ಧೂಮಪಾನ ಆರೋಗ್ಯಕ್ಕೆ ಹಾನಿಕರ; ಪ್ರತೀ ಸಿಗರೇಟ್‌ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸಲು ಕೆನಡಾ ನಿರ್ಧಾರ

By Suvarna NewsFirst Published Jun 14, 2022, 11:27 AM IST
Highlights

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ರಿಗೂ ಗೊತ್ತಿದೆ.  ಹೀಗಿದ್ದೂ ಸೇದೋ ಚಟಕ್ಕೆ ಬಿದ್ದೋರು ಮಾತ್ರ ಇದನ್ನು ಬಿಡೋಕೆ ಸಿದ್ಧರಿರೋದಿಲ್ಲ. ಹೀಗಿರುವಾಗ ಪ್ರತೀ ಸಿಗರೇಟಿನ ಮೇಲೆ ಎಚ್ಚರಿಕೆಯ (Warning) ಸಂದೇಶ ಮುದ್ರಿಸಲು ಕೆನಡಾ (Canada) ನಿರ್ಧರಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕರ. ಹೀಗಂತ ಪ್ಯಾಕೆಟ್ (Packet) ಮೇಲೆಯೇ ಬರೆದಿರ್ತಾರೆ. ಆದ್ರೂ ಅದ್ರ ಸೇವನೆಯನ್ನು ಜನರು ಬಿಡೋದಿಲ್ಲ. ದಿನ ದಿನಕ್ಕೂ ಧೂಮಪಾನಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಚಟಕ್ಕೆ ಬೀಳುವ ಜನರು ನಂತ್ರ ಚಟ ಬಿಡಲು ಸಾಧ್ಯವಾಗದೆ ತೊಂದರೆ ಅನುಭವಿಸ್ತಾರೆ.  ಸಣ್ಣ ವಯಸ್ಸಿನಲ್ಲಿಯೇ ಸಾವು ತಂದುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಧೂಮಪಾನ ಹಾಗೂ ಗುಟ್ಕಾ (Gutka) ಸೇವನೆಯಿಂದ  ಹಲವು ಗಂಭೀರ ಕಾಯಿಲೆ (Disease) ಗಳು ಬರುವ ಅಪಾಯವಿದೆ. ಹೀಗಿದ್ರೂ ಸ್ಟೈಲೋ, ಚಟಾನೋ ಹೆಚ್ಚಿನವರು ಸ್ಮೋಕಿಂಗ್ ಅಭ್ಯಾಸವನ್ನು ಮಾತ್ರ ಬಿಡೋದಿಲ್ಲ. ಹೀಗಾಗಿ ಕೆನಡಾ ಸರ್ಕಾರ ಒಂದು ಹೊಸ ನಿರ್ಧಾರ ತೆಗೆದುಕೊಂಡಿದೆ.

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸಿಗರೇಟ್‌ ಪ್ಯಾಕ್‌ ( Cigarette Pack)ಗಳ ಮೇಲೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶಗಳನ್ನು ನಮೂದಿಸಲಾಗಿರುತ್ತದೆ. ಆದರೆ ಈ ವಿಚಾರದಲ್ಲಿ ಕೆನಡಾ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸಿಗರೇಟ್ ಪ್ಯಾಕೆಟ್‌ನಲ್ಲಿ ಮಾತ್ರವಲ್ಲ, ಪ್ರತಿಯೊಂದು ಸಿಗರೇಟಿನ ಮೇಲೆ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ನಿರ್ಧರಿಸಿದೆ. 

World No Tobacco Day: ತಂಬಾಕಿನಿಂದ ಪ್ರತಿ ವರ್ಷ ಸಾಯುತ್ತಿದ್ದಾರೆ 80 ಲಕ್ಷ ಮಂದಿ !

ಸಿಗರೇಟಿನ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುತ್ತಿರುವ ಮೊದಲ ದೇಶ ಕೆನಡಾ
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಂದೇಶವನ್ನು ಸಾಮಾನ್ಯವಾಗಿ ಸಿಗರೇಟಿನ ಪ್ಯಾಕಿನ ಮೇಲೆ ಮುದ್ರಿಸಲಾಗುತ್ತದೆ. ಆದರೆ ಪ್ರತೀ ಸಿಗರೇಟಿನ ಮೇಲೆ ಈ ಸಂದೇಶ ಮುದ್ರಿಸುವ ಮೂಲಕ ಈ ರೀತಿಯ ಕ್ರಮ ಕೈಗೊಂಡ ಮೊದಲ ದೇಶವಾಗಿ ಕೆನಡಾ ಗುರುತಿಸಿಕೊಳ್ಳಲಿದೆ. ಸಿಗರೇಟ್‌ ಪ್ಯಾಕ್‌ನ ಸುತ್ತಲೂ, ಸಿಗರೇಟ್‌ಗಳಲ್ಲಿಯೂ ತಂಬಾಕು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಚಿತ್ರಗಳು, ಸಂದೇಶಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.

ಅಷ್ಟೇ ಅಲ್ಲ, ಪ್ರತಿಯೊಂದು ಸಿಗರೇಟಿನ ಮೇಲೂ ಸಿಗರೇಟು ಸೇವನೆ ನಿಮ್ಮನ್ನು ಕೊಲ್ಲುತ್ತದೆ ಎಂಬ ವಾಕ್ಯವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. ಸಿಗರೇಟು ಪ್ಯಾಕ್‌ನ ಮುಂಭಾಗದಲ್ಲಿ ಅಸ್ವಸ್ಥ ಶ್ವಾಸಕೋಶದ (Lungs) ಚಿತ್ರ ಹಾಕಿ, ಸಿಗರೇಟ್‌ನಿಂದ ಶ್ವಾಸಕೋಶಕ್ಕೇನು ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಕಬೇಕೆಂದು ಹೇಳಲಾಗಿದೆ.

ಧೂಮಪಾನದಿಂದ ಕಣ್ಣಿನ ದೃಷ್ಟಿಯೂ ಹೋಗ್ಬೋದು ಹುಷಾರ್..!

ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುವ ಗ್ರಾಫಿಕ್ ಫೋಟೋವನ್ನು ಪ್ಯಾಕೆಟ್ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸಿದ್ದ ಕೆನಡಾ ಈಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಪ್ಯಾಕೆಟ್ ಮೇಲಿನ ಸಂದೇಶಗಳು ತಮ್ಮ ಪ್ರಭಾವವನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಆದ್ದರಿಂದ ಪ್ರತೀ ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುವುದರಿಂದ ಅಗತ್ಯದ ಸಂದೇಶ ಜನರನ್ನು ತಲುಪಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಕೆನಡಾದ ಮಾನಸಿಕ ಆರೋಗ್ಯ ಮತ್ತು ದುಶ್ಚಟ ಸಮಸ್ಯೆಗೆ ಸಂಬಂಧಿಸಿದ ಇಲಾಖೆಯ ಸಚಿವೆ ಕ್ಯಾರೊಲಿನ್ ಬೆನ್ನೆಟ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ನೂತನ ಕಾನೂನು 2023ರ ಮಧ್ಯಭಾಗದಲ್ಲಿ ಜಾರಿಗೆ
ಪ್ರಸ್ತಾವಿತ ಬದಲಾವಣೆಗೆ ಸಂಬಂಧಿಸಿ ಸಮಾಲೋಚನಾ ಅವಧಿ ಜೂನ್ 11ರಿಂದ ಜಾರಿಗೆ ಬಂದಿದ್ದು ನೂತನ ಕಾನೂನು 2023ರ ಮಧ್ಯಭಾಗದಲ್ಲಿ ಜಾರಿಗೆ ಬರಲಿದೆ ಎಂದವರು ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕೆನಡಾ ಕ್ಯಾನ್ಸರ್ ಸೊಸೈಟಿಯ ಅಧಿಕಾರಿ ರಾಬ್ ಕನ್ನಿಂಗ್ಹಾಮ್, ನೇರವಾಗಿ ಸಿಗರೇಟಿನ ಮೇಲೆ ಎಚ್ಚರಿಕೆ ಸಂದೇಶ ಮುದ್ರಿಸುವ ಪ್ರಕ್ರಿಯೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಲಿದೆ. ಅಲ್ಲದೆ ಇದು ಹೆಚ್ಚಿನ ಪರಿಣಾಮ ಬೀರಲಿದೆ. ಪ್ರತೀ ಧೂಮಪಾನಿಗೂ ಸಿಗರೇಟಿನ ಪ್ರತಿಯೊಂದು ಧಮ್ ಎಳೆಯುವಾಗಲೂ ಇದು ನೆನಪಿಗೆ ಬರಲಿದೆ ಎಂದವರು ಹೇಳಿದ್ದಾರೆ.

click me!