ಸಮಯ ಉಳಿಸಲು ಪ್ರತಿಯೊಬ್ಬ ಗೃಹಿಣಿಯೂ ತಿಳಿಯಲೇಬೇಕಾದ Smart Kitchen Tips

Published : Mar 08, 2026, 02:11 PM IST

Smart cooking secrets: ಇಂದಿನ ವೇಗದ ಬದುಕಿನಲ್ಲಿ, ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವುದು ಸವಾಲಿನ ಕೆಲಸ. ಆದ್ದರಿಂದ ಈ ಸ್ಮಾರ್ಟ್ ಹ್ಯಾಕ್ಸ್ ಬಳಸಿದರೆ ನೀವು ಅಡುಗೆ ಮನೆಯ ಕೆಲಸ ಮುಗಿಸಿ ನಿಮಗಾಗಿ ಸ್ವಲ್ಪ ಸಮಯವನ್ನೂ ಉಳಿಸಿಕೊಳ್ಳಬಹುದು. 

PREV
111
ಇಂತಹ ಸಂದರ್ಭಗಳಲ್ಲಿ ಏನ್ ಮಾಡ್ಬೇಕು?

ಕೆಲವೊಮ್ಮೆ ಅಡುಗೆ ಮಾಡುವಾಗ ಅನ್ನ ಅತಿಯಾಗಿ ಬೇಯುತ್ತದೆ. ಅಷ್ಟೇ ಏಕೆ ಸಾಂಬಾರ್ ಮಾಡುವಾಗ ಉಪ್ಪು ಹೆಚ್ಚಾಗುತ್ತದೆ. ಮತ್ತೆ ಕೆಲವೊಮ್ಮೆ ತುಂಬಾ ಖಾರವಾಗುತ್ತದೆ. ಹಾಗೆಯೇ ನಿಂಬೆಹಣ್ಣನ್ನು ಹಿಂಡಿದಾಗ ಅದರ ರಸ ಆಚೆ ಬರಲ್ಲ, ಮೊಸರು ಸರಿಯಾದ ಸಮಯಕ್ಕೆ ಹೆಪ್ಪಾಗಲ್ಲ. ಇಂತಹ ಸಂದರ್ಭಗಳಲ್ಲಿ ಏನ್ ಮಾಡ್ಬೇಕಂತ ತೋಚೋದೆ ಇಲ್ಲ. ಆದರೆ ಈ ಕಿಚನ್ ಹ್ಯಾಕ್ ಬಳಸಿಕೊಂಡು ನಿಮ್ಮ ಆಹಾರ ರುಚಿ ಹೆಚ್ಚಿಸುವುದಲ್ಲದೆ, ಸಮಯವನ್ನೂ ಉಳಿತಾಯ ಮಾಡ್ಬೋದು.

211
ಅನ್ನ ಅತಿಯಾಗಿ ಬೆಂದಾಗ

ಅನ್ನದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಅನ್ನ ಅತಿಯಾಗಿ ಬೆಂದು ಮೆತ್ತಗಾದಾಗ ಬ್ರೆಡ್ ತುಂಡುಗಳು ಸ್ಪಂಜಿನಂತೆ ಕೆಲಸ ಮಾಡುತ್ತವೆ. ಅನ್ನದ ಬಟ್ಟಲಿನಲ್ಲಿರುವ ಹೆಚ್ಚುವರಿ ಹಬೆ ಮತ್ತು ನೀರನ್ನು ಬ್ರೆಡ್ ತನ್ನತ್ತ ಹೀರಿಕೊಳ್ಳುತ್ತದೆ. ಹೌದು. ಅನ್ನ ತುಂಬಾ ಮೆತ್ತಗಾಗಿದೆ ಎನಿಸಿದರೆ, ಅದರ ಮೇಲೆ ಒಂದು ಅಥವಾ ಎರಡು ಬ್ರೆಡ್ ತುಂಡುಗಳನ್ನು ಇಟ್ಟು ತಟ್ಟೆ ಮುಚ್ಚಿ. 5-10 ನಿಮಿಷ ಬಿಟ್ಟರೆ, ಬ್ರೆಡ್ ತೇವಾಂಶವನ್ನೆಲ್ಲಾ ಎಳೆದುಕೊಂಡು ಅನ್ನವನ್ನು ಬಿಡಿಬಿಡಿಯಾಗಿ ಮಾಡುತ್ತದೆ. ಅನ್ನ ಮುದ್ದೆಯಾಗದಂತೆ ತಡೆಯಲು ಬ್ರೆಡ್ ಒಂದು ಉತ್ತಮ ಪದಾರ್ಥ. ಇದು ಅನ್ನದ ರುಚಿಯನ್ನು ಬದಲಿಸದೆ ಹದವಾಗಿರಿಸುತ್ತದೆ.

311
ಕಮಟು ವಾಸನೆ ಹೋಗಲಾಡಿಸಲು

ಸಾಂಬಾರ್ ಅಥವಾ ಗ್ರೇವಿ ಅತಿಯಾದ ಹುಳಿಯಿಂದ ಕಮಟು ವಾಸನೆ ಬರುತ್ತಿದ್ದರೆ, ಮೊಸರು ಅಥವಾ ಹಾಲು ಆ ವಾಸನೆಯನ್ನು ತಟಸ್ಥಗೊಳಿಸುತ್ತದೆ. ಹಾಲಿನ ಉತ್ಪನ್ನಗಳಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಆ ಕೆಟ್ಟ ವಾಸನೆಯನ್ನು ಹೀರಿಕೊಂಡು, ಅಡುಗೆಗೆ ಹೊಸ ಹಾಗೂ ತಾಜಾ ರುಚಿಯನ್ನು ನೀಡುತ್ತದೆ. ಮೊದಲು ಆ ಅಡುಗೆಯನ್ನು ಬೇರೆ ಪಾತ್ರೆಗೆ ಬದಲಿಸಿ (ವಾಸನೆ ಹಿಡಿದ ಪಾತ್ರೆಯನ್ನು ಬಳಸಬೇಡಿ). ನಂತರ ಅದಕ್ಕೆ 2 ಚಮಚ ಮೊಸರು ಅಥವಾ ಹಾಲು ಸೇರಿಸಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಬೇಯಿಸಿ. ಇದು ಅಡುಗೆಯನ್ನು ಮತ್ತೆ ತಿನ್ನಲು ಯೋಗ್ಯವಾಗಿಸುತ್ತದೆ.

411
ನಿಂಬೆ ರಸ ಹೆಚ್ಚಿಸಲು ಬೆಚ್ಚಗಿನ ನೀರಿನ ಬಳಕೆ

ನಿಂಬೆಹಣ್ಣಿನ ಒಳಗಿನ ಸಣ್ಣ ಸಣ್ಣ ರಸದ ಚೀಲಗಳು (Juice vesicles) ತಣ್ಣಗಿದ್ದಾಗ ಗಟ್ಟಿಯಾಗಿರುತ್ತವೆ. ಬೆಚ್ಚಗಿನ ನೀರಿನಲ್ಲಿ ನೆನೆಸಿದಾಗ ಆ ಚೀಲಗಳ ಮೇಲ್ಪದರ ಮೃದುವಾಗಿ, ಬೇಗನೆ ಒಡೆಯುತ್ತವೆ. ಇದರಿಂದ ನೀವು ಹಣ್ಣನ್ನು ಹಿಂಡಿದಾಗ ಹೆಚ್ಚಿನ ರಸ ಸುಲಭವಾಗಿ ಹೊರಬರುತ್ತದೆ. ಆದ್ದರಿಂದ ನಿಂಬೆಹಣ್ಣನ್ನು ಕತ್ತರಿಸುವ ಮೊದಲು, ಒಂದು ಪಾತ್ರೆ ಬೆಚ್ಚಗಿನ ನೀರಿನಲ್ಲಿ ಕೇವಲ 1 ನಿಮಿಷ ಬಿಡಿ. ನಂತರ ಹಣ್ಣನ್ನು ಹೊರತೆಗೆದು ಸ್ವಲ್ಪ ಉಜ್ಜಿ (Roll) ಕತ್ತರಿಸಿ ಹಿಂಡಿ.

511
ಹೆಚ್ಚುವರಿ ಎಣ್ಣೆ ತೆಗೆಯಲು ಟಿಶ್ಯು ಬಳಕೆ

ಕರಿದ ತಕ್ಷಣ ವಡೆ ಅಥವಾ ಬಜ್ಜಿ ಟಿಶ್ಯು ಪೇಪರ್ ಮೇಲೆ ಹಾಕಿದಾಗ, ಪೇಪರ್‌ನಲ್ಲಿರುವ ಸೂಕ್ಷ್ಮ ರಂಧ್ರಗಳು ಪದಾರ್ಥದ ಮೇಲ್ಮೈನಲ್ಲಿರುವ ಎಣ್ಣೆಯನ್ನು ಪೂರ್ತಿಯಾಗಿ ಹೀರಿಕೊಳ್ಳುತ್ತವೆ. ಇದು ಆಹಾರವನ್ನು ಕಡಿಮೆ ಎಣ್ಣೆಯುಕ್ತವಾಗಿಸುತ್ತದೆ. ಹಾಗೆಯೇ ಕರಿದ ಪದಾರ್ಥಗಳನ್ನು ಸ್ವಲ್ಪ ಸಮಯದವರೆಗೆ ಕಡಿಮೆ ಬಿಸಿಯಿರುವ ಒಲೆ ಮೇಲೆ ಅಥವಾ ಬೆಚ್ಚಗಿನ ಪಾತ್ರೆಯಲ್ಲಿ ಇರಿಸಿದಾಗ ಒಳಗೆ ಉಳಿದಿರುವ ಎಣ್ಣೆಯು ಬಿಸಿಗೆ ಕರಗಿ ಹೊರಬರುತ್ತದೆ. ಇದರಿಂದ ಪದಾರ್ಥಗಳು ಹೆಚ್ಚು ಸಮಯದವರೆಗೆ ಕುರುಕಲಾಗಿ (Crispy) ಇರುತ್ತವೆ. ಈ ವಿಧಾನವು ಕರಿದ ಆಹಾರದಲ್ಲಿರುವ ಅನಗತ್ಯ ಜಿಡ್ಡನ್ನು ಕಡಿಮೆ ಮಾಡಿ, ಅದನ್ನು ತಿನ್ನಲು ಹೆಚ್ಚು ಹಗುರವಾಗಿಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ ಹವ್ಯಾಸ.

611
ಅಡುಗೆಯ ಬಣ್ಣ ಹೆಚ್ಚಿಸಲು ಕಾಶ್ಮೀರಿ ಮೆಣಸು

ಅಡುಗೆಯ ರುಚಿ ಬದಲಾಗದೆ ನೋಟವನ್ನು ಆಕರ್ಷಕವಾಗಿಸಲು ಇದು ಅದ್ಭುತವಾದ ಉಪಾಯ. ಕಾಶ್ಮೀರಿ ಮೆಣಸಿನ ಪುಡಿಯಲ್ಲಿ ಖಾರ ಬಹಳ ಕಡಿಮೆ ಇರುತ್ತದೆ, ಆದರೆ ಇದು ಅಡುಗೆಗೆ ಗಾಢವಾದ ಕೆಂಪು ಬಣ್ಣವನ್ನು ನೀಡುತ್ತದೆ. ಅಡುಗೆಯ ಆರಂಭದಲ್ಲಿ ಇದನ್ನು ಹಾಕುವುದರಿಂದ ಇಡೀ ಗ್ರೇವಿ ಆಕರ್ಷಕವಾಗಿ ಕಾಣುತ್ತದೆ.

711
ಉಪ್ಪು ಹೆಚ್ಚಾದರೆ

ಅದು ಯಾವುದೇ ಸಾಂಬಾರ್‌ ಆಗಿರಬಹುದು. ಉಪ್ಪು ಹೆಚ್ಚಾಗಿದ್ದರೆ ಆಲೂಗಡ್ಡೆ ಚೂರು ಅಥವಾ ಗೋಧಿ ಹಿಟ್ಟಿನ ಸಣ್ಣ ಉಂಡೆಗಳನ್ನು ಸೇರಿಸಿ. ನಿಂಬೆ ಹಣ್ಣಿನ ಗಾತ್ರಕ್ಕಿಂತ ಸಣ್ಣದು ಮಾಡಿಕೊಳ್ಳಿ. ಈ ಹಸಿ ಹಿಟ್ಟಿನ ಉಂಡೆಗಳನ್ನು ನೇರವಾಗಿ ಸಾರಿಗೆ ಹಾಕಿ. ಅದು ಸ್ವಲ್ಪ ಸಮಯ ಕುದ್ದ ನಂತರ, ಆ ಉಂಡೆಗಳು ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತವೆ. ಬಡಿಸುವ ಮೊದಲು ಆ ಉಂಡೆಗಳನ್ನು ಸಾರಿನಿಂದ ಹೊರಗೆ ತೆಗೆಯಬಹುದು. ಇದು ಗ್ರೇವಿಯ ರುಚಿಯನ್ನು ಬದಲಿಸದೆ ಉಪ್ಪನ್ನು ಕಡಿಮೆ ಮಾಡಲು ಇರುವ ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಮನೆಮದ್ದು.

811
ಖಾರ ಹೆಚ್ಚಾದರೆ

ಸಾಂಬಾರ್ ತುಂಬಾ ಖಾರವಾಗಿದ್ದರೆ, ಅದಕ್ಕೆ ಸ್ವಲ್ಪ ತುಪ್ಪ, ಮಜ್ಜಿಗೆ ಅಥವಾ ತಾಜಾ ಕ್ರೀಂ ಸೇರಿಸಬಹುದು. ಈ ಮೂರು ಪದಾರ್ಥ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತವೆ. ಒಂದು ಚಮಚ ತುಪ್ಪ ಸೇರಿಸಿದರೆ ಅದು ಮಸಾಲೆಯ ಕಟು ವಾಸನೆ ಮತ್ತು ಖಾರ ಕಡಿಮೆ ಮಾಡಿ, ಅಡುಗೆಯನ್ನು ಮೃದುವಾಗಿಸುತ್ತದೆ. ಸ್ವಲ್ಪ ಮಜ್ಜಿಗೆ ಹಾಕಿದರೆ ಅದು ಖಾರವನ್ನು ಹೀರಿಕೊಂಡು ರುಚಿಯನ್ನು ಹದಕ್ಕೆ ತರುತ್ತದೆ. ತಾಜಾ ಕ್ರೀಂ ಗ್ರೇವಿ ಅಥವಾ ಪಲ್ಯಕ್ಕೆ ತುಂಬಾ ಒಳ್ಳೆಯದು. ಇದು ಖಾರವನ್ನು ತಗ್ಗಿಸಿ, ಹೋಟೆಲ್ ಅಡುಗೆಯಂತೆ ಹೊಸ ರುಚಿ ನೀಡುತ್ತದೆ. ಸರಳವಾಗಿ ಹೇಳಬೇಕೆಂದರೆ ಇವುಗಳಲ್ಲಿರುವ ಜಿಡ್ಡಿನಂಶವು ಖಾರವನ್ನು ಮರೆಮಾಚಿ, ಅಡುಗೆಯನ್ನು ಸಪ್ಪೆ ಮಾಡದೆ ರುಚಿಯನ್ನು ಸಮತೋಲನಗೊಳಿಸುತ್ತದೆ.

911
ಹುಳಿ ಹೆಚ್ಚಾದರೆ

ಸಾಂಬಾರ್ ತುಂಬಾ ಹುಳಿಯಾಗಿದ್ದರೆ ಬೆಚ್ಚಗಿನ ಹಾಲು ಸೇರಿಸುವುದರಿಂದ ಖಾರ (ತೀವ್ರತೆ) ಕಡಿಮೆಯಾಗುತ್ತದೆ. ಹಾಲು ಹಾಕುವಾಗ ಅದು ಬೆಚ್ಚಗಿರಲಿ ಮತ್ತು ಅಡುಗೆಯ ಉರಿ ಕಡಿಮೆ ಇರಲಿ, ಇಲ್ಲದಿದ್ದರೆ ಹಾಲು ಒಡೆಯುವ ಸಾಧ್ಯತೆ ಇರುತ್ತದೆ.

1011
ಗ್ರೇವಿ ನೀರಾದರೆ

ಅಡುಗೆಯಲ್ಲಿ ಗ್ರೇವಿ ಅಥವಾ ಸಾರು ನೀರು ನೀರಾಗಿದ್ದರೆ, ಅದನ್ನು ಹದಕ್ಕೆ ತರಲು ಸ್ವಲ್ಪ ಕಡಲೆ ಹಿಟ್ಟನ್ನು ಬಾಣಲೆಯಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಅದನ್ನು ಗ್ರೇವಿಗೆ ಸೇರಿಸಿ. ಇದು ಗ್ರೇವಿಯನ್ನು ತಕ್ಷಣ ದಪ್ಪವಾಗಿಸಿ, ಹೋಟೆಲ್ ಅಡುಗೆಯಂತಹ ರುಚಿ ನೀಡುತ್ತದೆ. ಸ್ವಲ್ಪ ಮೆಂತ್ಯ ಹಿಟ್ಟು ಸೇರಿಸುವುದರಿಂದಲೂ ಗ್ರೇವಿ ದಪ್ಪವಾಗುತ್ತದೆ ಮತ್ತು ಅಡುಗೆಗೆ ಒಂದು ಒಳ್ಳೆ ಪರಿಮಳ ಬರುತ್ತದೆ. ಸರಳವಾಗಿ ಹೇಳಬೇಕೆಂದರೆ ಈ ಹಿಟ್ಟುಗಳು ಗ್ರೇವಿಯಲ್ಲಿರುವ ಹೆಚ್ಚುವರಿ ನೀರನ್ನು ಹೀರಿಕೊಂಡು, ಮಸಾಲೆ ಮತ್ತು ನೀರು ಒಂದಕ್ಕೊಂದು ಸರಿಯಾಗಿ ಬೆರೆಯುವಂತೆ ಮಾಡುತ್ತವೆ.

1111
ಮೊಸರು ಹೆಪ್ಪಾಗಲು ಹಸಿರು ಮೆಣಸಿನಕಾಯಿಯ ಬಳಕೆ

ಮೊಸರು ಬೇಗನೆ ಮತ್ತು ಗಟ್ಟಿಯಾಗಿ ಹೆಪ್ಪುಗಟ್ಟಲು ಹಸಿರು ಮೆಣಸಿನಕಾಯಿ ಹೇಗೆ ಸಹಾಯ ಮಾಡುತ್ತದೆ ಅಂದರೆ ಹಸಿರು ಮೆಣಸಿನಕಾಯಿಯ ತೊಟ್ಟಿನಲ್ಲಿ (Stem) ಕೆಲವು ನಿರ್ದಿಷ್ಟ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ಹಾಲನ್ನು ಮೊಸರನ್ನಾಗಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಇದು ಹಾಲಿನಲ್ಲಿರುವ ಪ್ರೋಟೀನ್ ಅನ್ನು ಬೇಗನೆ ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಬೆಚ್ಚಗಿನ ಹಾಲಿಗೆ ಹೆಪ್ಪು (ಸ್ವಲ್ಪ ಮೊಸರು) ಹಾಕಿದ ನಂತರ, ಅದಕ್ಕೆ ಒಂದು ಇಡೀ ಹಸಿರು ಮೆಣಸಿನಕಾಯಿಯನ್ನು (ತೊಟ್ಟು ಸಹಿತ) ಹಾಕಿ ಮುಚ್ಚಿಡಿ. ಇದರಿಂದ ಮೊಸರು ಬೇಗನೆ ಹೆಪ್ಪುಗಟ್ಟುತ್ತದೆ ಮತ್ತು ಹೆಚ್ಚು ಗಟ್ಟಿಯಾಗಿ ಬರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಅಥವಾ ಮೊಸರು ಬೇಗನೆ ಬೇಕಾದಾಗ, ಹಸಿರು ಮೆಣಸಿನಕಾಯಿ ಒಂದು 'ನ್ಯಾಚುರಲ್ ಬೂಸ್ಟರ್' ಆಗಿ ಕೆಲಸ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories