ನಮ್ಮ ದೇಹವು ಒಂದು ಯಂತ್ರವಿದ್ದಂತೆ. ಸೃಷ್ಟಿಕರ್ತ ಅಂದ್ರೆ ದೇವರು ಇದನ್ನು ವಿಶ್ವದ ಅತ್ಯಂತ ಸಂಕೀರ್ಣ ಯಂತ್ರವಾಗಿ ರಚಿಸಿದ್ದಾರೆ. ಈ ಯಂತ್ರವು ತುಂಬಾ ವಿಚಿತ್ರವಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ಬಾರಿ ದೇಹದಲ್ಲಿ ನಡೆಯುವ ಘಟನೆಗಳೇ ನಮಗೆ ಅಚ್ಚರಿಯನ್ನುಂಟು ಮಾಡುತ್ತೆ.
ಮಹಿಳೆಯರ ದೇಹವನ್ನೇ ತೆಗೆದುಕೊಳ್ಳಿ. 12-13 ವರ್ಷ ವಯಸ್ಸಿನಲ್ಲಿ, ಹುಡುಗಿಯರು ಋತುಸ್ರಾವವನ್ನು ಪ್ರಾರಂಭಿಸುತ್ತಾರೆ. ಪ್ರೌಡಾವಸ್ಥೆಗೆ ಬಂದಾಗ ಪಿರಿಯಡ್ಸ್ ಆಗೋದು ಜಗದ ನಿಯಮ. ಆದರೆ 5 ದಿನಗಳ ಮಗುವಿಗೆ ಋತುಚಕ್ರ (periods)ಆಗುತ್ತದೆ ಅನ್ನೋದನ್ನು ನೀವು ಎಂದಾದರೂ ಕೇಳಿದ್ದೀರಾ?
ಹೌದು ಇಂತಹ ಒಂದು ವಿಚಿತ್ರ ಘಟನೆ ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ನಡೆದಿದೆ. ಜನರು ಇನ್ನೂ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖಿಸುತ್ತಿರುವುದು ಕಂಡುಬರುತ್ತದೆ. ಈಗಷ್ಟೇ ಹೆಣ್ಣುಮಗುವಿಗೆ ತಂದೆ ತಾಯಿಯಾದವರಿಗೆ ಅರಿವು ಮೂಡಿಸುವ ಸಲುವಾಗಿ ಈ ಘಟನೆ ಬಗ್ಗೆ ಮತ್ತೆ ಇಲ್ಲಿ ವರದಿ ಮಾಡ್ತಿದ್ದೇವೆ.
2019 ರಲ್ಲಿ, ಚೀನಾದ (China) ಝೆಜಿಯಾಂಗ್ ಪ್ರಾಂತ್ಯದಲ್ಲಿ ತಾಯಿಯೊಬ್ಬಳು ತನ್ನ 5 ದಿನದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದಾಗ ಭಾರಿ ಕೋಲಾಹಲ ಎದ್ದಿತ್ತು. ಆಸ್ಪತ್ರೆಗೆ ದಾಖಲಾಗಲು ಕಾರಣವೆಂದರೆ ಆ 5 ದಿನಗಳ ಮಗುವಿಗೆ ಯುವತಿಯರಿಗೆ ಉಂಟಾಗುವಂತೆ ಋತುಚಕ್ರ ಪ್ರಾರಂಭವಾಗಿತ್ತು. ಮಗುವಿನ ದೇಹದಿಂದ ರಕ್ತ (bleeding) ಹೊರಬರುತ್ತಿರುವುದನ್ನು ನೋಡಿದ ತಾಯಿ ತುಂಬಾ ಭಯಭೀತಳಾಗಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ.
ವೈದ್ಯರು ಬಾಲಕಿಯ ಪ್ರಕರಣವನ್ನು ಕೇಳಿದಾಗ, ಅವರು ಸಹ ಶಾಕ್ ಆಗಿದ್ದರು, ಆದರೆ ಅವರು ಪರೀಕ್ಷಿಸಿದಾಗ, ಈ ರಕ್ತವು ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಕಂಡುಬಂದಿದೆ. ಹಾಗಿದ್ರೆ ಏನಿದು ಸಮಸ್ಯೆ? ಪುಟಾಣಿ ಮಕ್ಕಳಲ್ಲಿ ಯಾಕೆ ಈ ರೀತಿಯಾಗುತ್ತದೆ? ಅನ್ನೋದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಈ ಸ್ಥಿತಿ ಏನು?
ಈ ಸ್ಥಿತಿಯನ್ನು ನವಜಾತ ಋತುಸ್ರಾವ (Neonatal Menstruation) ಎಂದು ಕರೆಯಲಾಗುತ್ತದೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಗರ್ಭಧಾರಣೆಯ ಕೊನೆಯ ದಿನಗಳಲ್ಲಿ, ಮಹಿಳೆಯರ ದೇಹದಲ್ಲಿ ಕಂಡುಬರುವ ಪ್ರೊಜೆಸ್ಟರಾನ್ ಹಾರ್ಮೋನ್(progesterone hormone) ಭ್ರೂಣದ ದೇಹವನ್ನು ಪ್ರವೇಶಿಸುತ್ತದೆ. ಈ ಹಾರ್ಮೋನ್ ರಕ್ತವಾಗುತ್ತದೆ ಮತ್ತು ಮಗುವಿನ ಖಾಸಗಿ ಭಾಗದಿಂದ ಹೊರಬರುತ್ತದೆ. ಇದು ಹೆಚ್ಚಾಗಿ ಹೆಣ್ಣು ಭ್ರೂಣದಲ್ಲಿ ಸಂಭವಿಸುತ್ತದೆ. ಜನರು ಇದನ್ನು ಮುಟ್ಟು ಎಂದು ಅರ್ಥಮಾಡಿಕೊಳ್ಳುತ್ತಾರೆ ಆದರೆ ಅದು ಸಂಪೂರ್ಣವಾಗಿ ವಿಭಿನ್ನವಾಗಿದೆ.
ಇದು ಸಾಮಾನ್ಯವೇ?
ಮಕ್ಕಳಲ್ಲಿ, ಈ ಸ್ಥಿತಿಯು ಕೇವಲ 1 ವಾರ ಮಾತ್ರ ಸಂಭವಿಸುತ್ತದೆ. ಹಾರ್ಮೋನ್ ಬಿಡುಗಡೆಯಾದಾಗ, ರಕ್ತಸ್ರಾವ ನಿಲ್ಲುತ್ತದೆ. ಈ ಕಾರಣಕ್ಕಾಗಿ, ಹೊಸ ಪೋಷಕರು ಮಕ್ಕಳಿಗೆ ಸಂಬಂಧಿಸಿದ ಈ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಸೀಟರ್ ಚಿಲ್ಡ್ರನ್ಸ್ ವೆಬ್ಸೈಟ್ ಪ್ರಕಾರ, ತಾಯಿಯ ಈಸ್ಟ್ರೊಜೆನ್ ಮಟ್ಟವು (estrogen level) ಕಡಿಮೆಯಾಗುವುದರಿಂದ ಇದು ಸಂಭವಿಸುತ್ತದೆ. ಮಕ್ಕಳನ್ನು ಹೊರತುಪಡಿಸಿ, ಪ್ರೌಢಾವಸ್ಥೆಗೆ ಮುಂಚಿತವಾಗಿ ಹುಡುಗಿಯರ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುತ್ತಿದ್ದರೆ, ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಈ ಸ್ಥಿತಿಯ ಬಗ್ಗೆ ತಿಳಿದುಕೊಂಡ್ರೆ ಒಳ್ಳೆಯದು.
ಬೇರೆ ಬೇರೆ ಕಾರಣಗಳು ಏನೇ ಇರಲಿ, ನವಜಾತ ಶಿಶುವಿಗೆ ಋತುಸ್ರಾವವಾಗಲು ಶುರುವಾದರೆ ಬೇಗ ಅಲರ್ಟ್ ಆಗಿ ವೈದ್ಯರ ಬಳಿ ಕರೆದುಕೊಂಡು ಹೋಗುವುದ ಮರೀಬೇಡಿ.