ಬೊಜ್ಜು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ, ಅನೇಕ ಬಾರಿ ಜನರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಸಿಕ್ಕಿದ್ದೆಲ್ಲಾ ತಿಂತಾರೆ. ಹೆಚ್ಚು ತಿಂದರೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಆಹಾರ ಸೇವನೆಯನ್ನು ನಿಯಂತ್ರಿಸುವುದು ತೂಕವನ್ನು ನಿಯಂತ್ರಿಸಲು ಅತ್ಯಂತ ಮುಖ್ಯವಾಗುತ್ತದೆ. ಕೆಲವರು ಒತ್ತಡದಲ್ಲಿದ್ದಾಗ ಅಥವಾ ಭಾವನಾತ್ಮಕವಾಗಿದ್ದಾಗ ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ 38 ವರ್ಷದ ವೈದ್ಯ ಕೆವಿನ್ ಜಾಂಡ್ರೂ ಕೂಡ ಇದೇ ರೀತಿಯ ಅನುಭವವನ್ನು ಹಂಚಿಕೊಂಡರು. ಒತ್ತಡ, ದೀರ್ಘ ಕೆಲಸದ ಸಮಯ ಇತ್ಯಾದಿಯಿಂದಾಗಿ ಅವರ ತೂಕ ಹೆಚ್ಚುತ್ತಲೇ ಇತ್ತು. ಆದರೆ ಈಗ ಅವರು ಕೇವಲ 18 ತಿಂಗಳಲ್ಲಿ 56 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಹಾಗೆಯೇ ತೂಕ ಇಳಿಸಿಕೊಳ್ಳಲು ತಮ್ಮ ಅಭಿಮಾನಿಗಳೊಂದಿಗೆ ವಿಶೇಷ ರಹಸ್ಯ ಸಲಹೆಗಳನ್ನ ಹಂಚಿಕೊಂಡಿದ್ದಾರೆ.
ಬೊಜ್ಜಿನ ಅಪಾಯಗಳ ಬಗ್ಗೆ ಜನರಿಗೆ ಸಲಹೆ ನೀಡುತ್ತಿದ್ದರೂ ಒತ್ತಡದಿಂದಾಗಿ ಅತಿಯಾಗಿ ತಿನ್ನುವುದು ಅಭ್ಯಾಸವಾಯಿತು ಮತ್ತು ತೂಕ 138 ಕೆಜಿ (306 ಪೌಂಡ್) ತಲುಪಿತು ಎಂದು ಡಾ. ಕೆವಿನ್ ಜಾಂಡ್ರೂ ವಿವರಿಸುತ್ತಾರೆ.
ಪುರುಷರ ಆರೋಗ್ಯದ ಬಗ್ಗೆ ಮಾತನಾಡಿದ ಡಾ. ಕೆವಿನ್, ತೂಕ ರಾತ್ರೋರಾತ್ರಿ ಹೆಚ್ಚಾಗಲಿಲ್ಲ. ಇದು ವರ್ಷಗಳ ಕಾಲ ಭಾವನಾತ್ಮಕ ಒತ್ತಡದಿಂದ ಕ್ರಮೇಣ ಹೆಚ್ಚಾಯ್ತು ಎಂದು ವಿವರಿಸಿದ್ದಾರೆ. ಅವರ ಕಾಲೇಜು ದಿನಗಳಲ್ಲಿ ತಂದೆಗೆ ಮೆಲನೋಮ ಇರುವುದು ಪತ್ತೆಯಾಯಿತು ಮತ್ತು ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಸ್ವಲ್ಪ ಸಮಯ ಹಿಡಿಯಿತು. ಆಗ ಅವರ ಆಹಾರ ಪದ್ಧತಿ ಹದಗೆಡಲು ಪ್ರಾರಂಭಿಸಿತು. ಅವರ ತಂದೆ ಸಾಯುವ ಹೊತ್ತಿಗೆ ಅವರು 22 ಕಿಲೋಗ್ರಾಂಗಳಷ್ಟು ಹೆಚ್ಚಿದ್ದರು. ಅವರ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಸಂಸ್ಕರಿಸಿದ ತಿಂಡಿಗಳು ಅಧಿಕವಾಗಿರುವುದರಿಂದ ಇದು ಸಂಭವಿಸಿತು. ತೂಕ ಕ್ರಮೇಣ ಹೆಚ್ಚುತ್ತಲೇ ಹೋಯಿತು.
ಕಾರ್ಬೋಹೈಡ್ರೇಟ್ಸ್ ಮತ್ತು ಸಂಸ್ಕರಿಸಿದ ಆಹಾರದಿಂದ ತೂಕ ಹೆಚ್ಚಳ
ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಕೆವಿನ್‌ಗೆ 27 ವರ್ಷದವನಿದ್ದಾಗ ಟೈಪ್ 2 ಮಧುಮೇಹ, ಸ್ಲೀಪ್ ಅಪ್ನಿಯಾ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಇರುವುದು ಪತ್ತೆಯಾಯಿತು. ಆಗಲೂ ಕೆವಿನ್ ತೂಕ ಇಳಿಸುವ ಬಗ್ಗೆ ಯೋಚಿಸಲಿಲ್ಲ, ಆದರೆ 32 ನೇ ವಯಸ್ಸಿನಲ್ಲಿ ಅವರ ಸಹೋದರಿಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಫಿಟ್ ಆಗಿ ಉಳಿಯುವುದು ಅತ್ಯಗತ್ಯ ಎಂದು ಅವರು ಅರಿತುಕೊಂಡರು.
ಕೆವಿನ್ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಮೂಲಕ ತೂಕ ಇಳಿಸಿಕೊಂಡರು. ಕಡಿಮೆ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಭರಿತ ತರಕಾರಿಗಳು ಮತ್ತು ಹಣ್ಣುಗಳನ್ನು ಒಳಗೊಂಡಂತೆ ಆರೋಗ್ಯಕರ ಆಹಾರಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಪ್ರಾರಂಭಿಸಿದರು. ಕ್ಯಾಲೊರಿಗಳನ್ನು ಎಣಿಸುವುದನ್ನು ನಿಲ್ಲಿಸಿದರು ಮತ್ತು ತಮ್ಮ ದೇಹದ ಮಾತು ಕೇಳಲು ಪ್ರಾರಂಭಿಸಿದರು. ಅತಿಯಾಗಿ ತಿನ್ನುವುದನ್ನು ಸಹ ಕಡಿಮೆ ಮಾಡಿದರು. ಇದನ್ನು ಸಾಧಿಸಲು ಅವರು ಸಮಯಕ್ಕೆ ಸರಿಯಾಗಿ ತಿನ್ನಲು ಪ್ರಾರಂಭಿಸಿದರು. ಪ್ರತಿ ಆರು ಗಂಟೆಗಳಿಗೊಮ್ಮೆ ಎರಡು ಅಥವಾ ಮೂರು ಬಾರಿ ಮಾತ್ರ ತಿನ್ನುತ್ತಿದ್ದರು. ಪ್ರತಿದಿನ 10,000–15,000 ಹೆಜ್ಜೆಗಳನ್ನು ನಡೆಯಲು ಸಹ ಪ್ರಾರಂಭಿಸಿದರು. ಸ್ಥಿರವಾದ ನಡಿಗೆ ಅವರ ತೂಕದಲ್ಲಿ ನಿಜವಾದ ವ್ಯತ್ಯಾಸವನ್ನುಂಟುಮಾಡಿತು. ಈ ಜೀವನಶೈಲಿಯನ್ನು ಅಳವಡಿಸಿಕೊಂಡ ಕೆವಿನ್ 18 ತಿಂಗಳಲ್ಲಿ 56 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡರು. ಇದು ಅವರ ಮಧುಮೇಹ, ಸ್ಲೀಪ್ ಅಪ್ನಿಯಾ, ಕೊಬ್ಬಿನ ಯಕೃತ್ತು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಗುಣಪಡಿಸಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.