Health Benefits: ಕಸಕ್ಕೆ ಹಾಕೋ ಈರುಳ್ಳಿ – ಬೆಳ್ಳುಳ್ಳಿ ಸಿಪ್ಪೆಯಲ್ಲಿದೆ ಔಷಧಿ ಗುಣ

By Suvarna NewsFirst Published Jul 11, 2022, 5:05 PM IST
Highlights

ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯದೆ ನಾವು ಬಳಸೋದಿಲ್ಲ. ಇವೆರಡರ ಸಿಪ್ಪೆ ಕಸಕ್ಕೆ ಹೋಗೋದು ಸಾಮಾನ್ಯ. ಆದ್ರೆ ಈ ಸಿಪ್ಪೆಯಲ್ಲಿ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಅಂದ್ರೆ ನೀವು ನಂಬ್ಲೇಬೇಕು. ಈರುಳ್ಳಿ – ಬೆಳ್ಳುಳ್ಳಿ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಇದನ್ನು ಓದಿ. 
 

ಮನೆಗೆ ತರಕಾರಿ ತರುವ ನಾವು ಅದ್ರ ಸಿಪ್ಪೆ ತೆಗೆದು, ಹಿಂದೆ ಮುಂದೆ ಕತ್ತರಿಸಿ ಕಸಕ್ಕೆ ಎಸೆಯುತ್ತೇವೆ. ನಂತ್ರ ಒಳಗಿನ ಭಾಗವನ್ನು ಮಾತ್ರ ಅಡುಗೆಗೆ ಬಳಸಿಕೊಳ್ತೇವೆ. ನೀವು ಬಹುಶಃ ರೂಟ್‌ ಟು ಸ್ಟೆಮ್‌ ಕುಕಿಂಗ್‌ ಬಗ್ಗೆ ಕೇಳಿರಬಹುದು. ಬೇರಿನಿಂದ ಹಿಡಿದು ಕಾಂಡದವರೆಗೆ ಒಂದೂ ಬಿಡದೆ ಅದನ್ನು ಅಡುಗೆಗೆ ಬಳಸುವ ವಿಧಾನ ಇದು. ನಮ್ಮ ಹಿರಿಯರು ಈ ರೀತಿ ಅಡುಗೆ ಮಾಡ್ತಿದ್ದರು. ಅವರು ತರಕಾರಿಯ ಯಾವುದೇ ಭಾಗವನ್ನು ಎಸೆಯುತ್ತಿರಲಿಲ್ಲ. ಆದ್ರೆ ನಾವು ಎಲ್ಲವನ್ನೂ ಎಸೆದು ಅಲ್ಪಸ್ವಲ್ಪದರಲ್ಲಿ ಅಡುಗೆ ಮಾಡ್ತೇವೆ. ನಾವು ಎಸೆಯುವ ತರಕಾರಿ ಸಿಪ್ಪೆಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸಿಪ್ಪೆ ಮೊದಲ ಸ್ಥಾನದಲ್ಲಿದೆ. ಉಳಿದ ತರಕಾರಿ ಸಿಪ್ಪೆಗಳನ್ನು ಬೇರೆ ಅಡುಗೆಗೆ ಕೆಲವರು ಬಳಕೆ ಮಾಡಿಕೊಳ್ತಾರೆ. ಆದ್ರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸಿಪ್ಪೆಯನ್ನು ಮಾತ್ರ ಮುಲಾಜಿಲ್ಲದೆ ಕಸಕ್ಕೆ ಹಾಕ್ತೇವೆ. ತರಕಾರಿಗಳ ಎಲ್ಲಾ ಭಾಗಗಳಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳಲ್ಲಿಯೂ ಸಹ  ವಿಟಮಿನ್ ಎ, ಸಿ, ಇ ಮತ್ತು ಇತರ ಹಲವು ರೀತಿಯ ಉತ್ಕರ್ಷಣ ನಿರೋಧಕ ಗುಣಗಳಿವೆ. ಫ್ಲೇವನಾಯ್ಡ್, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಮುಖ್ಯವಾಗಿ ಈರುಳ್ಳಿ ಸಿಪ್ಪೆಯಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ ಸಿಪ್ಪೆಯಿಂದ ಏನೆಲ್ಲ ಪ್ರಯೋಜನವಿದೆ ಹಾಗೆ ಅದನ್ನು ಹೇಗೆ ಬಳಕೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಈರುಳ್ಳಿ ಸಿಪ್ಪೆಯ ಪ್ರಯೋಜನ : 

ಸ್ನಾಯು ನೋವಿಗೆ ಪರಿಹಾರ : ಈರುಳ್ಳಿ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸ್ನಾಯು ಸೆಳೆತ ಅಥವಾ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ಸಿಪ್ಪೆಯನ್ನು 10-20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬೇಕು. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಮಲಗುವ ಮೊದಲು ಚಹಾದಂತೆ ಕುಡಿಯಬೇಕು. ನಿಯಮಿತವಾಗಿ ಇದನ್ನು ಮಾಡಿದ್ರೆ ಸ್ನಾಯು ನೋವಿನಿಂದ ಪರಿಹಾರ ಕಾಣಬಹುದು.

ಇದನ್ನೂ ಓದಿ: WOMEN CARE: ಕ್ಯಾನ್ಸರ್ ದೂರ ಮಾಡುತ್ತೆ ವ್ಯಾಯಾಮ

ತುರಿಕೆಗೆ ಪರಿಹಾರ : ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯಲ್ಲಿ ಶಿಲೀಂಧ್ರನಾಶಕ ಗುಣಗಳಿವೆ. ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ತುರಿಕೆಯನ್ನು ನಿವಾರಿಸುತ್ತದೆ.  ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಅದನ್ನು ತುರಿಕೆ ಕಾಣಿಸಿಕೊಳ್ಳುವ ಜಾಗಕ್ಕೆ ಇಡಬೇಕು.  

ನಿದ್ರಾಹೀನತೆ ಸಮಸ್ಯೆಗೆ ಪ್ರಯೋಜನಕಾರಿ : ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳು ನಿದ್ರಾಹೀನತೆ ಹೋಗಲಾಡಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಅಥವಾ ಪದೇ ಪದೇ ಎಚ್ಚರವಾಗ್ತಿದೆ ಎನ್ನುವವರು ಸಿಪ್ಪೆಗಳಿಂದ ತಯಾರಿಸಿದ ಚಹಾ ಸೇವನೆ ಮಾಡ್ಬೇಕು. ಇದ್ರಿಂದ ನಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ. ರಾತ್ರಿ ಸುಖ ನಿದ್ರೆ ಮಾಡಲು ಈರುಳ್ಳಿ – ಬೆಳ್ಳುಳ್ಳಿ ಸಿಪ್ಪೆ ನೆರವಾಗುತ್ತದೆ. 

ಇದನ್ನೂ ಓದಿ: ಆಗಾಗ ಕೈ ತೊಳೆಯೋ ಅಭ್ಯಾಸದಿಂದ ಚರ್ಮರೋಗದ ಸಾಧ್ಯತೆ ಹೆಚ್ಚು !

ಕಣ್ಣಿನ ದೃಷ್ಟಿಗೆ ಒಳ್ಳೆಯದು : ವಿಟಮಿನ್ ಸಿ ಮತ್ತು ಎ ಈರುಳ್ಳಿ ಸಿಪ್ಪೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಎರಡೂ ಜೀವಸತ್ವಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ. ಕಣ್ಣುಗಳು ಆರೋಗ್ಯವಾಗಿರಲು ನೀವು ಅದರಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು.

ಈರುಳ್ಳಿ ಸಿಪ್ಪೆಯಿಂದ ಟೀ ತಯಾರಿಸೋದು ಹೇಗೆ? : 

ಟೀ ತಯಾರಿಸಲು ಬೇಕಾಗುವ ವಸ್ತುಗಳು : 
3 ರಿಂದ 4 ಮಧ್ಯಮ ಗಾತ್ರದ ಈರುಳ್ಳಿ ಸಿಪ್ಪೆಗಳು
2 ಕಪ್ ನೀರು
1 ಟೀ ಚಮಚ ಜೇನುತುಪ್ಪ

ಟೀ ತಯಾರಿಸೋದು ಹೇಗೆ ? : ಈರುಳ್ಳಿ ಸಿಪ್ಪೆ ಟೀ ತಯಾರಿಸಲು  ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಿ. ನಂತ್ರ ಅದನ್ನು 2 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರಿನ ಬಣ್ಣ ಬದಲಾಗುವವರೆಗೆ ಅದು ಕುದಿಯಬೇಕು. ನಂತರ ಗ್ಯಾಸ್ ಬಂದ್ ಮಾಡಿ. ನೀರನ್ನು ಫಿಲ್ಟರ್ ಮಾಡಿ. ರುಚಿಗೆ ತಕ್ಕಷ್ಟು ಜೇನುತುಪ್ಪವನ್ನು ಬೆರೆಸಿದ  ಕುಡಿಯಿರಿ.

click me!