ಸಮರ್ಥ್ ಎದುರು ಸಾವು ಬಾಗಿಲು ತೆರೆದು ನಿಂತಿತ್ತು. ಆದ್ರೆ, ಸಾವಿಗೆ ಹೆದರದೇ, ಬೆನ್ನು ತೋರದೇ, ನಿಂತಿದ್ದ. ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೂ, ಆ ಬಾಲಕನಿಗೆ ಇದ್ದದ್ದು ಹೆತ್ತವರ ಚಿಂತೆ, ಹೆತ್ತೊಡಲಿಗೆ ಬೆಂಕಿ ಇಡಬಾರದೆಂಬ ಪ್ರೀತಿ. ಆದರೆ, ಕರುಳ ಕುಡಿ ಹೆತ್ತವರ ಕಣ್ಣೆರುದೇ ಉಸಿರು ಚೆಲ್ಲುವುದಿದೆಯಲ್ಲ, ಅದು ಶಾಪ ಅಲ್ಲದೇ ಮತ್ತೇನು..?
ಶೋಭಾ ಎಂ.ಸಿ, ಔಟ್ ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್
ಆ ಬಾಲಕನ ವಯಸ್ಸು ಕೇವಲ ಆರೇ ಆರು. ಆಗಲೇ ಸಾವಿನ ಮನೆಯ ಬಾಗಿಲಲ್ಲಿ ಬಂದು ನಿಂತು ಬಿಟ್ಟಿದ್ದಾನೆ. ಇಂದೋ, ನಾಳೆಯೋ ಯಮಪಾಶ ಬಿಗಿಯುವುದು ಖಚಿತ ಅನ್ನೋದು ಗೊತ್ತಾಗುತ್ತಿದ್ದಂತೆ, ಆತನ ಹೆತ್ತವರು ಕಂಗಾಲಾಗಿ ಬಿಟ್ಟಿದ್ದಾರೆ. ಕಣ್ಣೀರು ಹಾಕದ ದಿನವಿಲ್ಲ, ಪ್ರಾರ್ಥಿಸಿದ ದೇವರಿಲ್ಲ.
ಹೈದರಾಬಾದ್ ದಂಪತಿಗೆ ಒಬ್ಬನೇ ಮುದ್ದಿನ ಮಗ ಸಮರ್ಥ್ (ಹೆಸರು ಬದಲಿಸಲಾಗಿದೆ) ಹೆತ್ತವರ ಪಾಲಿಗೆ ಅವನೇ ಪ್ರಪಂಚ. ಅವನ ಆಟ-ಪಾಟ, ತುಂಟಾಟ ನೋಡುತ್ತಾ ಕಾಲ ಕಳೆಯುತ್ತಿದ್ದ ದಂಪತಿಗೆ, ಭವಿಷ್ಯದ ಅರಿವೇ ಇರಲಿಲ್ಲ. ಸುಂದರ ಬದುಕಲ್ಲಿ ಬಿರುಗಾಳಿ ಎದ್ದೇ ಬಿಟ್ಟಿತು. ಅದು, ಅದೊಂದು ದಿನ, ಇದ್ದಕ್ಕಿದ್ದಂತೆ ಸಮರ್ಥ್ ಪ್ರಜ್ಞಾಹೀನನಾಗಿಬಿಟ್ಟ. ಗಾಬರಿಯಾದ ಪೋಷಕರು, ಆಸ್ಪತ್ರೆಯತ್ತ ಹೊತ್ತೊಯ್ದರು. ಎಲ್ಲ ರೀತಿಯ ಟೆಸ್ಟ್ಗಳ ನಂತರ ವೈದ್ಯರು ಹೇಳಿದ್ದು, ಸಮರ್ಥ್ಗೆ ಬ್ರೈನ್ ಟ್ಯೂಮರ್ (Glioblastoma multiforme on the left side of his brain) ಅದೂ ಕೊನೆಯ ಹಂತದಲ್ಲಿದೆ.
ಸಮರ್ಥ್ ಹೆತ್ತವರ ಹೃದಯ ಒಡೆದು ಹೋಗುವಂಥ ಸ್ಥಿತಿ, ಕನಸು ಛಿದ್ರ, ಛಿದ್ರವಾಗಿಬಿಟ್ಟಿತು. ದಂಪತಿ ಕುಸಿದುಬಿಟ್ಟರು. ಕಣ್ಣೀರು ಧಾರಾಕಾರ. ಮಗನನ್ನು ಬದುಕಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ದಂಪತಿ, ಆಸ್ಪತ್ರೆ ಅಲೆದರು. ದಿನಗಳು ಉರುಳತೊಡಗಿದ್ದವು. ಅಷ್ಟರಲ್ಲಿ ಸಮರ್ಥ್ಗೆ ಶಸ್ತ್ರಚಿಕಿತ್ಸೆ ಆಗಿ, ಕಿಮೋಥೆರಪಿಯೂ ನಡೆದಿತ್ತು. ಬ್ರೈನ್ ಕ್ಯಾನ್ಸರ್ ಪರಿಣಾಮ, ಸಮರ್ಥನ ಬಲಗೈ ಮತ್ತು ಬಲಗಾಲು ಸ್ವಾಧೀನತಪ್ಪಿತ್ತು. ವ್ಹೀಲ್ಚೇರ್ ಆಶ್ರಯಿಯಾಗಿದ್ದ.
ದಿಗ್ಗಜ ಟೆನಿಸ್ ಆಟಗಾರ್ತಿ ಮಾರ್ಟಿನಾ ನರ್ವಾಟಿಲೋವಾಗೆ ಕ್ಯಾನ್ಸರ್!
ಜನವರಿ 5 ರಂದು ಅಪೊಲೋ ಆಸ್ಪತ್ರೆಯ ನ್ಯೂರೋ ವಿಭಾಗಕ್ಕೆ ಬಂದ ದಂಪತಿ, ಡಾ. ಸುಧೀರ್ ಕುಮಾರ್ ಬಳಿ, ಸಮರ್ಥ್ ಚಿಕಿತ್ಸೆ ಬಗ್ಗೆ ಸಲಹೆ ಪಡೆಯಲು ಬಂದಿದ್ದರು. ಮಗನನ್ನು ಹೊರಗಿಟ್ಟು, ಡಾ. ಸುಧೀರ್ ಕುಮಾರ್ ಬಳಿ ಬಂದ ದಂಪತಿ, ತಮ್ಮ ಮಗನಿಗೆ ಕ್ಯಾನ್ಸರ್ 4ನೇ ಹಂತದಲ್ಲಿದೆ, ಅವನಿಗೆ ಇದಾವುದೂ ಗೊತ್ತಿಲ್ಲ. ಅವರ ಟ್ರೀಟ್ಮೆಂಟ್ ಹಿಸ್ಟರಿ ನೋಡಿ, ಮುಂದಿನ ಚಿಕಿತ್ಸೆ ಬಗ್ಗೆ ಸಲಹೆ ಕೊಡಿ. ಆದರೆ, ಕ್ಯಾನ್ಸರ್ ವಿಷಯ ಸಮರ್ಥ್ಗೆ ಗೊತ್ತಾಗಬಾರದು’ ಅಂತ ಮನವಿ ಮಾಡಿದ್ರು. ಸರಿ ಎಂದು ತಲೆ ಅಲ್ಲಾಡಿಸಿದ ಡಾ. ಸುಧೀರ್, ಸಮರ್ಥ್ನನ್ನು ಕರೆತರುವಂತೆ ಸೂಚಿಸಿದ್ರು.
ವ್ಹೀಲ್ಚೇರ್ನಲ್ಲಿ ಬಂದ ಸಮರ್ಥ್ನನ್ನು ಪರೀಕ್ಷಿಸಿ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ರು ಡಾ. ಸುಧೀರ್. ಎಲ್ಲ ಮುಗಿಸಿ ಇನ್ನೇನು ದಂಪತಿ ಡಾಕ್ಟರ್ ಕೊಠಡಿಯಿಂದ ಹೊರಹೋಗಲು ಸಿದ್ಧರಾಗುತ್ತಿದ್ದಂತೆ, ಅಪ್ಪ, ನಾನು ಡಾಕ್ಟರ್ ಜತೆ ಮಾತನಾಡಬೇಕು’ ಎಂದು ಬಿಟ್ಟ. ಸರಿ ಎಂದು ಮಗನನ್ನು ಅಲ್ಲೇ ಬಿಟ್ಟು ದಂಪತಿ ಹೊರನಡೆದರು.
ಡಾ.ಸುಧೀರ್ ಕುಮಾರ್ ಮುಖವನ್ನೇ ನೇರವಾಗಿ ನೋಡುತ್ತಿದ್ದ ಸಮರ್ಥ್ , ಒಂಚೂರು ಅಳುಕಿಲ್ಲದೇ, ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ‘ನಾನು ಬದುಕೋದು ಜಸ್ಟ್ 6 ತಿಂಗಳು ಮಾತ್ರ. ನನಗೆ ಕ್ಯಾನ್ಸರ್ ಕೊನೆ ಹಂತದಲ್ಲಿದೆ ಅಂತ ನಮ್ಮಪ್ಪ, ಅಮ್ಮನಿಗೆ ಹೇಳಬೇಡಿ ಪ್ಲೀಸ್. ನನಗೇನಾಗಿದೆ ಅಂತ ಐಪ್ಯಾಡ್ನಲ್ಲಿ ಓದಿಕೊಂಡಿದ್ದೀನಿ. ನಾನು ಹೆಚ್ಚು ದಿನ ಬದುಕೋದಿಲ್ಲ ಅಂತ ಗೊತ್ತಿದೆ. ಆದ್ರೆ, ನಮ್ಮಪ್ಪ, ಅಮ್ಮನಿಗೆ ಅದು ಗೊತ್ತಿಲ್ಲ, ಅವರು ನನ್ನನ್ನು ತುಂಬಾ ಪ್ರೀತಿಸ್ತಾರೆ. ನಾನೆಂದ್ರೆ ಪ್ರಾಣ, ಅವರಿಗೆ ಹೇಳಬೇಡಿ ಪ್ಲೀಸ್’ ಎಂದಾಗ ಡಾ. ಸುಧೀರ್ ಕುಮಾರ್ ದಿಂಗ್ಮೂಢರಾಗಿಬಿಟ್ರು. ಕ್ಷಣಹೊತ್ತು ಕತ್ತಲು ಕವಿದ ಸ್ಥಿತಿ.
ಸ್ತನದ ಕ್ಯಾನ್ಸರ್ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!
ವ್ಹೀಲ್ಚೇರ್ನಲ್ಲಿ ಕುಳಿತಿದ್ದ ಬಾಲಕನ ಮುಖದಲ್ಲಿ ಹುಂ, ಯಾವುದೇ ಬದಲಾವಣೆ ಇಲ್ಲ. ಮುಗುಳ್ನಗೆ ಮಾಸಿರಲಿಲ್ಲ. ಆತನ ಕಣ್ಣಲ್ಲಿ ಕಾಂತಿ, ಮುಖದಲ್ಲೊಂದು ದಿವ್ಯಕಳೆ. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡ ಡಾ. ಸುಧೀರ್, ‘ನಿಮ್ಮ ತಂದೆ-ತಾಯಿಗೆ ಏನೂ ಹೇಳಲ್ಲ, ಪ್ರಾಮಿಸ್ ’ ಎಂದು ಬಿಟ್ಟರು. ಆದ್ರೆ, ಆ ಶಾಕ್ ತಡೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಡಾ. ಸುಧೀರ್. ಸಮರ್ಥ್ ಪೋಷಕರನ್ನು ಕರೆದು, ಮಗನಿಗೆ ಕ್ಯಾನ್ಸರ್ ವಿಷಯ ತಿಳಿದಿದೆ ಅನ್ನೋ ವಿಷಯ ಹೇಳಿಬಿಟ್ಟರು. ಇಂಥ ಸೂಕ್ಷ್ಮ ವಿಷಯವನ್ನು ಹೆತ್ತವರಿಂದ ಮುಚ್ಚಿಡಬಾರದೆಂಬುದು ಡಾ. ಸುಧೀರ್ ನಿಲುವು.
ಅಂದು ಹೋದ ಸಮರ್ಥ್ ಪೋಷಕರು, 9 ತಿಂಗಳ ಬಳಿಕ ಡಾ. ಸುಧೀರ್ ಭೇಟಿಗೆ ಬಂದರು. ತಾವು ಸಮರ್ಥ್ ಪೋಷಕರು ಎಂದು ನೆನಪಿಸಿದ್ರು. ಸಮರ್ಥ್ ತಿಂಗಳ ಹಿಂದೆ ಕೊನೆಯುಸಿರೆಳೆದ ವಿಷಯ ಹೇಳುತ್ತಿದ್ದಂತೆ ಡಾ. ಸುಧೀರ್ ಗೆ ಕರುಳು ಚುರ್ ಎಂದು ಬಿಟ್ಟಿತು. ‘ನಿಮ್ಮ ಭೇಟಿ ಬಳಿಕ, ಸಮರ್ಥ್ಗೆ ಕ್ಯಾನ್ಸರ್ ಇರುವುದು ಗೊತ್ತಿದೆ ಅನ್ನೋ ವಿಚಾರ ತಿಳಿದು, ನಾವು ಮೂವರು ನಿರಾಳರಾದೆವು. ಸಮರ್ಥ್ ಜತೆ ಕಾಲ ಕಳೆದೆವು. ಅವನ ಒಂದೊಂದೇ ಆಸೆಗಳನ್ನು ಈಡೇರಿಸಿದೆವು. ಈಗ್ಗೆ ತಿಂಗಳ ಹಿಂದೆ ಸಮರ್ಥ್ ನಮ್ಮನ್ನು ಬಿಟ್ಟು ಹೊರಟೇ ಹೋದ. ಆದ್ರೆ, 8 ತಿಂಗಳು ಆತನೊಂದಿಗೆ ಕಳೆದ ಸಮಯ ಅಮೂಲ್ಯ. ಇದಕ್ಕೆ ಕಾರಣರಾದ ನಿಮಗೆ ಥ್ಯಾಂಕ್ಸ್ ಹೇಳೋಕೆ ಬಂದೆವು’ ಎಂದು ಬಿಕ್ಕಳಿಸುತ್ತಲ್ಲೇ ಎದ್ದು ಹೋದರು. ಡಾ. ಸುಧೀರ್ ಮಾತಿಲ್ಲದೇ ಕುಳಿತಿದ್ದರು.
ಸಮರ್ಥ್ ಎದುರು ಸಾವು ಬಾಗಿಲು ತೆರೆದು ನಿಂತಿತ್ತು. ಆದ್ರೆ, ಸಾವಿಗೆ ಹೆದರದೇ, ಬೆನ್ನು ತೋರದೇ, ನಿಂತಿದ್ದ ಬಾಲಕ. ಆದರೆ, ತನ್ನ ಸಾವು ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೂ, ಆ ಬಾಲಕನಿಗೆ ಇದ್ದದ್ದು ಹೆತ್ತವರ ಚಿಂತೆ, ಹೆತ್ತೊಡಲಿಗೆ ಬೆಂಕಿ ಇಡಬಾರದೆಂಬ ಪ್ರೀತಿ.
ಆದರೆ, ಕರುಳ ಕುಡಿ ಹೆತ್ತವರ ಕಣ್ಣೆರುದೇ ಉಸಿರು ಚೆಲ್ಲುವುದಿದೆಯಲ್ಲ, ಅದು ಶಾಪ ಅಲ್ಲದೇ ಮತ್ತೇನು..?