Cherry Blossom: ಜಪಾನ್‌ನಲ್ಲಿ ಅರಳಿ ನಿಂತಿವೆ ಚೆರ್ರಿ ಹೂವುಗಳು : ನೋಡುಗರ ಕಣ್ಣಿಗೆ ಹಬ್ಬ

First Published | Mar 16, 2023, 5:05 PM IST

ಜಪಾನ್‌ನಲ್ಲಿ ವಸಂತ ಋತು ಪ್ರವಾಸಿಗರಿಗೆ ಬಹಳ ವಿಶೇಷ. ಏಕೆಂದರೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಲ್ಲೆಡೆ 'ಚೆರ್ರಿ ಬ್ಲಾಸಮ್' ನ ವಿಶೇಷ ಆಕರ್ಷಣೆ ಆಗಿರುತ್ತೆ. 'ಚೆರ್ರಿ ಬ್ಲಾಸಮ್' ಅನ್ನು ಜಪಾನ್‌ನಲ್ಲಿ 'ಸಕುರಾ' ಎಂದೂ ಕರೆಯಲಾಗುತ್ತದೆ. ಇದು ಜಪಾನ್ ನ ರಾಷ್ಟ್ರೀಯ ಹೂವು ಮತ್ತು ಅದು ಅರಳುವುದನ್ನು ನೋಡುವುದು ನಿಜವಾಗಿಯೂ ಸ್ಮರಣೀಯ ಅನುಭವವಾಗಿದೆ. 
 

ಜಗತ್ತಿನ ಅದ್ಭುತ ಸೌಂದರ್ಯವನ್ನು ಸವಿಯುವ ಮನಸು ನಿಮಗಿದ್ದರೆ, ನೀವು ಖಂಡಿತವಾಗಿ ಜಪಾನ್‌ಗೆ ಒಂದು ಬಾರಿ ಈ ಸಮಯದಲ್ಲಿ ಭೇಟಿ ನೀಡಲೇಬೇಕು. ಯಾಕೆಂದರೆ ಇದೀಗ ಅಲ್ಲಿ ಚೆರ್ರಿ ಬ್ಲಾಸಮ್ (cherry blossom) ಅರಳಿ ನಿಂತಿದೆ. ಇಲ್ಲಿನ ಜನರು ಇದನ್ನು ಹಬ್ಬವಾಗಿ ಆಚರಿಸುತ್ತಾರೆ, ಇದನ್ನು 'ಹನಾಮಿ ಹಬ್ಬ' ಎಂದು ಕರೆಯಲಾಗುತ್ತದೆ. ಈ ಹೂವನ್ನು ಭರವಸೆಯ ಸಂಕೇತವೆಂದು ಸಹ ಪರಿಗಣಿಸಲಾಗುತ್ತದೆ.

ಪ್ರತಿ ವರ್ಷ ಇದು ವಸಂತ ಕಾಲದ ಆಗಮನವನ್ನು ಸೂಚಿಸುತ್ತದೆ. ಈ ಹೂವು ಮಾರ್ಚ್‌ನಿಂದ ಏಪ್ರಿಲ್ ಮಧ್ಯದವರೆಗೆ ಅರಳುತ್ತದೆ. ಚೆರ್ರಿ ಹೂವುಗಳು ಅರಳಲು ಪ್ರಾರಂಭಿಸಿದಾಗ, ವಸಂತ ಬಂದಿದೆ (spring season) ಎಂದು ಅರ್ಥಮಾಡಿಕೊಳ್ಳಿ. ಇಲ್ಲಿನ ಜನರು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಈ ಹಬ್ಬವನ್ನು ಆಡಂಬರದಿಂದ ಆಚರಿಸುತ್ತಾರೆ.

Tap to resize

ಟೋಕಿಯೊದಲ್ಲಿ ಚೆರ್ರಿ ಹೂವುಗಳು ಅರಳಲು ಪ್ರಾರಂಭಿಸಿವೆ ಎಂದು ಹವಾಮಾನ ಸಂಸ್ಥೆ ಮಂಗಳವಾರ ಪ್ರಕಟಿಸಿದೆ, ಕೋವಿಡ್ -19 ನಿಂದ ಸ್ಥಗಿತಗೊಂಡಿದ್ದ, ಉದ್ಯಾನವನಗಳು ಮತ್ತು ಇತರ ಸ್ಥಳಗಳಿಗೆ ಇದೀಗ ಜನರು ಮುಗಿಬಿದ್ದು, ಚೆರ್ರಿ ಬ್ಲಾಸಮ್ ಸೌಂದರ್ಯ ನೋಡಿ ತಮ್ಮನ್ನೇ ತಾವು ಮರೆಯುತ್ತಿದ್ದಾರೆ.

ಸಾಮಾನ್ಯವಾಗಿ, ಜಪಾನ್‌ನಲ್ಲಿ ಚೆರ್ರಿ ಹೂವುಗಳು ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಆರಂಭದ ನಡುವೆ ಹೆಚ್ಚಾಗಿ ಅರಳಿ ನಿಲ್ಲುತ್ತವೆ. ಆದಾಗ್ಯೂ, ಈ ವರ್ಷ, ಅಪ್ರತಿಮ ಹೂವುಗಳು 1953 ರಿಂದ ಸಾಮಾನ್ಯಕ್ಕಿಂತ ಹತ್ತು ದಿನ ಮುಂಚಿತವಾಗಿ ಕಾಣಿಸಿಕೊಂಡು ನೋಡುಗರ ಕಣ್ಣಿಗೆ ಹಬ್ಬವನ್ನು ನೀಡುತ್ತಿದೆ. 

ಚೆರ್ರಿ ಹೂವುಗಳು ಅಥವಾ ಸಕುರಾಗಳ ಆರಂಭಿಕ ಪ್ರಾರಂಭವು ಅಸಾಮಾನ್ಯ ಬೆಚ್ಚಗಿನ ಹವಾಮಾನದ ಪರಿಣಾಮ ಎಂದು ತಜ್ಞರು ಹೇಳುತ್ತಾರೆ, ಇದು ಹವಾಮಾನ ಬದಲಾವಣೆಯಿಂದ ಉತ್ತೇಜಿಸಲ್ಪಡುತ್ತಿದೆ. ಮಾರ್ಚ್ ಆರಂಭದಿಂದಲೂ ತಾಪಮಾನವು ಏರುತ್ತಿದೆ, ಇದು ತ್ವರಿತ ಮೊಗ್ಗು ಬೆಳವಣಿಗೆಗೆ ಕಾರಣವಾಗಿದೆ. ಮುಂದಿನ ವಾರದೊಳಗೆ ಹೂವುಗಳು ಪೂರ್ಣವಾಗಿ ಅರಳುವ ನಿರೀಕ್ಷೆಯಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.

ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ (social media) ಬಳಕೆದಾರರು ಚೆರ್ರಿ ಹೂವಿನ ಸುಂದರವಾದ ಚಿತ್ರಗಳು ಮತ್ತು ವೀಡಿಯೊಗಳನ್ನು  ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ದೊಡ್ಡ ಸಭೆಗಳನ್ನು ನಿರ್ಬಂಧಿಸಿದ ನಂತರ ಇದೀಗ ಮೊದಲ ಬಾರಿಗೆ ಚೆರ್ರಿ ಹೂವುಗಳನ್ನು ವೀಕ್ಷಿಸುವ ಪಾರ್ಟಿಗಳಿಗೆ ಜನರು ಹರಿದು ಬರುತ್ತಿದ್ದಾರೆ. 

ಜಪಾನ್ ನಲ್ಲಿ ಚೆರ್ರಿ ಹೂವನ್ನು (cherry blossom in Japan) ನೋಡಲು ಅನೇಕ ಸುಂದರವಾದ ಸ್ಥಳಗಳಿವೆ, ಅಲ್ಲಿ ಈ ಋತುವಿನಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ರಾಜಧಾನಿ ಕ್ಯೋಟೋದಲ್ಲಿರುವ ಕಿಂಕಕು-ಜಿ ಈ ಪ್ರಮುಖ ತಾಣಗಳಲ್ಲಿ ಒಂದಾಗಿದೆ, ಇದನ್ನು ಗೋಲ್ಡನ್ ಪೆವಿಲಿಯನ್ ಎಂದೂ ಕರೆಯಲಾಗುತ್ತದೆ.  ಜಪಾನ್ ರಾಜಧಾನಿ ಟೋಕಿಯೊದಿಂದ ನೀವು ಚೆರ್ರಿ ಹೂವಿನ ಮರವನ್ನು ನೋಡಲು ಪ್ರಾರಂಭಿಸಬಹುದು. ಇಲ್ಲಿ ನೀವು ಚೆರ್ರಿ ಹೂವನ್ನು ನೋಡಲು ಹೋಗುತ್ತಿದ್ದರೆ, ಮಾರ್ಚ್ 26 ಮತ್ತು ಏಪ್ರಿಲ್ 11 ರ ನಡುವೆ ಹೋಗುವುದು ಸರಿ.

Latest Videos

click me!