ಶಿಕ್ಷಣ ಬದುಕನ್ನು ಹೇಗೆಲ್ಲ ಬದಲಿಸುತ್ತದೆ ಎಂಬುದಕ್ಕೆ ಈಕೆಯೇ ಸಾಕ್ಷಿ. ಆಕೆ ಶಿಕ್ಷಣದ ಬಗ್ಗೆ ಯೋಚಿಸದೆ ಮದುವೆ ಮಕ್ಕಳು ಎಂದು ಕೂತಿದ್ದರೆ ಈಗ ಮನೆಯಲ್ಲಿ ಸರ್ವೇಸಾಮಾನ್ಯ ಹೋರಾಟದ ಬದುಕು ಮಾಡಿಕೊಂಡಿರಬೇಕಿತ್ತು.
ಆದರೆ, ಅವರೊಳಗಿನ ಹಟ, ಛಲ, ಓದುವ ಹುರುಪು ಅವರದಷ್ಟೇ ಅಲ್ಲ, ಕುಟುಂಬದ ಬದುಕಿನ ಶೈಲಿಯನ್ನೇ ಬದಲಿಸಿತು. ಇಂದೀಕೆ ಕಾಲಿಟ್ಟಲೆಲ್ಲ ಎಲ್ಲರೂ ಎದ್ದು ನಿಂತು ಸೆಲ್ಯೂಟ್ ಮಾಡುತ್ತಾರೆ.
ಇಂಥದೊಂದು ಗೌರವವನ್ನು ಹಟದಿಂದ ಗಳಿಸಿದವರು ತಮಿಳುನಾಡಿನ ಎನ್ ಅಂಬಿಕಾ. ಇವರಿಗೆ 14ನೇ ವರ್ಷಕ್ಕೇ ಪೊಲೀಸ್ ಪೇದೆಯೊಂದಿಗೆ ಬಾಲ್ಯವಿವಾಹ ಮಾಡಿದರು.
18ರ ಹೊತ್ತಿಗಾಗಲೇ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿಯಾಗಿತ್ತು. ಇನ್ಯಾರೇ ಆಗಿದ್ದರೂ ಓದಿಲ್ಲದೆ, ಸಣ್ಣ ವಯಸ್ಸನಲ್ಲೇ ಸಾಕಷ್ಟು ಜವಾಬ್ದಾರಿ ನಿಭಾಯಿಸಬೇಕಾದ ಕೆಲಸಗಳ ನಡುವೆ ಆತ್ಮವಿಶ್ವಾಸ ಕುಗ್ಗಿಸಿಕೊಂಡು ಹೇಗೋ ಬದುಕು ದೂಡುತ್ತಿದ್ದರು.
ಆದರೆ, ಅಂಬಿಕಾ ಅವರೊಳಗಿನ ಛಲ ಅವರನ್ನು ಹಾಗೆ ಸುಮ್ಮನಿರಲು ಬಿಡಲಿಲ್ಲ. ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪತಿಯು ಐಪಿಎಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ್ದನ್ನು ನೋಡಿದ ಅಂಬಿಕಾಗೆ ತಾನೂ ಹಾಗಾಗಬೇಕೆಂಬ ಆಸೆ ಹುಟ್ಟಿತು.
ಇದಾದ ನಂತರ, ಅಂಬಿಕಾ ಐಪಿಎಸ್ ಅಧಿಕಾರಿಯಾಗುವ ಪಯಣ 10ನೇ ತರಗತಿ ಪರೀಕ್ಷೆ ಕಟ್ಟುವುದರಿಂದ ಆರಂಭವಾಯಿತು. ಖಾಸಗಿ ಸಂಸ್ಥೆಯಲ್ಲಿ 10, 12ನೇ ತರಗತಿ ಮುಗಿಸಿದ ಅಂಬಿಕಾ UPSC ಗೆ ತಯಾರಿ ಮಾಡಲು ಚೆನ್ನೈಗೆ ತೆರಳಿದರು.
ಏತನ್ಮಧ್ಯೆ, ಅವರ ಪತಿ ತನ್ನದೇ ಆದ ವೃತ್ತಿಪರ ಕರ್ತವ್ಯಗಳನ್ನು ಮಾಡುತ್ತಾ ತಮ್ಮ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಪತ್ನಿಯ ಬೆಂಬಲಕ್ಕೆ ನಿಂತರು.
ಯುಪಿಎಸ್‌ಸಿಯಲ್ಲಿ ಮೂರು ಬಾರಿ ಅನುತ್ತೀರ್ಣರಾದ ಅಂಬಿಕಾಗೆ ಸುಮ್ಮನೆ ಗಂಡನ ಮನೆಯಲ್ಲಿರುವ ಸಲಹೆಗಳು ಹರಿದುಬಂದವು. ಆದರೆ, ಅಂಬಿಕಾ ಹಟ ಬಿಡಲಿಲ್ಲ. 2008 ರಲ್ಲಿ ತನ್ನ ನಾಲ್ಕನೇ ಪ್ರಯತ್ನವನ್ನು ನೀಡಿ ಅಂತಿಮವಾಗಿ UPSC ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಮಹಾರಾಷ್ಟ್ರ ಕೇಡರ್‌ನಲ್ಲಿ ನೇಮಕಗೊಂಡಿರುವ ಅವರು ಪ್ರಸ್ತುತ ಮುಂಬೈನಲ್ಲಿ ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಬಿಕಾರ ಛಲ, ಹಟ ಎಲ್ಲ ಹೆಣ್ಣುಮಕ್ಕಳಲ್ಲೂ ಹುಟ್ಟಿದರೆ, ಬದುಕನ್ನು ಬದಲಾಯಿಸಿಕೊಳ್ಳುವ ಶಕ್ತಿ ಸುಲಭವಾಗಿ ಒಲಿಯುತ್ತದೆ ಅಲ್ಲವೇ?