ಇದ್ದಕ್ಕಿದ್ದಂತೆ ಮೈಗ್ರೇನ್‌ ಬರುತ್ತಾ?, ಇಷ್ಟು ಮಾಡಿ ಸಾಕು.. ತಕ್ಷಣಕ್ಕೆ ರಿಲೀಫ್ ಸಿಗುತ್ತೆ

Published : Dec 13, 2025, 12:04 PM IST
Migraine Causes and treatment

ಸಾರಾಂಶ

Ways to control migraine: ಲಕ್ಷಾಂತರ ಮಹಿಳೆಯರು ಮೈಗ್ರೇನ್‌ ಸಮಸ್ಯೆಯನ್ನು ಒಂಟಿಯಾಗಿ ಎದುರಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಡಾ. ಪ್ರಮೋದ್ ಕೃಷ್ಣನ್ , ಮೈಗ್ರೇನ್ ವಿಚಾರದಲ್ಲಿ ಹಾರ್ಮೋನ್‌ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ನಿಜವಾದರೂ ಅದೊಂದೇ ಏಕೈಕ ಕಾರಣವಲ್ಲ ಎಂದಿದ್ದಾರೆ.

ನಿಮಗೆ ಗೊತ್ತೇ? ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಮೈಗ್ರೇನ್‌ಗೆ ಒಳಗಾಗುತ್ತಾರೆ. 1 ಇವುಗಳಲ್ಲಿ ಶೇ. 30ರಷ್ಟು ಮಂದಿಗೆ ಹಾರ್ಮೋನ್ ಬದಲಾವಣೆಗಳಿಂದ ಮೈಗ್ರೇನ್‌ ಉಂಟಾಗುತ್ತವೆ. ಅದರಲ್ಲೂ ವಿಶೇಷವಾಗಿ ಮುಟ್ಟಿನ ಸಮಯದಲ್ಲಿ. ಬಹಳಷ್ಟು ಮಹಿಳೆಯರಿಗೆ ಮೈಗ್ರೇನ್ ಅಂದರೆ ಕೇವಲ ಸಣ್ಣ ತಲೆನೋವು ಮಾತ್ರವಲ್ಲ, ಇದು ದಿನನಿತ್ಯದ ಜೀವನವನ್ನೇ ಅಲ್ಲೋಲಕಲ್ಲೋಲಗೊಳಿಸುವ ಭಯಂಕರ ನೋವು. ಕೆಲಸ, ಕುಟುಂಬ, ವೈಯಕ್ತಿಕ ಜೀವನದ ಜವಾಬ್ದಾರಿಗಳ ನಡುವೆ ಮೈಗ್ರೇನ್ ಅವರನ್ನು ಸಾಕಷ್ಟು ಕಾಡುತ್ತದೆ. ಲಕ್ಷಾಂತರ ಮಹಿಳೆಯರು ಈ ಸಮಸ್ಯೆಯನ್ನು ಒಂಟಿಯಾಗಿ ಎದುರಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಪ್ರಮೋದ್ ಕೃಷ್ಣನ್ ಅವರು, “ಮೈಗ್ರೇನ್ ವಿಚಾರದಲ್ಲಿ ಹಾರ್ಮೋನ್‌ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ನಿಜವಾದರೂ ಅದೊಂದೇ ಏಕೈಕ ಕಾರಣವಲ್ಲ. ಕೆಲಸ ಮತ್ತು ಜೀವನದ ನಡುವೆ ಸಮತೋಲನ ಕಳೆದುಕೊಂಡಾಗ ಬರುವ ಒತ್ತಡ, ಊಟವನ್ನು ಬಿಟ್ಟುಬಿಡುವುದು ಅಥವಾ ತಡವಾಗಿ ತಿನ್ನುವುದು ಇವೆಲ್ಲವೂ ಮೈಗ್ರೇನ್ ಲಕ್ಷಣಗಳನ್ನು ತೀವ್ರಗೊಳಿಸುತ್ತವೆ. ಈ ಕಾರಣಗಳನ್ನು ಅರ್ಥಮಾಡಿಕೊಂಡರೆ ಮೈಗ್ರೇನ್ ನಿಯಂತ್ರಣ ಮಾಡುವ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ. ದಿನನಿತ್ಯದ ಬದುಕಿನಲ್ಲಿ ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಮತ್ತು ಮೈಗ್ರೇನ್ ಚಿಕಿತ್ಸೆಯಲ್ಲಿನ ಆಧುನಿಕ ಪ್ರಗತಿಗಳು ಒಟ್ಟಿಗೆ ಸೇರಿ ದೊಡ್ಡ ವ್ಯತ್ಯಾಸ ಉಂಟುಮಾಡಬಹುದು. ವೈಯಕ್ತಿಕ ಮತ್ತು ವೈದ್ಯಕೀಯ ಎರಡೂ ದೃಷ್ಟಿಯಿಂದ ಮೈಗ್ರೇನ್ ಅನ್ನು ಎದುರಿಸಿದರೆ ಮಹಿಳೆಯರು ತಮ್ಮ ಮೈಗ್ರೇನ್ ಅನ್ನು ತಾವೇ ನಿಯಂತ್ರಿಸಬಹುದು, ಆರೋಗ್ಯವಾಗಿರಬಹುದು ಮತ್ತು ಗುಣಮಟ್ಟದ ಜೀವನವನ್ನು ಮರಳಿ ಪಡೆಯಬಹುದು” ಎಂದು ಹೇಳಿದ್ದಾರೆ.

ಮೈಗ್ರೇನ್ ನಿಯಂತ್ರಿಸಲು 7 ಸುಲಭ ಮಾರ್ಗಗಳು

1. ಮೈಗ್ರೇನ್ ಮತ್ತು ಹಾರ್ಮೋನ್ ಸಂಬಂಧವನ್ನು ಅರ್ಥಮಾಡಿಕೊಳ್ಳಿ
ಮಹಿಳೆಯರಲ್ಲಿ ಮೈಗ್ರೇನ್‌ ಉಂಟಾಗಲು ಹಾರ್ಮೋನ್ ಬದಲಾವಣೆ ಅತಿ ದೊಡ್ಡ ಕಾರಣ. ಮುಟ್ಟಿನ ಮೊದಲು ಅಥವಾ ಮುಟ್ಟಿನ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟ ಇಳಿದಾಗ “ಮೆನ್‌ಸ್ಟ್ರುವಲ್ ಮೈಗ್ರೇನ್” ಬರುತ್ತದೆ. ಗರ್ಭಾವಸ್ಥೆ, ಮೆನೋಪಾಸ್ ಅಥವಾ ಗರ್ಭನಿರೋಧಕ ಮಾತ್ರೆಗಳ ಸೇವನೆ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದಲೂ ಇದು ಉಂಟಾಗಬಹುದು. ಇದನ್ನು ಚೆನ್ನಾಗಿ ನಿಯಂತ್ರಿಸಲು ದೇಹಕ್ಕೆ ಸ್ಥಿರತೆ ತರುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ನಿಯಮಿತವಾಗಿ ನಿದ್ರೆ ಮಾಡುವುದು, ಸಮತೋಲಿತ ಊಟ ಸೇವನೆ, ಅಗತ್ಯ ವ್ಯಾಯಾಮ, ಸಾಕಷ್ಟು ನೀರು ಸೇವನೆ ಮತ್ತು ಒತ್ತಡ ನಿರ್ವಹಣೆ ಮಾಡಬೇಕು.

2. ಒತ್ತಡವನ್ನು ನಿರ್ವಹಿಸಿ
ಮಹಿಳೆಯರು ಏಕಕಾಲದಲ್ಲಿ ಹಲವು ಪಾತ್ರಗಳನ್ನು ನಿಭಾಯಿಸುತ್ತಾರೆ. ವೃತ್ತಿ, ಮಕ್ಕಳು-ಕುಟುಂಬದ ಆರೈಕೆ, ಮನೆ ನಿರ್ವಹಣೆ ಹೀಗೆ ಎಲ್ಲವನ್ನೂ ಒಟ್ಟಿಗೆ ಸಂಭಾಳಿಸುವ ಕಾರಣದಿಂದ ಅವರಿಗೆ ನಿರಂತರ ಒತ್ತಡ ಉಂಟಾಗಬಹುದು. ಈ ಒತ್ತಡ ನರಮಂಡಲವನ್ನು ಅತಿಯಾಗಿ ಉತ್ತೇಜಿಸಿ ಅಡ್ರಿನಾಲಿನ್ ಮತ್ತು ಕಾರ್ಟಿಸಾಲ್ ಹಾರ್ಮೋನ್ ಹೆಚ್ಚಿಸಿ ಮೈಗ್ರೇನ್ ಜಾಸ್ತಿ ಮಾಡಬಹುದು, ಉಲ್ಬಣಿಸಬಹುದು. ಹಾಗಾಗಿ ಧ್ಯಾನ, ಯೋಗ ಅಥವಾ ತಾಯ್ ಚಯಂತಹ ಒತ್ತಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಿ. ಆ ಮೂಲಕ ಒತ್ತಡ ಮತ್ತು ಅದರ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಜೊತೆಗೆ ಒಂದು ಮೈಗ್ರೇನ್ ಡೈರಿ ಇಟ್ಟುಕೊಳ್ಳಿ. ಯಾವ ಸಮಯದಲ್ಲಿ ನೋವು ಬಂತು, ಯಾವ ಕಾರಣಗಳಿಂದ (ಒತ್ತಡ, ಆಹಾರ, ನಿದ್ರೆ) ಬಂತು ಮತ್ತು ಚಿಕಿತ್ಸೆ ಎಷ್ಟು ಕೆಲಸ ಮಾಡಿತು ಎಂಬುದನ್ನು ಆ ಡೈರಿಯಲ್ಲಿ ದಾಖಲಿಸಿ.

3. ದಿನಚರಿಯಲ್ಲಿ ಸ್ಥಿರತೆ ತನ್ನಿ
ಅನಿಯಮಿತ ನಿದ್ರೆ, ನೀರು ಕಡಿಮೆ ಕುಡಿಯುವುದು ಅಥವಾ ಊಟ ಬಿಟ್ಟುಬಿಡುವುದು ದೇಹದ ಸಮತೋಲನ ಕೆಡಿಸಿ ಮೈಗ್ರೇನ್ ಅನ್ನು ಆಹ್ವಾನಿಸುತ್ತದೆ. ಪ್ರತಿದಿನ ಒಂದೇ ಸಮಯಕ್ಕೆ ನಿದ್ದೆಯಿಂದ ಎಚ್ಚರಗೊಳ್ಳುವಂತೆ ನೋಡಿಕೊಳ್ಳಿ ಮತ್ತು ಒಂದೇ ಸಮಯಕ್ಕೆ ಮಲಗಿ. ಮಲಗುವ ಮುಂಚೆ ಮೊಬೈಲ್ ದೂರವಿರಲಿ. ಪುಸ್ತಕ ಓದಿ ಅಥವಾ ಮೃದು ಸಂಗೀತ ಕೇಳಿ. ನೀರಿನ ಬಾಟಲ್ ಯಾವಾಗಲೂ ಜೊತೆ ಇರಲಿ. ಒಂದೊಂದು ಸಿಪ್ ನೀರು ಕುಡಿಯುತ್ತಿರಿ. ಅಗತ್ಯವಿದ್ದರೆ ನಿಯಮಿತವಾಗಿ ನೀರು ಕುಡಿಯಲು ಅಲಾರಂ ಇಟ್ಟುಕೊಳ್ಳಿ.

4. ಕೆಫೀನ್ ಸೇವನೆಯನ್ನು ಗಮನಿಸಿ
ಕೆಫೀನ್ ಕೆಲವರಿಗೆ ನೋವು ಕಡಿಮೆ ಮಾಡುತ್ತದೆ, ಕೆಲವರಿಗೆ ಅದರಿಂದ ನೋವು ಜಾಸ್ತಿಯಾಗುತ್ತದೆ. ಹಾಗಾಗಿ ಕೆಫೀನ್ ಎರಡು ಅಲಗಿನ ಕತ್ತಿ ಇದ್ದಂತೆ. ಹಾಗಾಗಿ ಕೆಫೀನ್ ಗೆ ನಿಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಕಾಫಿ ಸೇವಿಸಿ. ಮಧ್ಯಾಹ್ನ ಅಥವಾ ಸಂಜೆ ಹೆಚ್ಚು ಕಾಫಿ/ ಟೀ ಕುಡಿಯಬೇಡಿ. ಅದರಿಂದ ನಿದ್ರೆ ಡಿಸ್ಟರ್ಬ್ ಆಗುತ್ತದೆ. ಕೆಫೀನ್ ನಿಮ್ಮ ಮೈಗ್ರೇನ್‌ಗೆ ಕಾರಣವೇ ಎಂಬ ಅನುಮಾನವಿದ್ದರೆ ಅದರ ಸೇವನೆ ಮತ್ತು ಅದರಿಂದಾಗುವ ಲಕ್ಷಣಗಳನ್ನು ಬರೆದಿಟ್ಟುಕೊಳ್ಳಿ. ಕೆಫೀನ್ ಗೆ ಪೆಪರ್‌ಮಿಂಟ್ ಅಥವಾ ಕ್ಯಾಮೋಮೈಲ್ ಹರ್ಬಲ್ ಟೀ ಒಳ್ಳೆಯ ಪರ್ಯಾಯವಾಗಿದೆ.

5. ಮೈಗ್ರೇನ್‌ ಸ್ನೇಹಿ ಪೌಷ್ಟಿಕ ಆಹಾರ
ಆಹಾರ ಮೈಗ್ರೇನ್ ನಿಯಂತ್ರಣದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಸಂಸ್ಕರಿತ ಮಾಂಸ, ಹಳೆಯ ಚೀಸ್, ಕೃತಕ ಸಿಹಿಕಾರಕಗಳು ಕೆಲವು ಮಹಿಳೆಯರಲ್ಲಿ ಮೈಗ್ರೇನ್ ನೋವು ಉಂಟುಮಾಡಬಹುದು. ಅದಲ್ಲದೆ ಅಸಮರ್ಪಕ ವೇಳೆಯಲ್ಲಿ ಊಟ ಮಾಡುವುದೂ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. 3-4 ಗಂಟೆಗೊಮ್ಮೆ ಸಣ್ಣ ಸಮತೋಲಿತ ಊಟ ಸೇವನೆ ಮಾಡಿ. ಊಟದಲ್ಲಿ ತಾಜಾ ಹಣ್ಣು-ತರಕಾರಿ, ಧಾನ್ಯ, ಒಳ್ಳೆಯ ಪ್ರೋಟೀನ್ ಅನ್ನು ಸೇರಿಸಿ. ಸ್ನ್ಯಾಕ್ಸ್‌ ತಿನ್ನಬೇಕೆನಿಸಿದರೆ ಹಣ್ಣಿನ ಬೀಜಗಳು, ಗೆಣಸು ಇತ್ಯಾದಿ ಇಟ್ಟುಕೊಳ್ಳಿ. ಫುಡ್ ಡೈರಿ ಇಟ್ಟುಕೊಂಡು ಯಾವ ಆಹಾರದಿಂದ ಮೈಗ್ರೇನ್ ಟ್ರಿಗರ್ ಆಗುತ್ತದೆ ಎಂಬುದನ್ನು ಗಮನಿಸಿ.

6. ರಿಸ್ಕ್ ಆಗುವ ದಿನಗಳಿಗೆ ಸಿದ್ಧರಾಗಿರಿ
ಮೈಗ್ರೇನ್ ಯಾವಾಗ ಬರುತ್ತದೆ ಎಂದೇ ತಿಳಿಯುವುದಿಲ್ಲ. ಹಾಗಾಗಿ ಔಷಧ ಯಾವಾಗಲೂ ಜೊತೆ ಇರಲಿ. ನೋವು ಶುರುವಾಗುತ್ತಿದ್ದಂತೆ ತೆಗೆದುಕೊಳ್ಳಿ. ನೀರಿನ ಬಾಟಲ್ ಯಾವಾಗಲೂ ಜೊತೆ ಇರಲಿ. ಡಾರ್ಕ್ ಸನ್‌ ಗ್ಲಾಸ್ ಮತ್ತು ಇಯರ್‌ ಪ್ಲಗ್ ಜೊತೆ ಇಟ್ಟುಕೊಳ್ಳಿ. ಅದರಿಂದ ಬೆಳಕು ಮತ್ತು ಶಬ್ದದ ಕಾರಣಕ್ಕೆ ಮೈಗ್ರೇನ್ ಉಂಟಾಗದು. ಮೈಗ್ರೇನ್ ನೋವು ಬಂದಾಗ ತಂಪಾದ ಒದ್ದೆ ಬಟ್ಟೆಯನ್ನು ಹಣೆಗೆ ಅಥವಾ ಕತ್ತಿನ ಹಿಂಭಾಗಕ್ಕೆ ಇಟ್ಟುಕೊಳ್ಳಿ ಅಥವಾ ಲ್ಯಾವೆಂಡರ್/ ಪೆಪರ್‌ಮಿಂಟ್ ಎಸೆನ್ಷಿಯಲ್ ಆಯಿಲ್ ಅನ್ನು ನಿಮ್ಮ ಮಣಿಕಟ್ಟಿಗೆ ಸ್ವಲ್ಪ ಉಜ್ಜಿಕೊಳ್ಳಿ. ಅದರಿಂದ ಒಳ್ಳೆಯ ರಿಲೀಫ್ ಸಿಗುತ್ತದೆ.

7. ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ಪದೇ ಪದೇ ಮೈಗ್ರೇನ್ ಬರುತ್ತಿದ್ದರೆ, ನೋವು ತೀವ್ರವಾಗಿದ್ದರೆ ಅಥವಾ ದೈನಂದಿನ ಜೀವನಕ್ಕೆ ಡಿಸ್ಟರ್ಬ್ ಆಗುತ್ತಿದ್ದರೆ ವೈದ್ಯರನ್ನು ಅಥವಾ ನ್ಯೂರಾಲಜಿಸ್ಟ್ ಅನ್ನು ಭೇಟಿ ಮಾಡಿ. ದೃಷ್ಟಿ ಸಮಸ್ಯೆ ಅಥವಾ ಜಡ್ಡು ಗಟ್ಟುವ ಸಮಸ್ಯೆ ಇದ್ದರೆ ತುರ್ತು ಚಿಕಿತ್ಸೆ ಬೇಕು. ಇಂದು ಮೈಗ್ರೇನ್‌ಗೆ ಆಧುನಿಕ ಚಿಕಿತ್ಸೆಗಳು ಲಭ್ಯವಿದೆ. ಸಿಪಿಜಿಆರ್ (ಕ್ಯಾಲ್ಸಿಟಾನಿನ್ ಜೀನ್ ರಿಲೇಟೆಡ್ ಪೆಪ್ಟೈಡ್) ರಿಸೆಪ್ಟರ್ ಆಂಟಾಗನಿಸ್ಟ್ ಥೆರಪಿಗಳು, ನ್ಯೂರೋಮಾಡ್ಯುಲೇಷನ್ ಇತ್ಯಾದಿ ತುಂಬಾ ಒಳ್ಳೆಯ ಆಯ್ಕೆಗಳು ದೊರೆಯುತ್ತವೆ. ಹಾಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿದರೆ, ಅವರು ಲಭ್ಯವಿರುವ ಇತರ ಔಷಧಗಳು, ಜೀವನಶೈಲಿ ಬದಲಾವಣೆಗಳು ಅಥವಾ ನಾನ್-ಇನ್ವೇಸಿವ್ ಸಾಧನಗಳನ್ನು ಸಂಯೋಜಿಸಿ ಸಂಪೂರ್ಣ ಚಿಕಿತ್ಸಾ ಯೋಜನೆ ರೂಪಿಸುತ್ತಾರೆ.

ಮೈಗ್ರೇನ್ ಬಹಳಷ್ಟು ಮಹಿಳೆಯರನ್ನು ಕಾಡುವ ಒಂದು ಜಟಿಲ ಸಮಸ್ಯೆ. ಆದರೆ ಅದು ನಿಮ್ಮ ಜೀವನವನ್ನು ನಿಯಂತ್ರಿಸಲು ನೀವು ಬಿಡಬಾರದು. ಹಾಗಾಗಿ ಮೈಗ್ರೇನ್ ಉಂಟು ಮಾಡುವ ಕಾರಣಗಳನ್ನು ನೀವೇ ಗುರುತಿಸಿ, ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ, ಅಗತ್ಯವಿದ್ದಾಗ ವೃತ್ತಿಪರರ ಸಹಾಯ ಪಡೆಯಿರಿ. ಈ ಮೂಲಕ ನೀವು ಮೈಗ್ರೇನ್‌ ಅನ್ನು ಕಂಟ್ರೋಲ್ ಗೆ ತೆಗೆದುಕೊಂಡು ಸಂತೋಷಕರ ಜೀವನ ನಡೆಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಕೇವಲ 21 ದಿನಗಳಲ್ಲಿ Fat to Fit ಆಗಿದ್ದೇಗೆ ನಟ ಮಾಧವನ್…Weight Lose ಸೀಕ್ರೆಟ್ ಇಲ್ಲಿದೆ