ಫೋಟೋ ನೋಡಿ ಇದ್ಯಾವುದೋ ವಿದೇಶದ ಫೋಟೋ ಎಂದು ಗೊಂದಲಕ್ಕೊಳಗಾಗಬೇಡಿ. ಇದು ನಮ್ಮದೇ ಬೆಂಗಳೂರಿನ ಚೈತ್ರದ ಸಂಭ್ರಮ. ಹೂವು, ಸ್ವಚ್ಛ ರಸ್ತೆ, ಹಸಿರು ಮರಗಳೂ ಹೇಗಿವೆ ನೋಡಿ..
ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿಯ ಬೆನ್ನಿಗಾನಹಳ್ಳಿ ಕೆರೆ ಬಳಿ ಮೇಲಿನಿಂದ ತೆಗೆದ ಫೋಟೋವಿದು. ಇದನ್ನು ಜಾಕೀರ್ ವಿಶುಯಲ್ಸ್(@jakeervisuals) ಸೆರೆ ಹಿಡಿದಿದ್ದಾರೆ.
ಇನ್‌ಕ್ರೆಡಿಬಲ್ ಕರ್ನಾಟಕ (Incredible Karnataka)ದವರ ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಂ ಪೇಜಿನಲ್ಲಿ ಇದನ್ನು ಶೇರ್ ಮಾಡಲಾಗಿದ್ದು, ಇದು ಸಾವಿರಾರು ಜನರ ಮೆಚ್ಚುಗೆ ಪಡೆಯುತ್ತಿದೆ.
ಹೂವುಗಳು ಯಾವುದೇ ಕಾರ್ಯಕ್ರಮದ, ನಗರದ, ಹೆಣ್ಣಿನ, ಪ್ರೀತಿಯ ಅಥವಾ ಮತ್ತಾವುದೇ ಸಂದರ್ಭದ ಚೆಲುವನ್ನು ಹೇಗೆ ಹೆಚ್ಚಿಸಬಲ್ಲವು ಎಂಬುದು ಬಹಳ ಅಚ್ಚರಿಯ ವಿಷಯವಾಗಿದೆ.
ಬಣ್ಣಬಣ್ಣದ ಹೂಗಳು ತಮ್ಮ ಚೆಲುವಿನಿಂದ ತಾವಿರುವ ಸ್ಥಳದ ಚೆಲುವನ್ನೂ ಹೆಚ್ಚಿಸುತ್ತವೆ. ಇಲ್ಲಿವೆ ನೋಡಿ ಬೆಂಗಳೂರಿನ ರೋಡಿನ ಸೌಂದರ್ಯ ಹೆಚ್ಚಿಸುತ್ತಿರುವ ಹೂ ಮರಗಳು.
ಒಂದಕ್ಕಿಂತ ಒಂದು ಸೌಂದರ್ಯ ಮೈವೆತ್ತು, ತಮ್ಮ ತಮ್ಮಲ್ಲಿಯೇ ಸ್ಪರ್ಧೆ ನಡೆಸುತ್ತಿರುವ ಈ ಹೂ ಮರಗಳ ಫೋಟೋವನ್ನು ಟ್ವಿಟ್ಟರ್ ಬಳಕೆದಾರರಾದ ಸುಭಾಷಿಣಿ ಚಂದ್ರಮಣಿ ಶೇರ್ ಮಾಡಿದ್ದಾರೆ.
ಇವೆಲ್ಲವೂ ಬೆಂಗಳೂರಿನ ಚೈತ್ರ ಮಾಸದ ಸೊಬಗಿಗೆ ಹಿಡಿದ ಕನ್ನಡಿ. ಇಲ್ಲಿ ಟುಲಿಪ್, ಮಹಾಗನಿ, ಹೊಂಗೆ, ಮಾವು, ಗುಲ್‌ಮೊಹರ್ ಸೇರಿದಂತೆ ಹಲವಾರು ಮರಗಳ ಹೂಗಳನ್ನು ಸೆರೆ ಹಿಡಿಯಲಾಗಿದೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರನ್ನು ಟ್ರಾಫಿಕ್ ಕಾರಣಕ್ಕೆ ನೀವು ಶಪಿಸಬಹುದು, ಅಥವಾ ಇನ್ನಾವುದೇ ಕಾರಣಕ್ಕೆ ತಿರಸ್ಕರಿಸಬಹುದು. ಆದರೆ, ಇದನ್ನ ಪ್ರೀತಿಸುವಂತೆ ಮಾಡಲು ಇಲ್ಲಿನ ಹೂಗಳೇ ಸಾಕು ಎಂದಿದ್ದಾರೆ.
ಇಲ್ಲಿ ದೀರ್ಘಕಾಲ ವಾಸಿಸುವ ಅನೇಕ ಜನರಿಗೆ ತಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ತಿಳಿದಿಲ್ಲ ಎಂದು ತಿಳಿದರೆ ನೀವು ಆಘಾತಕ್ಕೊಳಗಾಗಬಹುದು. ಸ್ಥಳೀಯ ಮರಗಳ ಬಗ್ಗೆ ಬರೆಯುವ ಕ್ರಿಯೆಯು ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಮತ್ತು ಜಾಗೃತಿ ಮೂಡಿಸುವುದು ಮರಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಗ್ರೀಕ್ ಗಾದೆಯಂತೆ, 'ವೃದ್ಧರು ತಾವು ಎಂದಿಗೂ ಕುಳಿತುಕೊಳ್ಳಲಾಗದ ನೆರಳಿನಲ್ಲಿ ಮರಗಳನ್ನು ನೆಟ್ಟಾಗ ಸಮಾಜವು ಉತ್ತಮವಾಗಿ ಬೆಳೆಯುತ್ತದೆ,' ಎಂಬ ಮಾತನ್ನು ಅವರು ನೆನೆಸಿಕೊಂಡಿದ್ದಾರೆ.
ತೋಟಗಾರಿಕಾ ತಜ್ಞರಾದ ಕ್ಯಾಮರೂನ್, ಕೃಂಬಿಗೆಲ್, ಜವರಯ್ಯ ಮತ್ತು ಮರಿ ಗೌಡ ಅವರು ಈ ಮಹಾನಗರವನ್ನು ಪರಿಮಳಯುಕ್ತ ಮತ್ತು ವರ್ಣರಂಜಿತವಾಗಿ ವಿನ್ಯಾಸಗೊಳಿಸಿದರು ಎಂದು ಅವರು ಬೆಂಗಳೂರಿನಲ್ಲಿ ಚೆಂದದ ಹೂ ಮರಗಳನ್ನು ನೆಟ್ಟವರನ್ನು ಸ್ಮರಿಸಿದ್ದಾರೆ.
ಇವರ ಟ್ವೀಟನ್ನು ಪ್ರಧಾನಿ ನರೇಂದ್ರ ಮೋದಿ ನೋಡಿ ಮೆಚ್ಚಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚುರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ..