು ಎಂದು ಮಾರ್ಗಸೂಚಿ ವಿವರಿಸುತ್ತದೆ. ಮಧ್ಯಮ ಅಥವಾ ಗಂಭೀರ ಪ್ರಮಾಣದ ಸೋಂಕು ಕ್ಷಿಪ್ರವಾಗಿ ಹಬ್ಬುವ ಲಕ್ಷಣ ಕಂಡುಬಂದರೆ ಗಂಭೀರ ಸ್ವರೂಪಕ್ಕೆ ತಿರುಗಿದ ಅಥವಾ ಐಸಿಯುಗೆ ದಾಖಲಾದ 24ರಿಂದ 48 ತಾಸುಗಳಲ್ಲಿ ಟಾಸಿಲಿಜುಮಾಬ್‌ ನೀಡಬಹುದು ಎಂದು ಸಲಹೆ ಮಾಡಿದೆ.

ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ಸೋಂಕು ಹೆಚ್ಚಳ, ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ 6 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದು, ಸೋಂಕು ಹರಡುವಿಕೆ ತಡೆಯಲು ಸೂಚಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದಾರೆ.

ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯದ (Health ministry) ನೀಡಿರುವ ಸೂಚನೆಗಳನ್ನು (Guidelines) ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.  ಸೋಂಕು ಪರೀಕ್ಷೆ, ಚಿಕಿತ್ಸೆ, ಮೇಲ್ವಿಚಾರಣೆ ಹಾಗೂ ಲಸಿಕೆ (Vaccine) ನೀಡಿಕೆಯನ್ನು ಹೆಚ್ಚಿಸಿ, ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ. ಅಲ್ಲದೇ, ಪ್ರಕರಣಗಳ ದಿಢೀರ್‌ ಏರಿಕೆ ಈವರೆಗಿನ ಎಲ್ಲ ಹೋರಾಟವನ್ನು ವಿಫ‌ಲಗೊಳಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆಯೂ ನಿರ್ದೇಶಿಸಿದೆ. 4 ತಿಂಗಳ ಬಳಿಕ ಗುರುವಾರ ಒಂದೇ ದಿನದಲ್ಲಿ 700 ಅಧಿಕ ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

click me!