
ನಮಗೆಲ್ಲಾ ಕನಿಷ್ಠ ಒಂದು ಟೈಂ ಆದರೂ ಚಹಾ ಮತ್ತು ಕಾಫಿ ಇರಲೇಬೇಕಲ್ಲವೇ. ದಿನಕ್ಕೆ ಐದಾರೂ ಬಾರಿ ಚಹಾ ಅಥವಾ ಕಾಫಿ ಕುಡಿಯುವರು ಇದ್ದಾರೆ. ಆದರೆ ಇಲ್ಲೊಂದು ಪ್ರಶ್ನೆಯಿದೆ. ಚಹಾ ಅಥವಾ ಕಾಫಿ ಕುಡಿಯುವ ಮೊದಲು ನೀರು ಕುಡಿಯಬೇಕೇ? ಅಥವಾ ನಂತರ ಕುಡಿಯಬೇಕೇ?. ಏಕೆಂದರೆ ಚಹಾ ಮತ್ತು ಕಾಫಿ ಆ ತಕ್ಷಣಕ್ಕೆ ಮಜಾ ಕೊಟ್ಟರೂ ಕ್ರಮೇಣ ಅದು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಆದ್ದರಿಂದ ನೀರು ಕುಡಿಯುವುದು ಅತ್ಯಗತ್ಯ. ಆದರೆ ಹೆಚ್ಚಿನ ಜನರು ಅದನ್ನು ಯಾವಾಗ ಕುಡಿಯಬೇಕೆಂಬುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಹಾಗಾಗಿ ಈ ಪ್ರಶ್ನೆಗೆ ತಜ್ಞರು ಕೊಟ್ಟಿರುವ ಉತ್ತರವೇನೆಂದು ನೋಡೋಣ
ದಂತವೈದ್ಯೆ ಮತ್ತು ಇಂಪ್ಲಾಂಟಾಲಜಿಸ್ಟ್ ಡಾ. ಉಪಾಸನ ಗೋಸಾಲಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ "ನೀವು ಚಹಾ ಅಥವಾ ಕಾಫಿ ಕುಡಿಯುವ ಮೊದಲು ಅಥವಾ ನಂತರ ಯಾವಾಗಲಾದರೂ ನೀರು ಕುಡಿಯಬಹುದು. ಆದರೆ ಚಹಾ ಅಥವಾ ಕಾಫಿಯ ನಂತರ ನೀರು ಕುಡಿಯುವುದು ಬಹಳ ಮುಖ್ಯ. ಹಾಗೆ ಮಾಡುವುದರಿಂದ ಅನೇಕ ಸಣ್ಣ, ಕಿರಿಕಿರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ" ಎಂದು ಅವರು ವಿವರಿಸುತ್ತಾರೆ.
ದೇಹವನ್ನು ಹೈಡ್ರೇಟೆಡ್ ಆಗಿಡಲು
ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಇದ್ದು, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ಡಾ. ಉಪಾಸನ ವಿವರಿಸುತ್ತಾರೆ. ಚಹಾ ಅಥವಾ ಕಾಫಿ ಕುಡಿದ ನಂತರ ನೀರು ಕುಡಿಯುವುದರಿಂದ ತೇವಾಂಶ ಮತ್ತು ದ್ರವ ಸಮತೋಲನ ಪುನಃಸ್ಥಾಪನೆಯಾಗುತ್ತದೆ. ಇದು ದಿನವಿಡೀ ಸಕ್ರಿಯ ಮತ್ತು ಚೈತನ್ಯಶೀಲವಾಗಿರಲು ನಿಮಗೆ ಸಹಾಯ ಮಾಡುತ್ತದೆ.
ಹಲ್ಲುಗಳ ಮೇಲೆ ಕಲೆ ಇರಲ್ಲ
ಚಹಾ ಅಥವಾ ಕಾಫಿ ಕುಡಿಯುವುದರಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಈ ಉತ್ಪನ್ನಗಳಲ್ಲಿ ಇರುವ ಕೆಫೀನ್ ಮತ್ತು ಟ್ಯಾನಿನ್‌ಗಳು ದಂತಕವಚದ ಮೇಲೆ ಸಂಗ್ರಹವಾಗುತ್ತವೆ. ಆದರೆ ಚಹಾ ಅಥವಾ ಕಾಫಿಯ ನಂತರ ನೀರು ಕುಡಿಯುವುದರಿಂದ ಈ ಪರಿಣಾಮ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನೀರು ಹಲ್ಲುಗಳ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕಲೆಗಳು ರೂಪುಗೊಳ್ಳುವುದನ್ನು ತಡೆಯುತ್ತದೆ.
ಕುಳಿಗಳನ್ನು ತಡೆಯುತ್ತೆ
ಚಹಾ ಮತ್ತು ಕಾಫಿಯಲ್ಲಿ ಸಕ್ಕರೆ ಇರುತ್ತದೆ. ಇದು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕುಳಿಗಳಿಗೆ ಕಾರಣವಾಗಬಹುದು. ಕುಡಿಯುವ ನೀರು ಸಕ್ಕರೆಯನ್ನು ತೊಳೆದು ನಿಮ್ಮ ಹಲ್ಲುಗಳನ್ನು ರಕ್ಷಿಸುತ್ತದೆ. ಇದರರ್ಥ ಚಹಾ ಅಥವಾ ಕಾಫಿ ನಂತರ ನೀರು ಕುಡಿಯುವುದು ನಿಮ್ಮ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.
ಬಾಯಿಯ ದುರ್ವಾಸನೆಯಿಂದ ಪರಿಹಾರ
ಅನೇಕ ಜನರು ಚಹಾ ಅಥವಾ ಕಾಫಿ ಕುಡಿದ ನಂತರ ಬಾಯಿಯ ದುರ್ವಾಸನೆಯಿಂದ ಬಳಲುತ್ತಾರೆ. ಏಕೆಂದರೆ ಕೆಫೀನ್ ಲಾಲಾರಸದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ಬ್ಯಾಕ್ಟೀರಿಯಾ ಬೆಳೆಯಲು ಪ್ರೋತ್ಸಾಹಿಸುತ್ತದೆ. ನೀರು ಕುಡಿಯುವುದರಿಂದ ಬಾಯಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಲಾಲಾರಸದ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ.
ಅಸಿಡಿಟಿ ತಡೆಗಟ್ಟಲು
ಇದೆಲ್ಲದರ ಹೊರತಾಗಿ ಕೆಲವರು ಚಹಾ ಅಥವಾ ಕಾಫಿ ಕುಡಿದ ನಂತರ ಅಸಿಡಿಯಿಂದ ಬಳಲುತ್ತಾರೆ. ಏಕೆಂದರೆ ಚಹಾ ಮತ್ತು ಕಾಫಿ ಎರಡೂ ಆಮ್ಲೀಯವಾಗಿರುತ್ತವೆ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ಸೇವಿಸುವುದರಿಂದ ಎದೆಯುರಿ ಅಥವಾ ಅಸಿಡಿಟಿ ಉಂಟಾಗುತ್ತದೆ. ಆದರೆ ನಂತರ ನೀರು ಕುಡಿಯುವುದರಿಂದ ಹೊಟ್ಟೆಯ ಆಮ್ಲವನ್ನು ಸಮತೋಲನಗೊಳಿಸಬಹುದು ಮತ್ತು ಸುಡುವ ಸಂವೇದನೆಯಿಂದ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಚಹಾ ಅಥವಾ ಕಾಫಿ ಕುಡಿದ ನಂತರ ಖಂಡಿತವಾಗಿಯೂ ನೀರು ಕುಡಿಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.