ಗರ್ಭಾವಸ್ಥೆಯಲ್ಲಿ, ಮಹಿಳೆಗೆ ನಡೆಯುವುದರಿಂದ ಹಿಡಿದು ತಿನ್ನುವುದು ಮತ್ತು ಮಲಗುವವರೆಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗುತ್ತದೆ. ಅನೇಕ ಬಾರಿ, ಕುಟುಂಬ ಸದಸ್ಯರು ಗರ್ಭಿಣಿ ಮಹಿಳೆಗೆ ಕೆಲವು ಕೆಲಸದ ಬಗ್ಗೆ ಪದೇ ಪದೇ ಅಡ್ಡಿಪಡಿಸುತ್ತಾರೆ. ಆದರೆ ಜನರು ಹೇಳುವ ಎಲ್ಲಾ ವಿಷಯಗಳು ನಿಜವಾಗಿರೋದಿಲ್ಲ. ಕೆಲವೊಮ್ಮೆ ಅದು ಗರ್ಭಾವಸ್ಥೆಯಲ್ಲಿ (pregnancy) ಸಾಮಾನ್ಯವಾಗಿ ಕಂಡು ಬರುವ ವಿಷಯವಾಗಿರುತ್ತೆ.
ಗರ್ಭಧಾರಣೆ ಸಂದರ್ಭದಲ್ಲಿ ಜನರು ನೀಡುವ ಸಲಹೆಗಳಲ್ಲಿ ಕೆಲವು ಸತ್ಯ ಮತ್ತು ಕೆಲವು ಸುಳ್ಳು ಕೂಡಿರುತ್ತವೆ. ಗರ್ಭಧಾರಣೆಗೆ ಸಂಬಂಧಿಸಿದ ಇಂತಹ ಮಿಥ್ಯೆಗಳ (pregnancy myths) ಸತ್ಯವೇನು ಎಂದು ತಿಳಿಯೋಣ. ಆ ಮೂಲಕ ನಿಮ್ಮ ಪ್ರೆಗ್ನೆನ್ಸಿ ಪಿರಿಯೇಡ್ ನ್ನು ಯಾವುದೇ ಟೇನ್ಶನ್ ಇಲ್ಲದೇನೆ ಆರಾಮವಾಗಿ ಕಳೆಯಿರಿ.
ಮಗು ಯಾವುದೆಂದು ಪತ್ತೆ ಮಾಡಬಹುದು
ಗರ್ಭಾವಸ್ಥೆಯಲ್ಲಿ ಬೇಬಿ ಬಂಪ್ (baby bump)ಆಕಾರವು ಗರ್ಭಾಶಯದೊಳಗಿನ ಮಗುವಿನ ಸ್ಥಾನವನ್ನು ಅವಲಂಬಿಸಿರುತ್ತದೆ. ಆದರೂ ಹೆಚ್ಚಿನ ಜನ ಗರ್ಭಿಣಿಯ ಹೊಟ್ಟೆಯ ಆಕಾರವನ್ನು ನೋಡಿ ಮಗು ಹೆಣ್ಣೋ, ಗಂಡು ಎಂಬುದನ್ನು ಹೇಳುತ್ತಾರೆ. ಆದರೆ ನಿಜವಾಗಿಯೂ ಹೊಟ್ಟೆ ನೋಡುವ ಮೂಲಕ ಮಗುವಿನ ಲಿಂಗವನ್ನು ಗುರುತಿಸಲಾಗುವುದಿಲ್ಲ.
ಮುಖದ ಹೊಳೆಯುತ್ತಿದ್ದರೆ ಹೆಣ್ಣು ಮಗು
ಗರ್ಭಾವಸ್ಥೆಯಲ್ಲಿ ಮಹಿಳೆಯ ಮುಖದ ಹೊಳಪನ್ನು (shining face) ನೋಡುವುದು ಮಗುವಿನ ಲಿಂಗವನ್ನು ಬಹಿರಂಗಪಡಿಸುತ್ತದೆ ಎಂದು ಜನರು ಹೇಳುತ್ತಾರೆ. ತಜ್ಞರ ಪ್ರಕಾರ, ಇದು ಸುಳ್ಳು. ಗರ್ಭಾವಸ್ಥೆಯನ್ನು ಮಹಿಳೆ ತಿನ್ನುವ ಆಹಾರದಿಂದಾಗಿ ಮುಖದಲ್ಲಿ ಹೊಳಪು ಮೂಡುತ್ತದೆ. ಇದು ಹುಟ್ಟಲಿರುವ ಮಗು ಹೆಣ್ಣು, ಗಂಡು ಎಂಬುದನ್ನು ನಿರ್ಧರಿಸೋದಿಲ್ಲ.
ಮಾರ್ನಿಂಗ್ ಸಿಕ್ ನೆಸ್
ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ನಾವು ಮಾರ್ನಿಂಗ್ ಸಿಕ್ ನೆಸ್ (morning sickness) ಸಮಸ್ಯೆ ಕಂಡಿರುತ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ತಲೆತಿರುಗಿದ ಅನುಭವ ಆಗೋದು, ಆಹಾರದ ಪರಿಮಳ ಬಂದ ಕೂಡಲೇ ವಾಕರಿಕೆ ವಾಂತಿಯ ಅನುಭವ ಆಗುತ್ತೆ. ಆದರೆ ಮಾರ್ನಿಂಗ್ ಸಿಕ್ ನೆಸ್ ನಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಹುಟ್ಟಲಿರುವ ಮಗುವಿಗೆ ಬೇಕಾದ ಪೌಷ್ಠಿಕಾಂಶ ಪಡೆಯುವುದಿಲ್ಲ ಎಂಬುದು ತಪ್ಪು.
ಸಾಮಾನ್ಯ ಸಮಸ್ಯೆ
ಮಾರ್ನಿಂಗ್ ಸಿಕ್ ನೆಸ್ ಅನ್ನೋದು ಗರ್ಭಿಣಿಯರಿಗೆ ಮೊದಲ ತ್ರೈ ಮಾಸಿಕದಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ ಎಂದು ವೈದ್ಯರು ನಂಬುತ್ತಾರೆ. ಇದರಿಂದ ಹೊಟ್ಟೆಯಲ್ಲಿರುವ ಮಗು ಸರಿಯಾದ ಪೋಷಕಾಂಶ ಪಡೆಯೋದಿಲ್ಲ ಅನ್ನೋದೆಲ್ಲ ನಿಜವಲ್ಲ.
ವ್ಯಾಯಾಮದಿಂದ ಹಾನಿ
ಗರ್ಭಾವಸ್ಥೆಯಲ್ಲಿ ವ್ಯಾಯಾಮ (exercise in pregnancy) ಮಾಡುವುದರಿಂದ ಮಗುವಿಗೆ ಹಾನಿಯಾಗುತ್ತದೆ ಅನ್ನೋದನ್ನು ನಾವು ಹೆಚ್ಚಾಗಿ ಕೇಳಿರುತ್ತೇವೆ, ಆದರೆ ಅದು ಸಂಪೂರ್ಣವಾಗಿ ತಪ್ಪು. ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದು ಮಹಿಳೆಯರಿಗೆ ಪ್ರಯೋಜನಕಾರಿ. ಇದರಿಂದ ನಾರ್ಮಲ್ ಡೆಲಿವರಿಯಾಗಲು ಸಹಾಯವಾಗುತ್ತೆ.
ಪ್ರೆಗ್ನೆನ್ಸಿ ಮತ್ತು ಕಾಫಿ (pregnancy and coffee)
ಪ್ರೆಗ್ನೆನ್ಸಿಯಲ್ಲಿ ಹೈಡ್ರೇಟ್ ಆಗಿರೋದು ತುಂಬಾ ಮುಖ್ಯ, ಹಾಗಂತ ಕೆಫೆನ್ ಹೆಚ್ಚಿರುವ ಪಾನೀಯ ಹೆಚ್ಚಿನ ಪ್ರಮಾಣದಲ್ಲಿ ಸೇವಿಸೋದು ಹಾನಿಕಾರಕ. ಗರ್ಭಿಣಿಯರು ಸಣ್ಣ ಪ್ರಮಾಣದಲ್ಲಿ ಕಾಫಿ ಕುಡಿದರೆ ಯಾವುದೇ ಹಾನಿಯಿಲ್ಲ. ಆದರೆ, ದಿನಕ್ಕೆ ಮೂರು ಕಪ್ ಗಿಂತ ಹೆಚ್ಚು ಚಹಾ ಅಥವಾ ಕಾಫಿ ಕುಡಿಯಬೇಡಿ.