ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಜಾಮ್‌ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಶ್ವದ ಕೋಟ್ಯಾಧಿಪತಿಗಳು ದಂಡು ಆಗಮಿಸುವ ನಿರೀಕ್ಷೆಯಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್, ಜನವರಿ 19, 2023ರಂದು ಆಂಟಿಲಿಯಾದಲ್ಲಿ ಅದ್ದೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ವಿವಾಹ ಪೂರ್ವ ಸಂಭ್ರಮದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಜಾಮ್‌ನಗರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಗೋಲ್ ಧನ ಮತ್ತು ಚುನರಿ ವಿಧಿಯಂತಹ ಆಚರಣೆಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ಗುಜರಾತಿ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 2022 ರಲ್ಲಿ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ತಮ್ಮ ರೋಕಾ ಸಮಾರಂಭವನ್ನು ನಡೆಸಿದರು.
ರಾಧಿಕಾ ಮರ್ಚೆಂಟ್ ಶೈಲಾ ಮತ್ತು ವೀರೇನ್ ಮರ್ಚೆಂಟ್ ಅವರ ಪುತ್ರಿ. ವೀರೇನ್ ಮರ್ಚಂಟ್ ಅವರು ಪ್ರಮುಖ ಔಷಧೀಯ ಕಂಪನಿಯಾದ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ಮತ್ತು ಸಂಸ್ಥಾಪಕರಾಗಿದ್ದಾರೆ. ವರದಿಯ ಪ್ರಕಾರ, ಈ ಕಂಪೆನಿ ಸುಮಾರು 2,000 ಕೋಟಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ.
ವೀರೇನ್ ಮರ್ಚೆಂಟ್, 755 ಕೋಟಿ ರೂಪಾಯಿಗಳ ಅಂದಾಜು ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಶೈಲಾ ಮರ್ಚಂಟ್ ಅವರು ಎನ್‌ಕೋರ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ರಾಧಿಕಾ ಮರ್ಚೆಂಟ್, ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಗಳಿಸಿದರು. ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಗಳು ಮತ್ತು ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು.
ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಇಸ್ಪ್ರವಾವನ್ನು ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಸೇರುವ ಮೊದಲು ಅವರು ದೇಸಾಯಿ ಮತ್ತು ದಿವಾಂಜಿ ಎಂಬ ಸಲಹಾ ಸಂಸ್ಥೆಯೊಂದಿಗೆ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದರು.
ಪ್ರಸ್ತುತ, ರಾಧಿಕಾ, ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಬರೋಬ್ಬರಿ 10 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ರಾಧಿಕಾ ಮರ್ಚೆಂಟ್ ಕೂಡ ತರಬೇತಿ ಪಡೆದ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದಾರೆ.
ರಾಧಿಕಾ ಮರ್ಚೆಂಟ್, ಆರಗೇಟ್ರಂ ಸಮಾರಂಭವನ್ನು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಆಯೋಜಿಸಿದ್ದರು.
ಅನಂತ್ ಅಂಬಾನಿ, ನೀತಾ ಮತ್ತು ಮುಕೇಶ್ ಅಂಬಾನಿ ದಂಪತಿಯ ಕಿರಿಯ ಮಗ. ಬ್ರೌನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು ಮತ್ತು ಮಾರ್ಚ್ 2020ರಿಂದ ರಿಲಯನ್ಸ್ ವ್ಯವಹಾರದ ಅವಿಭಾಜ್ಯ ಅಂಗವಾಗಿದ್ದಾರೆ. ಆರಂಭದಲ್ಲಿ, ಜಿಯೋ ಪ್ಲಾಟ್‌ಫಾರ್ಮ್‌ಗಳ ಮಂಡಳಿಯಲ್ಲಿ ನಿರ್ದೇಶಕರಾಗಿ ಪ್ರಾರಂಭಿಸಿದರು. ಮೇ 2022 ರಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ಸದಸ್ಯರಾದರು.
2023ರಲ್ಲಿ, ಅನಂತ್ ಅಂಬಾನಿ ಮತ್ತು ಅವರ ಒಡಹುಟ್ಟಿದವರಾದ ಆಕಾಶ್ ಮತ್ತು ಇಶಾ ಅಂಬಾನಿ ಅವರನ್ನು ಭಾರತದ ಪ್ರಮುಖ ಸಂಘಟಿತ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಗೆ ನೇಮಿಸಲಾಯಿತು. ವರದಿಯ ಪ್ರಕಾರ, ಅನಂತ್ ಅಂಬಾನಿ ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 40 ಬಿಲಿಯನ್ ಡಾಲರ್ (ಅಂದಾಜು 3,31,518 ಕೋಟಿ ರೂ.) ಆಗಿದೆ.