ನಮ್ಮ ದೇಶದಲ್ಲಿ ಗಣೇಶನ ಹಲವಾರು ದೇವಾಲಯಗಳಿವೆ. ಹಲವಾರು ವಿಶೇಷತೆ ಹೊಂದಿರುವ ಅನೇಕ ತಾಣಗಳಿವೆ. ಗಣೇಶ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ತುಂಬಾ ಫೇಮಸ್. ಇವಾಗ ಹೇಳುತ್ತಿರುವ ಗಣೇಶ ಇಂಡೋನೇಷ್ಯಾದ (Indonesia)ಲ್ಲಿದೆ. ಅಲ್ಲೊಂದು ಎತ್ತರವಾದ ಜಾಗದಲ್ಲಿ ಜ್ವಾಲಾಮುಖಿಯ ಬಳಿಯಲ್ಲಿ ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಒಂದು ಗಣೇಶನ ವಿಗ್ರಹವಿದೆ. ಅದರ ಬಗ್ಗೆ ತಿಳಿಯೋಣ.
ದೇವರು ರಕ್ಷಿಸುತ್ತಿದ್ದಾನೆ
ಜ್ವಾಲಾಮುಖಿಯ ಮುಖಭಾಗದಲ್ಲಿರುವ ಈ ಪ್ರತಿಮೆಯು ಗಣೇಶನೇ ಜ್ವಾಲಾಮುಖಿಯಿಂದ ಜನರನ್ನು ರಕ್ಷಿಸುತ್ತಿರುವಂತೆ ಕಾಣುತ್ತದೆ. ಈ ಜ್ವಾಲಾಮುಖಿಯ ಬಳಿ ಇಂದಿಗೂ ಕೆಲವು ಜನರು ವಾಸಿಸುತ್ತಾರೆ. ಅವರನ್ನು ತೆನೆಗರ್ ಎಂದು ಕರೆಯಲಾಗುತ್ತದೆ, ಈ ಜನರು ಗಣೇಶನ ವಿಗ್ರಹಕ್ಕೆ ಪ್ರತಿದಿನ ತಪ್ಪದೇ ಪೂಜಿಸುತ್ತಾರೆ.
ಇಂಡೋನೇಷ್ಯಾದಲ್ಲಿ 130 ಸಕ್ರಿಯ ಜ್ವಾಲಾಮುಖಿಗಳಿವೆ
ನಿಮಗೆ ಮತ್ತೊಂದು ವಿಷ್ಯ ಗೊತ್ತಾ? ಇಂಡೋನೇಷ್ಯಾದ 141 ಜ್ವಾಲಾಮುಖಿಗಳಲ್ಲಿ 130 ಸಕ್ರಿಯವಾಗಿವೆ. ಗಣೇಶನು ಜನರನ್ನು ರಕ್ಷಿಸುತ್ತಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ದೇಶದಲ್ಲಿ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಇಲ್ಲಿನ ಪೂರ್ವಜರು ಈ ಪ್ರತಿಮೆಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ.
ಈ ಪರ್ವತವು ಬಹಳ ಪವಿತ್ರವಾಗಿದೆ.
ಗಣೇಶನ ಮೂರ್ತಿಯನ್ನು ಹೊಂದಿರುವ ಮೌಂಟ್ ಬ್ರೋಮೊ ಎಂದು ಕರೆಯಲ್ಪಡುವ ಪರ್ವತ ಬಹಳ ಪವಿತ್ರವಾಗಿದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಈ ಪರ್ವತಕ್ಕೆ ಭಗವಾನ್ ಬ್ರಹ್ಮನ ಹೆಸರನ್ನು ಇಡಲಾಗಿದೆ. ಈ ಜ್ವಾಲಾಮುಖಿಯು ಬ್ರೊಮೊ ಟೆನೆಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದಲ್ಲಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲ ಹಿಂದೂ ದೇವರ ಪೂಜೆ ನಡೆಯೋದು. ಇಂಡೋನೇಶ್ಯಾದಲ್ಲಿ ಕಂಡು ಬರುವ ದೇವಾಲಯಗಳನ್ನು ನೋಡಿದ್ರೇನೆ ತಿಳಿಯುತ್ತೆ. ಇಂಡೋನೇಷ್ಯಾದಲ್ಲಿ ಜನರು ಹಿಂದೂ ದೇವರು ಮತ್ತು ದೇವತೆಗಳನ್ನು ಎಷ್ಟು ಪೂಜಿಸುತ್ತಾರೆ, ಎಷ್ಟು ನಂಬಿಕೆ ಹೊಂದಿದ್ದಾರೆ ಅನ್ನೋದನ್ನು ತಿಳಿಯಬಹುದು.
ಇಲ್ಲಿಗೆ ತಲುಪುವುದು ಹೇಗೆ?
ಇಲ್ಲಿಗೆ ತಲುಪಲು ತುಂಬಾ ಕಷ್ಟ. ಮೊದಲು ನೀವು ಬಾಲಿಗೆ ಬರಲು ಸುರಬಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಪ್ರಯಾಣಿಸಬೇಕು., ನಂತರ ಡುಮ್ರಿ ಬಸ್ ಹತ್ತಿ ಪುರಬಾಯಾ ಬಸ್ ಟರ್ಮಿನಲ್ ನಲ್ಲಿ ಇಳಿಯಬೇಕು. ಇಲ್ಲಿಂದ ನೀವು ಬಸ್ ಚಾಲಕನೊಂದಿಗೆ ಮಾತನಾಡಿ, ಮಿನಿ ವ್ಯಾನ್ ಹಿಡಿದು ಈ ಸ್ಥಳ ತಲುಪಬಹುದು.