ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮಿನ ಔಷಧ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಹೀಗಿರುವಾಗ ಆರೋಗ್ಯ ಹದಗೆಟ್ಟಾಗ ಎಲ್ಲರೂ ಸುಲಭವಾಗಿ ತೆಗೆದುಕೊಳ್ಳುವ ಕೆಮ್ಮಿನ ಸಿರಪ್‌ಗಳ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳ ಸಾವು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇಲ್ಲಿನ ಮಕ್ಕಳ ಸಾವಿಗೆ ಕಾರಣ ಭಾರತದ ಕೆಮ್ಮು ಸಿರಪ್ ಎಂದು ಹೇಳಲಾಗುತ್ತಿದೆ. ಈ ನಾಲ್ಕು ಕೆಮ್ಮು ಸಿರಪ್‌ಗಳನ್ನು ಹರಿಯಾಣ ಮೂಲದ ಪಾರ್ಮಾ ಕಂಪನಿಯಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಇದು ವಿಷಕಾರಿ ಮತ್ತು ಮಾರಣಾಂತಿಕ ಅಂಶಗಳನ್ನು ಒಳಗೊಂಡಿದೆ ಎಂದು ಡಬ್ಲುಎಚ್‌ಒ ಮಾಹಿತಿ ನೀಡಿದೆ. ಈ ಔಷಧದ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ರವಾನಿಸಿದ್ದು, ಇದರಲ್ಲಿದ್ದ ವಿಷದ ಪರಿಣಾಮವಾಗಿ ಮಕ್ಕಳಲ್ಲಿ ಮೂತ್ರಪಿಂಡ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿಕೊಂಡಿದೆ. ಹೀಗಿರುವಾಗ ಕೆಮ್ಮಿನ ಸಿರಪ್‌ನಲ್ಲಿರುವ ಕೆಲವೊಂದು ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
ಕೆಮ್ಮಿನ ಸಿರಪ್‌ನಲ್ಲಿ ರಾಸಾಯನಿಕ ಅಂಶವಿರುತ್ತಾ ?
ವಿಶ್ವ ಆರೋಗ್ಯ ಸಂಸ್ಥೆ ಕೆಮ್ಮು ಸಿರಪ್‌ಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ನಾಲ್ಕು ಔಷಧಿಗಳಲ್ಲಿ ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮ್ಯಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಸೇರಿವೆ. ಈ ಔಷಧಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
Gambia 66 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ ಶಂಕೆ: ಕೇಂದ್ರ ಸರ್ಕಾರದಿಂದ ತನಿಖೆಗೆ ಆದೇಶ
ಕೆಮ್ಮಿನ ಸಿರಪ್‌ಗಳಲ್ಲಿ ಕಂಡುಬರುವ ರಾಸಾಯನಿಕವು (Chemical) ಡೈಥಿಲೀನ್ ಗ್ಲೈಕೋಲ್ (ಡಿಇಜಿ) ಅಥವಾ ಎಥಿಲೀನ್ ಗ್ಲೈಕೋಲ್ ಮಾನವರಿಗೆ ವಿಷಕಾರಿಯಾಗಿದೆ ಮತ್ತು ಸೇವಿಸಿದಾಗ ಮಾರಣಾಂತಿಕವಾಗಬಹುದು ಎಂದು WHO ಹೇಳಿದೆ. ಇದು ಮೂತ್ರಪಿಂಡ ಮತ್ತು ನರವೈಜ್ಞಾನಿಕ ವಿಷತ್ವವನ್ನು ಸಹ ಉಂಟುಮಾಡಬಹುದು. ಹೀಗಾಗಿ ಕೆಮ್ಮು ಸಿರಪ್ (Cough syrup) ಆಯ್ಕೆಮಾಡುವಾಗ ನೀವು ಕಾಳಜಿ (Care) ವಹಿಸಬೇಕಾದ ವಿಷಯಗಳ ಬಗ್ಗೆ ತಿಳಿಯೋಣ.
ಯಾವ ಸಿರಪ್ ಆರೋಗ್ಯಕ್ಕೆ ಉತ್ತಮ ಮತ್ತು ಪರಿಣಾಮಕಾರಿ ?
ನೋಯ್ಡಾದ ಮದರ್‌ಹುಡ್ ಆಸ್ಪತ್ರೆಯ ಹಿರಿಯ ಸಲಹೆಗಾರ, ಶಿಶುವೈದ್ಯ ಮತ್ತು ನಿಯೋನಾಟಾಲಜಿಸ್ಟ್ ಡಾ.ಅಮಿತ್ ಗುಪ್ತಾ ಅವರ ಪ್ರಕಾರ, ಶೀತ-ಕೆಮ್ಮು ಎಲ್ಲರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಗುಣಪಡಿಸೋಕೆ ಹಲವಾರು ರೀತಿಯ ಸಿರಪ್‌ಗಳು ಮತ್ತು ಔಷಧಿಗಳು (Medicine) ಲಭ್ಯವಿದೆ. ಆದರೆ ಅವುಗಳಲ್ಲಿ ಯಾವುದು ಉತ್ತಮ ಮತ್ತು ಪರಿಣಾಮಕಾರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಹೆಚ್ಚಿನ ಜನರು ನೆಗಡಿ ಮತ್ತು ಕೆಮ್ಮುಗಳಿಗೆ ಚಿಕಿತ್ಸೆ (Treatment) ನೀಡಲು ವಿವಿಧ ರೀತಿಯ ಕೆಮ್ಮು ಸಿರಪ್‌ಗಳನ್ನು ಬಳಸುತ್ತಾರೆ. ಇಂತಹ ಔಷಧಿಗಳು ಜ್ವರದ (Fever) ಲಕ್ಷಣಗಳನ್ನು ಗುಣಪಡಿಸುವುದಿಲ್ಲ ಎಂದು ಅನೇಕ ವರದಿಗಳು ಮತ್ತು ಅಧ್ಯಯನಗಳು (Studies) ಸಾಬೀತುಪಡಿಸುತ್ತವೆ. ಇದಲ್ಲದೆ, ಅವು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿವೆ. ಲಭ್ಯವಿರುವ ಔಷಧಿಗಳ ಬಗ್ಗೆ ತಿಳಿದಿರಲಿ ಮತ್ತು ನಿಮ್ಮ ಮಗುವಿಗೆ ಔಷಧಿಯನ್ನು ನೀಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಭಾರತೀಯ ಕಂಪನಿಯ ಕೆಮ್ಮಿನ ಔಷಧಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೈ ಅಲರ್ಟ್, ನಿಮ್ಮಲ್ಲಿದ್ದರೆ ಎಚ್ಚರ ವಹಿಸಿ!
ಕೆಮ್ಮು ಸಿರಪ್ ಬಗ್ಗೆ WHO ಎಚ್ಚರಿಕೆ: OTC ಔಷಧಿಗಳು ಹಾನಿಯನ್ನು ಉಂಟುಮಾಡಬಹುದು: ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧವನ್ನು ನೀಡಬಾರದು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. ಓರಲ್ ಓವರ್-ದಿ-ಕೌಂಟರ್ (OTC) ಕೆಮ್ಮು ಮತ್ತು ಶೀತ ಔಷಧಿಗಳು ಚಿಕ್ಕ ಮಕ್ಕಳಿಗೆ (Children) ಗಂಭೀರ ಹಾನಿಯನ್ನುಂಟುಮಾಡುತ್ತವೆ. ಈ ಔಷಧಿಗಳನ್ನು ಬಳಸುವುದರಿಂದ ಶೀತದ ರೋಗಲಕ್ಷಣಗಳು (Symptoms) ಕಡಿಮೆಯಾಗುವುದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.
ಪ್ರತಿ ಬಾರಿಯೂ ಔಷಧ ಸೇವಿಸುವುದು ಸುರಕ್ಷಿತವಲ್ಲ: ಕೆಮ್ಮು ಅಥವಾ ಇತರ ಜ್ವರ ರೋಗಲಕ್ಷಣಗಳನ್ನು ನಿವಾರಿಸಲು ಪ್ರತಿ ಬಾರಿಯೂ ಔಷಧವನ್ನು ಬಳಸುವುದು ಸುರಕ್ಷಿತವಲ್ಲ. ವಿಶೇಷವಾಗಿ ಮಕ್ಕಳ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮಕ್ಕಳಿಗೆ ಹೆಚ್ಚು ಅಥವಾ ಕಡಿಮೆ ಔಷಧಿ ನೀಡುವುದು ಗಂಭೀರ ಅಡ್ಡ ಪರಿಣಾಮಗಳನ್ನು (Side effects) ಉಂಟುಮಾಡಬಹುದು. ಔಷಧಿಗಳನ್ನು ಸುರಕ್ಷಿತವಾಗಿ ಬಳಸುವುದು ಎಂದರೆ ಅವುಗಳನ್ನು ಯಾವಾಗ ಬೇಕು ಮತ್ತು ಯಾವಾಗ ಬಳಸಬಾರದು ಎಂಬುದನ್ನು ತಿಳಿಯುವುದು. ಸಿರಪ್‌ಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲದಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ: ವೈದ್ಯರ ಪ್ರಕಾರ, ಶೀತ ಮತ್ತು ಕೆಮ್ಮಿಗೆ ಪ್ರತಿ ಬಾರಿ ಅಥವಾ ಹೆಚ್ಚಿನ ಔಷಧಿಗಳ ಬಳಕೆಯು ದೀರ್ಘಾವಧಿಯಲ್ಲಿ ನಿಮ್ಮ ದೇಹವನ್ನು (Body) ಹಾನಿಗೊಳಿಸುತ್ತದೆ. ಸಮಸ್ಯೆಯನ್ನು ಗುಣಪಡಿಸಲು ಮನೆ ಮದ್ದು ಅತ್ಯುತ್ತಮ ಆಯ್ಕೆಯಾಗಿದೆ. ಉದಾಹರಣೆಗೆ, ಜ್ವರ ಅಥವಾ ಶೀತ ಇರುವವರು ಸಾಕಷ್ಟು ವಿಶ್ರಾಂತಿ ಪಡೆಯಬೇಕು, ಸಾಕಷ್ಟು ದ್ರವಗಳನ್ನು ಕುಡಿಯಬೇಕು ಮತ್ತು ನೀರು, ಜ್ಯೂಸ್ ಮತ್ತು ಸೂಪ್‌ನಂತಹ ವಿವಿಧ ದ್ರವಗಳನ್ನು ಕುಡಿಯಬೇಕು.