Womens Day 2023: ಮಹಿಳೆಯರ ಸಾಹಸ ಸಾರುವ ಅದ್ಭುತ ಸಿನಿಮಾಗಳಿವು..ಮಿಸ್ ಮಾಡ್ದೆ ನೋಡಿ

First Published Mar 7, 2023, 4:17 PM IST

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಈ ದಿನದಂದು ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಧ್ವನಿಯೆತ್ತಲಾಗುತ್ತದೆ. ಹೀಗೆಯೇ ಮಹಿಳೆಯ ಸಾಧನೆ, ಮಹಿಳೆಯ ಕಷ್ಟಗಳ ಬಗ್ಗೆ ಧ್ವನಿಯೆತ್ತಿದ್ದ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ಸಿನಿಮಾಗಳ ಬಗ್ಗೆ ತಿಳಿಯೋಣ.

ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುನ್ನುಗ್ಗಿ ಸಾಧನೆ ಮಾಡುತ್ತಿದ್ದಾಳೆ. ಹಿಂದೊಂದು ಕಾಲದಲ್ಲಿ ಪುರುಷರೇ ಮಿಂಚುತ್ತಿದ್ದ ಚಿತ್ರರಂಗದಲ್ಲೂ ಮಹಿಳೆ ಛಾಪು ಮೂಡಿಸಿದ್ದಾರೆ. ಫಿಮೇಲ್ ಓರಿಯೆಂಟೆಂಡ್‌ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಇವು ಮಹಿಳೆಯ ಕಷ್ಟ, ಸಾಧನೆ, ಜೀವನದ ಮೇಲೆ ಬೆಳಕು ಚೆಲ್ಲುತ್ತವೆ. ಮಹಿಳಾ ದಿನಾಚರಣೆಯಂದು ನೀವು ನೋಡಲೇಬೇಕಾದ ಕೆಲವು ಅತ್ಯದ್ಭುತ ಹಿಂದಿ ಸಿನಿಮಾಗಳ ಮಾಹಿತಿ ಇಲ್ಲಿದೆ.

ಗಂಗೂಬಾಯಿ ಕಥಿಯಾವಾಡಿ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನಿಮಾ ಬಯೋಗ್ರಫಿ ಸ್ಟೋರಿಯಾಗಿದೆ. ಗುಜರಾತ್‌ನಿಂದ ಬಂದು ಕಾಮಾಟಿಪುರದ ವೇಶ್ಯಾಗೃಹದಲ್ಲಿ ಸಿಲುಕಿಕೊಳ್ಳುವ ಅಮಾಯಕ ಹುಡುಗಿಯೊಬ್ಬಳ ಜೀವನದ ಚಿತ್ರಣವಾಗಿದೆ. ಆಕೆ ಜೀವನದಲ್ಲಿ ಮೋಸ ಹೋಗಿ ಹೇಗೆ ಬದುಕು ಕಟ್ಟಿಕೊಳ್ಳುತ್ತಾಳೆ. ವೇಶ್ಯೆಯಾಗಿದ್ದರೂ ಆಕೆಯ ಆಲೋಚನೆಗಳು, ಸಿದ್ಧಾಂತಗಳು ಎಷ್ಟು ಭಿನ್ನವಾಗಿದೆ ಎಂಬುದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ನೋಡಬಹುದು.

Latest Videos


ಕಹಾನಿ
ವಿದ್ಯಾಬಾಲನ್ ಅಭಿನಯದ ಈ ಸಿನಿಮಾ ಗರ್ಭಿಣಿಯೊಬ್ಬಳು ತನ್ನ ಕಳೆದುಹೋದ ಗಂಡನನ್ನು ಹುಡುಕುವ ಕಥಾಹಂದರವನ್ನು ಹೊಂದಿದೆ. ಸಿನಿಮಾದುದ್ದಕ್ಕೂ ಒಂಟಿ ಮಹಿಳೆಯ ಧೈರ್ಯ, ಸಾಹಸ, ಶಕ್ತಿಯನ್ನು ನಾವು ಗಮನಿಸಬಹುದು. ಅಮೆಝಾನ್ ಪ್ರೈಮ್‌ನಲ್ಲಿ ಈ ಚಿತ್ರ ಲಭ್ಯವಿದೆ.

ಮೇರಿಕೋಮ್‌
ಕ್ರೀಡಾಪಟು ಮೇರಿಕೋಮ್ ಜೀವನವನ್ನು ಆಧರಿಸಿದ ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಅಭಿನಯಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಕನಸನ್ನು ಈಡೇರಿಸಿಕೊಳ್ಳಲು ಮಕ್ಕಳನ್ನು ನೋಡಿಕೊಳ್ಳುತ್ತಾ ಎಷ್ಟು ಒದ್ದಾಡುತ್ತಾಳೆ ಎಂಬುದನ್ನು ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಾಧನೆ ಮಾಡುವ ಪ್ರತಿ ಮಹಿಳೆಗೂ ಈ ಸಿನಿಮಾ ಸ್ಪೂರ್ತಿದಾಯಕವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವನ್ನು ನೋಡಬಹುದು.

ಪಿಂಕ್‌
ಇದು ಮಹಿಳೆಯರ ಕುರಿತಾಗಿ ಅತ್ಯುತ್ತಮ ಸಂದೇಶವನ್ನು ನೀಡಿರುವ ಸಿನಿಮಾಗಳಲ್ಲಿ ಒಂದಾಗಿದೆ. ಹೆಣ್ಣು ನೋ ಎಂದರೆ ಅದರ ಅರ್ಥ ನೋ ಎಂದೇ ಆಗಿರುತ್ತದೆ. ಆಕೆಯ ಬಟ್ಟೆ ಆಕೆಯ ನಡವಳಿಕೆಯನ್ನು ತೋರಿಸುವುದಿಲ್ಲ ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇದರಲ್ಲಿ ಲಾಯರ್ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಲಭ್ಯವಿದೆ. 

ಕ್ವೀನ್‌
ಬಾಲಿವುಡ್‌ನಲ್ಲಿ ಸೂಪರ್‌ಹಿಟ್ ಆಗಿರುವ ಈ ಸಿನಿಮಾ ದಕ್ಷಿಣಭಾರತದ ಇತರ ಭಾಷೆಗಳಿಗೂ ರಿಮೇಕ್ ಆಗಿದೆ. ಈ ಚಿತ್ರ ಹಳ್ಳಿಯ ಸಾಮಾನ್ಯ ಹುಡುಗಿಯ ಕನಸಿನ ಬಗ್ಗೆ ತಿಳಿಸುತ್ತದೆ. ಮದುವೆಯಾಗಿ ಪ್ಯಾರಿಸ್‌ಗೆ ಹನಿಮೂನ್‌ಗೆ ಹೋಗಬೇಕೆಂದು ಅಂದುಕೊಳ್ಳುವ ಹುಡುಗಿಯ ಕನಸು, ಹುಡುಗ ಮದುವೆಯನ್ನು ಕ್ಯಾನ್ಸಲ್ ಮಾಡುವ ಮೂಲಕ ಭಗ್ನವಾಗುತ್ತದೆ . ಮದುವೆ ಕ್ಯಾನ್ಸಲ್ ಆಯಿತು ಎಂದು ಎಲ್ಲರೂ ಆಡಿಕೊಳ್ಳುವ ಸಂದರ್ಭದಲ್ಲಿ ಆಕೆ ಹೇಗೆ ಒಬ್ಬಳೇ ಪ್ಯಾರಿಸ್ ಸುತ್ತಿ ಬರುತ್ತಾಳೆ ಎಂಬುದನ್ನು ಸಿನಿಮಾ ತೋರಿಸುತ್ತದೆ. 'ನಿಮ್ಮ ಖುಷಿಯೆಂದರೆ ನೀವೇ' ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಲಭ್ಯವಿದೆ.

ಇಂಗ್ಲಿಷ್‌ ವಿಂಗ್ಲಿಷ್‌
ಶ್ರೀದೇವಿ ಅಭಿನಯದ ಈ ಸಿನಿಮಾ ಪ್ರತಿಯೊಬ್ಬರೂ ನೋಡಲೇಬೇಕಾದಂಥದ್ದು. ಟಿಪಿಕಲ್ ಗೃಹಿಣಿಯಾಗಿರುವ ಶಶಿ, ಇಂಗ್ಲಿಷ್ ಬಾರದ ಕಾರಣಕ್ಕೆ ತನ್ನ ಗಂಡ ಹಾಗೂ ಮಕ್ಕಳಿಂದಲೇ ಟೀಕೆಗೆ ಒಳಗಾಗುತ್ತಾಳೆ. ಹೀಗಿರುವಾಗ ಆಕೆ ಇಂಗ್ಲಿಷ್‌ ಕ್ಲಾಸ್‌ಗೆ ಸೇರಿ ಹೇಗೆ ತನ್ನನ್ನೇ ತಾನು ಬೆಸ್ಟ್ ಎಂದು ಪ್ರೂವ್ ಮಾಡಿಕೊಳ್ಳುತ್ತಾಳೆ ಎಂಬುದು ಸಿನಿಮಾದ ಕಥೆ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಲಭ್ಯವಿದೆ. 

click me!