ರಕ್ತದಲ್ಲಿರುವ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಿಡ್ನಿಗಳು ಕಳೆದುಕೊಳ್ಳುವುದೇ ಕಿಡ್ನಿ ವೈಫಲ್ಯ. ಇದು ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆ. ಕಿಡ್ನಿ ಫೇಲ್ಯೂರ್ ತಿಳಿಯೋದು ಹೇಗೆ? ಆರಂಭಿಕ ಲಕ್ಷಣಗಳೇನು ಎನ್ನುವುದನ್ನು ನೋಡೋಣ ಬನ್ನಿ.
ವಿಶ್ವದಾದ್ಯಂತ ಲಕ್ಷಾಂತರ ಜನರು ದೀರ್ಘಕಾಲದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ರಕ್ತದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಶಕ್ತಿಯನ್ನು ಕಿಡ್ನಿ ಕಳೆದುಕೊಳ್ಳುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ.
26
ಜೀವನಶೈಲಿ ಬದಲಾಯಿಸಿಕೊಂಡರೆ ಕಿಡ್ನಿ ವೈಫಲ್ಯ ತಡೆಯಬಹುದು
ಕಿಡ್ನಿ ವೈಫಲ್ಯದ ಲಕ್ಷಣಗಳು ಆರಂಭದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಗಂಭೀರ ಹಂತ ತಲುಪಿದ ಮೇಲೆಯೇ ಇದು ಗೊತ್ತಾಗುವುದು. ಹೀಗಾಗಿ ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಜೀವನಶೈಲಿ ಬದಲಾಯಿಸಿಕೊಂಡರೆ ಕಿಡ್ನಿ ವೈಫಲ್ಯವನ್ನು ತಡೆಯಬಹುದು. ನೀವು ನಿರ್ಲಕ್ಷ್ಯ ಮಾಡಬಾರದ ಲಕ್ಷಣಗಳು ಇಲ್ಲಿವೆ.
ಕಿಡ್ನಿ ಕೆಲಸ ಮಾಡುವುದು ನಿಲ್ಲಿಸಿದಾಗ ದೇಹದಲ್ಲಿ ತ್ಯಾಜ್ಯಗಳು ಸೇರಿಕೊಳ್ಳುತ್ತವೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದಾಗಿ ನಿಮಗೆ ವಿಪರೀತ ಆಯಾಸ, ತಲೆತಿರುಗುವಿಕೆ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ.
36
ಕಿಡ್ನಿ ವೈಫಲ್ಯದಿಂದ ಹಸಿವು ಕಡಿಮೆಯಾಗುತ್ತದೆ
ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ನಿರಂತರವಾಗಿ ವಾಕರಿಕೆ ಮತ್ತು ವಾಂತಿ ಶುರುವಾಗುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಮತ್ತು ಶಕ್ತಿ ಸಿಗದೆ ನೀವು ಇನ್ನಷ್ಟು ದುರ್ಬಲರಾಗುತ್ತೀರಿ.
ಕಿಡ್ನಿ ವೈಫಲ್ಯದಿಂದಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದ ಸಣ್ಣಪುಟ್ಟ ಕೆಲಸ ಮಾಡಿದರೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಯಿಂದ ಉಂಟಾಗುವ ಆಮ್ಲಜನಕದ ಕೊರತೆಯೂ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.
ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದಲ್ಲಿ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ನಿಮ್ಮ ಪಾದ, ಕಣಕಾಲು ಮತ್ತು ಕೈಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಮೇಲೂ ಈ ಊತ ಬರಬಹುದು.
ಮೂತ್ರ ವಿಸರ್ಜನೆಯಲ್ಲಿ ಆಗುವ ಬದಲಾವಣೆಗಳು ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣ. ಪದೇ ಪದೇ ಮೂತ್ರ ಬರುವುದು (ವಿಶೇಷವಾಗಿ ರಾತ್ರಿ), ಮೂತ್ರದ ಬಣ್ಣ ಕಡು ಆಗುವುದು, ನೊರೆ ಅಥವಾ ರಕ್ತ ಬರುವುದು ಇದರ ಲಕ್ಷಣಗಳು. ಸಾಕಷ್ಟು ನೀರು ಕುಡಿದರೂ ಮೂತ್ರ ಕಡಿಮೆ ಬರುವುದು ಕೂಡ ಅಪಾಯದ ಮುನ್ಸೂಚನೆ.
56
ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳು
ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಲು ಕಿಡ್ನಿಗಳು ಸಹಾಯ ಮಾಡುತ್ತವೆ. ಅವುಗಳ ಕಾರ್ಯಚಟುವಟಿಕೆ ನಿಂತಾಗ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತವೆ. ಇದು ಚರ್ಮದಲ್ಲಿ ವಿಪರೀತ ಒಣಗುವಿಕೆ ಮತ್ತು ತುರಿಕೆಗೆ ಕಾರಣವಾಗುತ್ತದೆ.
ಕಿಡ್ನಿ ಕಾಯಿಲೆಯು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಹಾಳುಮಾಡುತ್ತದೆ. ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಮಟ್ಟದಲ್ಲಿ ಏರುಪೇರಾಗುತ್ತದೆ. ಇದರಿಂದಾಗಿ ವಿಪರೀತ ಸ್ನಾಯು ಸೆಳೆತ ಮತ್ತು ದೌರ್ಬಲ್ಯ ಉಂಟಾಗುತ್ತದೆ.
66
ಕಿಡ್ನಿ ಫೇಲ್ಯೂರ್ ಲಕ್ಷಣಗಳಿವು:
ರಕ್ತದಲ್ಲಿರುವ ವಿಷಕಾರಿ ಅಂಶಗಳು ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತವೆ. ಇದರಿಂದ ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಗೊಂದಲ ಮತ್ತು ಏಕಾಗ್ರತೆಯ ಕೊರತೆ ಕಾಡುತ್ತದೆ. ಗಂಭೀರ ಪರಿಸ್ಥಿತಿಯಲ್ಲಿ ಇದು ಕೋಮಾಕ್ಕೂ ದಾರಿ ಮಾಡಿಕೊಡಬಹುದು.
ರಕ್ತದಲ್ಲಿ ತ್ಯಾಜ್ಯಗಳು ಅತಿಯಾಗಿ ಶೇಖರಣೆಯಾದಾಗ (ಯುರೇಮಿಯಾ) ಬಾಯಿಯಲ್ಲಿ ಕಬ್ಬಿಣದ ರುಚಿ ಬರುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಮತ್ತು ಬಾಯಿಯಲ್ಲಿ ಹುಣ್ಣುಗಳು ಕೂಡ ಆಗಬಹುದು. ಇದು ನಿಮ್ಮ ಹಸಿವಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಸೋಡಿಯಂ ಮತ್ತು ನೀರಿನ ಅಂಶವನ್ನು ಸಮತೋಲನದಲ್ಲಿಡುವ ಮೂಲಕ ಕಿಡ್ನಿಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಬಿಪಿ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.