ಹರೀಶ್ ರಾಣಾಗೆ ಮಾರ್ಚ್ 11ರಂದು ಸುಪ್ರೀಂಕೋರ್ಟ್ ದಯಾಮರಣ ನೀಡುವುದಕ್ಕೆ ಅನುಮತಿ ನೀಡಿದ ನಂತರ ನೋಡುಗರ ಕಣ್ಣನ್ನು ತೇವಗೊಳಿಸುವ ವೀಡಿಯೋವೊಂದು ವೈರಲ್ ಆಗ್ತಿದೆ. 22 ಸೆಕೆಂಡ್‌ಗಳ ವೀಡಿಯೋದಲ್ಲಿ ಹರೀಶ್ ರಾಣಾ ಅವರ ತಾಯಿ ಅವರ ಪಕ್ಕದಲೇ ಕುಳಿತು ಮಗನೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.
13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟ ನಂತರ ಹರೀಶ್ ರಾಣಾ ಅವರ ಪೋಷಕರ ಮನೆಯಲ್ಲಿ ಹೇಳಲಾರದ ಒಂದು ಸಂಕಟ ಮನೆ ಮಾಡಿತ್ತು. ಮಗ ಮೇಲೇಳುವುದಿಲ್ಲ ಎಂದೂ ತಿಳಿದಿದ್ದರೂ 13 ವರ್ಷಗಳ ಕಾಲ ನಿರಂತರ ಮಗುವಿನಂತೆ ಮಗನನ್ನು ನೋಡಿಕೊಂಡಿದ್ದ ಆ ಪೋಷಕರಿಗೆ ಆತನನ್ನು ತಮ್ಮ ಕೈಯಾರೆ ಕಳುಹಿಸಿಕೊಡುವುದಕ್ಕೆ ಸಂಕಟವಾಗುತ್ತಿತ್ತು. ಆದರೂ ಅದು ಆಗಲೇಬೇಕಿತ್ತು. ಹರೀಶ್ ರಾಣಾ ಅವರ 1 ವರ್ಷಗಳ ಯಾತನೆಗೆ ಆ ಕುಟುಂಬ ಮುಕ್ತಿ ನೀಡಿತ್ತು.
ಹರೀಶ್ ರಾಣಾ ಅವರು ವಾಸವಿದ್ದ ಅವರ ಗಾಜಿಯಾಬಾದ್‌ನ ಮನೆಯಲ್ಲಿ ಆತನ ಕುಟುಂಬದರೆಲ್ಲಾ ಆತ ನಿಷ್ಕ್ರಿಯವಾಗಿ ಮಲಗಿದ್ದ ಬೆಡ್ ಸುತ್ತಲೂ ಸೇರಿ, ಆತನನ್ನು ದೆಹಲಿಯ ಏಮ್ಸ್‌ಗೆ ಕರೆದುಕೊಂಡು ಹೋಗುವ ಮೊದಲು ಆತನಿಗೆ ಕೊನೆಯ ವಿದಾಯ ಹೇಳುವುದಕ್ಕೆ ಸಿದ್ಧರಾಗಿದ್ದರು. ಅಲ್ಲಿ ವೈದ್ಯರು ಅವರ ಜೀವರಕ್ಷಕ ಸಾಧನಗಳನ್ನು ಹಿಂಪಡೆಯಲಿದ್ದಾರೆ. ಪಂಜಾಬ್‌ನ ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ 2013ರಲ್ಲಿ ತಾವು ವಾಸವಿದ್ದ ಪಿಜಿ ಕಟ್ಟಡದಿಂದ ಕೆಳಗೆ ಬಿದ್ದು ಅವರ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಅವರು ಹಾಸಿಗೆ ಮೇಲೆ ನಿರ್ಜೀವವಾಗಿ ಮಲಗಿದ್ದಾರೆ.
ಆದರೆ ಮಾರ್ಚ್ 11ರಂದು ಸುಪ್ರೀಂಕೋರ್ಟ್ ಅವರಿಗೆ ದಯಾಮರಣ ನೀಡುವುದಕ್ಕೆ ಅನುಮತಿ ನೀಡಿದ ನಂತರ ನೋಡುಗರ ಕಣ್ಣನ್ನು ತೇವಗೊಳಿಸುವ ವೀಡಿಯೋವೊಂದು ವೈರಲ್ ಆಗ್ತಿದೆ. 22 ಸೆಕೆಂಡ್‌ಗಳ ವೀಡಿಯೋದಲ್ಲಿ ಹರೀಶ್ ರಾಣಾ ಅವರ ತಾಯಿ ಅವರ ಪಕ್ಕದಲೇ ಕುಳಿತು ಮಗನೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅವರ ಮುಖ ಹತಾಶೆಯಿಂದ ಕೂಡಿತ್ತು. ಬ್ರಹ್ಮಕುಮಾರಿ ಸೋದರಿಯರು ಹರೀಶ್ ರಾಣಾ ಅವರ ಹಣೆಗೆ ತಿಲಕವಿಟ್ಟು, ಎಲ್ಲರನ್ನು ಕ್ಷಮಿಸಿಬಿಡು ಎಲ್ಲರ ಬಳಿಯೂ ಕ್ಷಮೆ ಕೇಳು, ಇದು ಹೊರಡುವ ಸಮಯ ಸರಿ ನಾ ಎಂದು ಹೆಳುತ್ತಾ ಹರೀಶ್ ರಾಣಾ ಅವರ ತಲೆಯನ್ನು ಸವರುತ್ತಾ ಹೇಳುತ್ತಿರುವುದು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಹರೀಶ್ ರಾಣಾ ಕುಟುಂಬವು ಬ್ರಹ್ಮ ಕುಮಾರೀಸ್ ಎಂಬ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಇದು ಹರೀಶ್ ಅವರ ದಯಾಮರಣಕ್ಕೆ ಹೋರಾಡಲು ವಕೀಲರನ್ನು ಹರೀಶ್ ರಾಣಾ ಕುಟುಂಬಕ್ಕೆ ಸಹಾಯ ಮಾಡಿತು. 2013 ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದ ನಂತರ ರಾಣಾ ಅವರ ಮೆದುಳಿಗೆ ಗಂಭೀರ ಗಾಯಗಳಾಗಿದ್ದವು.
ಅಂದಿನಿಂದ, ಅವರು ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ ಮತ್ತು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೋಸ್ಟೊಮಿ ಟ್ಯೂಬ್ ಹೊಂದಿದ್ದು ಹಾಸಿಗೆಗೆ ಸೀಮಿತರಾಗಿದ್ದಾರೆ. ನಿರಂತರ ಆತನ ಸೇವೆಯಲ್ಲಿ ಕಳೆದ ಪೋಷಕರಿಗೆ ಈಗ ಅವರಿಗೂ ವಯಸ್ಸಾಗಿದ್ದು, ತಮ್ಮ ಆರೈಕೆಗೆ ಯಾರಾದರೂ ಇರಬೇಕಾದಂತಹ ಸ್ಥಿತಿ ಇದೆ ಹೀಗಾಗಿ ರಾಣಾ ಅವರ ಪೋಷಕರು ಅವರಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದರು, ಅಂತಿಮವಾಗಿ ಸುಪ್ರೀಂ ಕೋರ್ಟ್ ಅದಕ್ಕೆ ಅನುಮತಿ ನೀಡಿತ್ತು.
ಭಾರತದಲ್ಲಿ ವ್ಯಕ್ತಿಯೊಬ್ಬರಿಗೆ ದಯಾಮರಣ ನೀಡಿದ ಮೊದಲ ಪ್ರಕರಣ ಇದಾಗಿದೆ. ಇದಕ್ಕೂ 53 ವರ್ಷಗಳ ಹಿಂದೆ, 1973 ರಲ್ಲಿ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕ್ರೂರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 25 ವರ್ಷದ ನರ್ಸ್ ಅರುಣಾ ಶಾನ್‌ಬಾಗ್ ಅವರಿಗೂ ದಯಾಮರಣಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರಿಗೆ ಸಾಯುವ ಹಕ್ಕನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಪರಿಣಾಮ ಮುಂದಿನ ನಾಲ್ಕು ದಶಕಗಳ ಕಾಲ ಅವರ ದೇಹವು ಸಂಪೂರ್ಣ ನಿಷ್ಕ್ರಿಯ ಸ್ಥಿತಿಯಲ್ಲಿತ್ತು. ನಂತರ ಶಾನ್‌ಬಾಗ್ 2015 ರಲ್ಲಿ ನ್ಯುಮೋನಿಯಾದಿಂದ ನಿಧನರಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ