ಬೆಂಗಳೂರಿನಲ್ಲಿ ಮುಟ್ಟಿದ ಕಡೆಯಲೆಲ್ಲಾ ಶಾಕ್‌ ಹೊಡೀತಿದ್ಯಲ್ಲಾ, ಯಾಕ್‌ ಹೀಗೆ?

By Vinutha Perla  |  First Published Mar 9, 2023, 8:32 AM IST

ಬೆಂಗಳೂರಿಗರೇ, ಹೋದಲ್ಲಿ ಬಂದಲ್ಲಿ ಮತ್ತೊಬ್ಬರನ್ನು ಮುಟ್ಟಿದಾಗ, ಚೇರ್ ಟಚ್ ಮಾಡಿದಾಗ, ಕಬ್ಬಿಣದ ಕಂಬಿ ಮುಟ್ಟಿದಾಗ ಹೀಗೆ ಆಗಾಗ ಶಾಕ್‌ ಹೊಡೆಸಿಕೊಂಡ ಅನುಭವ ನಿಮ್ಗೂ ಆಗ್ತಿದ್ಯಾ? ಏನ್ ಮುಟ್ಟಿದ್ರೂ ಚಟ್‌ ಚಟ್‌ ಅಂತ ಶಾಕ್‌ ಫೀಲ್ ಆಗ್ತಿದ್ಯಾ ? ಹೀಗೆಲ್ಲಾ ಆಗ್ತಿರೋದ್ಯಾಕೆ ಇಲ್ಲಿದೆ ಮಾಹಿತಿ.


ಬೆಂಗಳೂರು ಜನತೆ ಕೆಲ ದಿನಗಳಿಂದ ಈ ವಿಚಿತ್ರ ಕರೆಂಟ್‌ ಶಾಕ್‌ ಅನುಭವಿಸುತ್ತಿದ್ದಾರೆ. ಇತರರನ್ನು ಸ್ಪರ್ಶಿಸಿದಾಗ, ಚೇರ್ ಮುಟ್ಟಿದಾಗ, ಇನ್ಯಾವುದೋ ಕಬ್ಬಿಣದ ಕಂಬಿ ಮುಟ್ಟಿದಾಗ ಶಾಕ್‌ ಹೊಡೆದಂತೆ ಆಗುತ್ತಿದೆ. ಮೊದಲೆಲ್ಲಾ ಹೀಗೆಲ್ಲಾ ತಮಗೆ ಮಾತ್ರ ಆಗ್ತಿದೆ ಅಂದ್ಕೊಂಡವರು ನಂತರ ಎಲ್ಲರೂ ಹೀಗೆ ಹೇಳುತ್ತಿರುವುದನ್ನು ಕೇಳಿ ಬೆರಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಎಲ್ಲೆಡೆ ಬೆಂಗಳೂರು ನಿವಾಸಿಗಳಲ್ಲಿ ಇದೇ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಈ ತಿಂಗಳ ಆರಂಭದಲ್ಲಿ ಆಕಾಂಕ್ಷಾ ಗೌರ್ ಎಂಬ ನಿವಾಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. "ಬೆಂಗಳೂರು ಜನರೇ, ಕೆಲವು ದಿನಗಳಿಂದ ಲೋಹವನ್ನು ಸ್ಪರ್ಶಿಸಿದಾಗ ಕರೆಂಟ್ ಶಾಕ್ ಹೊಡೆದಂತ ಆಗುತ್ತಿದೆಯಾ. ನನ್ನ ಹಲವು ಸ್ನೇಹಿತರು ಇದನ್ನು ಅನುಭವಿಸಿದ್ದಾರೆ?' ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹಲವರು ಹೌದು ನಮಗೂ ಈ ಅನುಭವ ಆಗಿದೆ ಎಂದಿದ್ದಾರೆ. ಬೆಂಗಳೂರಲ್ಲಿ ನಡೆಯುತ್ತಿರುವ ಈ ವಿದ್ಯಮಾನದ ಬಗ್ಗೆ ವಿಜ್ಞಾನಿಗಳು ಮತ್ತು ತಜ್ಞರು ಅಧ್ಯಯನ ಮಾಡಿದ್ದಾರೆ. ನಗರದಲ್ಲಿನ ಹವಾಮಾನ ಪರಿಸ್ಥಿತಿಯಿಂದಾಗಿ ಈ ರೀತಿಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos

undefined

Winter : ನಿಮ್ಮಲ್ಲೂ ಕರೆಂಟ್ ಪಾಸ್ ಆಗ್ತಿದೆ! ಚಳೀಲಿ ಮುಟ್ಟಿದರೆ ಶಾಕ್ ಹೊಡೆಯುವುದೇಕೆ?

ಮುಟ್ಟಿದಲ್ಲೆಲ್ಲಾ ಕರೆಂಟ್‌ ಶಾಕ್‌ ಹೊಡೆದ ಅನುಭವ ಆಗಲು ಕಾರಣಗಳೇನು?
ಕರೆಂಟ್ ಶಾಕ್‌ ಹೊಡೆದ ಅನುಭವ ಆಗ್ತಿರೋದಕ್ಕೆ ತಜ್ಞರು ವಿವರಣೆ ನೀಡಿದ್ದು ಚಳಿಗಾಲದ ಕೊನೆಯಲ್ಲಿ ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಶುಷ್ಕ ವಾತಾವರಣದಲ್ಲಿ ಈ ರೀತಿಯಾಗುತ್ತದೆ ಎಂದಿದ್ದಾರೆ. ಸುತ್ತಲಿನ ಹವಾಮಾನವು ಶುಷ್ಕವಾಗಿದ್ದಾಗ ವಿದ್ಯುತ್ ಚಾರ್ಜ್ ರೂಪುಗೊಳ್ಳುತ್ತದೆ. ಗಾಳಿಯು ಶುಷ್ಕವಾಗಿರುವ ಕಾರಣ ಎಲೆಕ್ಟ್ರಾನ್‌ಗಳು ನಮ್ಮ ಚರ್ಮದ ಮೇಲ್ಮೈಯಲ್ಲಿ ಸುಲಭವಾಗಿ ರೂಪಗೊಳ್ಳುತ್ತವೆ. ಬೇಸಿಗೆಯಲ್ಲಿ, ಗಾಳೀಯ ತೇವಾಂಶವು ಋಣಾತ್ಮಕ ವಿದ್ಯುದಾವೇಶದ ಎಲೆಕ್ಟ್ರಾನ್‌ಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಎಲ್ಲಾ ವಿದ್ಯಮಾನಗಳಿಂದ ಜನರಿಗೆ ಬೇಸಿಗೆಯಲ್ಲಿ ಕರೆಂಟ್‌ ಶಾಕ್ ಅನುಭವವಾಗುತ್ತದೆ ಎಂದಿದ್ದಾರೆ.

ಪಾಲಿಸ್ಟರ್ ಮತ್ತು ನೈಲಾನ್‌ನಂತಹ ಸಿಂಥೆಟಿಕ್ ಬಟ್ಟೆಗಳು ಪರಸ್ಪರ ವಿರುದ್ಧವಾಗಿ ಉಜ್ಜಿದಾಗ ಸ್ಥಿರ ವಿದ್ಯುತ್ ಉತ್ಪಾದಿಸುವ ಅವಾಹಕಗಳಾಗುತ್ತವೆ. ನೀವು ಲೋಹದ ವಸ್ತುಗಳನ್ನು ಸ್ಪರ್ಶಿಸಿದಾಗ ಹೀಗಾಗುತ್ತದೆ. ರತ್ನಗಂಬಳಿಗಳು ಮತ್ತು ರಗ್ಗುಗಳು ನಿಮ್ಮ ದೇಹದ ಮೇಲೆ ಸ್ಥಿರ ವಿದ್ಯುತ್ ನಿರ್ಮಿಸಲು ಕಾರಣವಾಗುವ ಅವಾಹಕಗಳಾಗಿವೆ. ಕಾರ್ಪೆಟ್ ಮೇಲೆ ನಡೆಯುವಾಗ, ನೀವು ಲೋಹದ ವಸ್ತು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಸ್ಪರ್ಶಿಸಿದಾಗ ಹೊರಹಾಕಬಹುದಾದ ವಿದ್ಯುತ್ ಚಾರ್ಜ್ ಕರೆಂಟ್‌ ಹೊಡೆದಂತೆ ಆದ ಅನುಭವ ನೀಡುತ್ತದೆ.

ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!

ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಬಳಕೆಯಲ್ಲಿರುವಾಗ ಸ್ಥಿರವಾಗಿ ವಿದ್ಯುತ್ ಉತ್ಪಾದಿಸುತ್ತವೆ. ಹೀಗಾಗಿ ಇಂತಹ ಸಾಧನಗಳನ್ನು ಮುಟ್ಟಿದಾಗಲೂ ಈ ರೀತಿಯ ಅನುಭವ ನಮಗೆ ಆಗುತ್ತದೆ. ಅದರಲ್ಲೂ ಆಸ್ಪತ್ರೆಗಳು ಅಥವಾ ಡೇಟಾ ಸೆಂಟರ್‌ಗಳಂತಹ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ಜಾಗದಲ್ಲಿ ಈ ಸಮಸ್ಯೆಯನ್ನು ನೋಡಬಹುದಾಗಿದೆ. ಹಲವು ಸಂದರ್ಭಗಳಲ್ಲಿ ಕಡಿಮೆ ಆರ್ದ್ರತೆಯ ಮಟ್ಟಗಳು ಸ್ಥಿರ ವಿದ್ಯುತ್ ಸಂಗ್ರಹಕ್ಕೆ ಕಾರಣವಾಗಬಹುದು. ಒಳಾಂಗಣ ತಾಪಮಾನವು ಗಾಳಿಯನ್ನು ತುಂಬಾ ಶುಷ್ಕವಾಗಿಸುವ ಚಳಿಗಾಲದಲ್ಲಿ ಇದು ವಿಶೇಷವಾಗಿ ಸಾಮಾನ್ಯವಾಗಿದೆ.

ವಿಕ್ರಂ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮಂಜುನಾಥ್ ಮಾತನಾಡಿ, ' ಕರೆಂಟ್ ಶಾಕ್‌ ಹೊಡೆಯುತ್ತಿರುವ ಅನುಭವಕ್ಕೆ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲ. ಬೆಂಗಳೂರಿನಲ್ಲಿ ಚಳಿಗಾಲವು ಇನ್ನೂ ಸಂಪೂರ್ಣವಾಗಿ ಮುಗಿದಿದೆ. ಚಳಿಗಾಲದಲ್ಲಿ ಸ್ಥಿರ ವಿದ್ಯುತ್ ಆಘಾತಗಳು ಕಂಡುಬರುತ್ತವೆ. ನಾನು ಶೀತ ಋತುವಿನಲ್ಲಿ US ನಲ್ಲಿ ಅನೇಕ ಬಾರಿ ಅನುಭವಿಸಿದ್ದೇನೆ. ಒಬ್ಬರು ಪಾಲಿಯೆಸ್ಟರ್ ಉಡುಪುಗಳನ್ನು ಧರಿಸಿದರೆ ಇದು ವಿಶೇಷವಾಗಿ ಸಂಭವಿಸುತ್ತದೆ.' ಎಂದು ಮಾಹಿತಿ ನೀಡಿದ್ದಾರೆ.

ಅನಾಮಧೇಯತೆಯನ್ನು ಕೋರಿದ ಮತ್ತೊಬ್ಬ ವೈದ್ಯರು, ಚಳಿಗಾಲದಿಂದ ಬೇಸಿಗೆಗೆ ಬದಲಾಗುತ್ತಿರುವ ಹವಾಮಾನವು ಇಂತಹ ಹೆಚ್ಚಿನ ಘಟನೆಗಳಿಗೆ ಕಾರಣವಾಗಿರಬಹುದು ಎಂದು ಹೇಳಿದರು. IISc ವಿಜ್ಞಾನಿ ಪ್ರೊ.ಜೆ.ಎಂ.ಚಂದ್ರ ಕಿಶನ್, ಚಳಿಗಾಲದಿಂದ ಬೇಸಿಗೆಗೆ ಬದಲಾಗುತ್ತಿರುವ ಹವಾಮಾನದಿಂದಾಗಿ ಬೆಂಗಳೂರಿನಲ್ಲಿ ಇಂತಹ ಹೆಚ್ಚಿನ ಘಟನೆಗಳು ನಡೆಯತ್ತಿವೆ ಎಂದಿದ್ದಾರೆ.

click me!