
ಹೆಚ್ಚು ಬದುಕಬೇಕೆಂದು ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಎಲ್ಲರೂ ಹೆಚ್ಚು ವರ್ಷಗಳ ಕಾಲ ಮಕ್ಕಳು, ಮೊಮ್ಮಕ್ಕಳ ಜೊತೆ ಖುಷಿಯಾಗಿ ಕಾಲ ಕಳೆಯಬೇಕೆಂದು ಬಯಸ್ತಾರೆ. ಆದ್ರೆ ಮನುಷ್ಯನಿಗೆ ಜೀವಿತಾವಧಿ (Life Expectancy) ಅಂತ ಇರುತ್ತೆ. ಅಷ್ಟೇ ವರ್ಷಗಳ ಕಾಲ ಸರಾಸರಿಯಾಗಿ ಮನುಷ್ಯ (Human) ಬದುಕುತ್ತಾನೆ. ಇದರಲ್ಲಿ ಕೆಲಿವೇ ವರ್ಷಗಳ ವ್ಯತ್ಯಾಸವಾಗಬಹುದು ಅಷ್ಟೆ. ಸದ್ಯ ಭಾರತೀಯರಿಗೆ ಜೀವಿತಾವಧಿಯ ವಿಚಾರದಲ್ಲಿ ಖುಷಿ ಸುದ್ದಿಯೊಂದು ಕಾದಿದೆ. ಭಾರತೀಯರ ಜೀವಿತಾವಧಿ 2 ವರ್ಷಗಳ ಕಾಲ ಹೆಚ್ಚಳವಾಗಿದೆ. ಅಂದರೆ ಸದ್ಯ ಭಾರತೀಯರ ಸರಾಸರಿ ಆಯಸ್ಸು 69.7 ವರ್ಷ ಆಗಿರಲಿದೆ.
ಇತ್ತೀಚೆಗೆ ಬಿಡುಗಡೆಯಾದ ಅಬ್ರಿಡ್ಜ್ಡ್ ಲೈಫ್ ಟೇಬಲ್ಸ್ 2015-19 ವರದಿಯಲ್ಲಿ ಈ ಜೀವಿತಾವಧಿಯ ವಿಚಾರ ಬಹಿರಂಗಗೊಂಡಿದೆ. ಭಾರತೀಯರ ಜನನ ಸಮಯದ ಜೀವಿತಾವಧಿಗೆ 2015-19ರ ಮಧ್ಯೆ ನಾಲ್ಕು ವರ್ಷಗಳ ಅವಧಿಯಲ್ಲಿ 2ವರ್ಷ ಸೇರ್ಪಡೆಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಆದರೆ ಇದು ಜಾಗತಿಕ ಸರಾಸರಿಯಾಗಿರುವ 72.6 ವರ್ಷ ಗಳಿಗಿಂತ ಬಹಳ ಕಡಿಮೆಯಿದೆ. ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳವಾಗಲು ಬರೋಬ್ಬರಿ 10 ವರ್ಷಗಳು ಬೇಕಾದವು ಎಂದು ವರದಿ ಹೇಳಿದೆ. ಜನನ ಸಮಯದ ಜೀವಿತಾವಧಿ ದೊಡ್ಡ ಮಟ್ಟಿನ ಏರಿಕೆ ಕಾಣದಿರಲುಜನನ ಸಮಯದಲ್ಲಿ ಶಿಶು ಮರಣ (Infant death) ಮತ್ತು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಹೆಚ್ಚಿರುವುದೇ ಕಾರಣ ಎಂದು ತಿಳಿಸಲಾಗಿದೆ.
ಜಪಾನಿಯರ ದೀರ್ಘ ಆಯಸ್ಸಿನ ಗುಟ್ಟೇನು ಗೊತ್ತಾ ?
ನಗರ, ಗ್ರಾಮೀಣ ಪ್ರದೇಶದಲ್ಲಿ ಜೀವಿತಾವಧಿ ವಿಭಿನ್ನ
ಅದರಲ್ಲೂ ಜೀವಿತಾವಧಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯತ್ಯಸ್ಥವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಶೈಲಿ, ಅಹಾರಪದ್ಧತಿ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಹೀಗಾಗಿಯೇ ಮನುಷ್ಯರ ಜೀವಿತಾವಧಿಯು ಸಂಪೂರ್ಣವಾಗಿ ವಿಭಿನ್ನವಾಗಿದೆ. ಭಾರತದ ಗ್ರಾಮೀಣ ಪ್ರದೇಶಗಳ ಜನರ ಸರಾಸರಿ ಜೀವಿತಾವಧಿ 68.3 ವರ್ಷ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ 73 ವರ್ಷ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಜೀವಿತಾವಧಿ 68.4 ವರ್ಷಗಳಾದರೆ, ಮಹಿಳೆಯರದ್ದು 71.1 ವರ್ಷಗಳಾಗಿವೆ.
1970-75ರಲ್ಲಿ ಭಾರತೀಯರ ಜನನ ಸಮಯದ ಜೀವಿತಾವಧಿ 49.7 ವರ್ಷ ಗಳಾಗಿದ್ದವು. 2015-19ರ ಅವಧಿಯಲ್ಲಿ ಇದು 69.7 ವರ್ಷಗಳಿಗೇರಿದೆ. 4 ದಶಕಗಳಲ್ಲಿ ಜೀವಿತಾವಧಿಯು 20 ವರ್ಷಗಳಷ್ಟು ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಪುರುಷರ ಜೀವಿತಾವಧಿ: 67.9 ವರ್ಷ, ಮಹಿಳೆಯರ ಜೀವಿತಾವಧಿ: 71.3 ವರ್ಷ, ಒಟ್ಟಾರೆ ಜೀವಿತಾವಧಿ ಸರಾಸರಿ 69.5. ಎಂದು ಗುರುತಿಸಲಾಗಿದೆ.
ದೆಹಲಿ, ಅತೀ ಹೆಚ್ಚು ಜೀವಿತಾವಧಿ ಇರುವ ರಾಜ್ಯ
ದೇಶದಲ್ಲಿ ಅತೀ ಹೆಚ್ಚು ಜೀವಿತಾವಧಿ ಇರುವ ರಾಜ್ಯವೆಂದು ದೆಹಲಿ ಗುರುತಿಸಿಕೊಂಡಿದೆ. ಇಲ್ಲಿ ಸರಾಸರಿ ಜೀವಿತಾವಧಿ 75.9 ವರ್ಷಗಳು. 2ನೇ ಸ್ಥಾನದಲ್ಲಿ ಕೇರಳ ಇದ್ದು, ಇಲ್ಲಿನ ಜನರ ಜೀವಿತಾವಧಿ 75.2 ವರ್ಷಗಳು. ಜನರ ಆಯಸ್ಸು ಕಡಿಮೆಯಿರುವ ರಾಜ್ಯವೆಂದರೆ ಛತ್ತೀಸ್‌ಗಢವಾಗಿದೆ. ಇಲ್ಲಿನ ಜನರ ಆಯಸ್ಸು 65.3 ವರ್ಷಗಳಾಗಿವೆ.
Walking Health Benefits: ನಡೆದಷ್ಟೂ ಆಯಸ್ಸು ಹೆಚ್ಚುತ್ತೆ
ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜೀವಿತಾವಧಿ ಇಳಿಕೆ
ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೋನಾ ವೈರಸ್ ನಂತರದ ವರ್ಷಗಳಲ್ಲಿ ದೇಶದ ಜನರ ಜೀವಿತಾವಧಿಯಲ್ಲಿ ಸುಮಾರು ಎರಡು ವರ್ಷಗಳಷ್ಟು ಕುಸಿತವನ್ನು ಉಂಟುಮಾಡಿತ್ತು ಎಂದು ನಗರ ಮೂಲದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್ (ಐಐಪಿಎಸ್) ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ. ಬಹಿರಂಗಪಡಿಸಿದೆ.
2019ರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿ ಪುರುಷರಿಗೆ 69.5 ವರ್ಷಗಳು ಮತ್ತು ಮಹಿಳೆಯರಿಗೆ 72 ವರ್ಷಗಳಾಗಿತ್ತು. ಇದು 2020 ರಲ್ಲಿ ಕ್ರಮವಾಗಿ 67.5 ವರ್ಷ ಮತ್ತು 69.8 ವರ್ಷಗಳಿಗೆ ಇಳಿದಿದೆ ಎಂದು ವರದಿ ತಿಳಿಸಿದ್ದವು. ಶಿಶುವಿನ ಜನನದ ಸಮಯದಲ್ಲಿ ಮರಣದ ಮಾದರಿಗಳು ಭವಿಷ್ಯದಲ್ಲಿ ಸ್ಥಿರವಾಗಿದ್ದರೆ ನವಜಾತ ಶಿಶು ಬದುಕುವ ನಿರೀಕ್ಷೆಯ ಸರಾಸರಿ ವರ್ಷಗಳ ಆಧಾರದ ಮೇಲೆ ಜನನದ ಜೀವಿತಾವಧಿಯನ್ನು ಲೆಕ್ಕಹಾಕಲಾಗುತ್ತದೆ. ಪ್ರೊಫೆಸರ್ ಯಾದವ್ ಅವರು ಕೈಗೊಂಡ ಅಧ್ಯಯನದಲ್ಲಿ ಕೋವಿಡ್ 19, 39-69 ವಯಸ್ಸಿನ ಪುರುಷರ ಗರಿಷ್ಠ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಬಹಿರಂಗಪಡಿಸಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.