ದಿನಕ್ಕೆ ಬರೀ ಎರಡು ಸಿಗರೇಟು ಸೇದುತ್ತೇನೆ. ಅದೇನೂ ಆರೋಗ್ಯ ಹಾಳು ಮಾಡೋದಿಲ್ಲ ಎನ್ನುವ ಭ್ರಮೆಯಲ್ಲಿ ಅನೇಕರಿದ್ದಾರೆ. ಒಂದು ತಿಂಗಳು ಪ್ರತಿ ದಿನ ಎರಡು ಸಿಗರೇಟ್ ಸೇದಿದ್ರೆ ಏನಾಗುತ್ತೆ ಗೊತ್ತಾ?
ದಿನಕ್ಕೆ ಒಂದು ಅಥವಾ ಎರಡು ಸಿಗರೇಟ್ ಸೇದಿದ್ರೆ ಏನಾಗಲ್ಲ ಅಂದ್ಕೊಳ್ಳೊರೇ ಜಾಸ್ತಿ. ಕಾರ್ಪೊರೇಟ್ ಮತ್ತು ಮಾಧ್ಯಮ ಉದ್ಯಮದಲ್ಲಿಈ ನಂಬಿಕೆ ಹೆಚ್ಚಿದೆ. ನಿಯಂತ್ರಿತ ಅಥವಾ ಸಾಂದರ್ಭಿಕ ಧೂಮಪಾನ ಅಂತ ಇದನ್ನು ಕರೆಯಲಾಗುತ್ತೆ. ಹನಿ ಹನಿ ಗೂಡಿದ್ರೆ ಹಳ್ಳ ಅನ್ನೋ ಹಾಗೆ ದಿನಕ್ಕೆ ಸೇದುವ ಎರಡು ಸಿಗರೇಟ್ ಕೂಡ ನಿಮ್ಮ ಜೀವಕ್ಕೆ ಅಪಾಯಕಾರಿ. ಸಣ್ಣ ಪ್ರಮಾಣದ ಧೂಮಪಾನ ದೇಹಕ್ಕೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ನಂಬ್ತಾರೆ.
28
ನಿಕೋಟಿನ್ ಚಟವಾಗೋದು ಹೇಗೆ?
ಸಿಗರೇಟ್ ಗಳಲ್ಲಿರುವ ನಿಕೋಟಿನ್ ವೇಗವಾಗಿ ಕೆಲ್ಸ ಮಾಡುತ್ತೆ. ಇದು ನೇರವಾಗಿ ಮೆದುಳಿನ ರಿವಾರ್ಡ್ ಸಿಸ್ಟಂ ಮೇಲೆ ಪರಿಣಾಮ ಬೀರುತ್ತದೆ. ನೀವು ಸ್ವಲ್ಪ ಪ್ರಮಾಣದಲ್ಲಿ ನಿಕೋಟಿನ್ ತೆಗೆದುಕೊಂಡ್ರೂ ಅದು ನಿಮ್ಮನ್ನು ವ್ಯಸನಕ್ಕೆ ತಳ್ಳುತ್ತದೆ. ಆರಂಭದಲ್ಲಿ ಕಡುಬಯಕೆ ಸೌಮ್ಯವಾಗಿರುತ್ತವೆ. ಕ್ರಮೇಣ, ಈ ಅಭ್ಯಾಸ ವ್ಯಸನವಾಗಿ ಬದಲಾಗುತ್ತೆ. ಕೇವಲ ಎರಡು ಅಂದ್ಕೊಂಡಿದ್ದ ಸಿಗರೇಟ್ ಯಾವಾಗ ಅಗತ್ಯವಾಯ್ತು ಎಂಬುದು ಅರಿವಿಗೆ ಬರೋದಿಲ್ಲ.
38
ಹೃದಯದ ಮೇಲೆ ಪರಿಣಾಮ
ನೀವು ದಿನಕ್ಕೆ ಸೇದುವ ಎರಡು ಸಿಗರೇಟ್ ಹೃದಯ ಮತ್ತು ರಕ್ತನಾಳಗಳ ಮೇಲೆ ಮೊದಲು ಪರಿಣಾಮ ಬೀರುತ್ತದೆ. ನಿಕೋಟಿನ್ ತಾತ್ಕಾಲಿಕವಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದ್ರಿಂದ ಹೃದಯದ ಕೆಲ್ಸ ಹೆಚ್ಚಾಗುತ್ತದೆ. ಧೂಮಪಾನ ರಕ್ತವನ್ನು ದಪ್ಪವಾಗಿಸುತ್ತದೆ. ರಕ್ತ ಜಿಗುಟಾಗುತ್ತದೆ. ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ದಿನಕ್ಕೆ ಎರಡು ಸಿಗರೇಟ್ ಸೇದುವುದು ಶ್ವಾಸಕೋಶಕ್ಕೂ ಅಪಾಯಕಾರಿ. ಸಿಗರೇಟ್ ಹೊಗೆ ಶ್ವಾಸಕೋಶದಲ್ಲಿ ಉರಿಯೂತವನ್ನುಂಟು ಮಾಡುತ್ತದೆ. ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಒಂದು ತಿಂಗಳು ಪ್ರತಿ ದಿನ ನೀವು ದಿನಕ್ಕೆ ಎರಡರಂತೆ ಸಿಗರೇಟು ಸೇದುತ್ತಾ ಬಂದ್ರೆ ಗಂಟಲಿನ ಕಿರಿಕಿರಿ, ಸೌಮ್ಯ ಕೆಮ್ಮು, ಎದೆಯ ಬಿಗಿತ ಅಥವಾ ನಡೆಯುವಾಗ ಉಸಿರಾಟದ ತೊಂದರೆ ನಿಮ್ಮನ್ನು ಕಾಡುತ್ತದೆ.
58
ದುರ್ಬಲಗೊಳ್ಳುವ ರೋಗನಿರೋಧಕ ಶಕ್ತಿ
ಸಿಗರೇಟ್ ಗಳಲ್ಲಿನ ವಿಷಕಾರಿ ರಾಸಾಯನಿಕಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದ್ರಿಂದ ಯಾವುದೇ ಅನಾರೋಗ್ಯ ಕಾಡಿದ್ರೂ ದೇಹ ಬೇಗ ಚೇತರಿಕೆ ಕಾಣುವುದಿಲ್ಲ.
68
ಚರ್ಮಕ್ಕೆ ಹಾನಿ
ಪ್ರತಿ ದಿನ ಎರಡರಂತೆ ಒಂದು ತಿಂಗಳು ಸಿಗರೇಟು ಸೇದಿದ್ರೆ ಚರ್ಮದ ಮೇಲೆ ಪರಿಣಾಮ ಕಾಣಿಸಿಕೊಳ್ಳುತ್ತದೆ. ಕಡಿಮೆಯಾದ ರಕ್ತ ಪರಿಚಲನೆ ಚರ್ಮ ಮಂದವಾಗಿ ಕಾಣುವಂತೆ ಮಾಡುತ್ತದೆ. ಗಾಯಗಳು ಗುಣವಾಗಲು ತುಂಬಾ ಸಮಯ ಹಿಡಿಯುತ್ತದೆ. ಒಸಡುಗಳ ಕಿರಿಕಿರಿ ಅಥವಾ ಊತ ಕಾಣಿಸಿಕೊಳ್ಳಬಹುದು.
78
ಎಚ್ಚೆತ್ತರೆ ಆರೋಗ್ಯ
ನೀವು ಬರೀ ಒಂದು ತಿಂಗಳು ದಿನಕ್ಕೆ ಎರಡು ಸಿಗರೇಟ್ ಸೇದಿ ನಂತ್ರ ಅದನ್ನು ಸಂಪೂರ್ಣವಾಗಿ ಬಿಟ್ಟಲ್ಲಿ ಶಾಶ್ವತ ಹಾನಿ ಇಲ್ಲ. ನೀವು ಆದಷ್ಟು ಬೇಗ ಧೂಮಪಾನ ಬಿಟ್ಟಲ್ಲಿ ದೇಹ ಚೇತರಿಸಿಕೊಳ್ಳು ಸಮಯ ಸಿಗುತ್ತದೆ. ಆದ್ರೆ ಸೆಲ್ಯುಲಾರ್ ಮಟ್ಟದಲ್ಲಿ ಹಾನಿಯಾಗುತ್ತದೆ. ಶ್ವಾಸಕೋಶಗಳು ಮತ್ತು ರಕ್ತನಾಳಗಳಲ್ಲಿ ಸಮಸ್ಯೆ ಪ್ರಾರಂಭವಾಗುತ್ತದೆ. ಅಸ್ತಮಾ, ಹೃದ್ರೋಗ ಅಥವಾ ಆನುವಂಶಿಕ ಅಪಾಯಕಾರಿ ಅಂಶಗಳಿರುವ ಜನರಲ್ಲಿ ಇದರ ಪರಿಣಾಮಗಳು ಹೆಚ್ಚಾಗುತ್ತವೆ.
88
ಲಘು ಸಿಗರೇಟ್
ಕಡಿಮೆ ಟಾರ್ ಸಿಗರೇಟ್ ಆರೋಗ್ಯ ಹಾಳು ಮಾಡೋದಿಲ್ಲ ಅಂತ ಜನ ನಂಬ್ತಾರೆ. ಆದ್ರೆ ಲಘು ಸಿಗರೇಟ್, ಬೀಡಿ ಎಲ್ಲವೂ ನಿಕೋಟಿನ್ ಹೊಂದಿದ್ದು, ಆರೋಗ್ಯ ಹಾಳು ಮಾಡುತ್ತವೆ. ದಿನಕ್ಕೆ ನಾಲ್ಕಿರಲಿ, ಒಂದಿರಲಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿರೋದ್ರಿಂದ ಆದಷ್ಟು ಬೇಗ ಈ ಚಟದಿಂದ ಹೊರಗೆ ಬರೋದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.