ಉಪ್ಪಿನಕಾಯಿ ಹೆಸರು ಕೇಳಿದ್ರೆ ಬಾಯಿಲಿ ನೀರು ಬರೋದು ಕಾಮನ್. ಆದ್ರೆ ಉಪ್ಪಿನಕಾಯಿಗೆ ಬಳಸೋ ಮಾವು ಅಥವಾ ತರಕಾರಿಯನ್ನು ಕೆಲವು ದಿನಗಳ ಕಾಲ ಉಪ್ಪು ಹಾಗೂ ವಿನೆಗರ್ ಮಿಶ್ರಣದಲ್ಲಿ ಹಾಕಿಡುತ್ತಾರಲ್ಲ, ಆ ನೀರನ್ನು ಒಮ್ಮೆಯಾದ್ರೂ ಟೇಸ್ಟ್ ಮಾಡಿದ್ದೀರಾ? ಅಯ್ಯೋ, ಉಪ್ಪೆಂದು ಮುಖ ಕಿವುಚಬೇಡಿ, ಈ ನೀರು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ.
ಅದೆಷ್ಟೇ ವೈವಿಧ್ಯಮಯ ಭಕ್ಷಗಳಿದ್ರೂ ಉಪ್ಪಿನಕಾಯಿ ಇಲ್ಲವೆಂದ್ರೆ ಊಟ ಅಪೂರ್ಣ. ಅದೆಷ್ಟೇ ದೊಡ್ಡ ಔತಣಕೂಟವಾದ್ರೂ ಇಂದಿಗೂ ಊಟದ ಎಲೆಯ ತುದಿಗೆ ಉಪ್ಪು ಹಾಗೂ ಉಪ್ಪಿನಕಾಯಿ ಹಾಕುವ ಸಂಪ್ರದಾಯವಿದೆ. ಒಂದರ್ಥದಲ್ಲಿ ಭೋಜನದಲ್ಲಿ ಉಪ್ಪಿನಕಾಯಿಗೆ ಮೊದಲ ಪ್ರಾಶಸ್ತ್ಯ. ಅಂದ ಹಾಗೇ ಉಪ್ಪಿನಕಾಯಿ ಇಷ್ಟಪಡದವರ ಸಂಖ್ಯೆ ವಿರಳ. ಜ್ವರ ಬಂದು ಊಟ ಸೇರದಿದ್ದಾಗ ಬಾಯಿಗೆ ರುಚಿಯ ಅನುಭವ ನೀಡೋದು ಇದೇ ಉಪ್ಪಿನಕಾಯಿ. ಬಿಸಿಲಿನಲ್ಲಿ ದಣಿದು ಬಂದವರಿಗೆ ಉಪ್ಪಿನಕಾಯಿ ಮತ್ತು ನೀರು ಕೊಡುವ ಸಂಪ್ರದಾಯ ಇಂದಿಗೂ ಕೆಲವು ಹಳ್ಳಿಗಳಲ್ಲಿದೆ. ಉಪ್ಪಿನಕಾಯಿ ಬಾಯಿಗೆ ರುಚಿ ನೀಡೋದು ಮಾತ್ರವಲ್ಲ,ಆರೋಗ್ಯಕ್ಕೂ ಹಿತಕಾರಿ. ಕ್ಲಿಯೋಪಾತ್ರ ತನ್ನ ಸೌಂದರ್ಯದ ಗುಟ್ಟು ಉಪ್ಪಿನಕಾಯಿಯಲ್ಲಿ ಅಡಗಿದೆ ಎಂದು ಹೇಳಿದ್ದಳಂತೆ. ಇನ್ನು ಜ್ಯೂಲಿಯಸ್ ಸೀಸರ್ ತನ್ನ ಸೈನಿಕರ ಸಾಮರ್ಥ್ಯ ಹೆಚ್ಚಿಸಲು ಅವರಿಗೆ ಉಪ್ಪಿನಕಾಯಿ ತಿನ್ನುವಂತೆ ಆದೇಶಿಸಿದ್ದನಂತೆ. ಉಪ್ಪಿನಕಾಯಿ ಕುರಿತು ಹೇಳುತ್ತ ಹೋದ್ರೆ ಅದರ ಆರೋಗ್ಯ ಲಾಭಗಳ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಬಹುದು.
ಅಲ್ಲದೆ, ಬಹುತೇಕರಿಗೆ ಈ ಬಗ್ಗೆ ಮಾಹಿತಿಯೂ ಇದೆ. ಆದ್ರೆ ಉಪ್ಪಿನಕಾಯಿ ಜ್ಯೂಸ್ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆ? ಹೌದು, ಉಪ್ಪಿನಕಾಯಿ ಸಿದ್ಧಪಡಿಸುವ ಮುನ್ನ ಅದಕ್ಕೆ ಬಳಸುವ ಮಾವಿನಕಾಯಿ, ಲಿಂಬೆಕಾಯಿ ಅಥವಾ ಯಾವುದೇ ತರಕಾರಿ ಹೋಳುಗಳನ್ನು ಉಪ್ಪಿನಲ್ಲಿ ಕೆಲವು ದಿನಗಳ ಕಾಲ ನೆನೆಹಾಕುತ್ತಾರೆ. ನಂತರ ಆ ಮಿಶ್ರಣಕ್ಕೆ ಖಾರಮಿಶ್ರಿತ ಮಸಾಲ ಸೇರಿಸಿದ್ರೆ ಉಪ್ಪಿನಕಾಯಿ ರೆಡಿಯಾಗುತ್ತದೆ. ಆದ್ರೆ ಕೆಲವರು ಆ ಉಪ್ಪು ನೀರನ್ನು ಹೊರಗೆಸೆದು ಉಪ್ಪಿನಕಾಯಿ ತಯಾರಿಸಿದ್ರೆ, ಇನ್ನೂ ಕೆಲವರು ಪೂರ್ತಿ ನೀರು ಬಳಸಿದ್ರೆ ಉಪ್ಪಿನಕಾಯಿ ಮಸಾಲ ತೆಳ್ಳಗಾಗಬಹುದು ಎಂಬ ಕಾರಣಕ್ಕೆ ಸ್ವಲ್ಪ ಬಳಸಿ ಉಳಿದದ್ದನ್ನು ಎಸೆಯುತ್ತಾರೆ. ಆದ್ರೆ, ಈ ಉಪ್ಪು ನೀರು ಅಥವಾ ಉಪ್ಪಿನಕಾಯಿ ಜ್ಯೂಸ್‍ನಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇದು ಎಲೆಕ್ಟ್ರೋಲೈಟ್ಸ್, ಆಂಟಿ ಆಕ್ಸಿಡೆಂಟ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಮಾಡ್ಬಹುದು ಬಿಯರ್
ಸ್ನಾಯು ಸೆಳೆತ ತಗ್ಗಿಸುತ್ತೆ
ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಸ್ನಾಯು ಸೆಳೆತ ಉಂಟಾಗುತ್ತದೆ. ಕ್ರೀಡಾಪಟುಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಉಪ್ಪಿನಕಾಯಿ ಜ್ಯೂಸ್ ಕುಡಿಯೋದ್ರಿಂದ ಸ್ನಾಯು ಸೆಳೆತ ಬೇಗ ಕಡಿಮೆಯಾಗುತ್ತದೆ ಎಂದು ಮೆಡಿಸಿನ್ ಆಂಡ್ ಸೈನ್ಸ್ ಇನ್ ಸ್ಪೋಟ್ಸ್ ಆಂಡ್ ಎಕ್ಸ್‍ಸೈಸ್‍ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ. 1/3 ಕಪ್ ಉಪ್ಪಿನಕಾಯಿ ಜ್ಯೂಸ್ ಕುಡಿದ್ರೆ ಸಾಕಂತೆ, ಸ್ನಾಯು ಸೆಳೆತ ಮಂಗಮಾಯವಾಗುತ್ತೆ ಎಂಬುದು ಅನುಭವಿಗಳ ಮಾತು. ನೀರು ಕುಡಿದ್ರೂ ಸ್ನಾಯು ಸೆಳೆತದಿಂದ ಇಷ್ಟು ಬೇಗ ರಿಲೀಫ್ ಸಿಗಲ್ವಂತೆ. ಉಪ್ಪಿನಕಾಯಿ ಜ್ಯೂಸ್‍ನಲ್ಲಿರುವ ವಿನಿಗರ್ ನೋವನ್ನು ಶಮನಗೊಳಿಸುವ ಗುಣ ಹೊಂದಿದೆ.
undefined
ಡಿಹೈಡ್ರೇಷನ್ ತಡೆಯುತ್ತೆ
ವರ್ಕ್‍ಔಟ್ ಮಾಡೋವಾಗ ಬೆವರಿನ ರೂಪದಲ್ಲಿ ನೀರು ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತದೆ. ಅದ್ರಲ್ಲೂ ಕ್ರೀಡಾಪಟುಗಳು ದೇಹವನ್ನು ಅತಿಯಾಗಿ ದಂಡಿಸಬೇಕಾದ ಅಗತ್ಯವಿರುವ ಕಾರಣ ಅವರು ಬೇಗ ಡಿಹೈಡ್ರೇಷನ್‍ಗೆ ಒಳಗಾಗುತ್ತಾರೆ. ಹೀಗಾಗಿಯೇ ಇವರು ಸೋಡಿಯಂ ಹಾಗೂ ಪೊಟ್ಯಾಸಿಯಂ ಹೆಚ್ಚಿರುವ ಜ್ಯೂಸ್‍ಗಳನ್ನು ಆಗಾಗ ಕುಡಿಯುತ್ತಾರೆ. ಇದ್ರಿಂದ ದೇಹ ಬೇಗ ಹೈಡ್ರೇಟ್ ಆಗುತ್ತೆ. ಪೊಟ್ಯಾಸಿಯಂ ಹಾಗೂ ಸೋಡಿಯಂ ಬೆವರಿನ ರೂಪದಲ್ಲಿ ನಷ್ಟವಾದ ಎಲೆಕ್ಟ್ರೋಲೈಟ್‍ಗಳನ್ನು ದೇಹಕ್ಕೆ ಮರು ಪೂರೈಕೆ ಮಾಡುತ್ತದೆ. ಉಪ್ಪಿನಕಾಯಿ ಜ್ಯೂಸ್‍ನಲ್ಲಿ ಸೋಡಿಯಂ ಹಾಗೂ ಪೊಟ್ಯಾಸಿಯಂ ಅಧಿಕ ಪ್ರಮಾಣದಲ್ಲಿದ್ದು, ಇದನ್ನು ಸ್ವಲ್ಪವೇ ಕುಡಿದ್ರೆ ಸಾಕು, ದೇಹ ನಷ್ಟವಾದ ಎಲೆಕ್ಟ್ರೋಲೈಟ್‍ಗಳನ್ನು ಮರಳಿ ಪಡೆಯುತ್ತೆ.
ಬೆತ್ತಲೆ ದೇಹದ ಸ್ಟಾರ್‌ನ ರುಚಿಕರ ಅಡುಗೆ!
ಕರುಳಿನ ಆರೋಗ್ಯಕ್ಕೆ ಉತ್ತಮ
ಉಪ್ಪಿನಕಾಯಿ ಜ್ಯೂಸ್‍ನಲ್ಲಿರುವ ವಿನೆಗರ್ ಕರುಳಿನ ಆರೋಗ್ಯಕ್ಕೆ ಹಿತಕಾರಿ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದ್ರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತೆ.
ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನೆರವು
ವಿನಿಗರ್‍ಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮಥ್ರ್ಯವಿದೆ. ಅಧಿಕ ತೂಕ ಹಾಗೂ ಬೊಜ್ಜು ಹೊಂದಿರುವ ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ವಿನಿಗರ್ ನೆರವು ನೀಡುತ್ತೆ. ಉಪ್ಪಿನಕಾಯಿ ಜ್ಯೂಸ್‍ನಲ್ಲಿ ಕೂಡ ವಿನಿಗರ್ ಇರುವ ಕಾರಣ ಮಧುಮೇಹ ನಿಯಂತ್ರಣಕ್ಕೆ ನೆರವು ನೀಡುತ್ತೆ.
ಲಾಕ್‌ಡೌನ್ ಸಮಯಕ್ಕಾಗಿ ಮಸ್ಟ್ ಟ್ರೈ ಸರಳ ರೆಸಿಪಿಗಳು
ವಿಟಮಿನ್ಸ್ ಹಾಗೂ ಆಂಟಿ ಆಕ್ಸಿಡೆಂಟ್ ಆಗರ
ಉಪ್ಪಿನಕಾಯಿ ಜ್ಯೂಸ್‍ನಲ್ಲಿ ವಿಟಮಿನ್ ಎ, ಇ ಹಾಗೂ ಆಂಟಿ ಆಕ್ಸಿಡೆಂಟ್ ಯಥೇಚ್ಛವಾಗಿವೆ. ಇವು ಶರೀರ ಹಾಗೂ ಜೀವಕೋಶಗಳನ್ನು ಅಪಾಯಕಾರಿ ಅಣುಗಳಿಂದ ಕಾಪಾಡುವ ಮೂಲಕ ರಕ್ಷಿಸುತ್ತವೆ.
ಯಾರು ಕುಡಿಯಬಾರ್ದು?
-ವೈದ್ಯಕೀಯ ಕಾರಣಗಳಿಂದಾಗಿ ಕಡಿಮೆ ಸೋಡಿಯಂ ಸೇವಿಸಬೇಕೆಂದು ವೈದ್ಯರಿಂದ ಸಲಹೆ ಪಡೆದಿರುವ ವ್ಯಕ್ತಿ.
-ಗೌಟ್ ಅಥವಾ ಸಂಧಿವಾತ ಸಮಸ್ಯೆ ಹೊಂದಿರೋರು.
-ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರೋರು.