ಕ್ರೈಸ್ತ ಸನ್ಯಾಸಿನಿ ಪ್ರೀತಿಸಬಹುದೇ; 'ಕೇರಳ ಸ್ಟೋರಿ'ಯ ನಂತರ 'ನೇರ್ಚಪೆಟ್ಟಿ' ಸಿನಿಮಾ ವಿವಾದ

First Published Jul 7, 2023, 2:30 PM IST

ಪ್ರೀತಿ ಸಾರ್ವತ್ರಿಕ. ವಯಸ್ಸು, ಲಿಂಗದ ವ್ಯತ್ಯಾಸವಿಲ್ಲದೆ ಪ್ರೀತಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಧರ್ಮಗುರುಗಳು, ಸನ್ಯಾಸಿಗಳು ಸಾಂಸಾರಿಕ ಜೀವನಕ್ಕೆ ಕಾಲಿಡಬಹುದೇ. ಹೀಗೊಂದು ಪ್ರಶ್ನೆ ಕೇಳಿದರೆ ಜಿಜ್ಞಾಸೆ ಮೂಡುವುದು ಖಂಡಿತ. ಸದ್ಯ, ಕ್ರೈಸ್ತ ಸನ್ಯಾಸಿನಿ ಪ್ರೀತಿಸುವ ಕಥೆಯೊಂದು ಕೇರಳದಲ್ಲಿ ವಿವಾದ ಹುಟ್ಟು ಹಾಕ್ತಿದೆ.

ಇತ್ತೀಚೆಗೆ 'ದಿ ಕೇರಳ ಸ್ಟೋರಿ' ಸಿನಿಮಾಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಧರ್ಮಗಳ ಕುರಿತಾದ ತಪ್ಪಾದ ಚಿತ್ರಣಕ್ಕಾಗಿ ಜನರು ಈ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಕೇರಳದ ಇನ್ನೊಂದು ಚಿತ್ರ ಭಾರೀ ಆಕ್ರೋಶವನ್ನು ಹುಟ್ಟು ಹಾಕ್ತಿದೆ. ಕ್ರೈಸ್ತ ಸನ್ಯಾಸಿನಿಯ ಪ್ರೇಮ ಕಥೆಯನ್ನು ಒಳಗೊಂಡ ಮಲಯಾಳಂ ಚಿತ್ರ ನೆರ್ಚಪೆಟ್ಟಿ ವಿವಾದಕ್ಕೆ ಕಾರಣವಾಗಿದೆ.

ಮಲಯಾಳಂ ಚಿತ್ರ ನೆರ್ಚಪೆಟ್ಟಿ ಜುಲೈ ಎರಡನೇ ವಾರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸನ್ಯಾಸಿನಿಯೊಬ್ಬರ ಪ್ರೇಮ ಜೀವನವನ್ನು ಆಧರಿಸಿದ ಈ ಚಿತ್ರ ಕೇರಳದ ಕಣ್ಣೂರು ಮತ್ತು ಇರಿಟಿ ಪ್ರದೇಶದ ಜನರಿಂದ ಆಕ್ರೋಶವನ್ನು ಎದುರಿಸುತ್ತಿದೆ. ಸನ್ಯಾಸಿನಿಯನ್ನು ನಾಯಕಿಯಾಗಿ ಪ್ರಸ್ತುತಪಡಿಸುವ ಕಲ್ಪನೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ
 

ಕಣ್ಣೂರು ಪ್ರದೇಶದ ಸುತ್ತಮುತ್ತ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರೀಕರಣದ ಸಮಯದಲ್ಲಿಯೂ ಹಲವರು ಬಂದು ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ ಬಳಿಕ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಚಿತ್ರೀಕರಣ ಮುಂದುವರಿಸಲಾಯಿತು

ಇದೀಗ ಚಿತ್ರೀಕರಣ ಮುಗಿದು ಬಹುತೇಕ ಬಿಡುಗಡೆಗೆ ಸಿದ್ಧವಾಗಿರುವಾಗ ಕೆಲ ಗುಂಪುಗಳು ಸಿನಿಮಾದ ಪೋಸ್ಟರ್ ಗಳನ್ನು ಧ್ವಂಸ ಮಾಡಿದ್ದಾರೆ. ನೆರ್ಚಪೆಟ್ಟಿಯ ಪೋಸ್ಟರ್‌ಗಳನ್ನು ಹರಿದು ಹಾಕಲಾಗಿದ್ದು, ಚಿತ್ರದ ಜಾಹೀರಾತು ಫಲಕಗಳನ್ನು ಧ್ವಂಸಗೊಳಿಸಲಾಗಿದೆ.

ಮಲಯಾಳಂ ಸಿನಿಮಾವೊಂದು ಸನ್ಯಾಸಿನಿಯ ಜೀವನದಲ್ಲಿ ಪ್ರೀತಿಯ ಪರಿಕಲ್ಪನೆಯನ್ನು ಅನ್ವೇಷಿಸುತ್ತಿರುವುದು ಇದೇ ಮೊದಲು. ಚಿತ್ರದಲ್ಲಿ ಸನ್ಯಾಸಿನಿ ಪಾತ್ರದಲ್ಲಿ ನೈರಾ ನಿಹಾರ್ ನಟಿಸುತ್ತಿದ್ದಾರೆ. ಚಿತ್ರವನ್ನು ಬಾಬು ಜಾನ್ ಕೊಕ್ಕವಯಲ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹೆಸರೇ ಚಿತ್ರದ ವಿರುದ್ಧ ಆಕ್ರೋಶಕ್ಕೆ ಕಾರಣ ಎಂಬುದು ಚಿತ್ರದ ನಿರ್ದೇಶಕರ ಅಭಿಪ್ರಾಯ.

ಚಿತ್ರದಲ್ಲಿ ಅತುಲ್ ಸುರೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ರಾಯಲ್ ಎನ್‌ಫೀಲ್ಡ್ ಮತ್ತು ಅದಾನಿ ಗ್ರೂಪ್‌ನ ರಾಷ್ಟ್ರೀಯ ಮಟ್ಟದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಸುನಿಲ್ ಪುಲ್ಲೋಡೆ ಚಿತ್ರಕಥೆ ಬರೆದಿದ್ದು, ರಫೀಕ್ ರಶೀದ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಂಕಲನವನ್ನು ಸಿಂಟೋ ಡೇವಿಡ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಿಬು ಸುಕುಮಾರನ್ ಮತ್ತು ಸಿಬಿಚನ್ ಇರಿಟ್ಟಿ ಸಂಗೀತ ನೀಡಿದ್ದಾರೆ.

click me!