
ಮನೆಮಂದಿಗೆ ರುಚಿ ರುಚಿಯಾದ ಆಹಾರ ಸಿದ್ಧಪಡಿಸೋ ಜೊತೆಗೆ ಅವರ ಆರೋಗ್ಯ ಕಾಳಜಿ ವಹಿಸೋ ಕೆಲಸವನ್ನು ಕೂಡ ಮಹಿಳೆ ಮಾಡಬೇಕಾಗುತ್ತದೆ. ಈಗಂತೂ ಕೊರೋನಾ ಎಂಬ ಹೆಮ್ಮಾರಿಯಿಂದ ಮನೆಮಂದಿಯನ್ನು ರಕ್ಷಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ.ದೊಡ್ಡವರಿಗಾದ್ರೂ ಇದು ಆರೋಗ್ಯಕ್ಕೆ ಒಳ್ಳೆಯದು ಎಂದ್ರೆ ತಿನ್ನುತ್ತಾರೆ. ಆದ್ರೆ ಮಕ್ಕಳಿಗೇನು ಮಾಡೋದು? ಅವರಿಗೆ ಇಷ್ಟವಾಗದ ತಿನಿಸನ್ನು ಎಷ್ಟೇ ಮುದ್ದು ಮಾಡಿದ್ರೂ, ಅಗಲಾಚಿದ್ರೂ ತಿನ್ನಲ್ಲ. ಜಂಕ್‍ಫುಡ್, ಬೇಕರಿ ತಿನಿಸುಗಳನ್ನು ಬೇಕಿದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಂತ ದೇಹಕ್ಕೆ ಹಿತವಲ್ಲದ ಬಾಯಿಗೆ ರುಚಿ ನೀಡುವ ತಿನಿಸುಗಳನ್ನು ನೀಡಿದ್ರೆ ಆರೋಗ್ಯಕ್ಕೆ ಆಪತ್ತು ಪಕ್ಕಾ. ಇಂಥ ಪರಿಸ್ಥಿತಿಯಲ್ಲಿ ಅಮ್ಮಂದಿರು ತುಸು ಜಾಣತನ ತೋರೋದು ಅಗತ್ಯ. ಇಷ್ಟವಲ್ಲದ ಪದಾರ್ಥಗಳನ್ನು ಇಷ್ಟವಾಗುವ ವಸ್ತುಗಳ ಜೊತೆಗೆ ಸೇರಿಸಿ ಕೊಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಇದು ಮಕ್ಕಳಿಗೆ ಮಾತ್ರವಲ್ಲ, ಮನೆಯಲ್ಲಿರುವ ದೊಡ್ಡವರಿಗೂ ಅನ್ವಯಿಸುತ್ತದೆ. ಹಾಗಾದ್ರೆ ದೇಹಕ್ಕೆ ಹಿತ ನೀಡುವ ಆದ್ರೆ ಬಾಯಿಗೆ ಹಿಡಿಸದ ಕೆಲವು ವಸ್ತುಗಳನ್ನು ಹೇಗೆ ಹೊಟ್ಟೆ ಸೇರುವಂತೆ ಮಾಡ್ಬಹುದು, ನೋಡೋಣ ಬನ್ನಿ.
ಉಪ್ಪಿನಕಾಯಿ ಜ್ಯೂಸ್ ಬಗ್ಗೆ ಕೇಳಿದ್ದೀರಾ?
ಕರಿಬೇವಿನ ಎಲೆ ಪೌಡರ್
ಕರಿಬೇವು ಖಾದ್ಯಗಳಿಗೆ ಉತ್ತಮ ಪರಿಮಳ ನೀಡುವ ಜೊತೆ ಆರೋಗ್ಯಕ್ಕೂ ಹಿತಕಾರಿ. ಆದ್ರೆ ಸಾಂಬಾರು, ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳಿಗೆ ಕರಿಬೇವು ಬಳಸಿದ್ರೂ ಅದನ್ನು ಹೊಟ್ಟೆಗೆ ಸೇರಿಸಿಕೊಳ್ಳೋರಿಗಿಂತ ತಟ್ಟೆ ಬದಿಯಲ್ಲಿಡುವವರೇ ಜಾಸ್ತಿ. ಇನ್ನು ಮಕ್ಕಳಂತೂ ಕರಿಬೇವನ್ನು ಅಪ್ಪಿತಪ್ಪಿಯೂ ಬಾಯಿಗೆ ಹಾಕೊಲ್ಲ. ಹಾಗಾದ್ರೆ ಅನೇಕ ಔಷಧೀಯ ಗುಣಗಳನ್ನೊಳಗೊಂಡಿರುವ ಕರಿಬೇವನ್ನು ತಿನಿಸೋದು ಹೇಗೆ ಎಂಬುದೇ ಅನೇಕ ಮಹಿಳೆಯರಿಗೆ ಸವಾಲು. ತಿನ್ನುವಾಗ ಕರಿಬೇವಿನ ಎಲೆಗಳು ಕಾಣಿಸಿದ್ರೆ ತಾನೇ ಅವುಗಳನ್ನು ಎತ್ತಿ ಬದಿಯಲ್ಲಿಡೋದು? ಎಲೆಗಳನ್ನು ನೇರವಾಗಿ ಸಾಂಬಾರ್‍ಗೆ ಹಾಕಬೇಡಿ, ಬದಲಿಗೆ ಕರಿಬೇವಿನ ಎಲೆಗಳನ್ನು ಒಣಗಿಸಿ ಅವುಗಳ ಪೌಡರ್ ತಯಾರಿಸಿ ಡಬ್ಬದಲ್ಲಿ ಶೇಖರಿಸಿಡಿ. ಸಾಂಬಾರಿಗೆ ಅರ್ಧ ಅಥವಾ ಒಂದು ಚಮಚ ಈ ಪೌಡರ್ ಬಳಸಿ, ಪರಿಮಳವೂ ಬರುತ್ತೆ, ಮಕ್ಕಳ ಹೊಟ್ಟೆಯನ್ನೂ ಸೇರುತ್ತೆ.
ಡ್ರೈ ಫ್ರೂಟ್ ಮಿಲ್ಕ್ಶೇಕ್
ಡ್ರೈ ಫ್ರೂಟ್ಸ್ ಅನೇಕ ಪೋಷಕಾಂಶಗಳ ಆಗರವಾಗಿದ್ದು, ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಆಹಾರಗಳಲ್ಲೊಂದಾಗಿದೆ. ಆದ್ರೆ ಡ್ರೈ ಫ್ರೂಟ್ಸ್ ನೇರವಾಗಿ ತಿನ್ನಲು ನೀಡಿದ್ರೆ ಕೆಲವು ಮಕ್ಕಳು ತಿನ್ನಲ್ಲ. ಕೆಲವರಿಗೆ ಬಾದಾಮಿ ಅಂದ್ರೆ ಇಷ್ಟವಿಲ್ಲ, ಇನ್ನೂ ಕೆಲವರಿಗೆ ವಾಲ್‍ನಟ್ ಟೇಸ್ಟ್ ಇಷ್ಟವಾಗಲ್ಲ. ಹೀಗಿರುವಾಗ ಬಾದಾಮಿ, ವಾಲ್‍ನಟ್, ಪಿಸ್ತ, ಗೋಡಂಬಿಯನ್ನು ಹುರಿದು, ಪರಿಮಳಕ್ಕೆ ಅಗತ್ಯವಿರುವಷ್ಟು ಏಲಕ್ಕಿ ಬೀಜಗಳನ್ನು ಸೇರಿಸಿ ಮಿಕ್ಸಿಗೆ ಹಾಕಿ ಪೌಡರ್ ಮಾಡಿ ಏರ್‍ಟೈಟ್ ಕಂಟೈನರ್‍ನಲ್ಲಿ ಹಾಕಿಡಿ. ಪ್ರತಿದಿನ ಹಾಲಿಗೆ ಈ ಪೌಡರ್ ಹಾಗೂ ಸಿಹಿಗೆ ಸ್ವಲ್ಪ ಸಕ್ಕರೆ ಸೇರಿಸಿ ನೀಡಿದ್ರೆ ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ. ದೋಸೆ, ಚಪಾತಿಯನ್ನು ಕೂಡ ಡ್ರೈ ಫ್ರೂಟ್ಸ್ ಪೌಡರ್ ಜೊತೆ ತಿನ್ನಲು ಮಕ್ಕಳಿಗೆ ನೀಡಬಹುದು. ಖರ್ಜೂರವನ್ನು ಇಷ್ಟಪಡದ ಮಕ್ಕಳಿಗೆ ಅದರ ಮಿಲ್ಕ್ ಶೇಕ್ ಮಾಡಿ ಕೊಡಬಹುದು. ಖರ್ಜೂರವನ್ನು ಸ್ವಲ್ಪ ಹೊತ್ತು ಕಾಯಿಸಿದ ಹಾಲಿನಲ್ಲಿ ನೆನೆಹಾಕಿ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಹಾಲು ಸೇರಿಸಿ ಸಿಹಿಗೆ ಜೇನುತುಪ್ಪ ಬೆರೆಸಿ ನೀಡಿದ್ರೆ ಮಕ್ಕಳು ಖುಷಿಯಿಂದ ಕುಡಿಯುತ್ತಾರೆ.
ದೇಶದ ಆಹಾರ ವೈವಿಧ್ಯತೆ ಫೋಟೋ ಶೇರ್ ಮಾಡಿದ ಕೇಂದ್ರ ಸರಕಾರ
ಮೊಟ್ಟೆ ತಿನ್ನಿಸೋದು ಹೇಗೆ?
ಮೊಟ್ಟೆ ಪರಿಪೂರ್ಣ ಆಹಾರ ಎನ್ನುತ್ತಾರೆ. ಮಕ್ಕಳಿಗಂತೂ ದಿನಕ್ಕೊಂದು ಮೊಟ್ಟೆ ನೀಡೋದು ಉತ್ತಮ ಎಂಬುದು ವೈದ್ಯರ ಸಲಹೆ. ಆದ್ರೆ ಕೆಲವು ಮಕ್ಕಳು ಮೊಟ್ಟೆಯನ್ನು ಬೇಯಿಸಿ ಕೊಟ್ಟರೆ ತಿನ್ನೋದಕ್ಕೆ ಕ್ಯಾತೆ ತೆಗೆಯುತ್ತಾರೆ. ಕೆಲವರು ಹಳದಿ ಭಾಗವನ್ನು ಇಷ್ಟಪಟ್ಟು ತಿಂದ್ರೆ, ಮತ್ತೆ ಕೆಲವರು ಬಿಳಿ ಭಾಗವನ್ನಷ್ಟೇ ತಿನ್ನುತ್ತಾರೆ. ಹೀಗಿರುವಾಗ ಮಕ್ಕಳಿಗೆ ಮೊಟ್ಟೆ ತಿನ್ನಿಸೋದು ಹೇಗೆ ಎಂಬ ಪ್ರಶ್ನೆ ಅಮ್ಮಂದಿರನ್ನು ಕಾಡುತ್ತೆ. ಮೊಟ್ಟೆಯನ್ನು ಬೇಯಿಸಿ ಕೊಡುವ ಬದಲು ಮಕ್ಕಳು ಇಷ್ಟಪಟ್ಟು ತಿನ್ನುವ ತರಕಾರಿಗಳನ್ನು ಸೇರಿಸಿ ಎಗ್ ರೈಸ್ ಸಿದ್ಧಪಡಿಸಿ ನೀಡಿ. ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಸ್ವಲ್ಪ ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಆಮ್ಲೇಟ್ ಸಿದ್ಧಪಡಿಸಿ, ಇದರ ಮೇಲೆ ಚೀಸ್ ಪೀಸ್‍ಗಳನ್ನು ಉದುರಿಸಿ ಕೊಟ್ಟರೆ ಖಂಡಿತವಾಗಲೂ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಮಾಡ್ಬಹುದು ಬಿಯರ್
ತರಕಾರಿಯನ್ನು ಹೀಗೆ ಕೊಡಿ
ಮಕ್ಕಳಿಗೆ ಎಲ್ಲ ತರಕಾರಿಗಳು ಇಷ್ಟವಾಗಲ್ಲ. ಅವರಿಗೆ ಇಷ್ಟವಿಲ್ಲ ಎಂದು ಸುಮ್ಮನಾದ್ರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯೋದಿಲ್ಲ. ಹೀಗಾಗಿ ತರಕಾರಿಗಳನ್ನು ತಿನ್ನಿಸಲು ಒಂದಿಷ್ಟು ಪ್ಲ್ಯಾನ್ ಮಾಡೋದು ಅಗತ್ಯ. ಕ್ಯಾರೆಟ್, ಸೌತೆಕಾಯಿಯಂತಹ ತರಕಾರಿಗಳನ್ನು ಹಸಿಯಾಗಿಯೇ ಸಲಾಡ್ ರೂಪದಲ್ಲಿ ನೀಡಿದ್ರೆ ಕೆಲವು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಚಪಾತಿ ಅಥವಾ ದೋಸೆ ನಡುವೆ ಬೇಯಿಸಿದ ತರಕಾರಿಗಳಿಗೆ ಉಪ್ಪು ಮತ್ತು ಸ್ವಲ್ಪ ಖಾರ ಸೇರಿಸಿ ರೋಲ್ ಮಾಡಿ ನೀಡಿದ್ರೆ ಇಷ್ಟಪಟ್ಟು ತಿನ್ನುತ್ತಾರೆ.
ಹಣ್ಣುಗಳನ್ನು ಮಿಕ್ಸ್ ಮಾಡಿ
ಮಕ್ಕಳು ಇಷ್ಟಪಡುವ ಹಣ್ಣುಗಳ ನಡುವೆ ಅವರು ಇಷ್ಟಪಡದ ಹಣ್ಣುಗಳ ಹೋಳುಗಳನ್ನು ಸೇರಿಸಿ ಸಲಾಡ್ ರೂಪದಲ್ಲಿ ನೀಡಿದ್ರೆ ಅಥವಾ ಕಸ್ಟರ್ಡ್ ಜೊತೆ ಸೇರಿಸಿ ಕೊಟ್ರೆ ತಿನ್ನುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.