ಮನಸ್ಸು ಎಲ್ಲಾ ಯೋಚನೆಯನ್ನು ಮರೆತು ನೆಮ್ಮದಿಯ ಗೂಡಾಗಬೇಕು ಅಂತಾದ್ರೆ ಸೂರ್ಯಾಸ್ತವನ್ನು (sunset) ನೋಡುವುದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ಸೂರ್ಯಾಸ್ತ ವಿದೇಶಗಳಲ್ಲಿ ಮಾತ್ರವಲ್ಲ, ನಮ್ಮ ದೇಶದಲ್ಲಿಯೂ ತುಂಬಾ ಸುಂದರವಾಗಿ ಕಾಣುತ್ತದೆ. ಪರ್ವತಗಳಲ್ಲಿ ಅಥವಾ ಮರಳು ದಿಬ್ಬಗಳಲ್ಲಿ , ಬೀಚ್ ಗಳಲ್ಲಿ ಸುಮ್ಮನೆ ಕುಳಿತು ಸೂರ್ಯ ಮುಳುಗುವ ದೃಶ್ಯವನ್ನು ಕಣ್ತುಂಬಿಕೊಂಡರೆ, ಅದಕ್ಕಿಂತ ಉತ್ತಮವಾದುದು ಇನ್ನೇನಿದೆ ಅಲ್ವಾ?
ನಿಜಾ ಹೇಳಬೇಕೆಂದರೆ, ಸೂರ್ಯಾಸ್ತ ನೀರಸ ಸಂಜೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ರೊಮ್ಯಾಂಟಿಕ್ ಡೇಟಿಗೆ ಸನ್ ಸೆಟ್ ಪಾಯಿಂಟ್ ಉತ್ತಮ ಆಯ್ಕೆ. ಭಾರತದಲ್ಲಿ ಸೂರ್ಯಾಸ್ತಕ್ಕೆ ವಿಶೇಷವಾಗಿ ಪ್ರಸಿದ್ಧವಾದ ಅನೇಕ ಸ್ಥಳಗಳಿವೆ. ಅದ್ಭುತವಾದ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ನೀವು ಹೋಗಬೇಕಾದ ಸ್ಥಳಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ತಾಜ್ ಮಹಲ್ (Taj Mahal)
ನೀವು ಭಾರತದಲ್ಲಿ ಸೂರ್ಯಾಸ್ತ ನೋಡಲು ಬಯಸಿದರೆ, ತಾಜ್ ಮಹಲ್ ಗಿಂತ ಉತ್ತಮ ಸ್ಥಳ ಬೇರೆ ಇಲ್ಲ. ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲಿರುವ ಈ ಬಿಳಿ ಅಮೃತಶಿಲೆಯ ಪ್ರೇಮ ಸೌಧವನ್ನು ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ನೋಡುವುದೇ ಚಂದ. ಪ್ರತಿದಿನ ಸಂಜೆ, ಸ್ಮಾರಕದ ಹಿಂದೆ ಸೂರ್ಯ ಮುಳುಗುತ್ತಿದ್ದಂತೆ, ತಾಜ್ ಮಹಲ್ ಚಿನ್ನದ ಬಣ್ಣದಿಂದ ಬೆಳಗುತ್ತದೆ. ಈ ದೃಶ್ಯವು ಎಷ್ಟು ಆಕರ್ಷಕವಾಗಿರುತ್ತೆ ಅಂದ್ರೆ, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ಪಲೋಲೆಮ್ ಬೀಚ್, ಗೋವಾ (Palolem Beach Goa)
ಪಲೋಲೆಮ್ ಬೀಚ್ ಸೂರ್ಯಾಸ್ತದ ಸೌಂದರ್ಯ ಸವಿಯಲು ಹೇಳಿ ಮಾಡಿಸಿದ ಸ್ಥಳ. ಈ ಕಡಲತೀರದಿಂದ ನೀವು ಸೂರ್ಯಾಸ್ತಮಾನವನ್ನು ಆನಂದಿಸಬಹುದು. ನೀರಿನ ಶಬ್ಧ, ಕೆಂಪು ಆಕಾಶ, ಎಲ್ಲವೂ ಕಣ್ಣಿಗೆ ಹಬ್ಬವಾಗಿದೆ.
ದಾಲ್ ಸರೋವರ, ಶ್ರೀನಗರ (Dal Lake Srinagar)
ಶ್ರೀನಗರದ ದಾಲ್ ಸರೋವರದಲ್ಲಿ ಸೂರ್ಯ ಮುಳುಗುವುದನ್ನು ನೀವು ನೋಡದಿದ್ದರೆ, ನೀವು ಲೈಫಲ್ಲಿ ವಿಶೇಷವಾದ ಅಂಶವನ್ನು ಮಿಸ್ ಮಾಡ್ತೀರಿ. ಇಲ್ಲಿನ ನೋಟವು ಸೂರ್ಯಾಸ್ತದ ಸಮಯದಲ್ಲಿ ನೋಡಲು ಅದ್ಭುತವಾಗಿರುತ್ತೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ನೀವು ಹೌಸ್ ಬೋಟ್ ನಲ್ಲಿದ್ರೆ, ಅದರ ಕಿಟಕಿಗಳಿಂದ ಸೂರ್ಯಾಸ್ತದ ನೋಟವು ರೋಮಾಂಚಕ ಅನುಭವ ನೀಡುತ್ತೆ.
ವಾರಣಾಸಿ, ಉತ್ತರ ಪ್ರದೇಶ (Varanasi, Uttarpradesh)
ನೀವು ಸೂರ್ಯಾಸ್ತವನ್ನು ನೋಡಲು ಬಯಸಿದರೆ, ಖಂಡಿತವಾಗಿಯೂ ವಾರಣಾಸಿಗೆ ಹೋಗಿ. ಇಲ್ಲಿನ ಘಾಟ್ ಗಳಲ್ಲಿ ಸೂರ್ಯಾಸ್ತ ನೋಡುವುದು ರೋಮಾಂಚನಕಾರಿ ಅನುಭವ. ವಾರಣಾಸಿಯ ಘಾಟ್ ಗಳಲ್ಲಿ ಪವಿತ್ರ ಮಂತ್ರಗಳು ಮತ್ತು ಸಾವಿರಾರು ದೀಪಗಳೊಂದಿಗೆ ಸೂರ್ಯಾಸ್ತದ ದೃಶ್ಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.
ಮೌಂಟ್ ಅಬು (Mount Abu)
ಸೂರ್ಯಾಸ್ತದ ವಿಷಯಕ್ಕೆ ಬಂದಾಗ ಮೌಂಟ್ ಅಬುವಿನ ಬಗ್ಗೆ ಹೇಳದೆ ಇದ್ದರೆ ಹೇಗೆ? ಬೆಟ್ಟಗಳ ಹಿಂದೆ ಸೂರ್ಯ ಮುಳುಗುವುದು ನೋಡಬಹುದಾದ ಅತ್ಯಂತ ಅದ್ಭುತ ದೃಶ್ಯಗಳಲ್ಲಿ ಒಂದಾಗಿದೆ. ಇಲ್ಲಿ ವಿಶೇಷ ಸನ್ ಸೆಟ್ ಪಾಯಿಂಟ್ ಸಹ ಮಾಡಲಾಗಿದೆ.
ಉಮಿಯಮ್ ಸರೋವರ, ಶಿಲ್ಲಾಂಗ್ (Umian Lake Shillong)
ಮೇಘಾಲಯದ ಉಮಿಯಮ್ ಸರೋವರವು ಸೂರ್ಯಾಸ್ತಕ್ಕೆ ಬಹಳ ಜನಪ್ರಿಯವಾಗಿದೆ. ನೀವು ಶಿಲ್ಲಾಂಗ್ ಗೆ ಹೋಗಿದ್ದರೆ, ಈ ಸೂರ್ಯಸ್ತ ನೋಡದೆ ಉಮಿಯಮ್ ಸರೋವರದಿಂದ ಹಿಂದಿರುಗಬೇಡಿ.
ಗುಜರಾತ್ ನ ಅದ್ಭುತ ರಣ್ (Rann of Kutch)
ರಣ್ ಆಫ್ ಕಚ್ ತನ್ನ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿ ಹರಡಿರುವ ಬಿಳಿ ಮರಳು ಸೂರ್ಯನ ಪ್ರತಿಯೊಂದು ಬಣ್ಣದೊಂದಿಗೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಭಾರತದಲ್ಲಿ ಸೂರ್ಯಾಸ್ತ ವೀಕ್ಷಿಸಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಸೂರ್ಯಾಸ್ತವನ್ನು ನೋಡುವುದು ನಿಜವಾಗಿಯೂ ಅದ್ಭುತ..