ಸಾಮಾನ್ಯವಾಗಿ, ಹಾಲನ್ನು ರುಚಿಕರವಾಗಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಫ್ಲೇವರ್ಸ್ ಅಥವಾ ಸಿರಪ್‌ಗಳನ್ನು ಹಾಲಿಗೆ ಸೇರಿಸುತ್ತಾರೆ. ಆದ್ರೆ ಅದರ ಬದಲು ನೀವು ಶುಂಠಿ ಬಳಸೋದು ಸಹ ಬೆಸ್ಟ್. ಇದು ಒಂದು ಮಸಾಲೆ. ಇದರ ವಾಸನೆ ಮತ್ತು ರುಚಿ ತುಂಬಾನೆ ಚೆನ್ನಾಗಿರುತ್ತೆ, ಜೊತೆಗೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಸಹ ಕಂಡುಬರುತ್ತವೆ. ಆದ್ದರಿಂದ ಇಂದು ಈ ಲೇಖನದಲ್ಲಿ ಶುಂಠಿ ಹಾಲಿನ ಕೆಲವು ಅತ್ಯುತ್ತಮ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಇವುಗಳ ಬಗ್ಗೆ ತಿಳಿದ್ರೆ ನೀವು ಪ್ರತಿದಿನ ಮಿಸ್ ಮಾಡದೇ ಶುಂಠಿ ಹಾಲು ಮಾಡಿ ಸೇವಿಸುತ್ತೀರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ದೇಹ ಆರೋಗ್ಯವಾಗಿರಲು ನೀವು ರೋಗ ನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸಬೇಕು. ಇದು ದೇಹಕ್ಕೆ ಗುರಾಣಿಯಂತೆ ಕಾರ್ಯನಿರ್ವಹಿಸುತ್ತೆ, ಅಲ್ಲದೇ ವ್ಯಕ್ತಿಯನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಅದಕ್ಕಾಗಿ ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ ಹಾಲನ್ನು ನಿಯಮಿತವಾಗಿ ಸೇವಿಸಬೇಕು.
ಶುಂಠಿ ಹಾಲು ರೋಗ ನಿರೋಧಕ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಮೂಲಕ ದೇಹದಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಶುಂಠಿ ಹಾಲಿನಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ, ಅದು ಆಂತರಿಕ ಫ್ರೀ ರ್ಯಾಡಿಕಲ್‌ಗಳಿಂದ (free radicals) ನಮ್ಮನ್ನು ರಕ್ಷಿಸುತ್ತದೆ. ಇದರ ಪರಿಣಾಮವಾಗಿ, ನೀವು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಇರಲು ಸಾಧ್ಯವಾಗುತ್ತೆ.
ಉತ್ತಮ ಜೀರ್ಣಕ್ರಿಯೆ
ಶುಂಠಿಯನ್ನು ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಅಸಿಡಿಟಿ, ಆಸಿಡ್ ರಿಫ್ಲಕ್ಸ್, ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ (constipation) ಅನೇಕ ಸಮಸ್ಯೆಗಳ ವಿರುದ್ಧ ಹೋರಾದುತ್ತೆ. ನೀವು ಶುಂಠಿ ಹಾಲನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಅನೇಕ ರೀತಿಯ ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು.
ಆಸ್ಟಿಯೊಪೊರೋಸಿಸ್ ಉಂಟಾಗುವ ಸಾಧ್ಯತೆ ಕಡಿಮೆ
ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಆದರೆ, ಶುಂಠಿ ಹಾಲು ಕುಡಿಯುವುದರಿಂದ ನೈಸರ್ಗಿಕವಾಗಿ ನಿಮ್ಮ ಮೂಳೆಗಳ ಬಲ ಹೆಚ್ಚಿಸಬಹುದು. ಹಾಲು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುವುದರಿಂದ ಮೂಳೆಯ ದೌರ್ಬಲ್ಯ ತೆಗೆದುಹಾಕಲು ಸಹಾಯ ಮಾಡುತ್ತದೆ.
ಶುಂಠಿಯನ್ನು ಹಾಲಿನಲ್ಲಿ ಸೇರಿಸಿದರೆ, ಅದು ಮೂಳೆಗಳಿಗೆ ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ ಮತ್ತು ಸೋಂಕುಗಳು ಮತ್ತು ಉರಿಯೂತ ಇತ್ಯಾದಿಗಳಿಂದ ರಕ್ಷಿಸುತ್ತದೆ. 40 ವರ್ಷದ ನಂತರ ಶುಂಠಿ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಆಸ್ಟಿಯೊಪೊರೋಸಿಸ್ ನ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ನೋವನ್ನು ನಿವಾರಿಸುತ್ತೆ
ಬಹಳ ಸಮಯದಿಂದ, ಉರಿಯೂತವನ್ನು ಕಡಿಮೆ ಮಾಡಲು ಶುಂಠಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಮೊಣಕಾಲ ಅಸ್ಥಿಸಂಧಿವಾತದ ನೋವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಶುಂಠಿ ಚಹಾ (Ginger Tea) ತಲೆನೋವು, ಸ್ನಾಯು ನೋವು, ಮುಟ್ಟಿನ ಸೆಳೆತ ಮತ್ತು ಇತರ ರೀತಿಯ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಶುಂಠಿ ಹಾಲನ್ನು ಕುಡಿದರೆ, ಅದು ನಿಮಗೆ ಹೆಚ್ಚಿನ ಪ್ರಯೋಜನ ನೀಡುತ್ತೆ.
ಗಂಟಲಿನ ನೋವು ನಿವಾರಣೆ
ಗಂಟಲು ನೋವಿನ (Throat Pain) ಸಮಸ್ಯೆಯಿಂದ ನೀವು ತೊಂದರೆಗೀಡಾದರೆ, ಶುಂಠಿ ಹಾಲು ಉತ್ತಮ ಪರಿಹಾರ ನೀಡುತ್ತದೆ. ನೆಗಡಿ, ಜ್ವರ ಮತ್ತು ಕೆಮ್ಮು ಹೆಚ್ಚಾಗಿ ಗಂಟಲು ಸೋಂಕು ಮತ್ತು ನೋವಿಗೆ ಕಾರಣವಾಗುತ್ತೆ, ಮತ್ತು ನಿಮಗೆ ಮಾತನಾಡಲು, ತಿನ್ನಲು ಅಥವಾ ಕುಡಿಯಲು ತುಂಬಾನೆ ಕಷ್ಟ.
ಗಂಟಲಿನ ಸಮಸ್ಯೆ ನಿವಾರಿಸಲು ಒಂದು ಲೋಟ ಶುಂಠಿ ಹಾಲನ್ನು ಕುಡಿಯಿರಿ. ಇದರಿಂದ ನಿಮಗೆ ಉತ್ತಮ ಅನುಭವವಾಗುತ್ತದೆ. ಏಕೆಂದರೆ ಇದು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಶುಂಠಿ ಹಾಲನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು ಮತ್ತು ನಿಮ್ಮನ್ನು ಹೆಚ್ಚು ಆರೋಗ್ಯಕರವಾಗಿಸಿಕೊಳ್ಳಬೇಕು.