
ನಮ್ಮ ದೇಹದ ಶೇಕಡಾ 60 ಭಾಗ ನೀರಿನಿಂದಲೇ ತುಂಬಿದೆ. ಒಳ್ಳೆ ಆರೋಗ್ಯಕ್ಕೆ ನೀರು ತುಂಬಾ ಮುಖ್ಯ. ನಮ್ಮ ಶರೀರದ ಪ್ರತಿಯೊಂದು ಅಂಗ, ಜೀವಕೋಶ, ಅಂಗಾಂಶಗಳು ಸರಿಯಾಗಿ ಕೆಲಸ ಮಾಡೋಕೆ ನೀರು ಬೇಕೇ ಬೇಕು. ಅದಕ್ಕಾಗಿ ದಿನವೂ ನಾವು ದೇಹಕ್ಕೆ ಸಾಕಾಗುವಷ್ಟು ನೀರನ್ನು ಕುಡಿಯುತ್ತೇವೆ. ದಿನವೂ ದೇಹಕ್ಕೆ ಸಾಕಾಗುವಷ್ಟು ನೀರು ಕುಡಿಯೋದು ಬಹಳ ಮುಖ್ಯ.
ಮನುಷ್ಯರು ಪ್ರತಿದಿನ 2 ರಿಂದ 3 ಲೀಟರ್ ನೀರು ಕುಡಿಯಬೇಕು ಅಂತ ವೈದ್ಯರು ಹೇಳುತ್ತಾರೆ. ಸಮಪ್ರಮಾಣದ ನೀರಿನ ಸೇವನೆ ನಿಮ್ಮ ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುತ್ತೆ ಅಂತ ಗೊತ್ತೇ ಇದೆ. ಕೆಲವು ಆಹಾರಗಳು ಸಹ ನಿಮ್ಮ ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ.
ಸೌತೆಕಾಯಿ, ಕಲ್ಲಂಗಡಿ, ಟೊಮೇಟೊ, ಕರ್ಬೂಜ ಹಣ್ಣುಗಳು ಹೀಗೆ ನೀರಿನಂಶ ಇರೋ ತರಕಾರಿ, ಹಣ್ಣುಗಳನ್ನ ನೀವು ನೀರಿನಂಶಕ್ಕಾಗಿ ತಿನ್ನಬಹುದು. ಆದ್ರೆ ಹಲವರು ದಿನಾ ಕಡಿಮೆ ನೀರು ಕುಡಿಯುತ್ತಾರೆ. ಕೆಲವರಿಗೆ ನೀರು ಅಂದ್ರೆ ಅಲರ್ಜಿ ಟೀ ಕಾಫಿ ಕುಡಿತಾರೆ. ಆದರೆ ನೀರು ಅಂದ್ರೆ ಮೂಗು ಮುರಿತಾರೆ. ಆದರೆ ದಿನವೂ ಕಡಿಮೆ ನೀರು ಕುಡಿಯೋದ್ರಿಂದ ಏನಾಗುತ್ತೆ? ಅದರ ಕೆಲವು ಅಡ್ಡಪರಿಣಾಮಗಳು ಏನು ಅನ್ನೋದನ್ನು ಈಗ ನೋಡೋಣ.
ದಿನಾ ಕಡಿಮೆ ನೀರು ಕುಡಿದ್ರೆ ಏನಾಗಲ್ಲ, ನನಗೆ ಇಲ್ಲಿವರೆಗೆ ಏನೂ ಆಗಿಲ್ಲ ಅಂತ ನಿರ್ಲಕ್ಷ್ಯ ಮಾಡಬೇಡಿ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಕಡಿಮೆ ನೀರು ಕುಡಿಯೋದ್ರಿಂದ ಮೂತ್ರಪಿಂಡದಲ್ಲಿ ಕಲ್ಲು ಆಗುವ ಸಾಧ್ಯತೆ ಹೆಚ್ಚು. ಕಲ್ಲು ತೆಗೆದ್ರೂ ಮತ್ತೆ ಆಗದಿರೋಕೆ ದಿನಾ ಸಾಕಷ್ಟು ನೀರು ಕುಡಿಯೋದು ಮುಖ್ಯ. ಮೂತ್ರ ವಿಸರ್ಜನೆಗೆ 2 ರಿಂದ 3 ಲೀಟರ್ ನೀರು ಕುಡಿಯಬೇಕು. ಕಡಿಮೆ ನೀರು ಕುಡಿದ್ರೆ ದೇಹದ ಕಲ್ಮಶಗಳು ಮೂತ್ರದ ಮೂಲಕ ಹೊರಹೋಗಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರಪಿಂಡದ ಸೋಂಕು ಕಾಣಿಸಿಕೊಳ್ಳಬಹುದು.
1. ದೇಹದ ಶಕ್ತಿ ಕಡಿಮೆಯಾಗುತ್ತೆ
ದಿನಾ ಕಡಿಮೆ ನೀರು ಕುಡಿದ್ರೆ ನಿಮ್ಮ ಶಕ್ತಿ ಕಡಿಮೆ ಆಗುತ್ತೆ. ದಿನವಿಡೀ ನೀವು ಸಕ್ರಿಯವಾಗಿರಲು ಸಾಧ್ಯವಾಗುವುದಿಲ್ಲ. ದಣಿವು ಕಾಡುತ್ತೆ. ಹಾಗಾಗಿ ದಿನವಿಡೀ ನೀರು ಕುಡಿಯುವುದಕ್ಕೆ ಮರೆಯದಿರಿ. ಎಲ್ಲೇ ಹೋದರೂ ಒಂದು ನೀರಿನ ಬಾಟಲಿ ಕೈಯಲ್ಲಿ ಇಟ್ಟುಕೊಳ್ಳಿ ಅದನ್ನು ನೋಡಿದಾಗಲಾದರು ನೀರು ಕುಡಿಯೋಣ ಅಂತ ನಿಮಗನಿಸುತ್ತದೆ.
2. ಜೀರ್ಣಕ್ರಿಯೆ ಸಮಸ್ಯೆ:
ದಿನಾ ಕಡಿಮೆ ನೀರು ಕುಡಿಯೋದ್ರಿಂದ ಮಲಬದ್ಧತೆ ಉಂಟಾಗುತ್ತೆ. ನೀರು ನಾವು ತಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತೆ. ಸಾಕಷ್ಟು ನೀರು ಕುಡಿಯದಿದ್ದರೆ, ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ. ಹೀಗಾಗಿ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತೆ.
3. ದೇಹದ ಉಷ್ಣತೆ ಹೆಚ್ಚಳ:
ದಿನಾ ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತೆ. ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತೆ.
4. ಮಾನಸಿಕ ಸ್ಥಿತಿ ಬದಲಾವಣೆ:
ನೀರಿನ ಕೊರತೆ ನಿಮ್ಮನ್ನು ಕಿರಿಕಿರಿಗೊಳಿಸಬಹುದು. 2019ರಲ್ಲಿ ನ್ಯೂಟ್ರಿಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, ಕೋಪ, ದ್ವೇಷ, ಗೊಂದಲ, ಖಿನ್ನತೆ ಮತ್ತು ಆತಂಕದಂತಹ ಭಾವನೆಗಳು ಶೇ.1ರಷ್ಟು ನೀರಿನಂಶ ಕಡಿಮೆಯಾದಾಗ ಹೆಚ್ಚಾಗುತ್ತವೆ. ಹಾಗಾಗಿ ಮುಂದಿನ ಬಾರಿ ನೀವು ದಣಿವು ಅಥವಾ ಕಿರಿಕಿರಿ ಅನುಭವಿಸಿದಾಗ ಒಂದು ಗ್ಲಾಸ್ ನೀರು ಕುಡಿಯಿರಿ.
5. ನಿಧಾನ ಚಯಾಪಚಯ:
ದೇಹದ ಪ್ರತಿಯೊಂದು ಕಾರ್ಯಕ್ಕೂ ನೀರು ಬೇಕೆ ಬೇಕು. ನೀವು ನೀರಿನ ಕೊರತೆ ಅನುಭವಿಸಿದರೆ ನಿಮ್ಮ ಚಯಾಪಚಯ ಕಡಿಮೆಯಾಗುತ್ತದೆ. ನಿಮ್ಮ ಶಕ್ತಿಯ ಮಟ್ಟ ಕೂಡ ಕಡಿಮೆಯಾಗುತ್ತದೆ. ಹಾಗಾಗಿ, ನಿಮ್ಮ ದೇಹ ಸರಿಯಾಗಿ ಕೆಲಸ ಮಾಡಲು ನೀರಿನಂಶ ಇರೋದು ಮುಖ್ಯ.
6. ತಲೆನೋವು ಮತ್ತು ಆಯಾಸ:
ನಿಮ್ಮ ಮೆದುಳಿಗೆ ಬೇಕಾದಷ್ಟು ನೀರು ಸಿಗದಿದ್ದಾಗ ಅದು ತಲೆನೋವು ಮತ್ತು ಆಯಾಸಕ್ಕೆ ಕಾರಣವಾಗುತ್ತದೆ ಎಂದು 2021ರ ಸಂಶೋಧನೆ ಹೇಳುತ್ತದೆ. ಹಾಗಾಗಿ ನೀವು ತಲೆನೋವು ಅಥವಾ ಆಯಾಸ ಅನುಭವಿಸಿದರೆ ಸ್ವಲ್ಪ ನೀರು ಕುಡಿದು ವಿಶ್ರಾಂತಿ ಪಡೆಯಿರಿ.
ಹೃದ್ರೋಗ, ಮಧುಮೇಹ, ಮೂತ್ರಪಿಂಡ ವೈಫಲ್ಯ, ಕಾಲುಗಳಲ್ಲಿ ಊತ ಇರುವವರು ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇಂತಹವರ ದೇಹದಲ್ಲಿ ಹೆಚ್ಚು ನೀರು ಸೇರಿದರೆ ಅದು ಅಪಾಯಕಾರಿ.
3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 70 ವರ್ಷ ಮೇಲ್ಪಟ್ಟವರಿಗೆ ಬಾಯಾರಿಕೆ ಕಡಿಮೆ ಇರುತ್ತದೆ. ಹಾಗಾಗಿ ಇಂತಹವರಿಗೆ ಬಾಯಾರಿಕೆಯಾಗುವ ಮೊದಲೇ ನೀರು ಕೊಡುವುದು ಮುಖ್ಯ. ಇಲ್ಲದಿದ್ದರೆ ಅವರ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ರಕ್ತದೊತ್ತಡ ಕಡಿಮೆಯಾಗುವ ಅಪಾಯವಿರುತ್ತದೆ.
ತಜ್ಞರ ಪ್ರಕಾರ, ದಿನಾ ಬೆಳಗ್ಗೆ ಒಂದು ಲೋಟ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ನೀರು ದೇಹದಲ್ಲಿರುವ ವಿಷವನ್ನು ಹೊರಹಾಕಲು ಮತ್ತು ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಮತ್ತು ಚರ್ಮದ ಆರೋಗ್ಯ ಸುಧಾರಿಸಲು ಸಹ ನೀರು ಸಹಾಯ ಮಾಡುತ್ತದೆ. ಹಾಗಾಗಿ ಬೆಳಗ್ಗೆ ಟೀ ಅಥವಾ ಕಾಫಿಗಿಂತ ಮೊದಲು ಒಂದು ಲೋಟ ನೀರು ಕುಡಿಯಿರಿ. ಬಿಸಿ ನೀರು ಕುಡಿಯುವುದು ಜೀರ್ಣಕ್ರಿಯೆ ಮತ್ತು ಚಯಾಪಚಯಕ್ಕೆ ತುಂಬಾ ಒಳ್ಳೆಯದು.