ಪುರಿ ಜಗನ್ನಾಥನ ರಥಯಾತ್ರೆ ಜುಲೈ 07 ರಂದು ಪ್ರಾರಂಭವಾಗಲಿದ್ದು, ಇದನ್ನ ನೋಡೋದಕ್ಕೆ ಭಕ್ತರು ದೇಶದ ಮೂಲೆ, ಮೂಲೆಯಿಂದ ಇಲ್ಲಿದೆ ಬರುತ್ತಾರೆ. ಈ ಸಂದರ್ಭದಲ್ಲಿ ಪುರಿ ಜಗನ್ನಾಥನ ರಹಸ್ಯದ ಬಗ್ಗೆ ತಿಳಿಸುತ್ತೇವೆ.
ಪುರಿ ಜಗನ್ನಾಥ (Puri Jagannath) ದೇಗುಲವನ್ನು ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇಗುಲದ ಸಂಬಂಧಿಸಿದ ಹಲವು ಕಥೆಗಳನ್ನೂ ನೀವು ಕೇಳಿರುತ್ತೀರಿ, ಅದರಲ್ಲಿ ಒಂದು ಇಲ್ಲಿ ಶ್ರೀಕೃಷ್ಣನ ಹೃದಯ ಮಿಡಿಯುತ್ತಂತೆ. ಇದರ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ. ಈ ಧಾಮವು ವಿಷ್ಣುವಿನ ಒಂದು ರೂಪವಾದ ಜಗನ್ನಾಥ ಪ್ರಭುವಿಗೆ ಸಮರ್ಪಿತವಾಗಿದೆ. ಜಗನ್ನಾಥನೊಂದಿಗೆ ಸಹೋದರಿ ಸುಭದ್ರಾ ಮತ್ತು ಸಹೋದರ ಬಲರಾಮ ಕೂಡ ಈ ಸ್ಥಳದಲ್ಲಿ ವಾಸವಾಗಿದ್ದಾರೆ.
210
ಈ ದೈವಿಕ ಸ್ಥಳದಲ್ಲಿ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಭಗವಾನ್ ಜಗನ್ನಾಥನ ರಥಯಾತ್ರೆ ಪ್ರಾರಂಭವಾಗಲಿರುವಾಗ, ಇಲ್ಲಿಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಮತ್ತು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
310
ಶ್ರೀ ಕೃಷ್ಣನ ಹೃದಯ ಇಲ್ಲಿ ಇಂದಿಗೂ ಮಿಡಿಯುತ್ತಿದೆ
ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳ ಪ್ರಕಾರ, ಭಗವಾನ್ ಕೃಷ್ಣನ (Lord Krishna) ಹೃದಯವು ಇಂದಿಗೂ ಜಗನ್ನಾಥ ಧಾಮದಲ್ಲಿ ಮಿಡಿಯುತ್ತದೆ. ಶ್ರೀಕೃಷ್ಣ ತನ್ನ ದೇಹವನ್ನು ತ್ಯಾಗ ಮಾಡಿದಾಗ, ಅವನನ್ನು ಪಾಂಡವರು ದಹನ ಮಾಡಿದರಂತೆ. ದೇಹವನ್ನು ಸುಟ್ಟ ನಂತರವೂ, ಕೃಷ್ಣನ ಹೃದಯವು ಉರಿಯದೇ ಹಾಗೇ ಉಳಿಯಿತು, ಇದರಿಂದಾಗಿ ಪಾಂಡವರು ಹೃದಯವನ್ನ ಪವಿತ್ರ ನದಿಗೆ ಹಾಕಿದರಂತೆ.
410
ಶ್ರೀಕೃಷ್ಣನ ಹೃದಯವು ನೀರಿನಲ್ಲಿ ಹರಿಯುತ್ತಾ, ಮರದ ದಿಮ್ಮಿಯ ರೂಪವನ್ನು ತೆಗೆದುಕೊಂಡಿತು ಎಂದು ಹೇಳಲಾಗುತ್ತದೆ, ಇದನ್ನು ಶ್ರೀ ಕೃಷ್ಣನು ರಾಜ ಇಂದ್ರದ್ಯುಮ್ನನಿಗೆ ಕನಸಿನಲ್ಲಿ ತಿಳಿಸಿದನು, ನಂತರ ರಾಜನು ಜಗನ್ನಾಥ ಬಲಭದ್ರ ಮತ್ತು ಸುಭದ್ರಾ ವಿಗ್ರಹವನ್ನು ಮರದ ದಿಮ್ಮಿಯಿಂದ ಮಾಡುವ ನಿರ್ಮಾಣ ಕಾರ್ಯವನ್ನು ವಿಶ್ವಕರ್ಮರಿಗೆ ನಿರ್ವಹಿಸಿದರಂತೆ. ಹಾಗಾಗಿ ಇಂದಿಗೂ ಇಲ್ಲಿನ ವಿಗ್ರಹದಲ್ಲಿ ಶ್ರೀಕೃಷ್ಣನ ಹೃದಯ ಮಿಡಿಯುತ್ತಿದೆ ಎನ್ನಲಾಗುತ್ತದೆ.
510
ಜಗನ್ನಾಥ ಧಾಮದಲ್ಲಿರುವ ಮೂರು ವಿಗ್ರಹಗಳು ಅಪೂರ್ಣ
ಪ್ರತಿಮೆಯನ್ನು ತಯಾರಿಸುವ ಮೊದಲು, ದೇವ ಶಿಲ್ಪಿ ವಿಶ್ವಕರ್ಮರು ರಾಜ ಇಂದ್ರದ್ಯುಮ್ನನ ಮುಂದೆ ವಿಗ್ರಹಗಳನ್ನು ತಯಾರಿಸೋ ಸ್ಥಳಕ್ಕೆ ಯಾರೂ ಬರಬಾರದು, ಯಾರಾದರೂ ಒಳಗೆ ಬಂದರೆ, ವಿಗ್ರಹಗಳನ್ನು ನಿರ್ಮಾಣ ನಿಲ್ಲಿಸಲಾಗುತ್ತೆ ಎಂದು ಷರತ್ತು ವಿಧಿಸಿದ್ದರಂತೆ. ಬೇಗನೆ ವಿಗ್ರಹಗಳನ್ನ ನೋಡುವ ಹಂಬಲದಲ್ಲಿದ್ದ ರಾಜನು ತಕ್ಷಣವೇ ಭಗವಾನ್ ವಿಶ್ವಕರ್ಮನ (Vishwakarma) ಮಾತುಗಳನ್ನು ಒಪ್ಪಿಕೊಂಡನು.
610
ಇದರ ನಂತರ, ವಿಶ್ವಕರ್ಮ ಆ ವಿಗ್ರಹಗಳನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದರು. ವಿಶ್ವಕರ್ಮರು ಮಾಡುತ್ತಿದ್ದ ಈ ದೈವೀಕ ಕಾರ್ಯದ ಶಬ್ಧ ಬಾಗಿಲಿನ ಹೊರಗೂ ಕೇಳಿಸುತ್ತಿತ್ತು, ಆ ಶಬ್ಧವನ್ನು ರಾಜನು ಪ್ರತಿದಿನ ಕೇಳಿ ತೃಪ್ತನಾಗುತ್ತಿದ್ದನು, ಆದರೆ ಒಂದು ದಿನ ಇದ್ದಕ್ಕಿದ್ದಂತೆ ಶಬ್ಧವೇ ಬರೋದು ನಿಂತು ಹೋಯಿತಂತೆ. ಇದರಿಂದಾಗಿ ರಾಜ ಇಂದ್ರದ್ಯುಮ್ನನು ವಿಗ್ರಹಗಳ ಕಾರ್ಯ ಪೂರ್ಣಗೊಂಡಿರಬಹುದು, ಹಾಗಾಗಿ ಶಬ್ಧ ಬರುತ್ತಿಲ್ಲ ಎಂದು ಅಂದುಕೊಂಡನು.
710
ಈ ತಪ್ಪು ತಿಳುವಳಿಕೆಯಲ್ಲಿ, ಅವರು ಬಾಗಿಲು ತೆರೆದರು, ಷರತ್ತು ಪ್ರಕಾರ, ಬಾಗಿಲು ತೆರೆದ ಕೂಡಲೇ, ವಿಶ್ವಕರ್ಮ ದೇವರು ಅಲ್ಲಿಂದ ಕಣ್ಮರೆಯಾದರು, ಆದರೆ ಪ್ರತಿಮೆಗಳು ಇನ್ನೂ ಸಿದ್ಧವಾಗಿರಲಿಲ್ಲ. ಅಂದಿನಿಂದ ಈ ವಿಗ್ರಹಗಳು ಅಪೂರ್ಣವಾಗಿವೆ ಮತ್ತು ಈ ಮೂರು ವಿಗ್ರಹಗಳಿಗೆ ಕೈ ಮತ್ತು ಕಾಲುಗಳಿಲ್ಲ ಎನ್ನುತ್ತಾರೆ ಜನ.
810
ಮತ್ತೊಂದು ಅಚ್ಚರಿಯ ವಿಷಯ ಅಂದ್ರೆ ಈ ದೇಗುಲ ಬಂಗಾಳ ಕೊಲ್ಲಿಯ ಬಳಿಯೇ ಇದೆ. ದೇಗುಲದ ಹತ್ತಿರ ಬರುತ್ತಿದ್ದಂತೆ ಸಮುದ್ರದ ಅಲೆಗಳ ಶಬ್ಧ ಕೇಳಿ ಬರುತ್ತದೆ. ಆದರೆ ವಿಶೇಷವೆಂದರೆ ಈ ದೇಗುಲದ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಸಮುದ್ರದ ಶಬ್ಧವೇ ಕೇಳಿ ಬರೋದಿಲ್ಲ. ಇದು ಅಚ್ಚರಿಯ ವಿಷಯ.
910
ಅಲ್ಲದೇ ಈ ಜಾಗ ನೋ ಪ್ಲೈ ಝೋನ್ (No fly zone), ಅಂದ್ರೆ ಪುರಿ ಜಗನ್ನಾಥ ಮಂದಿರದ ಮೇಲೆ ಯಾವುದೇ ಫೈಟ್, ಏರೋಪ್ಲೇನ್ ಆಗಲಿ ಅಥವಾ ಡ್ರೋನ್ ಯಾವುದೂ ಹಾರಾಡುವಂತಿಲ್ಲ. ಕಾರಣ ಗೋಪುರಕ್ಕಿಂತ ಮೇಲೆ ಯಾವುದೂ ಹೋಗುವಂತಿಲ್ಲ. ಆದರೆ ಪ್ರಕೃತಿಯನ್ನು ನಾವು ಎಂದಿಗೂ ಕಂಟ್ರೋಲ್ ಮಾಡಲು ಸಾಧ್ಯವೇ ಇಲ್ಲ ಅಲ್ವಾ? ಅದರೂ ಅಚ್ಚರಿ ಎಂಬಂತೆ ಇಲ್ಲಿ ಗೋಪುರದ ಮೇಲಿನಿಂದ ಯಾವುದೇ ಪಕ್ಷಿಗಳು ಹಾರಾಡುವುದೇ ಇಲ್ಲ. ಇದು ಹೇಗೆ ಸಾಧ್ಯ ಅನ್ನೋದು ತಿಳಿದಿಲ್ಲ.
1010
ಈ ದೇಗುಲದ ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ದೇವರಿಗೆ ನೈವೇದ್ಯವನ್ನು ಏಳು ಮಡಕೆಯಲ್ಲಿ ಬೇಯಿಸಲಾಗುತ್ತಂತೆ. ಏಳು ಮಡಕೆಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು, ಕೆಳಗೆಯಿಂದ ಕಟ್ಟಿಗೆ ಹಾಕಿ ಬೆಂಕಿ ಮಾಡಲಾಗುತ್ತೆ. ಅಚ್ಚರಿ ಏನು ಅಂದ್ರೆ ಮೇಲೆ ಇಟ್ಟ ಮಡಕೆಯ ಅನ್ನ ಮೊದಲು ಬೇಯುತ್ತದೆ, ನಂತರ ಅದರ ಕೆಳಗಿನದ್ದು, ಹೀಗೆ ಎಲ್ಲಾ ಮಡಕೆಗಳಲ್ಲಿನ ನೈವೇದ್ಯ ತಯಾರಾಗುತ್ತದೆ. ಇಲ್ಲಿನ ನಂಬಿಕೆಯ ಪ್ರಕಾರ ಪ್ರತಿದಿನ ಶ್ರೀಲಕ್ಷ್ಮೀ ದೇವಿ ಬಂದು ಇಲ್ಲಿ ಅಡುಗೆ ತಯಾರಿಸುತ್ತಾಳಂತೆ. ಹಾಗಾಗಿ ಇಲ್ಲಿ ಯಾವತ್ತೂ ಭಕ್ತರಿಗೆ ಅನ್ನ ಸಿಗದೇ ಹೋಗಿಲ್ಲ, ಜೊತೆಗೆ ಒಂದು ತುತ್ತು ಅನ್ನ ಕೂಡ ವೇಸ್ಟ್ ಆದ ಇತಿಹಾಸವೇ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.