ನವಜಾತ ಶಿಶುವಿನ ಆರೋಗ್ಯವನ್ನು ತುಂಬಾ ಜೋಪಾನದಿಂದ ನೋಡಿಕೊಳ್ಳಬೇಕು. ಮಕ್ಕಳು ಆರೋಗ್ಯವಾಗಿರಲು ಎದೆಹಾಲು ಕೊಡಬೇಕು. ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ.
ಪುಟ್ಟ ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದಾಗಿ ಬಹುತೇಕ ಹೆತ್ತವರು ಯೋಚನೆ ಮಾಡುತ್ತಾರೆ ಪುಟ್ಟ ಮಗುವಿಗೆ ಇನ್ನೂ ಹಲ್ಲು ಬರದಿರುವ ಕಾರಣ ಗಟ್ಟಿ ಪದಾರ್ಥವನ್ನು ಕೊಡಲು ಸಾಧ್ಯವಿಲ್ಲ. ಹಾಗೆಂದು ದ್ರವಾಹಾರವೂ ಸಾಕಾಗುವುದಿಲ್ಲ.
ವೈದ್ಯರು ಆಹಾರವನ್ನು ಕೊಡಿ ಎಂದು ಸೂಚಿಸುವ ಈ ಅವಧಿಯಲ್ಲಿ ಮಗುವಿಗೆ ಕೊಡಬಹುದಾದ ಅತ್ಯುತ್ತಮ ಆಹಾರವೆಂದರೆ ಅನ್ನದ ಗಂಜಿ. ಆದರೆ ಗಂಜಿಯನ್ನು ಯಾವ ರೀತಿ ಮಕ್ಕಳಿಗೆ ನೀಡಬೇಕೆಂದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಆರೋಗ್ಯಯುತ ಗಂಜಿ ಕೊಟ್ಟರೂ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆ.
ಅಕ್ಕಿಯು ಶಿಶುಗಳಿಗೆ ಹೆಚ್ಚು ಶಿಫಾರಸು ಮಾಡಲಾದ ಮೊದಲ ಧಾನ್ಯವಾಗಿದೆ. ಏಕೆಂದರೆ ಇದು ಜೀರ್ಣಿಸಿಕೊಳ್ಳಲು ಸುಲಭ. ಮಾತ್ರವಲ್ಲ ಇದು ದೇಹಕ್ಕೆ ಅಲರ್ಜಿಯನ್ನುಂಟು ಮಾಡುವುದಿಲ್ಲ. ಹೀಗಾಗಿ ಅಕ್ಕಿಯಿಂದ ತಯಾರಿಸಿದ ಗಂಜಿಯನ್ನು ಮಕ್ಕಳಿಗೆ ಕೊಡುವಂತೆ ಸೂಚಿಸುತ್ತಾರೆ. ಹೆಚ್ಚು ಪೌಷ್ಟಿಕಾಂಶಗಳಿರುವ ಗಂಜಿಯನ್ನು ಎಷ್ಟು ಮತ್ತೆ ಹೇಗೆ ಬೇಯಿಸಿ ಮಕ್ಕಳಿಗೆ ಕೊಡಬೇಕು ಎಂಬುದನ್ನು ನೋಡೋಣ.
ಅಕ್ಕಿ ಬೇಯಲು ಇಟ್ಟ 15 ನಿಮಿಷಗಳ ಬಳಿಕ ನೊರೆಯ ರೂಪದಲ್ಲಿ ಬಿಳಿ ಬಣ್ಣದ ದಪ್ಪಗಿನ ನೀರು ಮೇಲೆ ಬರುವುದನ್ನು ನೋಡಬಹುದು. ಇದನ್ನು ಅನ್ನದ ಗಂಜಿ ಎನ್ನುತ್ತಾರೆ. ಇದು ಪೌಡರ್ ಮಿಶ್ರ ಮಾಡಿದ ನೀರಿನಂತೆ ಕಂಡರೂ ಪುಟ್ಟ ಮಗುವಿಗೆ ಇಷ್ಟು ಸಾಕು. ಹಲ್ಲು ಮೂಡಿರದ ಮಕ್ಕಳಿಗೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ..
ಈ ಅಕ್ಕಿ ಗಂಜಿಯ ಸೇವನೆಯಿಂದ ದೇಹಕ್ಕೆ ಸಾಕಷ್ಟು ಕಾರ್ಬೋ ಹೈಡ್ರೇಟ್ ಅಂಶಗಳು ಸಿಗುತ್ತವೆ. ಮಕ್ಕಳನ್ನು ಅಜೀರ್ಣ ಸಮಸ್ಯೆ ಕಾಡುವುದು ಬಹಳ ಬೇಗ. ಅನ್ನ ಬಸಿದ ಈ ಗಂಜಿ ಯಾವ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ. ಮಾತ್ರವಲ್ಲ ಮಕ್ಕಳು ಹೆಚ್ಚು ಚುರುಕಾಗಿ, ಆರೋಗ್ಯಯುತವಾಗಿ ಬೆಳೆಯುತ್ತಾರೆ.
ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಇದಕ್ಕೆಸ್ಪಲ್ಪ ಅನ್ನವನ್ನೂ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ, ಪೇಸ್ಟ್‌ನಂತೆ ಮಕ್ಕಳಿಗೆ ಕೊಡಬಹುದು. ಆದರೆ ಆರಂಭದಲ್ಲಿಯೇ ಮಕ್ಕಳ ಆಹಾರದಲ್ಲಿ ಅನ್ನವನ್ನು ಬಳಸುವುದು ಸೂಕ್ತವಲ್ಲ. ಯಾಕೆಂದರೆ ಮಕ್ಕಳ ದೇಹ ಅನ್ನವನ್ನು ಜೀರ್ಣಿಸಿಕೊಳ್ಳುವಷ್ಟು ಶಕ್ತವಾಗಿರುವುದಿಲ್ಲ.
ಮಗು ಘನ ಪದಾರ್ಥಗಳನ್ನು ತಿನ್ನಲು ಪ್ರಾರಂಭಿಸಲು ಸಿದ್ಧವಾದ ತಕ್ಷಣ ಅಕ್ಕಿ ಮತ್ತು ಅಕ್ಕಿ ಉತ್ಪನ್ನಗಳನ್ನು ಪರಿಚಯಿಸಬಹುದು, ಇದು ಸಾಮಾನ್ಯವಾಗಿ ಸುಮಾರು 6 ತಿಂಗಳ ವಯಸ್ಸಿನಿಂದ ಆರಂಭಿಸಬಹುದು. ಈ ರೀತಿ ಅಕ್ಕಿ ಗಂಜಿ ಮಾಡಲು ಬ್ರೌನ್ ರೈಸ್ ಉತ್ತಮವಾಗಿದೆ. ಇದು ಶಿಶುಗಳಿಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಧಾನ್ಯವಾಗಿದೆ