ನಗರ ಅಂದ್ರೆ ನಿಮ್ಮ ಕಣ್ಣ ಮುಂದೆ ಏನು ಬರುತ್ತೆ. ಹಲವಾರು ಮನೆಗಳು, ಕಚೇರಿಗಳು, ಸರ್ಕಾರಿ ಕಚೇರಿಗಳು, ಶಾಲೆ, ಉದ್ಯಾನವನ ಎಲ್ಲವೂ ಸೇರಿದ ಒಂದು ದೊಡ್ಡ ಊರು ಅಲ್ವಾ? ಆದರೆ ಪ್ರಪಂಚದಲ್ಲಿ ಒಂದು ನಗರವಿದೆ. ಈ ನಗರ ಸಂಪೂರ್ಣವಾಗಿ ಒಂದು ಕಟ್ಟಡದೊಳಗಿದೆ (city under one roof). ಹೌದು, ನೀವು ಕೇಳಿದ್ದು, ಸರಿಯಾಗಿಯೇ ಇದೆ. ಈ ಕಟ್ಟಡದ ಒಳಗೆ, ಇಡೀ ನಗರವಿದೆ, ಶಾಲೆಗಳಿಂದ ಪೊಲೀಸ್ ಠಾಣೆಗಳವರೆಗೆ (police station), ಎಲ್ಲಾ ಸೌಲಭ್ಯಗಳು ಲಭ್ಯವಿದೆ.
ಈ ಕಟ್ಟಡವು 14 ಅಂತಸ್ತುಗಳನ್ನು ಹೊಂದಿದೆ.
ಈ 14 ಅಂತಸ್ತಿನ ಕಟ್ಟಡವನ್ನು (14 story building) ವಿಟ್ಟಿಯರ್ ಟೌನ್ ಎಂದು ಹೆಸರಿಸಲಾಗಿದೆ, ಮತ್ತು ಈ ಕಟ್ಟಡವು ಅಮೆರಿಕದ ಉತ್ತರ ರಾಜ್ಯ ಅಲಾಸ್ಕಾದಲ್ಲಿದೆ. ಇದನ್ನು ಬೆಗಿಚ್ ಟವರ್ ಎಂದೂ ಕರೆಯುತ್ತಾರೆ. ಈ ಗೋಪುರವು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.
ಕಟ್ಟಡದಲ್ಲಿಯೇ ಅನೇಕ ಸೌಲಭ್ಯಗಳು
ಶಾಲೆ, ಆಸ್ಪತ್ರೆ, ಚರ್ಚ್, ಮಾರುಕಟ್ಟೆ ಮುಂತಾದ ಸೌಲಭ್ಯಗಳನ್ನು ಈ ಒಂದು ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಕಟ್ಟಡದ ಒಳಗೆ ಪೊಲೀಸ್ ಠಾಣೆಯೂ ಇದೆ, ಇದರಿಂದ ಜನರು ತಮ್ಮ ಪ್ರತಿಯೊಂದು ದೂರನ್ನು ಹತ್ತಿರದಲ್ಲೇ ದಾಖಲಿಸಬಹುದು.
200 ಕುಟುಂಬಗಳಿವೆ
ಸುಮಾರು 200 ಕುಟುಂಬಗಳು ಈ ಕಟ್ಟಡದಲ್ಲಿ ವಾಸಿಸುತ್ತಿವೆ. ಆಶ್ಚರ್ಯಕರವಾಗಿ, ಇಡೀ ನಗರವು ಇದೇ ಕಟ್ಟಡದಲ್ಲಿ ವಾಸಿಸುತ್ತಿದೆ. ಉತ್ತಮ ವಿಷಯವೆಂದರೆ ಇಲ್ಲಿ ಲಾಂಡ್ರಿ ಮತ್ತು ಜನರಲ್ ಸ್ಟೋರ್ ಗಳ ಸೌಲಭ್ಯವೂ ಇದೆ. ಮಾಲೀಕರು ಮತ್ತು ಉದ್ಯೋಗಿ ಎಲ್ಲರೂ ಈ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.
ಇಡೀ ನಗರವು ಒಂದೇ ಕಟ್ಟಡದಲ್ಲಿ ಏಕೆ ಇದೆ?
ಇದು ಹಿಂದೆ ನಗರವಾಗಿರಲಿಲ್ಲ. ಶೀತಲ ಯುದ್ಧದ (cold war) ಸಮಯದಲ್ಲಿ, ಈ ಗೋಪುರವು ಸೇನಾ ಬ್ಯಾರಕ್ ಆಗಿತ್ತು. ಶೀತಲ ಯುದ್ಧದ ಸಮಯದಲ್ಲಿನ, ಅನೇಕ ರಹಸ್ಯಗಳು ಇನ್ನೂ ಈ ಕಟ್ಟಡದಲ್ಲಿ ಲಾಕ್ ಆಗಿವೆ. ಕೋಲ್ಡ್ ವಾರ್ ಮುಗಿದು ಸೈನ್ಯವು ಹಿಂದಿರುಗಿದ ಕೂಡಲೇ, ಜನರು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡರು.
ಹವಾಮಾನದಿಂದಾಗಿ ಜನರು ಇಲ್ಲಿ ವಾಸಿಸುತ್ತಾರೆ.
ಈ ಕಟ್ಟಡವೇ ನಗರವಾಗಲು ಮತ್ತೊಂದು ಕಾರಣವೆಂದರೆ ಹವಾಮಾನ, ಇಲ್ಲಿ ಇಡೀ ಪ್ರದೇಶದಲ್ಲಿ ವರ್ಷದ ಹೆಚ್ಚಿನ ಸಮಯ ಹವಾಮಾನವು ತುಂಬಾ ಕೆಟ್ಟದಾಗಿರುತ್ತೆ. ಚಳಿಯಿಂದ ಜನರು ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗೋದರಿಂದ ಬೆಗಿಚ್ ಟವರ್ ನಲ್ಲಿ ಜನರು ವಾಸಿಸಲು ಇದು ಕಾರಣವಾಗಿದೆ. ಈ ಕಟ್ಟಡವನ್ನು ಹೊರತುಪಡಿಸಿ, ಜನರು ಬೇರೆಲ್ಲಿಯೂ ಹೋಗುವುದಿಲ್ಲ. ಅದಕ್ಕಾಗಿಯೇ ಅಗತ್ಯವಿರುವ ಪ್ರತಿಯೊಂದು ವಸ್ತುಗಳು ಇಲ್ಲಿಯೇ ದೊರೆಯುತ್ತವೆ. .