ಜಗತ್ತಿನ ಅತಿ ದುಬಾರಿ ಹಣ್ಣುಗಳು- ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

By Suvarna News  |  First Published Apr 17, 2020, 6:07 PM IST

ಸೇಬುವಿಗೆ 150 ರೂಪಾಯಿ ಕೆಜಿಗೆ ಎಂದಾದಾಗಲೇ ಕಣ್ಣು ಬಾಯಿ ಬಿಡುವ ಅಭ್ಯಾಸ ನಿಮ್ಮದಾಗಿದ್ದಲ್ಲಿ ಪ್ರಪಂಚದ ಈ ದುಬಾರಿ ಹಣ್ಣುಗಳ ಬೆಲೆ ಕೇಳಿದರೆ ಹೃದಯ ಚೂರಾದೀತು!


ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ? ಅದೂ ಈ ಬೇಸಿಗೆಯಲ್ಲಿ ಹಣ್ಣುಗಳನ್ನು ನೋಡಿದರೆ ಬೆಲೆಯ ಮುಖ ನೋಡದೆ ಕೊಂಡುಕೊಳ್ಳೋಣ ಎನಿಸುತ್ತದೆ. ಆದರೆ, ಕೆಲವೊಂದು ಹಣ್ಣುಗಳಿವೆ- ಅವುಗಳ ಬೆಲೆ ಕೇಳಿದರೆ ಅವುಗಳ ಮುಖ ನೋಡುವಷ್ಟಾದರೂ ಪುಣ್ಯ ಈ ಜನ್ಮಕ್ಕೆ ಸಿಗಲಿ ಎಂದುಕೊಂಡು ಸಮಾಧಾನ ಪಟ್ಟುಕೊಳ್ಳಬೇಕು. ಹೌದು, ಏಕೆಂದರೆ ಅವು ನಿಮ್ಮೂರಿನ ಶ್ರೀಮಂತನೂ ಕೊಳ್ಳಲಾಗದಷ್ಟು ದುಬಾರಿ.

ಜಗತ್ತಿನಲ್ಲೇ ಅತಿ ದುಬಾರಿಯಾದ ಐದು ಹಣ್ಣುಗಳು ಯಾವುವು ಗೊತ್ತಾ? ಏನವುಗಳ ವಿಶೇಷತೆ? ಕೆಲವೊಮ್ಮೆ ಈ ವಿಶೇಷತೆಗಳನ್ನು ಕೇಳಿದ ಮೇಲೂ ಬೆಲೆಯನ್ನು ಸಮರ್ಥಿಸಿಕೊಳ್ಳುವುದು ಅಸಾಧ್ಯ ಎನಿಸುತ್ತದೆ. ಆದರೆ, ನಾವು ತಾನೇ ಏನು ಮಾಡಲಾಗುತ್ತದೆ? ಓಹೋ ಎಂದುಕೊಂಡು ಮನೆಯ ಹಿತ್ತಿಲಲ್ಲಿ ಬೆಳೆದ ಪಪ್ಪಾಯಿ ಹೆಚ್ಚಿಕೊಂಡು ತಿನ್ನಬಹುದಷ್ಟೇ!

ನಿಮಗೆ ಗೊತ್ತಿರದ ಭಾರತೀಯ ಆಹಾರ ಸಂಸ್ಕೃತಿ ಇದು!

ಲಾಸ್ಟ್ ಗಾರ್ಡನ್ಸ್ ಆಫ್ ಹೆಲಿಗಾನ್ ಪೈನಾಪಲ್- $15000
ಇಂಗ್ಲೆಂಡ್‌ನ ಹೆಲಿಗಾನ್‌ನಲ್ಲಿರುವ ಲಾಸ್ಟ್ ಗಾರ್ಡನ್‌ನಲ್ಲಿ ಬೆಳೆಯುವ ಅನಾನಸ್‌‌ನ ಬೆಲೆ $15,000. ಅಂದರೆ, ಹತ್ತಿರತ್ತಿರ 11,50,000 ರುಪಾಯಿಗಳು! ಅಬ್ಬೋ, ಯಾಕಪ್ಪಾ ಇಷ್ಟು ದುಬಾರಿ ಎಂದರೆ- ಇಂಗ್ಲಿಷ್ ಹವಾಮಾನದಲ್ಲಿ ಪೈನಾಪಲ್‌ಗಳು ಬೆಳೆಯುವುದಿಲ್ಲ. ಆದರೆ, ಇಲ್ಲಿ ಅವು ಚೆನ್ನಾಗಿ ಬೆಳೆಯುತ್ತವೆ ಎಂಬುದಷ್ಟೇ ಕಾರಣ. ಕಾರಣ ಕೇಳಿ ನಿರಾಸೆಯಾಯಿತಾ? ಹಾಗಿದ್ದರೆ ಜಪಾನ್‌ನಲ್ಲಿ ಬೆಳೆವ ದ್ರಾಕ್ಷಿ ಹಣ್ಣುಗಳ ಬಗ್ಗೆ ಓದಿ.

ರೂಬಿ ರೋಮನ್ ಗ್ರೇಪ್ಸ್- $1400
ಹೆಸರು ರೋಮನ್ ಎಂದಿದ್ದರೂ ಈ ದ್ರಾಕ್ಷಿ ಹಣ್ಣುಗಳು ಬೆಳೆಯುವುದು ಜಪಾನ್‌ನಲ್ಲಿ. ಗೊಂಚಲಿನಲ್ಲಿ ಬರುವ ಪ್ರತಿಯೊಂದು ದ್ರಾಕ್ಷಿ ಹಣ್ಣು ಕೂಡಾ ಪಿಂಗ್ ಪಾಂಗ್ ಬಾಲ್ ಗ್ರಾತ್ರದಷ್ಟು ದೊಡ್ಡದಿರುತ್ತದೆ- ಅಂದರೆ ಅವು ಇತರೆ ದ್ರಾಕ್ಷಿ ಹಣ್ಣುಗಳಿಗಿಂತ ವಿಭಿನ್ನ ಎಂದಾಯಿತಲ್ಲ. ವಿಭಿನ್ನತೆಗೆ ಬೆಲೆ ಹೆಚ್ಚು. ಅದರಲ್ಲೂ ಕೆಂಪು ಬಣ್ಣದಲ್ಲಿ ಕಂಗೊಳಿಸುವ ಈ ದ್ರಾಕ್ಷಿ ಹಣ್ಣುಗಳ ಒಂದೇ ಒಂದು ಗೊಂಚಲು- 4000 ಡಾಲರ್‌(ಮೂರು ಲಕ್ಷ ಚಿಲ್ಲರೆ ರುಪಾಯಿಗಳು)ವರೆಗೂ ಮಾರಾಟವಾಗುತ್ತದೆ. 

ರಾಮನ ಅಕ್ಕ ಶಾಂತಾ ಕಿಗ್ಗ ಋಷ್ಯಶೃಂಗರ ಮಡದಿ ಎಂಬುವುದು ಗೊತ್ತಾ?

ಯುಬಾರಿ ಕಿಂಗ್ ಮೆಲನ್- $10,000
ಮಸ್ಕ್ ಮೆಲನ್(ಇಬ್ಬಳ, ಕರಬೂಜ) ಜಾತಿಯ ಈ ಹಣ್ಣು ಕೂಡಾ ಜಪಾನ್‌ಗೆ ಹಣ ಮಾಡಿಕೊಡಲೆಂದೇ ಹುಟ್ಟಿದಂತೆ ಕಾಣುತ್ತದೆ. ಜಪಾನ್‌ನ ಹೊಕಾಯ್ಡೋದಲ್ಲಿರುವ ಯುಬಾರಿ ನಗರದಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದರ ವಿಶೇಷವೆಂದರೆ ಇದು ಪರ್ಫೆಕ್ಟ್ ರೌಂಡ್ ಆಕಾರದಲ್ಲಿರುವ ಜೊತೆಗೆ ಬಹಳ ಮೃದುವಾದ ಮೇಲ್ಮೆೈ ಹೊಂದಿರುತ್ತದೆ. ಗೋಸ್ಟ್ ಫೆಸ್ಟಿವಲ್ ಸಂದರ್ಭದಲ್ಲಿ ಈ ಹಣ್ಣುಗಳನ್ನು ಜೋಡಿಯಾಗಿ ಉಡುಗೊರೆ ನೀಡುವ ಸಂಪ್ರದಾಯವಿದೆ. ಒಮ್ಮೆ ಈ ಜೋಡಿಯು 10,000 ಡಾಲರ್‌ಗೆ ಅಂದರೆ ಸುಮಾರು ಏಳೂವರೆ ಲಕ್ಷ ರುಪಾಯಿಗಳಿಗೆ ಮಾರಾಟವಾಗಿತ್ತು. ಇದನ್ನು ಭಾರತದ ಯಾವುದಾದರೂ ವ್ಯಕ್ತಿ ಕೊಂಡಿದ್ದರೆ, ಆ ಹಣವನ್ನು ಬಡವರಿಗೆ ಹಂಚಬಹುದಿತ್ತಲ್ಲ ಎಂಬ ವಿವಾದವೊಂದು ತಕ್ಷಣ ಬಿರುಗಾಳಿಯಂತೆ ಆತನನ್ನು ಸುತ್ತಿಕೊಳ್ಳುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. 

ಚೌಕ ಕಲ್ಲಂಗಡಿ- $800
ಇದೂ ಕೂಡಾ ಜಪಾನಿಗರದೇ ಕ್ರಿಯೇಟಿವಿಟಿ. ನಮ್ಮಲ್ಲಿ ಬೆಳೆವಂಥ ಸಾಮಾನ್ಯ ಕಲ್ಲಂಗಡಿ ಹಣ್ಣುಗಳನ್ನೇ ಮೌಲ್ಡ್‌ಗಳಲ್ಲಿ ಹಾಕಿ ವಿಶೇಷ ಆರೈಕೆ ಮಾಡಿ ಚೌಕಾಕಾರದಲ್ಲಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ ಇವರು. ಈ ಒಂದು ಆಕಾರದ ಕಾರಣಕ್ಕಾಗಿಯೇ ಈ ಕಲ್ಲಂಗಡಿ ಹಣ್ಣುಗಳು ಒಂದೊಂದೂ ಬರೋಬ್ಬರಿ 61,000 ರುಪಾಯಿವರೆಗೆ ಮಾರಾಟವಾಗುವುದಿದೆ. ಶ್ರೀಮಂತರದು ಎಂತೆಂಥ ಫ್ಯಾನ್ಸಿಗಳಪ್ಪಾ!

ಡೆನ್ಸುಕೆ ಕಲ್ಲಂಗಡಿ- $6,000
ಯಾಕೋ ಜಪಾನ್ ದೇಶವನ್ನು ಸಾಕುವುದೇ ದುಬಾರಿ ಹಣ್ಣುಗಳೇನೋ ಎಂದು ಅನುಮಾನ ಹುಟ್ಟುತ್ತದೆ. ಏಕೆಂದರೆ ಡೆನ್ಸುಕೆ ವಾಟರ್‌ಮೆಲನ್ ಕೂಡಾ ಜಪಾನ್‌ನಲ್ಲಿಯೇ ಕಾಣಸಿಗುವುದು. ಇವು ವರ್ಷಕ್ಕೆ 10,000ಕ್ಕಿಂತ ಹೆಚ್ಚು ಬೆಳೆಯುವುದಿಲ್ಲ. ಅದೇ ಕಾರಣ ಅವುಗಳಿಗೆ ಬೆಲೆ ತಂದುಕೊಟ್ಟಿದೆ. ಈ ಹಣ್ಣು ಕಪ್ಪು ಬಣ್ಣ ಹೊಂದಿರುವ ಜೊತೆಗೆ, ಸಾಮಾನ್ಯ ಕಲ್ಲಂಗಡಿಗಿಂತ ದೊಡ್ಡ ಗಾತ್ರ ಹೊಂದಿರುತ್ತದೆ. ಒಂದು ಡೆನ್ಸುಕೆ ಕಲ್ಲಂಗಡಿಯು 6,000 ಡಾಲರ್‌ಗೆ, ಅಂದರೆ ಸುಮಾರು ನಾಲ್ಕೂವರೆ ಲಕ್ಷ ರುಪಾಯಿಗಳಿಗೆ ಸೇಲ್ ಆಗುತ್ತದೆ. 
 

click me!