ಪಾಟ್‌ನಲ್ಲಿ ಕರಿಬೇವು ನೆಡುವುದು ಹೇಗೆ?, ಕಾಡಿನಂತೆ ದಟ್ಟವಾಗಿ ಬೆಳೆಯಲು ಈ ವಿಧಾನ ಅನುಸರಿಸಿ

Published : May 11, 2026, 05:45 PM IST

Grow Curry Leaves in Pots: ಬೇಸಿಗೆಯಲ್ಲಿ ಕೆಲವು ಸುಲಭವಾದ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಕುಂಡದಲ್ಲಿ ಹಸಿರು ಮತ್ತು ಸೊಂಪಾದ ಕರಿಬೇವು ಗಿಡವನ್ನು ಸಿದ್ಧಪಡಿಸಬಹುದು. ಇದಕ್ಕಾಗಿ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.

PREV
15
ಕುಂಡದ ಸರಿಯಾದ ಆಯ್ಕೆ

ಕರಿಬೇವು ಗಿಡವನ್ನು ನೆಡುವ ಮೊದಲು ಸರಿಯಾದ ಕುಂಡವನ್ನು ಆಯ್ಕೆ ಮಾಡುವುದು ಅವಶ್ಯಕ. ಇದಕ್ಕಾಗಿ ನೀವು ಮಧ್ಯಮ ಗಾತ್ರದ ಕುಂಡವನ್ನು ಆರಿಸಿಕೊಳ್ಳಬಹುದು. ಕುಂಡದ ತಳಭಾಗದಲ್ಲಿ ಎರಡು ಅಥವಾ ಮೂರು ಸಣ್ಣ ರಂಧ್ರಗಳಿರಬೇಕು, ಇದರಿಂದ ಹೆಚ್ಚುವರಿ ನೀರು ಕುಂಡದಿಂದ ಹೊರಹೋಗಲು ಸಾಧ್ಯವಾಗುತ್ತದೆ. ಗಿಡಕ್ಕಾಗಿ ಮಣ್ಣನ್ನು ಸಿದ್ಧಪಡಿಸುವಾಗ ಅದರ ಗುಣಮಟ್ಟವನ್ನು ಪರೀಕ್ಷಿಸಿ. ಇದರಲ್ಲಿ ನೀವು ಸಗಣಿ ಗೊಬ್ಬರ ಮತ್ತು ಸ್ವಲ್ಪ ನುಣ್ಣನೆಯ ಮರಳನ್ನು ಮಿಶ್ರಣ ಮಾಡಬಹುದು. ಇದು ಗಿಡದ ಬೆಳವಣಿಗೆಗೆ ಪೋಷಣೆ ಮತ್ತು ಗಾಳಿಯಾಡಲು ಸಹಾಯ ಮಾಡುತ್ತದೆ.  

25
ಗಿಡ ನೆಡುವ ವಿಧಾನ

ಕರಿಬೇವು ಗಿಡವನ್ನು ನೀವು ಎರಡು ವಿಧಾನಗಳಿಂದ ಬೆಳೆಸಬಹುದು 

ಮೊದಲ ವಿಧಾನ 'ಕಟಿಂಗ್' (ರೆಂಬೆ ಕತ್ತರಿಸುವುದು), ಇದು ಸಾಕಷ್ಟು ಸುಲಭ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ಗಿಡದ ಒಂದು ತಾಜಾ ಹಸಿರು ರೆಂಬೆಯನ್ನು ತೆಗೆದುಕೊಂಡು ಅದನ್ನು ಚಾಕುವಿನಿಂದ ಓರೆಯಾಗಿ ಕತ್ತರಿಸಿಕೊಳ್ಳಿ. ನಂತರ, ಅದರ ಕೆಳಭಾಗದ (ಮಣ್ಣಿನಲ್ಲಿ ಹೂಳುವ ಭಾಗ) ಎಲೆಗಳನ್ನು ತೆಗೆದುಹಾಕಿ. ಕೇವಲ ಮೇಲ್ಭಾಗದಲ್ಲಿ 2-3 ಎಲೆಗಳಿದ್ದರೆ ಸಾಕು. ನಿಮ್ಮ ಬಳಿ ಅಲೋವೆರಾ ಜೆಲ್ ಅಥವಾ ಜೇನುತುಪ್ಪ ಇದ್ದರೆ, ಕತ್ತರಿಸಿದ ರೆಂಬೆಯ ತುದಿಗೆ ಅದನ್ನು ಹಚ್ಚಿ. ಇದು ಬೇಗ ಬೇರು ಬರಲು ಮತ್ತು ಫಂಗಸ್ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ರೆಂಬೆಯ 2-3 ಇಂಚು ಭಾಗ ಮಣ್ಣಿನ ಒಳಗಿರುವಂತೆ ನೆಟ್ಟು ಸುತ್ತಲೂ ಮಣ್ಣನ್ನು ಗಟ್ಟಿಯಾಗಿ ಒತ್ತಿ. ರೆಂಬೆ ನೆಟ್ಟ ತಕ್ಷಣ ನೇರ ಬಿಸಿಲಿಗೆ ಇಡಬೇಡಿ. ಹೊಸ ಚಿಗುರು ಬರುವವರೆಗೆ ಅಂದರೆ ಸುಮಾರು 2-3 ವಾರಗಳ ಕಾಲ ಭಾಗಶಃ ನೆರಳಿರುವ ಜಾಗದಲ್ಲಿ ಇರಿಸಿ. ಮಣ್ಣು ಪೂರ್ತಿ ಒಣಗಲು ಬಿಡಬೇಡಿ. ಸ್ಪ್ರೇಯರ್ ಮೂಲಕ ಹಗುರವಾಗಿ ನೀರು ಚಿಮುಕಿಸುತ್ತಿರಿ.

ಗಮನಿಸಿ: ಕರಿಬೇವು ಗಿಡವು ಕಟಿಂಗ್ ಮೂಲಕ ಬೆಳೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ತಾಳ್ಮೆ ಅಗತ್ಯ. 

35
ಬೀಜಗಳ ಮೂಲಕ

ಇನ್ನು ಎರಡನೇ ವಿಧಾನವೆಂದರೆ ಬೀಜಗಳ ಮೂಲಕ. ನೀವು ಬೀಜದಿಂದ ಕರಿಬೇವು ಬೆಳೆಸುತ್ತಿದ್ದರೆ, ಬಿತ್ತುವ ಮೊದಲು ಸುಮಾರು 5 ರಿಂದ 6 ಗಂಟೆಗಳ ಕಾಲ ಅವುಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಇದರ ನಂತರ ಬೀಜಗಳನ್ನು ಕುಂಡಕ್ಕೆ ಹಾಕಿ ಹಗುರವಾದ ಮಣ್ಣಿನಿಂದ ಮುಚ್ಚಿ.

ಬೀಜಗಳನ್ನು ಮಣ್ಣಿನಿಂದ ಮುಚ್ಚಿದ ತಕ್ಷಣವೇ ಹೆಚ್ಚು ನೀರು ಸುರಿಯಬೇಡಿ. ಸ್ಪ್ರೇಯರ್ ಬಳಸಿ ಹಗುರವಾಗಿ ನೀರು ಚಿಮುಕಿಸಿ. ಮಣ್ಣು ಕೇವಲ ಒದ್ದೆಯಾಗಿದ್ದರೆ ಸಾಕು, ನೀರು ನಿಲ್ಲಬಾರದು. ಕುಂಡವನ್ನು ಹೆಚ್ಚು ಗಾಳಿ ಮತ್ತು ಬೆಳಕು ಇರುವ ಜಾಗದಲ್ಲಿ ಇಡಿ. ಆದರೆ ನೆನಪಿಡಿ, ಸಣ್ಣ ಮೊಳಕೆ ಬರುವವರೆಗೆ ಕುಂಡವನ್ನು ನೇರವಾದ ಕಡು ಬಿಸಿಲಿನಲ್ಲಿ ಇಡಬಾರದು. ಬೆಳಗಿನ ಎಳೆಯ ಬಿಸಿಲು ಬೀಳುವ ಜಾಗ ಸೂಕ್ತ. ಕರಿಬೇವು ಬೀಜಗಳು ಮೊಳಕೆಯೊಡೆಯಲು ಸಾಮಾನ್ಯವಾಗಿ 10 ರಿಂದ 20 ದಿನಗಳ ಸಮಯ ತೆಗೆದುಕೊಳ್ಳುತ್ತವೆ. ಅಲ್ಲಿಯವರೆಗೆ ಪ್ರತಿದಿನ ಮಣ್ಣಿನ ತೇವಾಂಶವನ್ನು ಪರೀಕ್ಷಿಸುತ್ತಿರಿ. ಒಮ್ಮೆ ಗಿಡವು 3-4 ಇಂಚು ಬೆಳೆದ ನಂತರ, ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸಗಣಿ ಗೊಬ್ಬರ ಅಥವಾ ಎರೆಗೊಬ್ಬರವನ್ನು ನೀಡಬಹುದು. ಗಿಡ ಸ್ವಲ್ಪ ದೊಡ್ಡದಾದ ಮೇಲೆ ಅದರ ಮೇಲ್ಭಾಗದ ತುದಿಗಳನ್ನು ಚಿವುಟುತ್ತಿರಿ. ಇದರಿಂದ ಗಿಡವು ಎತ್ತರಕ್ಕೆ ಹೋಗುವ ಬದಲು ಅಕ್ಕಪಕ್ಕದಲ್ಲಿ ಹೆಚ್ಚು ರೆಂಬೆಗಳನ್ನು ಬಿಟ್ಟು ಸೊಂಪಾಗಿ ಬೆಳೆಯುತ್ತದೆ.    

45
ಗೊಬ್ಬರ ಮತ್ತು ಮಣ್ಣಿನ ಅಗೆತ

ಗಿಡವನ್ನು ಹಚ್ಚಹಸಿರಾಗಿ ಇರಿಸಲು ಅದಕ್ಕೆ ಕಾಲಕಾಲಕ್ಕೆ ಗೊಬ್ಬರ (ಸಗಣಿ ಗೊಬ್ಬರ, ಎರೆಗೊಬ್ಬರ, ಹುಳಿ ಮಜ್ಜಿಗೆ, ಅಕ್ಕಿ ತೊಳೆದ ನೀರು, ಸೊಪ್ಪಿನ ತ್ಯಾಜ್ಯ ಅಥವಾ ಒಣ ಎಲೆಗಳು)ವನ್ನು ಹಾಕಬಹುದು. ಇದಲ್ಲದೆ, ಕುಂಡದ ಮಣ್ಣನ್ನು ಆಗಾಗ್ಗೆ ಅಗೆಯುತ್ತಿರಿ. ಇದರಿಂದ ಬೇರುಗಳಿಗೆ ಆಮ್ಲಜನಕ ತಲುಪಲು ಸಾಧ್ಯವಾಗುತ್ತದೆ. ಈ ಸಣ್ಣ ಪ್ರಯತ್ನಗಳ ಸಹಾಯದಿಂದ ಕರಿಬೇವು ಗಿಡವು ಬೇಸಿಗೆಯಲ್ಲೂ ಸಂಪೂರ್ಣವಾಗಿ ಹಸಿರಾಗಿರಲು ಸಾಧ್ಯವಾಗುತ್ತದೆ.  

55
ಬೆಳವಣಿಗೆ ಸಾಕಷ್ಟು ವೇಗವಾಗಿರುತ್ತೆ

ಕರಿಬೇವನ್ನ ಯಾವುದೇ ಋತುವಿನಲ್ಲಾದರೂ ಬೆಳೆಸಬಹುದು. ಆದರೆ ಬೇಸಿಗೆಯ ದಿನಗಳಲ್ಲಿ ಇದರ ಬೆಳವಣಿಗೆ ಸಾಕಷ್ಟು ವೇಗವಾಗಿರುತ್ತದೆ. ಆದರೆ ವಿಪರೀತ ಬಿಸಿಲು ಇದ್ದಾಗ ಹೊಸ ಕರಿಬೇವು ಗಿಡವನ್ನು ಹಾಕುವುದನ್ನು ತಪ್ಪಿಸಬೇಕು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories