ಮದ್ಯಪಾನ ಮಾಡಿದ ಮೇಲೆ ಕೆಲವರಿಗೆ ಮಾತ್ರೆ ನುಂಗುವ ಅಭ್ಯಾಸ ಇರುತ್ತದೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಎಷ್ಟು ಸೇಫ್? ಇದರಿಂದ ದೇಹದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮದ್ಯ ಮತ್ತು ಮಾತ್ರೆಗಳು ಒಟ್ಟಿಗೆ ಸೇರಿದರೆ ದೇಹದಲ್ಲಿ ಏನಾಗುತ್ತದೆ?
ಮದ್ಯ ಮತ್ತು ಹೆಚ್ಚಿನ ಮಾತ್ರೆಗಳನ್ನು ನಮ್ಮ ದೇಹದಲ್ಲಿ ಲಿವರ್ ಪ್ರಾಸೆಸ್ ಮಾಡುತ್ತದೆ. ನೀವು ಮದ್ಯಪಾನ ಮಾಡಿ ಮಾತ್ರೆ ನುಂಗಿದಾಗ ಲಿವರ್ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಕೆಲವೊಮ್ಮೆ ಮಾತ್ರೆಯ ಪ್ರಭಾವ ದೇಹದಲ್ಲಿ ಜಾಸ್ತಿಯಾಗಬಹುದು ಅಥವಾ ಕಡಿಮೆಯಾಗಬಹುದು. ಇದರಿಂದ ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವಂತಹ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಮಾತ್ರೆಗಳ ಜೊತೆ ಮದ್ಯ ಸೇರಿದರೆ ಉಸಿರಾಟದ ತೊಂದರೆ, ಆಂತರಿಕ ರಕ್ತಸ್ರಾವ ಮತ್ತು ಹೃದಯದ ಸಮಸ್ಯೆಗಳು ಬರುವ ಅಪಾಯವಿದೆ.
25
ಪೇನ್‌ಕಿಲ್ಲರ್ಸ್ ಬಗ್ಗೆ ಯಾಕೆ ಎಚ್ಚರ ವಹಿಸಬೇಕು?
ತಲೆನೋವು, ಮೈಕೈನೋವು ಅಥವಾ ಜ್ವರ ಬಂದಾಗ ಬಹಳಷ್ಟು ಜನ ಪೇನ್‌ಕಿಲ್ಲರ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಮದ್ಯಪಾನ ಮಾಡಿದ ಮೇಲೆ ಸ್ವಂತ ನಿರ್ಧಾರದಿಂದ ಈ ಮಾತ್ರೆಗಳನ್ನು ನುಂಗುವುದು ಒಳ್ಳೆಯದಲ್ಲ. ಪ್ಯಾರಾಸಿಟಮಾಲ್‌ನಂತಹ ಮಾತ್ರೆಗಳನ್ನು ಮದ್ಯದ ಜೊತೆ ತೆಗೆದುಕೊಂಡರೆ ಲಿವರ್ ಮೇಲೆ ತೀವ್ರ ಒತ್ತಡ ಬೀಳುತ್ತದೆ.
35
ವೈದ್ಯರ ಸಲಹೆ ಪಡೆಯಿರಿ
ಅದೇ ರೀತಿ ಆಕ್ಸಿಕೋಡೋನ್‌ನಂತಹ (Oxycodone) ಸ್ಟ್ರಾಂಗ್ ಪೇನ್‌ಕಿಲ್ಲರ್ಸ್ ಜೊತೆ ಮದ್ಯ ಸೇರಿದರೆ ಉಸಿರಾಟ ನಿಧಾನವಾಗುವುದು ಮತ್ತು ಓವರ್‌ಡೋಸ್ ಆಗುವಂತಹ ಗಂಭೀರ ಅಪಾಯಗಳು ಎದುರಾಗುತ್ತವೆ. ಹಾಗಾಗಿ ಮದ್ಯಪಾನ ಮಾಡಿದ ತಕ್ಷಣ ಯಾವುದೇ ಪೇನ್‌ಕಿಲ್ಲರ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೇಫ್.
ಬಿಪಿ ಅಥವಾ ಮಧುಮೇಹಕ್ಕೆ (ಡಯಾಬಿಟಿಸ್) ಮಾತ್ರೆ ಬಳಸುವವರು ಮದ್ಯಪಾನದ ವಿಚಾರದಲ್ಲಿ ತುಂಬಾನೇ ಎಚ್ಚರದಿಂದ ಇರಬೇಕು. ಮದ್ಯಪಾನವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಬಿಪಿ ಮಾತ್ರೆಯ ಜೊತೆ ಸೇರಿದಾಗ ರಕ್ತದೊತ್ತಡ ದಿಢೀರ್ ಕುಸಿದು ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ. ಹಾಗೆಯೇ ಶುಗರ್ ಮಾತ್ರೆಗಳ ಜೊತೆ ಮದ್ಯ ಸೇರಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿಯಬಹುದು. ವಯಸ್ಸಾದವರಲ್ಲಿ ಇದು ಗಂಭೀರ ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ರೆಗ್ಯುಲರ್ ಆಗಿ ಮಾತ್ರೆ ನುಂಗುವವರು ಮದ್ಯಪಾನ ಮಾಡುವ ಮುನ್ನ ವೈದ್ಯರನ್ನು ಕೇಳುವುದು ಕಡ್ಡಾಯ.
55
ಮದ್ಯಪಾನ ಮಾಡಿದ ಮೇಲೆ ಮಾತ್ರೆ ತೆಗೆದುಕೊಳ್ಳಬೇಕಾದರೆ ಏನು ಮಾಡಬೇಕು?
ಮದ್ಯಪಾನ ಮಾಡಿದ ಮೇಲೆ ತಲೆನೋವು ಅಥವಾ ಬೇರೆ ಸಮಸ್ಯೆ ಬಂದರೆ, ನೀವೇ ಸ್ವತಃ ಮಾತ್ರೆ ನುಂಗುವ ಬದಲು ವೈದ್ಯರನ್ನು ಅಥವಾ ಫಾರ್ಮಸಿಸ್ಟ್ ಅನ್ನು ಸಂಪರ್ಕಿಸುವುದು ಸೇಫ್. ಈಗಾಗಲೇ ಯಾವುದಾದರೂ ಕಾಯಿಲೆಗೆ ಮಾತ್ರೆ ಬಳಸುತ್ತಿರುವವರು ಇನ್ನಷ್ಟು ಜಾಗರೂಕರಾಗಿರಬೇಕು. ಮದ್ಯಪಾನವನ್ನು ಮಿತಿಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅತಿಯಾದ ಮದ್ಯಪಾನ ಲಿವರ್‌ಗೆ ಹಾನಿ ಮಾಡುತ್ತದೆ.
ಗಮನಿಸಿ: ಮೇಲೆ ನೀಡಲಾದ ಮಾಹಿತಿಯನ್ನು ಕೇವಲ ಪ್ರಾಥಮಿಕ ಮಾಹಿತಿಯಾಗಿ ಪರಿಗಣಿಸಬೇಕು. ಆರೋಗ್ಯದ ವಿಚಾರದಲ್ಲಿ ವೈದ್ಯರ ಸಲಹೆ ಪಾಲಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.