
ಬೆಲ್ಜಿಯಂ (Belgium) ದೇಶದಲ್ಲಿ ಉತ್ಪಾದನೆಯಾದ ಚಾಕೋಲೇಟ್ ಇಡೀ ವಿಶ್ವಕ್ಕೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ 113 ದೇಶಗಳಿಗೆ ರವಾನೆಯಾಗಿರುವ ಚಾಕೋಲೇಟ್ (Chocolate) ಗಳಲ್ಲಿ ಸಾಲ್ಮೊನೆಲ್ಲಾ ಟೈಫಿಮುರಿಯಮ್ ಎನ್ನುವ ಸೋಂಕು ಕಂಡುಬಂದಿರುವುದು ಇದೀಗ ತಲೆನೋವಿಗೆ ಕಾರಣವಾಗಿದೆ. ಏಕೆಂದರೆ, ಚಾಕೋಲೇಟ್ ಮೂಲಕ ಈ ಸೋಂಕು ವಿಶ್ವವ್ಯಾಪಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ದೇಹ ಪ್ರವೇಶಿಸುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕರುಳನ್ನು ಪ್ರವೇಶಿಸಿ ಗ್ಯಾಸ್ಟ್ರೊಇಂಟೆಸ್ಟೈನಲ್ (Gastrointestinal) ರೋಗವಾಗಿ ಆರೋಗ್ಯವನ್ನು ಕಂಗೆಡಿಸುವ ಸಾಧ್ಯತೆ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ (World Health Organisation) ಹೇಳಿದೆ.
ಚಾಕೋಲೇಟ್ ಎಲ್ಲೆಡೆ ತಲುಪುತ್ತದೆಯೋ ಇಲ್ಲವೋ. ಆದರೆ, ಸಾಲ್ಮೊನೆಲ್ಲಾ ಸೋಂಕು ವಿಶ್ವಕ್ಕೆ ಅಪರೂಪದ್ದಲ್ಲ. ಮಾನವ ಕರುಳಿಗೆ ಸಾಮಾನ್ಯವಾಗಿ ಉಂಟಾಗುವ ಸೋಂಕುಗಳಲ್ಲಿ ಸಾಲ್ಮೊನೆಲ್ಲಾ ಕೂಡ ಒಂದು. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ದೇಹ ಪ್ರವೇಶಿಸಿದ 12-72 ಗಂಟೆಗಳಲ್ಲಿ ವಾಂತಿ (Vomit), ಭೇದಿ, ಜ್ವರ (Fever), ಹೊಟ್ಟೆ ನೋವಿನಂತಹ ಲಕ್ಷಣಗಳು ಗೋಚರಿಸಲು ಆರಂಭವಾಗುತ್ತವೆ.
ಚಿಕಿತ್ಸೆ (Treatment) ಏನು?
ಸಾಮಾನ್ಯವಾಗಿ ಈ ರೋಗ 4-7 ದಿನಗಳ ಕಾಲ ಕಾಡುತ್ತದೆ. ಬಹಳಷ್ಟು ಜನರು ಯಾವುದೇ ಚಿಕಿತ್ಸೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲವು ಜನರಲ್ಲಿ ಭೇದಿ ಸಮಸ್ಯೆ ಹೆಚ್ಚಬಹುದು. ಆಗ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಎದುರಾಗಬಹುದು. ಸಾಲ್ಮೊನೆಲ್ಲಾ ಸೋಂಕು ಕರುಳಿನಿಂದ ರಕ್ತನಾಳಗಳಲ್ಲಿ ಸೇರಿಕೊಳ್ಳಬಹುದು. ಆಗ ದೇಹದ ಇತರ ಭಾಗಗಳಿಗೂ ಹರಡಬಲ್ಲದು. ಅಪರೂಪದ ಪ್ರಕರಣಗಳಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಸಂಭವಿಸಬಹುದು.
DIGESTIVE HEALTH: ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರೋ ಅಭ್ಯಾಸಗಳಿವು!
ವಿಶ್ವ ಆರೋಗ್ಯ ಸಂಸ್ಥೆಯ (World Health Organsiation) ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಮಾಹಿತಿ ಪ್ರಕಾರ, ಸಾಲ್ಮೊನೆಲ್ಲಾ ಸೋಂಕು ಐದು ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಬಾಧಿಸಬಹುದು. ಹಾಗೂ 65 ವರ್ಷದ ನಂತರದ ವ್ಯಕ್ತಿಗಳಿಗೂ ಸಮಸ್ಯೆ ಉಂಟಾಗಬಹುದು. ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರನ್ನೂ ಹೆಚ್ಚು ಕಾಡಬಹುದು.
ನಿಯಂತ್ರಣ ಹೇಗೆ?
ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಚ್ಚಾ ಮಾಂಸದ ಬಳಕೆ ಸಲ್ಲದು. ಸಾಕುಪ್ರಾಣಿಗಳನ್ನು ಸ್ವಚ್ಛವಾಗಿಡುವುದು ಹಾಗೂ ಅಡುಗೆ ಸಿದ್ಧಪಡಿಸುವಾಗ ಸಾಧ್ಯವಾದಷ್ಟು ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಬಹುಮುಖ್ಯ ವಿಚಾರವೆಂದರೆ, ಬೇಸಿಗೆ ಸಮಯದಲ್ಲಿ ಮಕ್ಕಳು ಐಸ್ ಕ್ರೀಂ ಮೊರೆ ಹೋಗುತ್ತಾರೆ. ಆದರೆ, ಇದು ಸಮಸ್ಯೆ ತಂದೊಡ್ಡಬಹುದು. ಸುರಕ್ಷಿತ ನೀರಿನಲ್ಲಿ ಮಾಡಿರುವ ಐಸ್ ಕ್ರೀಂಗಳನ್ನಷ್ಟೇ ಬಳಕೆ ಮಾಡಬೇಕು. ಅಸುರಕ್ಷಿತ ನೀರಿನಿಂದಲೇ ಈ ಸೋಂಕು ಬರುತ್ತದೆ ಎನ್ನುವ ಎಚ್ಚರಿಕೆ ಇರಲಿ.
ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕೆಲವು ಆಹಾರ ಪದಾರ್ಥಗಳಲ್ಲಿ ಅಡಗಿರಬಲ್ಲದು. ಹೀಗಾಗಿ ಬ್ಯಾಕ್ಟೀರಿಯಾದಿಂದ ದೂರವಿರಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.
• ಅರ್ಧಂಬರ್ಧ ಬೆಂದ ಮೊಟ್ಟೆ, ಮಾಂಸ (Meat) ಸೇವನೆ ಮಾಡಬಾರದು.
• ಪಾಶ್ಚರೀಕರಿಸಿಲ್ಲದ ಹಾಲು (Milk) ಮತ್ತು ಜ್ಯೂಸ್ ಸೇವನೆ ಬೇಡ.
• ಅಡುಗೆ ಮಾಡುವ ಮುನ್ನ ತರಕಾರಿ, ಮೊಟ್ಟೆ, ಮಾಂಸಗಳನ್ನು ಸರಿಯಾಗಿ ತೊಳೆದುಕೊಳ್ಳುವುದು.
• ನಿಮಗೆ ಭೇದಿ, ವಾಂತಿ ಇದ್ದರೆ ಬೇರೆಯವರಿಗೆ ಅಡುಗೆ ಮಾಡಬೇಡಿ.
• ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
• ಬೇರೆ ಬೇರೆ ಆಹಾರಕ್ಕೆ ಬೇರೆಯದೇ ಪಾತ್ರೆ, ಕತ್ತರಿಸುವ ವಸ್ತುಗಳನ್ನು ಬಳಕೆ ಮಾಡಬೇಕು. ಉದಾಹರಣೆಗೆ, ಮಾಂಸ ಮತ್ತು ಅಣಬೆ ಕತ್ತರಿಸಲು ಒಂದೇ ಚಾಕು ಬಳಕೆ ಮಾಡುವುದು ಸಲ್ಲದು.
• ಮಾಂಸವನ್ನು ಸರಿಯಾದ ಹದದಲ್ಲಿಯೇ ಬೇಯಿಸಬೇಕು. ಇದಕ್ಕೆ ಆಹಾರದ ಬಳಕೆಗಾಗಿ ಇರುವ ಥರ್ಮಾಮೀಟರ್ ಬಳಕೆ ಮಾಡಬಹುದು.
• ಪ್ರಾಣಿಗಳು, ಅವುಗಳ ಸಂಪರ್ಕಕ್ಕೆ ಬಂದಾಗ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
• ಪ್ರಮುಖವಾಗಿ, ಆಹಾರವನ್ನು ಬೇಯಿಸಿಯೇ ತಿನ್ನಬೇಕು. ಹಾಲನ್ನು ಸರಿಯಾಗಿ ಕುದಿಸಿಯೇ ಬಳಕೆ ಮಾಡಬೇಕು.
ತೂಕ ಇಳಿಸೋಕೆ ಡಯೆಟ್, ವರ್ಕೌಟ್ ಮಾಡಿ ಸಾಕಾಯ್ತಾ ? ಇಸಾಬ್‌ಗೋಲ್ ಟ್ರೈ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.