ತರಕಾರಿ ಬೀಜ ಎಸಿಬೇಕಾಗಿಲ್ಲ, ಸ್ಟೈಲಿಶ್ ಆಭರಣ ತಯಾರಿಸ್ಬೋದು

First Published Aug 18, 2022, 2:36 PM IST

ಕಾಲ ಬದಲಾಗಿದೆ. ಎಲ್ಲರೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕೆಂದೇ ಬಯಸುತ್ತಾರೆ. ಟ್ರೆಂಡೀಯಾಗಿರಬೇಕು ಮಾತ್ರವಲ್ಲ ಡಿಫರೆಂಟ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಹೀಗಿರುವಾಗ ಇಲ್ಲೊಬ್ಬರು ನೈಸರ್ಗಿಕವಾಗಿ ಸಿಗುವ ಬೀಜಗಳಿಂದ ಜ್ಯುವೆಲ್ಲರಿ ತಯಾರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಭಿನ್ನ-ವಿಭಿನ್ನ ಶೈಲಿಯ ಬಟ್ಟೆ, ಚಪ್ಪಲಿ, ಜ್ಯುವೆಲ್ಲರಿ ಧರಿಸಬೇಕೆಂದು ಇಷ್ಟಪಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಇನ್ನೊಬ್ಬರ ಬಳಿಯಿರುವ ಸೇಮ್ ಡ್ರೆಸ್, ಸೇಮ್ ಜ್ಯುವೆಲ್ಲರಿ ಧರಿಸುವುದೆಂದರೆ ಸುತಾರಂ ಹಿಡಿಸುವುದಿಲ್ಲ. ಹೀಗಾಗಿಯೇ ಫ್ಯಾಷನ್ ಆಗಿಂದಾಗೆ ಬದಲಾಗುತ್ತಲೇ ಇರುತ್ತದೆ.
 

ಧರಿಸುವ ಬಟ್ಟೆಯಿಂದ ಹಿಡಿದು ಜ್ಯುವೆಲ್ಲರಿಯ ವರೆಗೂ ಎಲ್ಲವೂ ಆರಾಮದಾಯಕವಾಗಿರಬೇಕು, ಪರಿಸರಸ್ನೇಹಿಯಾಗಿರಬೇಕು ಎನ್ನುವ ಕಾಲ ಇದು. ಮನಸ್ಥಿತಿಗೆ ತಕ್ಕ ಹಾಗೆ ಮಾರುಕಟ್ಟೆ ಬದಲಾಗುತ್ತದೆ. ಹೀಗಾಗಿಯೇ ಬಟ್ಟೆ, ಜ್ಯುವೆಲ್ಲರಿಯಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತವೆ. ಸ್ಟೈಲಿಶ್ ಲುಕ್ ಜತೆ ಆರಾಮ ಎನಿಸುವ ಜ್ಯುವೆಲ್ಲರಿಗಳಲ್ಲಿ ಇತ್ತೀಚೆಗೆ ಸೀಡ್ ಜುವೆಲರಿಗಳು ಫ್ಯಾಷನ್ ಲಿಸ್ಟ್‌ನಲ್ಲಿದೆ.

ವಿಭಿನ್ನ ಬೀಜಗಳ ಜ್ಯುವೆಲ್ಲರಿಗಳು ಗಮನ ಸೆಳೆಯುತ್ತಿವೆ. ಸೀಡ್ ಜ್ಯುವೆಲ್ಲರಿ ತಯಾರಿಕೆಯಲ್ಲಿ ಸಿದ್ಧಹಸ್ತರಾದ ರೇಖಾ ಅಭಿಷೇಕ್ ಪ್ರಕಾರ, ಕ್ರಿಯಾಶೀಲತೆ ಜತೆಗಿದ್ದರೆ ಮನೆಯಲ್ಲೇ ಸಿಗುವ ತರಕಾರಿ, ಹಣ್ಣುಗಳ ಬೀಜಗಳಿಂದ ಜ್ಯುವೆಲ್ಲರಿ ತಯಾರಿಸಿಕೊಳ್ಳಬಹುದಂತೆ.

ಗೃಹಾಲಂಕಾರವೇ ಇರಲಿ, ನಮ್ಮನ್ನೇ ನಾವು ಅಲಂಕರಿಸಿಕೊಳ್ಳುವುದೇ ಆದರೂ ಸಹ ಪರಿಸರಸ್ನೇಹಿ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಕ್ರಿಯಾಶೀಲತೆ ಬಗ್ಗೆ ಸದಾ ಯೋಚಿಸುತ್ತೇನೆ ಹಾಗೂ ತಯಾರಿಸುತ್ತೇನೆ. ಕೃಷ್ಣಾಷ್ಟಮಿ ಸಮಯದಲ್ಲಿ ಮಕ್ಕಳನ್ನು ಅಲಂಕರಿಸಲು ಜ್ಯುವೆಲ್ಲರಿ, ಕಿರೀಟ, ತೋಳಬಂದಿ, ಸೊಂಟದಪಟ್ಟಿಗಳನ್ನೆಲ್ಲ ಸೌತೆಕಾಯಿಯ ಬೀಜದಿಂದಲೇ ತಯಾರಿಸಿದ್ದೇನೆ ಎಂದು ರೇಖಾ ಹೆಮ್ಮೆಯಿಂದ ಹೇಳುತ್ತಾರೆ.

ರೇಖಾ ಅವರು, ಸೌತೆ ಬೀಜ, ಚಕ್ಕೋತಾ ಬೀಜ, ಭತ್ತ ಸೇರಿದಂತೆ ಹಲವು ಬೀಜಗಳಿಂದ ಜ್ಯುವೆಲ್ಲರಿಗಳನ್ನು ತಯಾರಿಸುತ್ತಾರೆ. ಅಡಿಕೆ ಹಾಳೆಗಳಲ್ಲಿ ಹೂವುಗಳನ್ನು ತಯಾರಿಸುವ ಇವರು, ಚಿತ್ರಕಲೆ, ರಂಗೋಲಿಗಳಲ್ಲೂ ಎತ್ತಿದ ಕೈ. ಹಲವು ವರ್ಷಗಳಿಂದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿರುವ ರೇಖಾ, ತಮ್ಮ ಬಿಡುವಿನ ವೇಳೆಯನ್ನು ಈ ಹವ್ಯಾಸಕ್ಕೆ ಮೀಸಲಿಡುತ್ತಾರೆ.

ಪರಿಸರ ಸ್ನೇಹಿ ವಸ್ತುಗಳೇ ಮನೆಯ ಅಲಂಕಾರದಲ್ಲೂ ಇರಬೇಕು ಎನ್ನುವವರು ಪ್ಲಾಸ್ಟಿಕ್‌ನಂಥ ಹಾನಿಕರ ವಸ್ತುಗಳಿಂದ ದೂರ ಇರುತ್ತಾರೆ. ಈ ನಿಟ್ಟಿನಲ್ಲಿ ಬೀಜಗಳ ಅಲಂಕಾರಿಕ ವಸ್ತುಗಳು ಮನೆಯ ಶೋಕೇಸ್ ಅನ್ನು ಪರಿಸರಸ್ನೇಹಿಯಾಗಿಸುತ್ತವೆ. ಬೀಜಗಳಿಂದ ತಯಾರಿಸಿದ ನವಿಲು, ಹೂವು, ಕೂವಿನ ಕುಂಡ ಸೇರಿದಂತೆ ಅಡಿಕೆ ಹಾಳೆಯಲ್ಲಿ ಅರಳಿದ ಹೂವುಗಳು ಗಮನ ಸೆಳೆಯುತ್ತವೆ. ಈ ನಿಟ್ಟಿನಲ್ಲಿ ರೇಖಾ ಅವರು ಹಲವು ಅಲಂಕಾರಿಕ ವಸ್ತುಗಳನ್ನು  ನಾರು, ಎಲೆ, ಬೀಜ ಮತ್ತಿತರ ವಸ್ತುಗಳಿಂದ ತಯಾರಿಸುತ್ತಾರೆ.

ಸಾಗರದ ಮಂಜಾಲೆ ನಿವಾಸಿ ರೇಖಾ ಅಭಿಷೇಕ್ ಅವರು ಬೀಜಗಳ ಜ್ಯುವೆಲ್ಲರಿ ತಯಾರಿಕೆಯಲ್ಲಿ ನಿಪುಣರಾಗಿದ್ದಾರೆ. ಇವರು ಮಾರಾಟ ಉದ್ದೇಶವಿಲ್ಲದೆ ತಮ್ಮ ಅಗತ್ಯಕ್ಕೆ ಮಾತ್ರ ಪರಿಸರಸ್ನೇಹಿ ಕಲ್ಪನೆಯಡಿ ನೈಸರ್ಗಿಕವಾಗಿ ಸಿಗುವ ಬೀಜಗಳಿಂದ ಜ್ಯುವೆಲ್ಲರಿ ತಯಾರಿಸುತ್ತಾರೆ. ಈ ಕೃಷ್ಣಾಷ್ಟಮಿ ಸಮಯದಲ್ಲೂ ಅವರು ತಯಾರಿಸಿದ ಸೌತೆ ಬೀಜಗಳಿಂದ ತಯಾರಿಸಿದ ಜ್ಯುವೆಲ್ಲರಿ ಗಮನ ಸೆಳೆಯುವಂತಿದೆ.

click me!