ಕ್ಯಾನ್ಸರ್, ತೊನ್ನು, ಡೈವೋರ್ಸ್.. ಬಾಳಲ್ಲಿ ಏನೇ ಬಂದ್ರೂ ಜಗ್ಗದ ಫೈಟರ್ ಈ 'ಮಹಾರಾಜ' ನಟಿ ಮಮತಾ..

First Published Jun 26, 2024, 10:42 AM IST

ನಟಿಯರನ್ನು ಅದೃಷ್ಟವಂತೆಯರೆಂದು ಸಾಮಾನ್ಯ ಯುವತಿಯರು ಬಗೆಯುತ್ತಾರೆ. ಆದರೆ, ಈ ನಟಿ ನೋಡಿ.. ಆಕೆಯ ಬಾಳಲ್ಲಿ ಎದುರಾದ ಸವಾಲುಗಳು ಒಂದೆರಡಲ್ಲ.. ಆದರೆ ಆಕೆ ಯಾವುದಕ್ಕೂ ಎದೆಗುಂದದೆ ಹೋರಾಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ. 

ಜನಪ್ರಿಯ ಭಾರತೀಯ ನಟಿ, ಹಿನ್ನೆಲೆ ಗಾಯಕಿ ಮತ್ತು ನಿರ್ಮಾಪಕಿ, ಮಮತಾ ಮೋಹನ್‌ದಾಸ್ ಮಲಯಾಳಂ ಚಲನಚಿತ್ರೋದ್ಯಮದ ದೊಡ್ಡ ಹೆಸರುಗಳಲ್ಲಿ ಒಬ್ಬರು.

ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಮಮತಾ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.  55ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮಮತಾ ನಟನೆ ಮತ್ತು ಗಾಯನ ಎರಡರಲ್ಲೂ ಅಸಾಧಾರಣ ಪ್ರತಿಭೆ ಎಂದು ಸಾಬೀತುಪಡಿಸಿದ್ದಾರೆ. 
 

ಸಧ್ಯ ವಿಜಯ್ ಸೇತುಪತಿ ಜೊತೆ ಮಮತಾ ನಟಿಸಿದ 'ಮಹಾರಾಜಾ' ಚಿತ್ರ ಥಿಯೇಟರ್‌ಗಳಲ್ಲಿ ಓಡುತ್ತಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಚಲನಚಿತ್ರ ಮತ್ತು ಸಂಗೀತ ಉದ್ಯಮಗಳಲ್ಲಿನ ಕೆಲಸಕ್ಕಾಗಿ ನಟಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲ, ಮಮತಾ ಮೋಹನ್‌ದಾಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ.

ಇಷ್ಟೊಂದು ಸುಂದರವಾಗಿರುವ, ಪ್ರತಿಭಾನ್ವಿತವಾಗಿರುವ ಈ ನಟಿ ಜೀವನದ ಚಿಕ್ಕ ವಯಸ್ಸಲ್ಲೇ ಅನುಭವಿಸಿದ ಸಂಕಷ್ಟಗಳು ಒಂದೆರಡಲ್ಲ..

ಜನವರಿ 15, 2023 ರಂದು, ಮಮತಾ ಮೋಹನ್‌ದಾಸ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌‌ನಲ್ಲಿ ಈ ಫೋಟೋ ಹಂಚಿಕೊಂಡು ತಮಗೆ ತೊನ್ನು ಶುರುವಾಗುತ್ತಿದೆ ಎಂಬುದನ್ನು ಹಂಚಿಕೊಂಡರು. 

ತನ್ನ ದೇಹದ ಕೆಲವು ಭಾಗಗಳಲ್ಲಿ ತನ್ನ ಮೂಲ ಚರ್ಮದ ಬಣ್ಣವನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ ಎಂದು ಹೇಳಿದ ನಟಿ, ಚರ್ಮದ ಅಸ್ವಸ್ಥತೆಯು ತನ್ನ ಮಾನಸಿಕ ಆರೋಗ್ಯವನ್ನು ಹಾಳು ಮಾಡಲು ಬಿಡಲಿಲ್ಲ. ನಟಿ ಇದಕ್ಕಾಗಿ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. 
 

ಕೇವಲ ವಿಟಿಲಿಗೋ ವಿರುದ್ಧ ಹೋರಾಟವಲ್ಲ, ನಟಿ ಬರೋಬ್ಬರಿ 7 ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ದಿಟ್ಟ ಹೋರಾಟ ನಡೆಸಿ ಗೆದ್ದಿದ್ದಾರೆ. ಅದೂ ಒಂದು ಬಾರಿಯಲ್ಲ, ಎರಡು ಬಾರಿ. 

2009ರಲ್ಲಿ ಮಮತಾ ಅವರಿಗೆ ಹಾಡ್ಗ್‌ಕಿನ್ಸ್ ಲಿಂಫೋಮಾ ಇರುವುದು ಪತ್ತೆಯಾಯಿತು ಮತ್ತು ಇದು ವ್ಯಕ್ತಿಯ ದುಗ್ಧರಸ ವ್ಯವಸ್ಥೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ತೀವ್ರವಾಗಿ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಆ ಸಮಯದಲ್ಲಿ, ಮಮತಾ ಮೋಹನ್‌ದಾಸ್ ಚಿತ್ರರಂಗಕ್ಕೆ ಹೊಸಬರು, ಮತ್ತು ಅವರ ಜೀವನದಲ್ಲಿ ಅಂತಹ ನಿರ್ಣಾಯಕ ಘಟ್ಟದಲ್ಲಿ, ಅವರಿಗೆ ಕ್ಯಾನ್ಸರ್ ಬಂದಾಗ, ಅದು ಅವರ ಆತ್ಮವಿಶ್ವಾಸವನ್ನು ಅಲುಗಾಡಿಸಿತು. 

ಆದರೆ ಮಮತಾ ಅದರ ವಿರುದ್ಧ ಸಾಕಷ್ಟು ತೀವ್ರವಾಗಿ ಹೋರಾಡಿದರು ಮತ್ತು ಕ್ಯಾನ್ಸರ್ ಅನ್ನು ಸೋಲಿಸಿದರು. ಆ ನಂತರ ದೊಡ್ಡ ದೊಡ್ಡ ನಿರ್ದೇಶಕರ ಜೊತೆ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದ ಆಕೆಯ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಮತ್ತೊಮ್ಮೆ, ಕ್ಯಾನ್ಸರ್ ಅವಳ ಮನೆ ಬಾಗಿಲನ್ನು ತಟ್ಟಿತು ಮತ್ತು ಅವರು 2013 ರಲ್ಲಿ ಮತ್ತೆ ಹೋರಾಟಕ್ಕೆ ನಿಂತರು.
 

ಆಕೆಗೆ ಅಸ್ಥಿಮಜ್ಜೆಯ ಕಸಿ ವಿಫಲವಾದ ಕಾರಣ ಇದು ಭಯಾನಕವಾಗಿತ್ತು. ಪರಿಣಾಮವಾಗಿ, ಅವರು US ಗೆ ತೆರಳಿದರು ಮತ್ತು 2016 ರಲ್ಲಿ ಚಿಕಿತ್ಸೆಗೆ ಒಳಗಾದರು. ಅವರು ನಿವೊಲುಮಾಬ್ ಔಷಧದ ಕ್ಲಿನಿಕಲ್ ಪ್ರಯೋಗದ ಭಾಗವಾಗಿದ್ದ ಮೊದಲ ಕ್ಲಾಸಿಕಲ್ ಹಾಡ್ಗ್ಕಿನ್ ಲಿಂಫೋಮಾ ರೋಗಿಯೂ ಆಗಿದ್ದರು. ಮತ್ತೊಮ್ಮೆ, ಮಮತಾ ಕ್ಯಾನ್ಸರ್ ವಿರುದ್ಧದ ತನ್ನ ಯುದ್ಧದಲ್ಲಿ ಜಯಶಾಲಿಯಾದರು.

ಮಮತಾ ಆರೋಗ್ಯಕ್ಕಾಗಿ ಹೋರಾಡುವಾಗ ಇತ್ತ ಕಟ್ಟಿಕೊಂಡ ಪತಿಯೊಂದಿಗೂ ಜಗಳಗಳ ನಿರಂತರವಾದವು. 2011ರ ಡಿಸೆಂಬರ್ 28 ರಂದು ಬಹ್ರೇನ್ ಮೂಲದ ಉದ್ಯಮಿಯಾಗಿರುವ ತನ್ನ ಬಾಲ್ಯದ ಗೆಳೆಯ ಪ್ರಜಿತ್ ಪದ್ಮನಾಭನ್ ಅವರನ್ನು ಮಮತಾ ವಿವಾಹವಾದರು. ಆದಾಗ್ಯೂ, ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ವರ್ಷಗಳ ನಂತರ ಬಿರುಕುಗಳು ದೊಡ್ಡದಾಗಿ 2013ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 

ಅಂತೂ ಜೀವನದ ಎಲ್ಲ ಸವಾಲುಗಳನ್ನು ದಿಟ್ಟತನದಲ್ಲಿ ಎದುರಿಸಿ ನಗುಮುಖದ ಫೋಟೋಂ ಹಂಚಿಕೊಳ್ಳುವ ಮಮತಾ, ಕಷ್ಟಕ್ಕೆ ಹೆದರುವ ಪ್ರತಿಯೊಬ್ಬರಿಗೂ ಪ್ರೇರಣೆ.

Latest Videos

click me!