ಸಿಟಿಸ್ಕ್ಯಾನ್‌ ವೇಳೆ ಬಳಸುವ ಕಂಟ್ರಾಸ್ಟ್ ಏಜೆಂಟ್‌ ರಿಯಾಕ್ಷನ್‌ನಿಂದ 21ರ ಯುವತಿ ಹಠಾತ್ ಸಾವು

Published : Aug 25, 2025, 07:02 PM IST
CT Scan

ಸಾರಾಂಶ

ಸಿಟಿ ಸ್ಕ್ಯಾನ್ ವೇಳೆ ಅಲರ್ಜಿಕ್ ರಿಯಾಕ್ಷನ್‌ನಿಂದ 21 ವರ್ಷದ ಯುವತಿ ಸಾವನ್ನಪ್ಪಿದ್ದಾರೆ. ಕಾಂಟ್ರಾಸ್ಟ್ ಏಜೆಂಟ್‌ನಿಂದ ಉಂಟಾದ ತೀವ್ರ ಸೋಂಕೇ ಸಾವಿಗೆ ಕಾರಣ ಎನ್ನಲಾಗಿದೆ. ಈ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

ಸಿಟಿಸ್ಕ್ಯಾನ್ ವೇಳೆ ಹಠಾತ್ ಸಂಭವಿಸಿದ ಅಲರ್ಜಿಕ್ ರಿಯಾಕ್ಷನ್‌ನಿಂದಾಗಿ 21 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಲೆಟಿಸಿಯಾ ಪಾಲ್ ಸಾವಿಗೀಡಾದ ಯುವತಿ. ಬ್ರೆಜಿಲ್‌ನ ರಿಯೋ ಡು ಸುಲ್‌ನಲ್ಲಿ ಈ ಘಟನೆ ನಡೆದಿದೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಆಗಸ್ಟ್ 20ರಂದು ಲೆಟಿಸಿಯಾ ಪಾಲ್ ಎಂಬ ಯುವತಿ ಸಿಟಿ ಸ್ಕ್ಯಾನ್ ವೇಳೆ ಅನಾಫಿಲ್ಯಾಕ್ಟಿಕ್ ಶಾಕ್‌ಗೆ ಒಳಗಾಗಿದ್ದಾರೆ. ರಿಯೋ ಡುಸುಲ್‌ನಲ್ಲಿರುವ ಅಲ್ಟೊ ವಾಲೆ ಪ್ರಾದೇಶಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಿಟಿಸ್ಕ್ಯಾನ್ ವೇಳೆ ಬಳಸುವ ಕಂಟ್ರಾಸ್ಟ್ ಏಜೆಂಟ್‌ನಿಂದ ಉಂಟಾದ ತೀವ್ರ ಸೋಂಕಿನಿಂದಾಗಿ ಅವರು ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ.

ಕಾಂಟ್ರಾಸ್ಟ್ ಏಜೆಂಟ್‌ಗಳು ಎಂದರೇನು?

ಕಾಂಟ್ರಾಸ್ಟ್ ಏಜೆಂಟ್‌ಗಳು ಎಂದರೆ ಸ್ಕ್ಯಾನಿಂಗ್ ವೇಳೆ ದೇಹದ ರಚನೆಗಳು, ರಕ್ತನಾಳಗಳು ಅಥವಾ ಅಂಗಾಂಶಗಳು ಸರಿಯಾಗಿ ಕಾಣುವುದಕ್ಕೆ ಇಮೇಜಿಂಗ್ ಉಪಕರಣದೊಂದಿಗೆ ಸಂವಹನ ನಡೆಸುವ ವಿಧಾನವನ್ನು ತಾತ್ಕಾಲಿಕವಾಗಿ ಬದಲಾಯಿಸುವುದಕ್ಕೆ ಬಳಸುವ ಲಿಕ್ವಿಡ್ ರೀತಿ ಪದಾರ್ಥಗಳಾಗಿವೆ. ಸರಳವಾಗಿ ಹೇಳಬೇಕಾದರೆ ಸ್ಕ್ಯಾನಿಂಗ್ ವೇಳೆ ನಿಮ್ಮ ದೇಹದ ಭಾಗದ ಮೇಲೆ ಹಚ್ಚುವಂತಹ ಒಂದು ರಸಾಯನಿಕ ಪದಾರ್ಥವಾಗಿದೆ.

ಕಿಡ್ನಿ ಸ್ಟೋನ್‌ ಇದ್ದ ಕಾರಣಕ್ಕೆ ಆಗಾಗ ತಪಾಸಣೆಗೊಳಗಾಗುತ್ತಿದ್ದ ಲೆಟಿಸಿಯಾ ಪಾಲ್

ಲೆಟಿಸಿಯಾ ಪಾಲ್ ಅವರಿಗೆ ಈ ಹಿಂದೆ ಮೂತ್ರಕೋಶದ ಕಲ್ಲಿನ ಸಮಸ್ಯೆ ಇದ್ದಿದ್ದರಿಂದ ಅವರು ಆಗಾಗ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದರು. ಅದೇ ರೀತಿ ಈ ಬಾರಿಯೂ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದಾಗ ಅವರು ಅನಾಫಿಲ್ಯಾಕ್ಟಿಕ್ ಶಾಕ್‌ಗೆ ಒಳಗಾಗಿದ್ದಾರೆ. ಆ ಕ್ಷಣದಲ್ಲಿ ಜೀವರಕ್ಷಕಗಳ ಆಳವಡಿಕೆಯನ್ನು ಹೊಂದಿದ್ದರು ಅವರು ಸಾವನ್ನಪ್ಪಿದ್ದಾರೆ ಎಂದು ಲೆಟಿಸಿಯಾ ಪಾಲ್ ಅವರ ಅತ್ತೆ ಸಾಂಡ್ರಾ ಪಾಲ್ ಹೇಳಿದ್ದಾರೆ.

ಅನಾಫಿಲ್ಯಾಕ್ಟಿಕ್ ಎಂದರೇನು ಲಕ್ಷಣಗಳೇನು?

ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಅಧ್ಯಯನದ ಪ್ರಕಾರ, ಅನಾಫಿಲ್ಯಾಕ್ಟಿಕ್ ಶಾಕ್‌ ಅಥವಾ ಆಘಾತ ಎಂದರೆ ಹಠಾತ್ ಆಗಿ ಸಂಭವಿಸುವ ಮಾರಣಾಂತಿಕ ಅಲರ್ಜಿಯ ರಿಯಾಕ್ಷನ್ ಆಗಿದ್ದು, ಇದರಿಂದ ಉಸಿರಾಟದ ಸ್ನಾಯುಗಳಲ್ಲಿ ಸಂಕೋಚನ ಉಂಟಾಗಿ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಗಂಟಲಿನಲ್ಲಿ ಊತ ಹಾಗೂ ರಕ್ತದೊತ್ತಡದಲ್ಲಿ ಹಠಾತ್ ಇಳಿಕೆಯಾಗುತ್ತದೆ.

ಕ್ಲಿನಿಕಲ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಮಾಡಲಾಗಿತ್ತು ಎಂದ ಆಸ್ಪತ್ರೆ:

ಈ ಘಟನೆಗೆ ಸಂಬಂಧಿಸಿದಂತೆ ಆಲ್ಟೊ ವೇಲ್ ಪ್ರಾದೇಶಿಕ ಆಸ್ಪತ್ರೆ ಪ್ರಕಟಣೆ ಬಿಡುಗಡೆ ಮಾಡಿದೆ. ನೈತಿಕತೆ, ಪಾರದರ್ಶಕತೆ ಮತ್ತು ಆರೋಗ್ಯ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ. ಶಿಫಾರಸು ಮಾಡಲಾದ ಕ್ಲಿನಿಕಲ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಲೆಟಿಸಿಯಾ ಪಾಲ್ ಅವರಿಗೆ ತಪಾಸಣೆ ನಡೆಸಲಾಗಿತ್ತು ಎಂದು ಆಸ್ಪತ್ರೆಯ ಪ್ರಕಟಣೆ ಹೇಳಿದೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಅಯೋಡಿನೇಟೆಡ್ ಕಾಂಟ್ರಾಸ್ಟ್ ಡೈ ಅನ್ನು ಸಾಮಾನ್ಯವಾಗಿ ಸಿಟಿ ಸ್ಕ್ಯಾನ್‌ಗಳು, ಎಂಆರ್‌ಐಗಳು ಮತ್ತು ಎಕ್ಸ್-ರೇ ಮಾಡುವ ವೇಳೆ ದೇಹದ ಅಂಗಗಳು ಮತ್ತು ಅಂಗಾಂಶಗಳ ಚಿತ್ರಗಳನ್ನು ಸ್ಪಷ್ಟವಾಗಿ ಕಾಣುವುದಕ್ಕೆ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಈಗ ಸಂಭವಿಸಿದಂತ ಮಾರಣಾಂತಿಕ ರಿಯಾಕ್ಷನ್‌ ಸರಿಸುಮಾರು 5,000 ಪ್ರಕರಣಗಳಲ್ಲಿ ಒಬ್ಬರಿಗೆ ಹಾಗೂ 10,000 ರೋಗಿಗಳಲ್ಲಿ ಒಬ್ಬರಲ್ಲಿ ಸಂಭವಿಸಬಹುದು ಎಂದು ವಿವರಿಸಲಾಗಿದೆ.

ಕಾಂಟ್ರಾಸ್ಟ್ ಏಜೆಂಟ್‌ಗಳನ್ನು ಸಾಮಾನ್ಯವಾಗಿ ಸುರಕ್ಷಿತ ಎಂದು ನಂಬಲಾಗಿದೆ:

ರೇಡಿಯಾಲಜಿ ಮತ್ತು ಇಮೇಜಿಂಗ್ ಡಯಾಗ್ನೋಸ್ಟಿಕ್ಸ್ ತಜ್ಞ ಡಾ. ಮುರಿಲೊ ಯುಜೆನಿಯೊ ಒಲಿವೇರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಕ್ಯಾನ್‌ಗಳಲ್ಲಿ ಬಳಸುವ ಕಾಂಟ್ರಾಸ್ಟ್ ಏಜೆಂಟ್‌ಗಳನ್ನು ಸಾಮಾನ್ಯವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಪ್ರತಿಕೂಲ ಪ್ರತಿಕ್ರಿಯೆಗಳು ಸಂಭವಿಸಬಹುದಾದರೂ, ಅವು ಅಪರೂಪ, ಮತ್ತು ಲೆಟಿಸಿಯಾ ಪಾಲ್ ಅನುಭವಿಸಿದಂತಹ ತೀವ್ರ ರಿಯಾಕ್ಷನ್ ವಿಶೇಷವಾಗಿ ಸಾಮಾನ್ಯವಾಗಿ ಕಂಡುಬರದಂತಹ ಪ್ರಕರಣವಾಗಿದೆ ಎಂದಿದ್ದಾರೆ.

ಮೃತ ಲೆಟಿಸಿಯಾ ಪಾಲ್ ಅವರು ಬ್ರೆಜಿಲ್‌ನ ರಿಯೊ ಡೊ ಸುಲ್ ಬಳಿಯ ಲೊಂಟ್ರಾಸ್‌ನಲ್ಲಿ ಕಾನೂನು ಪದವಿ ಪಡೆದಿದ್ದರು. ಕಾನೂನು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದರು. ಪ್ರತಿಭಾವಂತೆಯಾಗಿದ್ದ ಅವರಿಗೆ ಕಾನೂನಿನಲ್ಲಿ ಭಾರಿ ಆಸಕ್ತಿ ಇತ್ತು ಎಂದು ಆಕೆಯ ಅತ್ತೆ ಸಾಂಡ್ರಾ ಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಕ್ಕ ತಂಗಿನಾ ಒಂದೇ ಮನೆಯ ನಿರುದ್ಯೋಗಿ ಸೋದರರಿಗೆ ಮದ್ವೆ ಮಾಡಿದ್ದ ಪೋಷಕರು: ಆಮೇಲಾಗಿದ್ದೆ ನಿಕ್ಕಿ ಭಾಟಿ ಡೌರಿ ಮರ್ಡರ್

ಇದನ್ನೂ ಓದಿ: Summon Modeನಲ್ಲಿದ್ದ ಟಾಟಾ ಹ್ಯಾರಿಯರ್‌ ಇವಿ ಕಾರು ಇದಕ್ಕಿದ್ದಂತೆ ರಿವರ್ಸ್ ಬಂದು ಮಾಲೀಕ ಸಾವು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?