Garden tips : ಗಾರ್ಡನ್ ತುಂಬಾ ಹೂ ಅರಳಿ ನಿಂತ್ರೆ ನೋಡೋದೆ ಚಂದ. ಆದ್ರೆ ಹುಳುಗಳ ಕಾಟ ಎಲೆಗಳನ್ನು ಹಾಳು ಮಾಡುತ್ತೆ. ಅದಕ್ಕೆ ಪುರಾತನ ಕಾಲದಿಂದ ಜಾರಿಯಲ್ಲಿರುವ ಸರಳ ಮನೆಮದ್ದೊಂದು ಇಲ್ಲಿದೆ.
ಹೂ ಚೆನ್ನಾಗಿ ಬಿಡ್ಬೇಕು, ಎಲೆಗೆ ಹುಳು ಹಿಡಿಬಾರದು, ತರಕಾರಿ ಬೆಳವಣಿಗೆ ಚೆನ್ನಾಗಿರ್ಬೇಕು ಅಂತ ಜನರು ಗಿಡಕ್ಕೆ ಮಜ್ಜಿಗೆ ಹಾಕ್ತಾರೆ. ಗಿಡಕ್ಕೆ ಮಜ್ಜಿಗೆ ಹಾಕಿದ್ರೆ ಒಳ್ಳೇದು ಅನ್ನೋ ವಿಷ್ಯ ಎಲ್ಲರಿಗೂ ಗೊತ್ತು. ಮಜ್ಜಿಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಪೋಷಕಾಂಶಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಕರಿಬೇವಿನ ಎಲೆಗಳು ಅಗಲವಾಗೋದಲ್ಲದೆ ಗುಲಾಬಿ ದೊಡ್ಡದಾಗಿ ಅರಳುತ್ತೆ. ಮಜ್ಜಿಗೆಯಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕವು ಎಲೆಗಳು ಅಗಲವಾಗಿ ಬೆಳೆಯಲು ಕಾರಣವಾಗುತ್ವೆ. ಅಲ್ದೆ ಎಲೆ ಬಣ್ಣ ಕಡು ಹಸಿರು ಮತ್ತು ಹೊಳೆಯುವಂತೆ ಮಾಡುತ್ತದೆ.
26
ಪ್ರಮಾಣ ಮುಖ್ಯ
ಗಿಡಕ್ಕೆ ಮಜ್ಜಿಗೆ ಹಾಕಿದ್ರೆ ಉತ್ತಮ ಎನ್ನುವ ವಿಷ್ಯ ಎಲ್ಲರಿಗೂ ತಿಳಿದಿದ್ರೂ ಎಷ್ಟು ಪ್ರಮಾಣದಲ್ಲಿ ಹಾಕ್ಬೇಕು ಎನ್ನುವ ಮಾಹಿತಿ ಇರೋದಿಲ್ಲ. ಮನಸ್ಸಿಗೆ ಬಂದಂತೆ ಮಜ್ಜಿಗೆ ಹಾಕಿದ್ರೆ ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ. ಮಜ್ಜಿಗೆ ಹೆಚ್ಚು ಆಮ್ಲೀಯವಾಗಿರೋದ್ರಿಂದ ನೀವು ನೇರವಾಗಿ ಮಜ್ಜಿಗೆಯನ್ನು ಗಿಡಕ್ಕೆ ಹಾಕ್ಬೇಡಿ. ಒಂದು ಪಟ್ಟು ಮಜ್ಜಿಗೆಗೆ ನೀವು ಐದು ಪಟ್ಟು ನೀರನ್ನು ಹಾಕ್ಬೇಕು. ನೀವು ಒಂದು ಗ್ಲಾಸ್ ಮಜ್ಜಿಗೆ ತೆಗೆದುಕೊಂಡಿದ್ದರೆ ಅದಕ್ಕೆ ಐದು ಗ್ಲಾಸ್ ನೀರನ್ನು ಸೇರಿಸಿ ಮಿಕ್ಸ್ ಮಾಡಿ ನಂತ್ರ ಅದನ್ನು ಗಿಡಕ್ಕೆ ಹಾಕಬೇಕು. ಹೀಗೆ ಮಾಡಿದ್ರೆ ಬೇರುಗಳು ಸುರಕ್ಷಿತವಾಗಿರೋದಲ್ದೆ, ಗಿಡದ ಬೆಳವಣಿಗೆ ಉತ್ತಮವಾಗುತ್ತೆ.
36
ಹೂ ಬಿಡುವ ಸಸ್ಯಗಳಿಗೆ ಮಜ್ಜಿಗೆ
ಗುಲಾಬಿ, ದಾಸವಾಳ ಮತ್ತು ಶಂಖ ಪುಷ್ಪ ಹೂಗಳಿಗೆ ನೀವು ಮಜ್ಜಿಗೆಯನ್ನು ಅಗತ್ಯವಾಗಿ ಬಳಸಬೇಕು. ಇದು ಅತ್ಯುತ್ತಮ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಇದು ಮಣ್ಣಿನ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ಹೆಚ್ಚಿನ ಮೊಗ್ಗುಗಳು ಮತ್ತು ಹೂವಿನ ಗಾತ್ರ ದೊಡ್ಡದಾಗಲು ಕಾರಣವಾಗುತ್ತದೆ. ಗುಲಾಬಿ ಹೂ ದೊಡ್ಡದಾಗ್ತಿಲ್ಲ ಎಂದಾದ್ರೆ 15 ದಿನಗಳಿಗೊಮ್ಮೆ ಮಜ್ಜಿಗೆ ಹಾಕಿ.
ನಿಮ್ಮ ಮನೆಯಲ್ಲಿ ಬೆಳೆದುಕೊಳ್ಳಬಹುದಾದ ಟೊಮ್ಯಾಟೊ, ಮೆಣಸು ಮತ್ತು ಬಿಳಿಬದನೆಗಳಂತಹ ತರಕಾರಿ ಸಸ್ಯಗಳಿಗೆ ಮಜ್ಜಿಗೆ ಹಾಕೋದ್ರಿಂದ ಅದರ ಬೆಳವಣಿಗೆ ವೇಗಗೊಳ್ಳುತ್ತದೆ. ಕರಿಬೇವಿನ ಸುಹಾಸನೆಯನ್ನು ಮಜ್ಜಿಗೆ ಹೆಚ್ಚಿಸುತ್ತದೆ. ಕೀಟಗಳಿಂದ ಗಿಡಗಳನ್ನು ರಕ್ಷಿಸುತ್ತದೆ.
56
ಅತ್ಯುತ್ತಮ ಫಂಗಿಸೈಡ್
ಮಜ್ಜಿಗೆ ಗೊಬ್ಬರ ಮಾತ್ರವಲ್ದೆ ನೈಸರ್ಗಿಕ ಶಿಲೀಂಧ್ರನಾಶಕವಾಗಿ ಕೆಲ್ಸ ಮಾಡುತ್ತದೆ. ಎಲೆಗಳ ಮೇಲೆ ಬಿಳಿ ಚುಕ್ಕೆ ಅಥವಾ ಫಂಗಸ್ ಕಾಣಿಸಿಕೊಂಡ್ರೆ ನೀವು ಮಜ್ಜಿಗೆಯನ್ನು ಬಳಸಬಹುದು. ಒಂದು ಸ್ಪ್ರೇ ಬಾಟಲಿಗೆ ನೀರು ಬೆರೆಸಿದ ಮಜ್ಜಿಗೆಯನ್ನು ಹಾಕಿ ಅದನ್ನು ಎಲೆಗಳ ಮೇಲೆ ಸಿಂಪಡಿಸಿ. ಎಲೆ ಮೇಲಿರುವ ಫಂಗಸ್ ಕಡಿಮೆ ಆಗೋದಲ್ದೆ ಎಲೆಗಳು ಆರೋಗ್ಯವಾಗಿರುತ್ತವೆ.
66
ಮಜ್ಜಿಗೆ ಬಳಸುವ ಮುನ್ನ ಎಚ್ಚರಿಕೆ
ಪುರಾತನ ಕಾಲದಿಂದಲೂ ಬೆಳೆಗಾರರು ಮಜ್ಜಿಗೆ ಬಳಸ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ನಾನಾ ಬಗೆ ಕೆಮಿಕಲ್ಸ್ ಬಂದಿದ್ದು, ಅದ್ರ ಬಳಕೆ ಹೆಚ್ಚಾಗಿದೆ. ನೀವು ಕೆಮಿಕಲ್ ಬದಲು ಮಜ್ಜಿಗೆಯನ್ನು ಬಳಸಿ. ನೀವು ಸೂರ್ಯಹಸ್ತ ಅಥವಾ ಸೂರ್ಯೋದಯದ ಆರಂಭದಲ್ಲಿ ಮಜ್ಜಿಗೆಯನ್ನು ಸಿಂಪಡಿಸಬಹುದು. ಮಧ್ಯಾಹ್ನದ ಬಿಸಿಲಿನಲ್ಲಿ ಗಿಡಗಳಿಗೆ ನೀರು ಮಾತ್ರವಲ್ಲ ಮಜ್ಜಿಗೆಯನ್ನೂ ಹಾಕಬೇಡಿ. ನೀವು ತಿಂಗಳಿಗೆ ಒಂದು ಅಥವಾ ಎರಡು ಬಾರಿ ತೋಟದಲ್ಲಿರುವ ಗಿಡಗಳಿಗೆ ಮಜ್ಜಿಗೆ ಹಾಕಿದ್ರೆ ನಿಮ್ಮ ತೋಟದ ತುಂಬಾ ಹೂ, ತರಕಾರಿಯನ್ನು ನೋಡಿ ಆನಂದಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.