ಕಲರ್ಸ್ ಕನ್ನಡದಲ್ಲಿ (Colors Kannada) ಅನುಬಂಧ ಅವಾರ್ಡ್ಸ್ 2023 ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕೊಡು ಗೈ ದಾನಿ 75 ವರ್ಷದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಕಲರ್ಸ್ ಕನ್ನಡಿಗೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಹುಚ್ಚಮ್ಮನಿಗೆ (Hucchamma Basappa Chowdry) 75 ವರ್ಷವಾದರೂ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ, ಅವರ ಪರಿಸ್ಥಿತಿ, ತಾನು ತನ್ನದು ಎಂದು ಹೇಳುವ ಜನರ ಮಧ್ಯೆ ಹುಚ್ಚಮ್ಮ ತನ್ನಲ್ಲಿ ಇದ್ದ ಎಲ್ಲವನ್ನೂ ಶಿಕ್ಷಣಕ್ಕಾಗಿ ದಾನ ನೀಡಿ ಕೊಡುಗೈ ದಾನಿ ಎನಿಸಿಕೊಂಡರು.
ಹುಚ್ಚಮ್ಮ ಕೊಪ್ಪಳ ತಾಲೂಕಿನ ಕುಣಿಕೇರಿಯವರು. ಇವರು ತಮ್ಮ ನಿಸ್ವಾರ್ಥ ಸೇವೆಯಿಂದ ಮನೆಮಾತಾಗಿದ್ದಾರೆ. ಇವರು ತನ್ನೂರಿನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹುಚ್ಚಮ್ಮ ತನ್ನ ಜೀವನಕ್ಕಾಗಿ ಇದ್ದ 2 ಎಕರೆ ಭೂಮಿ ದಾನ ಮಾಡಿದ್ದರು.
ಚಿಕ್ಕ ವಯಸ್ಸಿನಲ್ಲೇ ಕುಣಿಕೇರಿಯ ಬಸಪ್ಪ ಚೌದ್ರಿ ಜೊತೆ ಮದುವೆಯಾದ ಹುಚ್ಚಮ್ಮನಿಗೆ ಮಕ್ಕಳಿರಲಿಲ್ಲ. ಅವರ ಬಳಿ ಇದ್ದದ್ದು 2 ಎಕರೆ ಕೃಷಿ ಭೂಮಿ. 30 ವರ್ಷಗಳ ಹಿಂದೆ ಬಸಪ್ಪ ಚೌದ್ರಿ ನಿಧನರಾದರು. ಏಕಾಂಗಿಯಾಗಿದ್ದ ಇವರು ಕೃಷಿ ಮಾಡುತ್ತಾ ಜೀವನ ಸಾಗಿಸಿದರು.
ಈ ಸಮಯದಲ್ಲಿ ಕುಣಿಕೇರಿ ಗ್ರಾಮದಲ್ಲಿರುವ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿತ್ತು, ಆದರೆ, ಊರಿನಲ್ಲಿ ಜಮೀನು ನೀಡುವವರು ಯಾರು ಇರಲಿಲ್ಲ. ಈ ಸಂದರ್ಭದಲ್ಲಿ, ಹುಚ್ಚಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಳು.
ಇದಾಗಿ ಸ್ವಲ್ಪ ಸಮಯದ ನಂತರ ಮೈದಾನ ನಿರ್ಮಾಣಕ್ಕಾಗಿ ಮತ್ತೊಂದು ಎಕರೆ ಭೂಮಿಯನ್ನು ಕೂಡ ದಾನ ಮಾಡಿದ್ದಾಳೆ. ಈ ಜಾಗದಲ್ಲಿ ಇದೀಗ ಭವ್ಯವಾದ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಈಗ ಹುಚ್ಚಮ್ಮ ಅದೇ ಶಾಲೆಯಲ್ಲಿ ಅಡುಗೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.
ಕೋಟಿ ಕೋಟಿ ಹಣವಿದ್ದರೂ ಒಂದು ರೂಪಾಯಿ ದಾನ ಮಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ತನ್ನ ತನ್ನಲ್ಲಿದ್ದದ್ದ ಸುಮಾರು ಒಂದು ಕೋಟಿ ಮೌಲ್ಯದ ಭೂಮಿ ದಾನ ಮಾಡಿ, ಶಾಲೆಯ ಮಕ್ಕಳನ್ನೆ ತನ್ನ ಮಕ್ಕಳೆಂದು ತಿಳಿದು ಜೀವಿಸುವ ಹುಚ್ಚಮ್ಮನಿಗೆ ಒಂದು ದೊಡ್ಡ ಸಲಾಮ್.