ಮದುವೆ ಎಂದರೆ ಕೇವಲ ಸಂಬಂಧದಲ್ಲಿ ಬಂಧಿಯಾಗೋದು ಮಾತ್ರವಲ್ಲ, ಇದು ಇಬ್ಬರು ವ್ಯಕ್ತಿಗಳ ನಡುವಿನ ಪರಸ್ಪರ ತಿಳುವಳಿಕೆ, ಗೌರವಕ್ಕೆ ಸಂಬಂಧಿಸಿದೆ. ಅಲ್ಲಿ ಒಬ್ಬರನ್ನೊಬ್ಬರು ಹೇಳದೆ ಮತ್ತು ಕೇಳದೆ ಸುಲಭವಾಗಿ ಅರ್ಥಮಾಡಿಕೊಳ್ಳಬೇಕು. ಪರಸ್ಪರರ ಅಗತ್ಯಗಳ ಸಂದರ್ಭದಲ್ಲಿ ಜೊತೆಯಾಗಿ ನಿಲ್ಲಬೇಕು. ಯಾವುದೇ ಮೂರನೇ ವ್ಯಕ್ತಿ ನಿಮ್ಮ ಸಂಗಾತಿಯ ಗೌರವಕ್ಕೆ ಧಕ್ಕೆ ತರದಂತೆ ಗೌರವದಿಂದ (respect) ನೋಡಿಕೊಳ್ಳುವುದು ಸಹ ಮುಖ್ಯ. ಪತಿ ಪತ್ನಿ ನಡುವೆ ಮೂರನೇ ವ್ಯಕ್ತಿ ಬಾರದಂತೆ, ನಿಮ್ಮ ಸಂಬಂಧಕ್ಕೆ, ಸಂಗಾತಿಗೆ ಅಗೌರವ ಆಗದಂತೆ ಹೇಗೆ ನೋಡಿಕೊಳ್ಳೊದು ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ.
ಸಂಗಾತಿಯನ್ನೇಕೆ ಬೆಂಬಲಿಸ ಬೇಕು?
ನಿಮ್ಮ ಸಂಗಾತಿಯನ್ನು ಬೆಂಬಲಿಸುವುದು (support your partner) ಮತ್ತು ಅವರನ್ನು ವಸ್ತು ನಿಷ್ಠವಾಗಿ ಅರ್ಥಮಾಡಿಕೊಳ್ಳುವುದು ಸಂಬಂಧವನ್ನು ಸ್ಟ್ರಾಂಗ್ ಆಗಿಸುತ್ತೆ.ಇನ್ನೊಬ್ಬ ವ್ಯಕ್ತಿ ನಿಮ್ಮ ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಸಂಗಾತಿಯನ್ನು ರಕ್ಷಿಸುವ ಮೊದಲು, ಇನ್ನೊಬ್ಬ ವ್ಯಕ್ತಿಯ ಮಾತನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಯಾವುದೇ ಪ್ರತಿಕ್ರಿಯೆ ನೀಡದೇ ನಿಮ್ಮ ಸಂಗಾತಿಯೊಂದಿಗೆ ಇರಿ. ನಂತರ, ನಿಮ್ಮ ಸಂಗಾತಿಗೆ ಅವರ ತಪ್ಪುಗಳ ಬಗ್ಗೆ ಖಾಸಗಿಯಾಗಿ ಅರಿವು ಮೂಡಿಸಿ ಮತ್ತು ಸರಿ ಮತ್ತು ತಪ್ಪುಗಳ ಬಗ್ಗೆ ಮಾಹಿತಿ ನೀಡಿ. ಒಬ್ಬ ವ್ಯಕ್ತಿಯ ಮುಂದೆ ಸಂಗಾತಿಯನ್ನು ದೂಷಿಸುವುದು ಸಂಗಾತಿಗೆ ಅಗೌರವವನ್ನು ತೋರಿಸುವುದಲ್ಲದೆ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ.
ಈ ರೀತಿಯಾಗಿ, ನಿಮ್ಮ ಸಂಗಾತಿ ಮತ್ತು ನಿಮ್ಮ ಸಂಬಂಧದ ಗೌರವವನ್ನು ಕಾಪಾಡಿಕೊಳ್ಳಬಹುದು
ಗಡಿಗಳನ್ನು ನಿಗದಿಪಡಿಸಿ
ಒಂದಲ್ಲ ಒಂದು ನೆಪದಲ್ಲಿ ನಿಮ್ಮ ಸಂಗಾತಿಯನ್ನು ನೋಯಿಸಲು ಪದೇ ಪದೇ ಪ್ರಯತ್ನಿಸುವವರಿಗೆ ಕೆಲವು ಗಡಿಗಳನ್ನು ನಿಗದಿಪಡಿಸಿ. ಇದರಿಂದ ಮೂರನೇ ವ್ಯಕ್ತಿಯು ತನ್ನ ಗಡಿಯೊಳಗೆ ಉಳಿಯುವಂತೆ ಮಾಡುತ್ತದೆ ಮತ್ತು ಸಂಗಾತಿಗೆ ಅಗೌರವ (disrespect)ಉಂಟಾಗದಂತೆ ತಡೆಯುತ್ತದೆ.
ಆರೋಗ್ಯಕರ ಸಂವಹನ
ನೀವು ಯಾವುದೇ ಯೋಜನೆ ಮಾಡೋದಾದ್ರೂ, ನಿರ್ಧಾರ ತೆಗೆದುಕೊಳ್ಳುವುದಾದರೂ ಸಂಗಾತಿ ಜೊತೆ ಅದರ ಬಗ್ಗೆ ಮಾತುಕತೆ (healthy communication) ನಡೆಸಿ, ಸಲಹೆ ತೆಗೆದುಕೊಳ್ಳೊದು ಮುಖ್ಯ. ಇದು ನಿಮ್ಮ ಸುತ್ತಲಿನ ಜನರ ಮನಸ್ಸಿನಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಪ್ರೀತಿ, ಸಂವೇದನೆ ಮತ್ತು ಗೌರವವನ್ನು ಇರಿಸುತ್ತದೆ. ನೀವಿಬ್ಬರು ಜೊತೆಯಾಗಿದ್ದರೆ, ಮೂರನೇ ವ್ಯಕ್ತಿ ನಿಮ್ಮ ಬಳಿ ಬಂದು ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವೇ ಇಲ್ಲ.
ಸಂಗಾತಿಯನ್ನು ಸರಿಪಡಿಸಿ
ಸಾರ್ವಜನಿಕವಾಗಿ ನಿಮ್ಮ ಸಂಗಾತಿಯೊಂದಿಗೆ ನಿಲ್ಲುವುದರ ಹೊರತಾಗಿ, ನಿಮ್ಮ ಸಂಗಾತಿಯ ತಪ್ಪುಗಳ ಬಗ್ಗೆ ಖಾಸಗಿಯಾಗಿ ಗಮನ ಹರಿಸಿ. ಅಲ್ಲದೆ, ಸಂಗಾತಿ ಏನು ತಪ್ಪು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಅವರಿಗೆ ಮನವರಿಕೆ ಆಗುವಂತೆ ಮಾಡಿ. ಇತರ ಜನರ ಮುಂದೆ ತನ್ನ ಸಂಗಾತಿಯ ಮೇಲೆ ಕೂಗಾಡಿದರೆ, ಇಬ್ಬರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಗಂಡ ಹೆಂಡತಿಯ ನಡುವೆ ಸರಿ ಇಲ್ಲ ಎನ್ನುವ ಭಾವನೆ ಎಲ್ಲರಿಗೂ ಮೂಡುತ್ತದೆ.
ಅಗತ್ಯದ ಸಮಯದಲ್ಲಿ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ನಿಲ್ಲಿ
ಒಬ್ಬ ವ್ಯಕ್ತಿ ನಿಮ್ಮ ಸಂಗಾತಿ ಮೇಲೆ ಆಧಾರರಹಿತ ಆರೋಪಗಳನ್ನು ಹೊರೆಸಿ, ಸಂಗಾತಿಯನ್ನು ತಪ್ಪೆಂದು ಸಾಬೀತುಪಡಿಸುತ್ತಿದ್ದರೆ, ಆ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಂತುಕೊಳ್ಳಿ. ಮನಸ್ಸಿನಲ್ಲಿ ಯಾವುದೇ ರೀತಿಯ ಅನುಮಾನ ಮೂಡಲು ಬಿಡಬೇಡಿ. ಮೊದಲನೆಯದಾಗಿ, ಸಮಸ್ಯೆಯ ಮೂಲ ಕಂಡು ಹಿಡಿಯಲು ಪ್ರಯತ್ನಿಸಿ ಮತ್ತು ನಿಮ್ಮ ಹೆಂಡತಿ ಅಥವಾ ಗಂಡನನ್ನು ಸಂಪೂರ್ಣವಾಗಿ ಬೆಂಬಲಿಸಿ (support them) ಮತ್ತು ಅವರ ಮೇಲೆ ನಿಮ್ಮ ನಂಬಿಕೆಯನ್ನು ತೋರಿಸಿ.
ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಿ
ಯಾವುದೇ ರೀತಿಯ ಜಗಳ ಮತ್ತು ತೊಂದರೆ ನಿವಾರಿಸಲು, ಒಬ್ಬರು ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅದನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಬೇಕು. ಎರಡೂ ಕಡೆಯ ಮಾತುಗಳನ್ನು ಶಾಂತವಾಗಿ ಆಲಿಸಿದ ನಂತರ ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ನಂತರ ಸಂದಿಗ್ಧತೆಯಿಂದ ಹೊರಬರಲು ಅವರಿಗೆ ಸಹಾಯ ಮಾಡಿ.
ನಿಮ್ಮ ಸಂಗಾತಿಗೆ ನಿಷ್ಠರಾಗಿರಿ
ಯಾವುದೇ ಸಂಬಂಧದಲ್ಲಿ ಟ್ರಾನ್ಸ್ಪರೆನ್ಸಿ (Transparency) ಇರೋದು ಮುಖ್ಯವಾಗಿದೆ. ಹಾಗಾಗಿ ನಿಮ್ಮ ಸಂಗಾತಿಯಿಂದ ಏನನ್ನೂ ಮರೆಮಾಚಬೇಡಿ ಮತ್ತು ಅವರಿಗೆ ನಿಷ್ಠರಾಗಿರಿ. ಪ್ರತಿ ಕ್ಷಣವೂ, ನೀವು ಅವರೊಂದಿಗೆ ಇದ್ದೀರಿ ಎಂದು ನಿಮ್ಮ ಸಂಗಾತಿಗೆ ಅನಿಸುವಂತೆ ಮಾಡಿ. ಇದು ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ಮತ್ತು ಸಂದಿಗ್ಧತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.